ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲಿಸಿದ ಮೋದಿ ಮೋಡಿ, ನಿಖರ ಲೆಕ್ಕ

Last Updated 24 ಮೇ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅಲೆಯ ಹೊಡೆತಕ್ಕೆ ಸಿಕ್ಕ ವಿರೋಧ ಪಕ್ಷಗಳು ದಿಕ್ಕುಗೆಟ್ಟಿವೆ. ಇಂತಹ ಅಭೂತಪೂರ್ವ ಗೆಲುವು ಬಿಜೆಪಿಗೆ ಹೇಗೆ ಸಾಧ್ಯವಾಯಿತು ಎಂಬ ಯೋಚನೆ ಬಹಳಷ್ಟು ಜನರ ಮನದಲ್ಲಿದೆ.

ಚುನಾವಣೆಯಲ್ಲಿ ಬಿಜೆಪಿ ಹೇಗೆ ಕೆಲಸ ಮಾಡಿತು ಎಂಬುದರ ಒಂದು ನೋಟ ಇಲ್ಲಿದೆ. ಜಾತಿ, ಕಾರ್ಯಕರ್ತ ಪಡೆ ಮತ್ತು ಮೋದಿ ಮೋಡಿಯ ಸಂಯೋಜನೆ ಬಿಜೆಪಿಯ ಕಾರ್ಯತಂತ್ರವಾಗಿತ್ತು. ತಳಮಟ್ಟದಲ್ಲಿ ಜನ ಸಂಪರ್ಕ, ಪರಿಣಾಮಕಾರಿ ಮೈತ್ರಿ ಇದಕ್ಕೆ ಪೂರಕವಾಗಿ ಕೆಲಸ ಮಾಡಿತು. ಈ ಎರಡು ವಿಚಾರಗಳಲ್ಲಿ ವಿರೋಧ ಪಕ್ಷಗಳು ದಯನೀಯವಾಗಿ ವಿಫಲವಾದದ್ದು ಬಿಜೆಪಿಗೆ ನೆರವಾಯಿತು.

ಜಾತಿ ಲೆಕ್ಕಾಚಾರದ ಚುನಾವಣಾ ಸಮೀಕರಣಗಳು 2019ರ ಲೋಕಸಭೆ ಚುನಾವಣೆಯೊಂದಿಗೆ ಕೊನೆಯಾಗಲಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಊಹಿಸಿದ್ದರು. ಆದರೆ, ಈ ಬಾರಿ ಮಾತ್ರ ಜಾತಿ ಲೆಕ್ಕಾಚಾರವೇ ಮುಖ್ಯ ಎಂಬುದನ್ನೂ ಮನಗಂಡಿದ್ದರು. ಹಾಗಾಗಿ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಜಾತಿ ಸಮೀಕರಣಗಳ ಸಂಪೂರ್ಣ ಲಾಭ ದೊರೆಯುವ ರೀತಿಯ ಮೈತ್ರಿಕೂಟಗಳನ್ನು ರಚಿಸಿಕೊಂಡರು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿನ ಸಣ್ಣ ಸಣ್ಣ ಹಿಂದುಳಿದ ಜಾತಿಗಳನ್ನು ಗುರಿಯಾಗಿಸಿಕೊಂಡರು.

ಮೋದಿ ಅಲೆ ಪ್ರಬಲವಾಗಿದ್ದ ಗಣನೀಯ ಸಂಖ್ಯೆಯ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರು ಎಂಬುದೇ ನಗಣ್ಯವಾಗಿತ್ತು. ಜನರು ಮೋದಿಗಾಗಿ ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ ಅಡ್ವಾಣಿ ಅವರ ಆಶೀರ್ವಾದ ಪಡೆದ ಪ್ರಧಾನಿ ಮೋದಿ
ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ ಅಡ್ವಾಣಿ ಅವರ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಉತ್ತರ ಪ್ರದೇಶದಲ್ಲಿ ಅನುಪ್ರಿಯಾ ಪಟೇಲ್‌ ಅವರ ಅಪ್ನಾ ದಳದ ಜತೆಗೆ ಮೈತ್ರಿ ಮಾಡಿ ಕುಶ್ವಾಹಾ ಸಮುದಾಯವನ್ನು ಬಿಜೆಪಿ ಒಲಿಸಿಕೊಂಡಿತು. ಬೆಸ್ತ ಸಮುದಾಯದ ಓಂ ಪ್ರಕಾಶ್‌ ರಾಜ್‌ಭರ್‌ ಅವರ ಎಸ್‌ಬಿಎಸ್‌ಪಿ ಜತೆಗೆ ಮಾಡಿಕೊಂಡ ಮೈತ್ರಿ ಮುರಿದುಬಿತ್ತು. ಆದರೆ, ಮತದಾನ ಪೂರ್ಣಗೊಳ್ಳುವ ತನಕ ಉತ್ತರ ಪ್ರದೇಶ ಸಂಪುಟದಲ್ಲಿ ರಾಜ್‌ಭರ್‌ ಅವರನ್ನು ಉಳಿಸಿಕೊಂಡದ್ದು ಜಾಣ ನಡೆ. ಮತದಾನ ಪೂರ್ಣಗೊಂಡ ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಲಾಯಿತು.

ಬಿಜೆಪಿಯ ಲೆಕ್ಕಾಚಾರದ ನಡೆಗೆ ಬಿಹಾರ ಅತ್ಯುತ್ತಮ ಉದಾಹರಣೆ. 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ನಿತೀಶ್‌ ಕುಮಾರ್ ಅವರ ಜೆಡಿಯುಗೆ 17 ಕ್ಷೇತ್ರಗಳನ್ನು ಕೊಡಲಾಯಿತು. ಬಿಹಾರದ 40 ಕ್ಷೇತ್ರಗಳ ಪೈಕಿ 39 ಎನ್‌ಡಿಎ ತೆಕ್ಕೆಗೆ ಬೀಳುವ ಮೂಲಕ ಬಿಜೆಪಿಯ ಈ ಲೆಕ್ಕಾಚಾರ ದೊಡ್ಡ ಅನುಕೂಲವನ್ನೇ ಮಾಡಿತು. ಕುರ್ಮಿ ಸಮುದಾಯದ ನಾಯಕ ನಿತೀಶ್‌ ಅವರನ್ನು ಮುನ್ನೆಲೆಗೆ ತಂದದ್ದು ಯಾದವೇತರ ಹಿಂದುಳಿದ ಸಮುದಾಯಗಳ ಮನಗೆಲ್ಲಲು ಸಹಕಾರಿಯಾಯಿತು. ಇದಲ್ಲದೆ, ಹಲವು ಪಕ್ಷ ಗಳು ಮತ್ತು ಅಭ್ಯರ್ಥಿಗಳು ಕಣದಲ್ಲಿರುವಂತೆ ನೋಡಿಕೊಳ್ಳುವ ಮೂಲಕವೂ ವಿಪಕ್ಷಗಳ ಅವಕಾಶಗಳನ್ನು ಕುಂಠಿತಗೊಳಿಸಲಾಯಿತು.

ಕಾರ್ಯಕರ್ತರ ಪಡೆ ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಸಕ್ರಿಯವಾಗಿ, ಜಾಗೃತವಾಗಿ ಇತ್ತು. ಶಿಸ್ತಿನ ಸಿಪಾಯಿಗಳಾದ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಿಂತರು. ಸಾಧ್ವಿ ಪ್ರಜ್ಞಾ ಸಿಂಗ್‌ ಅವರು ಸ್ಪರ್ಧಿಸಿದ್ದ ಭೋಪಾಲ್‌ಗೆ ಆರ್‌ಎಸ್‌ಎಸ್‌ನ ದೊಡ್ಡ ತಂಡವೇ ಬಂದಿಳಿದಿತ್ತು. ಅವರೇನು ಮಾಡಬಲ್ಲರು ಎಂಬುದು ಆ ಬರುವಿಕೆಯಲ್ಲಿಯೇ ಗೋಚರವಾಗುತ್ತಿತ್ತು.

ಮೋದಿ ಅವರು ಫಲಿತಾಂಶ ಪ್ರಕಟವಾದ ಬಳಿಕ ‘ಪುಟ ಪ್ರಮುಖ’ರಿಗೆ ಧನ್ಯವಾದ ಹೇಳಿ ದ್ದಾರೆ. ‘ಪುಟ ಪ್ರಮುಖರು ಏನು ಮಾಡಬಲ್ಲರು ಎಂಬುದು ಈಗ ಅವರಿಗೆ ಅರಿವಾಗಿರಬಹುದು’ ಎಂದು ಮೋದಿ ಹೇಳಿದ್ದಾರೆ. ಮತದಾರರ ಪಟ್ಟಿಯ ಒಂದೊಂದು ಪುಟಕ್ಕೆ ಒಬ್ಬೊಬ್ಬರನ್ನು ‘ಪುಟ ಪ್ರಮುಖ’ರಾಗಿ ಬಿಜೆಪಿ ನೇಮಕ ಮಾಡಿತ್ತು. ಇವರಲ್ಲದೆ, ಮತಗಟ್ಟೆ ನಿರ್ವಹಣೆ ಮತ್ತು ಇತರ ಕೆಲಸಗಳಿಗಾಗಿ 12 ಕೋಟಿ ಕಾರ್ಯಕರ್ತರನ್ನು ಬಿಜೆಪಿ ನಿಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT