ಮಂಗಳವಾರ, ಸೆಪ್ಟೆಂಬರ್ 21, 2021
28 °C
ಶೇ 50ರಷ್ಟು ಮತಗಟ್ಟೆಗಳ ವಿವಿಪ್ಯಾಟ್‌ ಹೋಲಿಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಮತ ತಾಳೆ: 5 ಮತಗಟ್ಟೆಗೆ ಸೀಮಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕನಿಷ್ಠ ಶೇ 50ರಷ್ಟು ಮತ ಖಾತರಿ ರಶೀತಿ ಯಂತ್ರಗಳನ್ನು (ವಿವಿಪ್ಯಾಟ್‌) ಮತಯಂತ್ರಗಳ ಜತೆಗೆ ತಾಳೆ ಮಾಡಬೇಕು ಎಂದು ಕೋರಿ 21 ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. 

‘ಏಪ್ರಿಲ್‌ 8ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸು ವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠ ಹೇಳಿತು.

ವಿವಿಪ್ಯಾಟ್‌ ವಿಚಾರದಲ್ಲಿ ಚುನಾವಣಾ ಆಯೋಗವು ನ್ಯಾಯಾಲಯದ ದಾರಿ ತಪ್ಪಿಸಿದೆ ಎಂದು ಅರ್ಜಿದಾರರ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಕಪಿಲ್‌ ಸಿಬಲ್‌ ಅವರು ಹೇಳಿದರು. ಆದರೆ, ಇದು ಮರುಪರಿಶೀಲಾ ಅರ್ಜಿ ಆಗಿರುವ ಕಾರಣಕ್ಕೆ ವಾದ ಮಂಡಿಸಲು ಅವಕಾಶ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಸ್ಪಷ್ಟಪಡಿಸಿತು. 

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ 21 ಪಕ್ಷಗಳು ಸುಪ್ರೀಂ ಕೋರ್ಟ್‌ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದವು. 

ಒಂದು ಮತಗಟ್ಟೆಯ ವಿವಿಪ್ಯಾಟ್‌ ರಶೀತಿಗಳನ್ನು ತಾಳೆ ಹಾಕುವ ನಿಯಮ ಮೊದಲು ಇತ್ತು. ಇದನ್ನು ಹೆಚ್ಚಿಸಬೇಕು ಎಂದು ಇವೇ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ್ದು ಸುಪ್ರೀಂ ಕೋರ್ಟ್‌, ಇದನ್ನು ಐದು ಮತಗಟ್ಟೆ ಗಳಿಗೆ ಏರಿಸಿತ್ತು. 

ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ 20,600 ವಿವಿಪ್ಯಾಟ್‌ಗ ಳನ್ನು ಮತಯಂತ್ರಗಳ ಜತೆಗೆ ತಾಳೆ ಮಾಡಲಾಗುವುದು. ದೇಶದಲ್ಲಿ ಈ ಬಾರಿ 10.35 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿವಿಪ್ಯಾಟ್‌ ರಶೀತಿಗಳನ್ನು ಹೋಲಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಈ ಹೋಲಿಕೆ ನಡೆಯಲಿದೆ. ಲಾಟರಿ ಮೂಲಕ ಒಂದು ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳನ್ನು ವಿವಿಪ್ಯಾಟ್‌ ರಶೀತಿ ಹೋಲಿಕೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಮತಯಂತ್ರಗಳ ಬಗ್ಗೆ ಕೆಲವು ಪಕ್ಷಗಳು ಅನುಮಾನ ವ್ಯಕ್ತಪಡಿಸಿದ ಕಾರಣ ಕೆಲವು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳ ಮತ ಎಣಿಕೆಯಲ್ಲಿ ಆಯೋಗವು ಹೆಚ್ಚಿನ ಎಚ್ಚರಿಕೆ ವಹಿಸಿತ್ತು. 

ಫಲಿತಾಂಶ ವಿಳಂಬ?

ಐದು ಮತಗಟ್ಟೆಗಳಲ್ಲಿ ರಶೀತಿ ಹೋಲಿಕೆ ನಡೆಯುವುದರಿಂದ ಫಲಿತಾಂಶ ಘೋಷಣೆ ಸ್ವಲ್ಪ ತಡವಾಗಬಹುದು ಎಂದು ಆಯೋಗದ ಮೂಲಗಳು ಹೇಳಿವೆ. ಮತಯಂತ್ರಗಳಲ್ಲಿನ ಮತಗಳ ಎಣಿಕೆ ಮುಗಿದ ಕೂಡಲೇ ಅಭ್ಯರ್ಥಿಗಳಿಗೆ ಫಲಿತಾಂಶ ತಿಳಿಯುತ್ತದೆ. ಆದರೆ, ರಶೀತಿಗಳ ತಾಳೆಯ ಬಳಿಕವೇ ಅಧಿಕೃತವಾಗಿ ಫಲಿತಾಂಶ ಘೋಷಣೆ ಆಗಲಿದೆ. ಫಲಿತಾಂಶ ಘೋಷಣೆಯು ಎರಡರಿಂದ ಮೂರು ತಾಸು ವಿಳಂಬ ಆಗಬಹುದು ಎನ್ನಲಾಗಿದೆ.

ರಶೀತಿಗಳ ತಾಳೆಗೆ ಪ್ರತ್ಯೇಕ ತಂಡವನ್ನು ನಿಯೋಜಿಸಲು ಆಯೋಗಕ್ಕೆ ಸಾಧ್ಯವಾದರೆ ಫಲಿತಾಂಶ ಘೋಷಣೆಯಲ್ಲಿ ವಿಳಂಬ ಆಗದು ಎಂದೂ ಮೂಲಗಳು ತಿಳಿಸಿವೆ.

ಕಳೆದ ಡಿಸೆಂಬರ್‌ನಲ್ಲಿ ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಈ ರಾಜ್ಯಗಳಲ್ಲಿ ಮತ ಎಣಿಕೆ ನಡೆಸುವಾಗ ಆಯೋಗವು ಭಾರಿ ಜಾಗರೂಕತೆಯನ್ನು ಪಾಲಿಸಿತ್ತು. ಕೆಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಬಹಳ ಕಡಿಮೆ ಇತ್ತು. ಜತೆಗೆ, ವಿವಿಪ‍್ಯಾಟ್‌ ರಶೀತಿಗಳನ್ನು ತಾಳೆ ಹಾಕಲಾಗಿತ್ತು. ಈ ಎಲ್ಲ ಕಾರಣಗಳಿಂದ ಫಲಿತಾಂಶ ಘೋಷಣೆ ವಿಳಂಬ ಆಗಿತ್ತು.

ನಾಯಕರಿಗೆ ನಿರಾಶೆ

ತಮ್ಮ ಮನವಿಯನ್ನು ನ್ಯಾಯಾಲಯ ‍ಪುರಸ್ಕರಿಸಬಹುದು ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಚಂದ್ರಬಾಬು ನಾಯ್ಡು, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ ಮತ್ತು ಸಿಪಿಐನ ಡಿ.ರಾಜಾ ಅವರಿಗೆ ನಿರಾಶೆಯಾಯಿತು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌ ಒಂದೇ ನಿಮಿಷದಲ್ಲಿ ವಿಚಾರಣೆ ಮುಗಿಸಿ, ಅರ್ಜಿಯವನ್ನು ವಜಾಗೊಳಿಸಿತು.

4,120

ದೇಶದಲ್ಲಿರುವ ವಿಧಾನಸಭಾ ಕ್ಷೇತ್ರಗಳು

5 ಪ್ರತಿ ಕ್ಷೇತ್ರದಲ್ಲಿ ವಿವಿಪ್ಯಾಟ್‌ ತಾಳೆ ನೋಡುವ ಮತಗಟ್ಟೆಗಳು

20,600

ವಿವಿಪ್ಯಾಟ್‌ ತಾಳೆ ನೋಡಲಾಗುವ ಒಟ್ಟು ಮತಗಟ್ಟೆಗಳು

2,500

ಒಂದು ಮತಗಟ್ಟೆಯ ಗರಿಷ್ಠ ಮತದಾರರ ಸಂಖ್ಯೆ

* ಚುನಾವಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಹೋರಾಟವನ್ನು ಕೈಬಿಡುವುದಿಲ್ಲ. ಮುಕ್ತ, ನ್ಯಾಯಸಮ್ಮತ ಚುನಾವಣೆಯ ಖಾತರಿಗಾಗಿ ಆಯೋಗವು ಪಾರದರ್ಶಕವಾಗಿರುವುದು ಬಹಳ ಮುಖ್ಯ

– ಎನ್‌.ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ

* ಮತಯಂತ್ರ ವಿರೋಧಿ ಗ್ಯಾಂಗ್‌ಗೆ ತಮ್ಮ ವಿಧಿ ಏನೆಂಬುದು ಅರಿವಾಗಿದೆ. ಮೇ 23ರಂದು ಮತ ಎಣಿಕೆ ನಡೆದಾಗ ತಮ್ಮ ಸೋಲಿಗೆ ಅವರು ಮತಯಂತ್ರಗಳಲ್ಲಿ ನೆಪ ಹುಡುಕಿಕೊಳ್ಳಲಿದ್ದಾರೆ

– ಮುಕ್ತಾರ್‌ ಅಬ್ಬಾಸ್‌ ನಖ್ವಿ, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು