ಗುರುವಾರ , ಸೆಪ್ಟೆಂಬರ್ 23, 2021
24 °C
ಉತ್ತರ ಪ್ರದೇಶ: ಕೊನೆಯ ಹಂತಗಳ ಮತದಾನಕ್ಕೆ ಕಾರ್ಯತಂತ್ರ ಬದಲು

ಪೂರ್ವ ಭಾಗದಲ್ಲಿ ‘ಪ್ರಧಾನಿ ಹುದ್ದೆಗೆ ಮಾಯಾ’ ಪಲ್ಲವಿ

ಸಂಜಯ್ ಪಾಂಡೆ Updated:

ಅಕ್ಷರ ಗಾತ್ರ : | |

ಲಖನೌ: ಲೋಕಸಭಾ ಚುನಾವಣೆಯ ಕೊನೆಯ ಎರಡು ಹಂತಗಳಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಮತದಾನ ನಡೆಯಲಿದೆ. ಇದು ಮುಸ್ಲಿಂ–ಯಾದವ–ದಲಿತ ಸಮುದಾಯಗಳ ಪ್ರಾಬಲ್ಯದ ಪ್ರದೇಶ. ಹಾಗಾಗಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ಪ್ರಚಾರ ಕಾರ್ಯತಂತ್ರವೂ ಬದಲಾಗಿದೆ. 

ಮುಂದಿನ ಪ್ರಧಾನಿ ಯಾರಾಗಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಈವರೆಗೆ ಹಾರಿಕೆಯ ಉತ್ತರ ಕೊಡುತ್ತಿದ್ದರು. ಈಗ, ‘ದೇಶದ ಅತ್ಯುನ್ನತ ಹುದ್ದೆಗೆ ಮಾಯಾವತಿ ಅವರು ಏರಿದರೆ ತಮಗೆ ಸಂತೋಷ’ ಎಂದಿದ್ದಾರೆ. ಮಾಯಾವತಿ ಪ್ರಧಾನಿಯಾದರೆ, ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಲು ತಮಗೆ ಅವರು ನೆರವಾಗುತ್ತಾರೆ ಎಂದೂ ಹೇಳಿದ್ದಾರೆ. 

ಪ್ರಧಾನಿ ಹುದ್ದೆಗೆ ತಾವು ಆಕಾಂಕ್ಷಿ ಅಲ್ಲ ಎಂದು ಅಖಿಲೇಶ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 

ಅಂಬೇಡ್ಕರ್‌ ನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮಾಯಾವತಿ ಅವರು ಪ್ರಧಾನಿ ಹುದ್ದೆಗೆ ತಾವು ಸಿದ್ಧ ಎಂಬ ಸುಳಿವನ್ನು ನೀಡಿದ್ದಾರೆ. ಪ್ರಧಾನಿ ಹುದ್ದೆ ವಹಿಸಿಕೊಳ್ಳುವ ಸಂದರ್ಭ ಬಂದರೆ ಈ ಕ್ಷೇತ್ರದಿಂದಲೇ ತಾವು ಸ್ಪರ್ಧಿಸಬೇಕಾಗಬಹುದು ಎಂದಿದ್ದಾರೆ. 

ಮಾಯಾವತಿ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ. ಮುಖ್ಯಮಂತ್ರಿ ಹುದ್ದೆ ಅಖಿಲೇಶ್‌ಗೆ ಸಿಗಲಿದೆ ಎಂಬ ಸಂದೇಶವನ್ನು ದಲಿತ ಮತ್ತು ಯಾದವ ಸಮುದಾಯಕ್ಕೆ ತಲುಪಿಸುವುದು ಪ್ರಚಾರ ಕಾರ್ಯತಂತ್ರ ಬದಲಾವಣೆಯ ಉದ್ದೇಶ ಎಂದು ಎಸ್‌ಪಿ ಮುಖಂಡರು ಹೇಳಿದ್ದಾರೆ. 

‘ಪೂರ್ವ ಭಾಗದಲ್ಲಿ 27 ಲೋಕಸಭಾ ಕ್ಷೇತ್ರಗಳಿವೆ. ಇಲ್ಲಿನ ಮಹಾಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ವರ್ಗಾವಣೆ ಸುಗಮವಾಗಿ ಆಗಬೇಕು ಎಂಬ ಕಾರಣಕ್ಕೆ ಈ ಕಾರ್ಯತಂತ್ರ ಅನುಸರಿಸಲಾಗಿದೆ’ ಎಂದೂ ಪಕ್ಷದ ಮುಖಂಡರು ಹೇಳಿದ್ದಾರೆ. 

ದಲಿತ ಮತ್ತು ಯಾದವ ಮತದಾರರನ್ನು ಗೊಂದಲಕ್ಕೆ ಕೆಡವುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಮಾಯಾವತಿ ಅವರನ್ನು ‘ಬೆಹನ್‌ಜಿ’ (ಸಹೋದರಿ) ಎಂದು ಮೋದಿ ಅವರು ಸಂಬೋಧಿಸಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್‌ ಜತೆಯಾಗಿ ಮಾಯಾವತಿ ಅವರಿಗೆ ಮೋಸ ಮಾಡುತ್ತಿವೆ ಎಂದೂ ಹೇಳಿದ್ದಾರೆ. ಗೊಂದಲಕ್ಕೆ ಕೆಡವುವ ಈ ಪ್ರಯತ್ನಕ್ಕೆ ಅಖಿಲೇಶ್‌ ಅವರ ಕಾರ್ಯತಂತ್ರ ತಡೆ ಒಡ್ಡಬಹುದು ಎಂಬ ನಿರೀಕ್ಷೆ ಮಹಾಮೈತ್ರಿಕೂಟದಲ್ಲಿ ಇದೆ. 

ಮುಸ್ಲಿಂ–ಯಾದವ–ದಲಿತ ಸಮುದಾಯಗಳ ಬೆಂಬಲ ಯಾವ ಪಕ್ಷಕ್ಕೆ ದೊರೆಯಲಿದೆಯೋ ಆ ಪಕ್ಷದ ಪರ ಫಲಿತಾಂಶ ಬರುವ ಸಾಧ್ಯತೆ ಹೆಚ್ಚು. 2014ರ ಚುನಾವಣೆಯಲ್ಲಿ ದಲಿತರ ಮತಗಳು ಬಿಜೆಪಿಗೆ ಸಿಕ್ಕಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿ ದಲಿತರ ಮತ ಬಿಜೆಪಿಗೆ ಸಿಗುವ ಸಾಧ್ಯತೆ ಕಡಿಮೆ ಎಂದು ಬಿಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು