ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ, ರಾಜ್ಯಸಭೆಯಲ್ಲಿ ಕುಂಟು ಕಲಾಪ

ಚಳಿಗಾಲದ ಅಧಿವೇಷನ ಉಭಯ ಸದನಗಳಲ್ಲಿ ಮುಮದುವರಿದ ರಫೇಲ್, ಕಾವೇರಿ ಗದ್ದಲ
Last Updated 28 ಡಿಸೆಂಬರ್ 2018, 13:28 IST
ಅಕ್ಷರ ಗಾತ್ರ

ನವದೆಹಲಿ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ಶುಕ್ರವಾರವೂ ಲೋಕಸಭೆಯಲ್ಲಿ ಕಲಾಪ ಸರಾಗವಾಗಿ ನಡೆಯಲಿಲ್ಲ.

ಬೆಳಿಗ್ಗೆ 11ಕ್ಕೆ ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಟಿಡಿಪಿ, ಎಐಎಡಿಎಂಕೆ ಮತ್ತು ಎಡಪಕ್ಷಗಳ ಸದಸ್ಯರು ಪ್ರತಿಭಟನೆಗೆ ಇಳಿದರು.

ರಫೇಲ್ ಖರೀದಿ ಒಪ್ಪಂದದ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸುವುದರ ವಿರುದ್ಧ ಎಐಎಡಿಎಂಕೆ ಮತ್ತು ಡಿಎಂಕೆ ಸಂಸದರು ಘೋಷಣೆ ಕೂಗಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಟಿಡಿಪಿ ಸದಸ್ಯರು ಫಲಕ ಹಿಡಿದು ಪ್ರತಿಭಟನೆ ನಡೆಸಿದರು.

ಹೀಗಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ಶೂನ್ಯವೇಳೆಯಲ್ಲಿ ಕೇವಲ ಎರಡು ಪ್ರಶ್ನೆಗಳನ್ನು ಮಾತ್ರ ಚರ್ಚೆಗೆ ಎತ್ತಿಕೊಳ್ಳಲಾಯಿತು. 20 ನಿಮಿಷ ಮಾತ್ರ ಚರ್ಚೆ ನಡೆಯಿತು.

ರಾಜ್ಯಸಭೆಯಲ್ಲೂ ನಡೆಯದ ಕಲಾಪ:ರಾಜ್ಯಸಭೆಯಲ್ಲೂ ಇದೇ ವಿಷಯಗಳಿಗೆ ಸಂಬಂಧಿಸಿದಂತೆ ಗದ್ದಲ ನಡೆದ ಕಾರಣ ಯಾವುದೇ ಕಲಾಪ ನಡೆಯಲಿಲ್ಲ.

ಮೇಕೆದಾಟು ಯೋಜನೆ ವಿರುದ್ಧ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದರು.

ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರದ ವಿರುದ್ಧ ಸಮಾಜವಾದಿ ಪಕ್ಷದ ಸದಸ್ಯರು ಘೋಷಣೆ ಕೂಗಿದರು.

‘ರಾಷ್ಟ್ರಪತಿ ಆಳ್ವಿಕೆ ಅಸಂವಿಧಾನಿಕ’
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು.

ಕಾಂಗ್ರೆಸ್ ಸಂಸದ ಶಶಿ ತರೂರ್ ಈ ವಿಷಯವನ್ನು ಪ್ರಸ್ತಾಪಿಸಿದರು. ‘ಸರ್ಕಾರ ರಚಿಸುವುದಾಗಿ ಹೇಳಿಕೊಳ್ಳುವ ಪಕ್ಷ ಬಹುಮತ ಹೊಂದಿದೆಯೇ ಇಲ್ಲವೇ ಎಂಬುದನ್ನು ಸದನದಲ್ಲೇ ಪರೀಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ‘ವಿಶೇಷ ಕಾಳಜಿ’ ವಹಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾದ ನಡೆ ಮತ್ತು ಸಂವಿಧಾನ ಬಾಹಿರ’ ಎಂದು ತರೂರ್ ಆರೋಪಿಸಿದರು.

‘ಸೈದ್ಧಾಂತಿಕ ವಿರೋಧವಿರುವ ಎರಡು ಪಕ್ಷಗಳು ಮೈತ್ರಿಗೆ ಮುಂದಾಗಿವೆ ಎಂದು ರಾಜ್ಯಪಾಲರು ವಿಧಾನಸಭೆ ವಿಸರ್ಜನೆಗೆ ಕಾರಣ ಕೊಟ್ಟಿದ್ದಾರೆ. ಆದರೆ ಅದಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಸರ್ಕಾರದಲ್ಲಿ ಪಿಡಿಪಿ ಮತ್ತು ಬಿಜೆಪಿಗಳ ಸಿದ್ಧಾಂತ ಪರಸ್ಪರ ವಿರುದ್ಧವಾಗಿರಲಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಈ ವಿಷಯದ ಮೇಲಿನ ಚರ್ಚೆಯಲ್ಲಿ ಬಹುತೇಕ ಎಲ್ಲ ಪಕ್ಷಗಳ ಸದಸ್ಯರು ಭಾಗವಹಿಸಿದರು.

‘ಚುನಾವಣೆಗೆ ಸಿದ್ಧ’
‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದರೆ, ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

‘ಆದರೆ ಚುನಾವಣೆಯನ್ನು ನಡೆಸಬೇಕೇ ಬೇಡವೇ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ. ಅದು ಸರ್ಕಾರದ ಕೆಲಸವಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಟ್ರಸ್ಟಿಗೆ ಕೊಕ್
ಜಲಿಯನ್‌ವಾಲಾ ಬಾಗ್ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಕಾಂಗ್ರೆಸ್‌ನ ಅಧ್ಯಕ್ಷರು ಈ ಸ್ಮಾರಕ ಟ್ರಸ್ಟ್‌ನ ಶಾಶ್ವತ ಸದಸ್ಯರಾಗಿರುತ್ತಾರೆ. ಈ ಪ್ರಾತಿನಿಧ್ಯವನ್ನು ರದ್ದುಪಡಿಸುವ ತಿದ್ದುಪಡಿಯನ್ನು ಈ ಮಸೂದೆ ಹೊಂದಿದೆ.

‘ಸ್ಮಾರಕದ ಟ್ರಸ್ಟ್‌ನಿಂದ ರಾಜಕಾರಣವನ್ನು ಹೊರಗಿಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದು ಸಚಿವ ಮಹೇಶ್ ಶರ್ಮಾ ಹೇಳಿದರು.

ಪ್ರಧಾನಿ ಈ ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಸಂಸ್ಕೃತಿ ಸಚಿವ, ಲೋಕಸಭೆಯ ವಿರೋಧ ಪಕ್ಷದ ನಾಯಕ, ಪಂಜಾಬ್ ರಾಜ್ಯಪಾಲ, ಪಂಜಾಬ್‌ ಮುಖ್ಯಮಂತ್ರಿ ಮತ್ತು ಮೂವರು ನಾಮನಿರ್ದೇಶಿತ ಸದಸ್ಯರು ಈ ಟ್ರಸ್ಟ್‌ನಲ್ಲಿ ಇರುತ್ತಾರೆ.

ನಾಮನಿರ್ದೇಶಿತ ಸದಸ್ಯರ ಅಧಿಕಾರಾವಧಿ ಐದು ವರ್ಷ. ಈ ಅವಧಿಗೂ ಮುನ್ನವೇ ಅವರ ಸದಸ್ಯತ್ವವನ್ನು ರದ್ದುಪಡಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಅಂಶವೂ ಈ ತಿದ್ದುಪಡಿ ಮಸೂದೆಯಲ್ಲಿ ಇದೆ.

ಮಹಿಳಾ ಮೀಸಲಿಗಾಗಿ ಒತ್ತಾಯ
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎಂದು ಸಿಪಿಎಂ ಸಂಸದ ಟಿ.ಕೆ.ಎಸ್‌. ಟೀಚರ್ ಲೋಕಸಭೆಯ ಶೂನ್ಯವೇಳೆಯಲ್ಲಿ ಒತ್ತಾಯಿಸಿದರು.

‘ಮೀಸಲಾತಿಯನ್ನು ಜಾರಿಗೆ ತರುವುದಾಗಿ ಎನ್‌ಡಿಎ ಹೇಳಿತ್ತು. ಆದರೆ ಈವರೆಗೆ ಆ ಕೆಲಸ ಆಗಿಲ್ಲ. 25 ವರ್ಷಗಳಿಂದ ಇರುವ ಅನುಮೋದನೆ ಪಡೆಯದೇ ಉಳಿದಿರುವ ಸಂಬಂಧಿತ ಮಸೂದೆಯನ್ನು ತಕ್ಷಣವೇ ಸದನದಲ್ಲಿ ಮಂಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಟಿಆರ್‌ಎಸ್ ಮತ್ತು ಬಿಜೆಡಿ ಸದಸ್ಯರು ಈ ಬೇಡಿಕೆಯನ್ನು ಬೆಂಬಲಿಸಿದರು.

**
ರಾಜ್ಯಪಾಲರದ್ದು ನಿರಂಕುಶ ಪ್ರಭುತ್ವದ ನಡೆ ಮತ್ತು ಅದು ಸಂಪೂರ್ಣ ಅಸಂವಿಧಾನಿಕ. ಈ ನಡೆಯ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಇಬ್ಬರೇ ಶಾಸಕರಿರುವ ಸಜ್ಜದ್ ಲೋನ್ ಜತೆ ಮೈತ್ರಿಗೆ ಬಿಜೆಪಿ ಮುಂದಾಗಿತ್ತು.
-ಸುಗತಾ ರಾಯ್, ಟಿಎಂಸಿ ಸಂಸದ

**
ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಗಳು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಆದರೆ ಸರ್ಕಾರ ರಚನೆಗೆ ಮುಂದಾಗಿದ್ದವು. ಹೀಗಾಗಿ ವಿಧಾನಸಭೆ ವಿಸರ್ಜನೆ ಅನಿವಾರ್ಯವಾಗಿತ್ತು.
-ಭತೃಹರಿ ಮಜತಬ್, ಬಿಜೆಡಿ ಸಂಸದ

**
ರಾಜ್ಯಪಾಲರ ನಿರ್ಧಾರಕ್ಕೆ ನಮ್ಮ ವಿರೋಧವಿದೆ.ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ನಿರ್ಧಾರವು ಸಂವಿಧಾನದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕು. ಇಂತಹ ವಿಪರೀತದ ಕ್ರಮಕ್ಕೆ ಮುಂದಾಗಿದ್ದು ಏತಕ್ಕೆ ಎಂಬುದನ್ನು ಸರ್ಕಾರ ವಿವರಿಸಬೇಕು.
-ಪಿ.ವೇಣುಗೋಪಾಲ್, ಎಐಎಡಿಎಂಕೆ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT