ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಎಸ್‌ಗೆ ದೊಡ್ಡ ಗೆಲುವಿನ ಕನಸು

ತೆಲಂಗಾಣ: ನಾಯಕರಿಗೆ ಬಿಸಿ; ಕಣದಲ್ಲಿ ನಿರುತ್ಸಾಹ
Last Updated 9 ಏಪ್ರಿಲ್ 2019, 19:48 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಕಳೆದ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭಕ್ಕೆ ಹೋಲಿಸಿದರೆ, ಈ ಬಾರಿ ಎಲ್ಲೂ ಲೋಕಸಭಾ ಚುನಾವಣೆಯ ಪ್ರಚಾರ ಕಳೆಗಟ್ಟಿರಲಿಲ್ಲ. ಜನರೂ ಅಂಥ ವಿಶೇಷ ಉತ್ಸಾಹ ತೋರಲಿಲ್ಲ ಎಂಬುದು ವಿಶೇಷವಾಗಿದೆ.

ಮೈ ಸುಡುವ ಬಿಸಿಲಿನ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ. ತಾರಕ ರಾಮರಾವ್‌ ಮುಂತಾದ ದಿಗ್ಗಜರು ತಮ್ಮ ತಮ್ಮ ಪಕ್ಷದ ಪರ ಪ್ರಚಾರ ನಡೆಸಿದ್ದಾರೆ. ಆದರೆ ಇಂಥ ನಾಯಕರಿಗೂ ನಿರೀಕ್ಷಿಸಿದ ಪ್ರತಿಕ್ರಿಯೆ ಬರಲಿಲ್ಲ. ರ್‍ಯಾಲಿಗೆ ನಿರೀಕ್ಷಿಸಿದಷ್ಟು ಜನರು ಬಾರದಿರುವ ಕಾರಣಕ್ಕೆ ಕೆಸಿಆರ್‌ ಅವರು ಒಂದು ರ್‍ಯಾಲಿಯನ್ನು ರದ್ದು ಮಾಡಿದ ಘಟನೆಯೂ ನಡೆದಿದೆ.

‘ಕಾರು– ಸಾರು– ಸರ್ಕಾರು’ ಇದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಟಿಆರ್‌ಎಸ್‌ ಪಕ್ಷವು ಲೋಕಸಭಾ ಚುನಾವಣೆಗೂ ಮುನ್ನ ಮಾಡಿರುವ ಘೋಷಣೆ. ಇಲ್ಲಿ ‘ಕಾರು’ ಪಕ್ಷದ ಚಿಹ್ನೆ ಯಾಗಿದ್ದರೆ, ‘ಸಾರು’ (ಸರ್‌) ಎಂಬುದು ಕೆಸಿಆರ್‌ ಅವರನ್ನು ಸಂಬೋಧಿಸುವ ರೀತಿ. ಎಲ್ಲಾ 17 ಕ್ಷೇತ್ರಗಳನ್ನು (ಅದರಲ್ಲಿ ಒಂದು ಕ್ಷೇತ್ರವನ್ನು ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂಗೆ ಕೊಡಲಾಗಿದೆ) ಗೆದ್ದುಕೊಂಡರೆ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ‘ಸರ್‌’ (ಕೆಸಿಆರ್‌) ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಕಾರಣಕ್ಕೆ ‘ಸರ್ಕಾರು’ ಪದವನ್ನೂ ಘೋಷಣೆಯಲ್ಲಿ ಸೇರಿಸಲಾಗಿದೆ.

ಮುಳ್ಳಾಗುವರೇ ಹರೀಶ್‌:ಭರ್ಜರಿ ಗೆಲುವು ದಾಖಲಿಸಬೇಕೆಂಬ ಕೆಸಿಆರ್‌ ಕನಸಿಗೆ ಅವರ ಸಂಬಂಧಿ ಮತ್ತು ಪಕ್ಷಕ್ಕೆ ಎದುರಾಗುತ್ತಿದ್ದ ಎಲ್ಲ ಸಮಸ್ಯೆಗಳನ್ನೂ ನಿವಾರಿಸುವಲ್ಲಿ ನಿಷ್ಣಾತರಾಗಿದ್ದ ಹರೀಶ್‌ ರಾವ್‌ ಮುಳ್ಳಾಗುವರೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕೆಸಿಆರ್‌ ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದ ಹರೀಶ್‌ ಅವರಿಗೆ ಕೆಲವು ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯ ಬೆಂಬಲಿಗರಿದ್ದಾರೆ. ಹೀಗಿದ್ದರೂ ಈ ಬಾರಿ ಆರಂಭದಲ್ಲಿ ಚುನಾವಣಾ ಪ್ರಚಾರದಿಂದ ಹರೀಶ್‌ ಅವರನ್ನು ದೂರವಿಡಲಾಗಿತ್ತು. ನಂತರ ಪಕ್ಷದೊಳಗಿನಿಂದಲೇ ಬಂದ ವಿರೋಧದ ಕಾರಣದಿಂದ ಅವರನ್ನು ತಾರಾ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಯಿತು. ಆದರೂ ಅವರ ಬೆಂಬಲಿಗರು ಸಮಾಧಾನಗೊಂಡಂತೆ ಕಾಣಿಸುತ್ತಿಲ್ಲ. ಕೆಸಿಆರ್‌ ಅವರ ಪುತ್ರ ಕೆ. ಟಿ. ರಾಮರಾವ್‌ (ಕೆಟಿಆರ್‌) ಅವರನ್ನು ಮುಂಚೂಣಿಗೆ ತರುವ ಸಲುವಾಗಿ ಹರೀಶ್‌ ಅವರನ್ನು ತುಳಿಯಲಾಗುತ್ತಿದೆ ಎಂಬುದು ಹರೀಶ್‌ ಬೆಂಬಲಿಗರ ಆರೋಪವಾಗಿದೆ. ಪಕ್ಷದೊಳಗಿನ ಈ ಬೆಳವಣಿಗೆ ಕೆಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಂದೇ ಕ್ಷೇತ್ರದಲ್ಲಿ170 ರೈತರು ಕಣಕ್ಕೆ
ನಿಜಾಮಾಬಾದ್‌ ಲೋಕಸಭಾ ಕ್ಷೇತ್ರವು ಕೆಸಿಆರ್‌ಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದ ಜೊತೆ ಮುನಿಸಿಕೊಂಡಿರುವ ಈ ಭಾಗದ ಅರಸಿನ ಮತ್ತು ಜೋಳ ಬೆಳೆಗಾರರು ಕೆಸಿಆರ್‌ಗೆ ವಿರೋಧ ಪಕ್ಷಗಳಿಗಿಂತ ಹೆಚ್ಚಿನ ಬಿಸಿಯನ್ನು ಮುಟ್ಟಿಸಿದ್ದಾರೆ.

ಅರಸಿನ ಮತ್ತು ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ಕೆಸಿಆರ್‌ ವಿಫಲವಾಗಿದ್ದಾರೆ. ಅದೂ ಅಲ್ಲದೆ ‘ಅರಸಿನ ಬೆಳೆಗಾರರ ಮಂಡಳಿ’ ರಚಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿತ್ತು. ಅದಕ್ಕೂ ಸರ್ಕಾರ ಸ್ಪಂದಿಸಿಲ್ಲ. ಈ ಕಾರಣಕ್ಕೆ ಟಿಆರ್‌ಎಸ್‌ ವಿರುದ್ಧ ರೈತರು ಬಂಡಾಯವೆದ್ದಿದ್ದಾರೆ. 170 ರೈತರು ಇಲ್ಲಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಒಟ್ಟಾರೆ 185 ಅಭ್ಯರ್ಥಿಗಳು ಸ್ಪರ್ಧಿಸಿದಂತಾಗಿದೆ. ಕೆಸಿಆರ್‌ ಅವರ ಪುತ್ರಿ ಕೆ. ಕವಿತಾ ಈ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, ಈ ಬಾರಿಯೂ ಇಲ್ಲಿಂದ ಕಣಕ್ಕಿಳಿದಿದ್ದಾರೆ. ಕೆಸಿಆರ್‌ ಚಿಂತೆಗೆ ಇದು ಮುಖ್ಯ ಕಾರಣವಾಗಿದೆ.

ಇಷ್ಟೊಂದು ಅಭ್ಯರ್ಥಿಗಳಿರುವುದರಿಂದ ಆಯೋಗಕ್ಕೂ ಹಲವು ಸಮಸ್ಯೆಗಳು ಎದುರಾಗಿವೆ. ಈ ಕ್ಷೇತ್ರದ ಚುನಾವಣೆಗಾಗಿ ಆಯೋಗಕ್ಕೆ ದುಪ್ಪಟ್ಟು ವೆಚ್ಚ ಬರುವ ಸಾಧ್ಯತೆ ಇದೆ. ಸಾಮಾನ್ಯ ಮತಯಂತ್ರದ ಬದಲಿಗೆ ಪ್ರತಿ ಮತಗಟ್ಟೆಗಳಲ್ಲಿ ‘ಎಂ3’ ಮಾದರಿಯ ಹಲವು ಮತಯಂತ್ರಗಳನ್ನು ಬಳಸಬೇಕಾಗಿದೆ. ಎಂ3 ಮಾದರಿಯ ಒಂದು ಮತಯಂತ್ರದಲ್ಲಿ 24 ಅಭ್ಯರ್ಥಿಗಳ ಹೆಸರು ದಾಖಲಿಸಲು ಸಾಧ್ಯವಾಗುತ್ತದೆ.

‘16 ಗೆದ್ದ ಮಾತ್ರಕ್ಕೆ ಪ್ರಧಾನಿಯಾಗಲು ಸಾಧ್ಯವೇ’
ಹೈದರಾಬಾದ್‌: ‘ಹದಿನಾರು ಲೋಕಸಭಾ ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಕೆ. ಚಂದ್ರಶೇಖರ ರಾವ್‌ ಅವರು ದೇಶದ ಪ್ರಧಾನಿಯಾಗಲು ಹೇಗೆ ಸಾಧ್ಯ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ಪ್ರಶ್ನಿಸಿದರು.

‘ತೆಲಂಗಾಣದ 16 ಲೋಕಸಭಾ ಕ್ಷೇತ್ರಗಳಲ್ಲೂ ಟಿಆರ್‌ಎಸ್‌ ಅಭ್ಯರ್ಥಿಗಳು ಗೆದ್ದರೆ ಕೆಸಿಆರ್‌ ಪ್ರಧಾನಿಯಾಗುತ್ತಾರೆ’ ಎಂದು ಆ ಪಕ್ಷದವರು ಮಾಡುತ್ತಿರುವ ಪ್ರಚಾರವನ್ನು ಶಂಶಾಬಾದ್‌ನಲ್ಲಿ ಆಯೋಜಿಸಿದ್ದ ‘ವಿಜಯಸಂಕಲ್ಪ ಸಭೆ’ಯಲ್ಲಿ ಶಾ ಪ್ರಶ್ನಿಸಿದರು.

‘ದೇಶಲ್ಲಿ ಮೋದಿ ಅಲೆ ಇದೆ. ಅವರೇ ಪುನಃ ಪ್ರಧಾನಿ ಆಗಬೇಕು ಎಂದು ದೇಶ ಬಯಸುತ್ತಿದೆ. ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ‘ರಾಹುಲ್‌ ಬಾಬಾ’ ನೃತೃತ್ವದ ‘ತುಕಡೆ ಗ್ಯಾಂಗ್‌’ ದೇಶಕ್ಕೆ ರಕ್ಷಣೆ ನೀಡಬಲ್ಲದೇ? ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್‌, ವಿಜಯ ಮಲ್ಯ ಅವರಂಥ ಉದ್ಯಮಿಗೆ ದೊಡ್ಡ ಮೊತ್ತದ ಸಾಲ ಕೊಟ್ಟು ದೇಶದಿಂದ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿತು’ ಎಂದರು. ಮೆಟ್ರೊ ರೈಲು, ಜೀವ ವೈವಿಧ್ಯ ಕೇಂದ್ರ ಸೇರಿದಂತೆ ತೆಲಂಗಾಣಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಕೊಟ್ಟಿರುವ ಕಾಣಿಕೆ ಗಮನಾರ್ಹವಾದುದು. ಐದು ವರ್ಷಗಳಲ್ಲಿ ತೆಲಂಗಾಣಕ್ಕೆ ₹ 2.45 ಲಕ್ಷ ಕೋಟಿ ನೆರವು ನೀಡಿದೆ ಎಂದು ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT