ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವನ ಗುರುತು ಗುಟ್ಟಾಗಿಡುವಂತಿಲ್ಲ: ‘ಸುಪ್ರೀಂ’

ಮಂಗಳವಾರ, ಏಪ್ರಿಲ್ 23, 2019
25 °C
ಚುನಾವಣಾ ಬಾಂಡ್‌ ರದ್ದತಿ ಕೋರಿದ ಅರ್ಜಿ: ಮಧ್ಯಂತರ ತೀರ್ಪು ಕೊಟ್ಟ ಕೋರ್ಟ್‌

ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವನ ಗುರುತು ಗುಟ್ಟಾಗಿಡುವಂತಿಲ್ಲ: ‘ಸುಪ್ರೀಂ’

Published:
Updated:

ನವದೆಹಲಿ: ರಾಜಕೀಯ ಪಕ್ಷಗಳು ಬಾಂಡ್‌ ಮೂಲಕ ಸಂಗ್ರಹಿಸಿದ ದೇಣಿಗೆಯ ಮೊತ್ತ ಎಷ್ಟು, ಕೊಟ್ಟವರು ಯಾರು ಎಂಬಂತಹ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. 

ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿಲ್ಲ. ಆದರೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಇಂತಹ ಕೆಲವು ನಿರ್ದೇಶನಗಳನ್ನು ಕೊಟ್ಟಿದೆ.

ಚುನಾವಣಾ ಬಾಂಡ್‌ ಮೂಲಕ ಪಕ್ಷಗಳು ದೇಣಿಗೆ ಸಂಗ್ರಹಿಸುವುದಕ್ಕೆ ತಡೆ ನೀಡಬೇಕು ಅಥವಾ ದೇಣಿಗೆ ಕೊಟ್ಟವರು ಹೆಸರು ಬಹಿರಂಗಪಡಿಸಲು ಸೂಚಿಸಬೇಕು ಎಂದು ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ವಿಚಾರಣೆ ನಡೆಸಿ ಮಧ್ಯಂತರ ತೀರ್ಪು ನೀಡಿದೆ. ಬಾಂಡ್‌ ಮೂಲಕ ಸಂಗ್ರಹಿಸಲಾದ ಮೊತ್ತ ಎಷ್ಟು ಮತ್ತು ದೇಣಿಗೆ ಕೊಟ್ಟವರ ಬ್ಯಾಂಕ್‌ ಖಾತೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಮೇ 30ರೊಳಗೆ ರಾಜಕೀಯ ಪಕ್ಷಗಳು ಸಲ್ಲಿಸಬೇಕು ಎಂದು ಪೀಠವು ನಿರ್ದೇಶನ ನೀಡಿದೆ. 

ಈ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಾರದು. ಈ ವ್ಯವಸ್ಥೆ ಸರಿಯಾಗಿದೆಯೇ ಇಲ್ಲವೇ ಎಂಬುದು ಚುನಾವಣೆ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ವಿವಾದಾತ್ಮಕ ಅಂಶವೇನು?
ಚುನಾವಣಾ ಬಾಂಡ್‌ ಯೋಜನೆಯ ಅಧಿಸೂಚನೆಯನ್ನು 2018ರ ಜನವರಿ 2ರಂದು ಸರ್ಕಾರ ಹೊರಡಿಸಿತ್ತು. ಇದರ ಪ್ರಕಾರ, ಭಾರತದ ಪ್ರಜೆಯಾಗಿರುವವರು ನಿಯೋಜಿತ ಬ್ಯಾಂಕ್‌ನ ನಿರ್ದಿಷ್ಟ ಶಾಖೆಯಿಂದ ಬಾಂಡ್‌ ಖರೀದಿಸಲು ಅವಕಾಶ ಇದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ಬಾಂಡ್‌ ಮಾರುವ ಅವಕಾಶ ಕೊಡಲಾಗಿದೆ. ಬಾಂಡ್‌ ಖರೀದಿಸಿದವರು ಅದನ್ನು ತಮ್ಮ ಇಷ್ಟದ ರಾಜಕೀಯ ಪಕ್ಷಕ್ಕೆ ನೀಡಬಹುದು. ಆ ಪಕ್ಷವು ಇದನ್ನು 15 ದಿನಗಳೊಳಗೆ ಬ್ಯಾಂಕ್‌ ಖಾತೆಯ ಮೂಲಕ ನಗದು ಮಾಡಿಕೊಳ್ಳಬಹುದು. ದೇಣಿಗೆ ನೀಡಿದವರ ಹೆಸರನ್ನು ಬಹಿರಂಗ ಪಡಿಸಬೇಕಿಲ್ಲ ಮತ್ತು ದೇಣಿಗೆಯಲ್ಲಿ ಸಿಂಹಪಾಲು ಆಡಳಿತಕ್ಕೆ ಪಕ್ಷಕ್ಕೇ ಹೋಗುತ್ತದೆ ಎಂಬುದು ಈ ಯೋಜನೆಯಲ್ಲಿನ ವಿವಾದಾತ್ಮಕ ಅಂಶ.

ಆಯೋಗದ ಭಿನ್ನ ನಿಲುವು
ಬಾಂಡ್‌ ವ್ಯವಸ್ಥೆಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ವ್ಯತಿರಿಕ್ತ ನಿಲುವು ತಳೆದಿವೆ. ಬಾಂಡ್‌ ಮೂಲಕ ದೇಣಿಗೆ ಕೊಟ್ಟವರ ಹೆಸರು ಬಹಿರಂಗಪಡಿಸಬೇಕಿಲ್ಲ ಎಂಬುದು ಕೇಂದ್ರ ಸರ್ಕಾರದ ವಾದ. ಆದರೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕಾದರೆ ದೇಣಿಗೆ ಕೊಟ್ಟವರ ಹೆಸರು ಬಹಿರಂಗ ಆಗಬೇಕು ಎಂಬುದು ಆಯೋಗದ ನಿಲುವು. ಬಾಂಡ್‌ ಖರೀದಿಸುವ ವ್ಯಕ್ತಿಯ ಗುರುತು ಬಹಿರಂಗ ಆಗದೇ ಇದ್ದರೆ ಚುನಾವಣೆಯಲ್ಲಿ ಕಪ್ಪುಹಣ ತಡೆಯುವ ಬಾಂಡ್‌ನ ಉದ್ದೇಶವೇ ಈಡೇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕೋರ್ಟ್‌ ಹೇಳಿದ್ದೇನು?
* ಬಾಂಡ್‌ ವ್ಯವಸ್ಥೆಗಾಗಿ ಕಾನೂನಿನಲ್ಲಿ ಮಾಡಿರುವ ಬದಲಾವಣೆ ಪರಿಶೀಲನೆಗೆ ಕೋರ್ಟ್‌ ತೀರ್ಮಾನ

* ಬಾಂಡ್‌ ವ್ಯವಸ್ಥೆ ಜಾರಿಗಾಗಿ ಆದಾಯ ತೆರಿಗೆ, ಚುನಾವಣೆ ಮತ್ತು ಬ್ಯಾಂಕಿಂಗ್‌ ಕಾನೂನಿನಲ್ಲಿ ಮಾಡಿರುವ ತಿದ್ದುಪಡಿಗಳನ್ನು ವಿಮರ್ಶೆಗೆ ಒಳಪಡಿಸಲು ನಿರ್ಧಾರ

* ಇಡೀ ವ್ಯವಸ್ಥೆಯು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಭರವಸೆ

* ಏಪ್ರಿಲ್‌–ಮೇ ತಿಂಗಳ ಬಾಂಡ್‌ ಖರೀದಿ ಅವಧಿ 10 ದಿನಗಳಿಂದ 5 ದಿನಕ್ಕ ಇಳಿಕೆ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !