ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಕಾಂತ್: ಬೆಳ್ಳಿತೆರೆಯ ಜಾದೂ ರಾಜಕಾರಣದಲ್ಲಿ ಮಾಯ

Last Updated 17 ಫೆಬ್ರುವರಿ 2019, 19:22 IST
ಅಕ್ಷರ ಗಾತ್ರ

ಚೆನ್ನೈ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಹೇಳಿದ್ದಾರೆ. ಇದು ಅವರ ರಾಜಕೀಯ ಜಾಣ್ಮೆಯ ಕೊರತೆ ಮತ್ತು ಸಂದಿಗ್ಧವನ್ನೇ ಸೂಚಿಸುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಲಕ್ಷಾಂತರ ಅಭಿಮಾನಿಗಳಿಗೆ ರಜನಿಕಾಂತ್‌ ಆರಾಧ್ಯದೈವ. ಆದರೆ, ನಿರ್ಧಾರಗಳನ್ನು ಕೈಗೊಳ್ಳಲು, ಪ್ರತಿಸ್ಪರ್ಧಿಗಳನ್ನು ಮುಖಾಮುಖಿಯಾಗಲು, ರಾಜ್ಯ ಮತ್ತು ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ನಿಲುವು ತಳೆಯಲು ಅವರು ಸದಾ ಹಿಂದೇಟು ಹಾಕುತ್ತಲೇ ಬಂದಿದ್ದಾರೆ.2017ರಲ್ಲಿ ರಾಜಕೀಯ ಪ್ರವೇಶವನ್ನು ಅವರು ಘೋಷಿಸಿದಾಗ, ಒಗಟಿನಂತೆ ಮಾತನಾಡುವುದನ್ನು ನಿಲ್ಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, 14 ತಿಂಗಳಲ್ಲಿ ರಜನಿ ಅವರು ಹಿರಿತೆರೆಯ ಸಖ್ಯ ಬಿಟ್ಟಿಲ್ಲ, ರಾಜಕೀಯವನ್ನು ಪೂರ್ಣವಾಗಿ ಅಪ್ಪಿಕೊಂಡೂ ಇಲ್ಲ. ಮತ್ತೆ ಮತ್ತೆ ಅವರು ಸಿನಿಮಾಗಳಿಗೆ ಸಹಿ ಹಾಕುತ್ತಲೇ ಇದ್ದಾರೆ. ಹಾಗಾಗಿ, ರಾಜಕೀಯದ ಬಗ್ಗೆ ಅವರು ಎಷ್ಟು ಗಂಭೀರವಾಗಿದ್ದಾರೆ ಎಂಬ ಪ್ರಶ್ನೆಯೂ ಇದೆ.

ಯಾರು ‘ಸ್ಥಿರ ಮತ್ತು ಪ್ರಬಲ’ ಸರ್ಕಾರ ರಚಿಸುವ ಮೂಲಕ ತಮಿಳುನಾಡಿನ ಬಿಕ್ಕಟ್ಟನ್ನು ಪರಿಹರಿಸಬಹುದು ಎಂದು ಅನಿಸುತ್ತದೆಯೋ ಅವರಿಗೆ ಮತ ಹಾಕಿ ಎಂದು ಅಭಿಮಾನಿಗಳಿಗೆ ರಜನಿ ಕರೆ ಕೊಟ್ಟಿದ್ದಾರೆ. ಉತ್ತರಗಳಿಗಿಂತ ಪ್ರಶ್ನೆಗಳನ್ನೇ ಹುಟ್ಟುಹಾಕುವ ರಜನಿ ಅವರ ಹೇಳಿಕೆಗಳ ಸಾಲಿಗೆ ಇದು ಹೊಸ ಸೇರ್ಪಡೆ. ಈ ಹೇಳಿಕೆಗೆ ಹಲವು ವ್ಯಾಖ್ಯಾನಗಳು ಬರುತ್ತಿವೆ. ರಜನಿ ಹೇಳಿಕೆಯನ್ನು ತನ್ನ ಪರವಾಗಿ ಪರಿವರ್ತಿಸುವ ಪ್ರಯತ್ನವನ್ನು ಬಿಜೆಪಿ ಈಗಾಗಲೇ ಆರಂಭಿಸಿದೆ. ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ರಜನಿಕಾಂತ್‌ ಜನಪ್ರಿಯತೆಯನ್ನು ಬಳಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಯಾಕೆಂದರೆ, ಅಲ್ಲಿ ಹಿಂದುತ್ವ ವಿಚಾರಗಳಿಗೆ ಜನರಿಂದ ಸ್ಪಂದನೆ ವ್ಯಕ್ತವಾಗುವುದಿಲ್ಲ; ಹಿಂದಿ ಭಾಷಿಕ ರಾಜ್ಯಗಳ ಪಕ್ಷ ಎಂದು ತಮಿಳು ಜನರು ಬಿಜೆಪಿಯನ್ನು ಪರಿಗಣಿಸುತ್ತಾರೆ. ಹಾಗಾಗಿ, ತಮಿಳರಿಗೆ ಬಿಜೆಪಿ ಬಗ್ಗೆ ಒಲವು ಇಲ್ಲ. ಬಿಜೆಪಿ ಬಗ್ಗೆ ತಮಿಳುನಾಡು ಜನರಿಗೆ ಒಲವು ಇಲ್ಲ ಎಂಬ ಕಾರಣಕ್ಕಾಗಿಯೇ ಆ ಪಕ್ಷಕ್ಕೆ ಬೆಂಬಲ ಘೋಷಿಸುವುದರಿಂದ ರಜನಿ ಹಿಂದೆ ಸರಿದಿದ್ದಾರೆ. ಆದರೆ, ಈಗಿನ ಹೇಳಿಕೆಯು ರಜನಿ ಸಂದಿಗ್ಧದಲ್ಲಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾರಿದೆ.

ಯಾರಿಗೆ ಮತಹಾಕಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿರ್ದೇಶನವನ್ನು ಅಭಿಮಾನಿಗಳಿಗೆ ರಜನಿ ಅವರ ಹೇಳಿಕೆ ಕೊಟ್ಟಿಲ್ಲ. ಅದೇ ರೀತಿ, ತಮಿಳುನಾಡಿನ ನೀರಿನ ಸಮಸ್ಯೆ ಪರಿಹರಿಸುವವರಿಗೆ ಮತ ಹಾಕಿ ಎಂಬುದು ಗಂಭೀರ ಎಂದು ಅನಿಸುವುದಿಲ್ಲ ಎಂದು ರಾಜಕೀಯ ವಿಶ್ಲೇಷಕ ಸುಮಂತ್‌ ಸಿ. ರಾಮನ್‌ ಹೇಳಿದ್ದಾರೆ.

1996ರಲ್ಲಿ ಡಿಎಂಕೆ–ತಮಿಳು ಮಾಣಿಲ ಕಾಂಗ್ರೆಸ್‌ ಮೈತ್ರಿಕೂಟದ ಪರವಾಗಿ ರಜನಿ ನಿಂತಿದ್ದರು. ಆ ಚುನಾವಣೆಯಲ್ಲಿ ಈ ಮೈತ್ರಿಕೂಟ ಜಯಭೇರಿ ಸಾಧಿಸಿತ್ತು. ಆದರೆ, 1998ರಲ್ಲಿ ಇದೇ ಮೈತ್ರಿಕೂಟದ ಪರವಾಗಿ ಅವರು ಕೊಟ್ಟ ಕರೆಗೆ ದೊಡ್ಡ ಸ್ಪಂದನೆ ವ್ಯಕ್ತವಾಗಲಿಲ್ಲ. ಪಿಎಂಕೆಯನ್ನು ನಿರ್ಲಕ್ಷಿಸಿ ಎಂದು 2004ರಲ್ಲಿ ರಜನಿ ಘೋಷಿಸಿದ್ದರು. ಆದರೆ, ಜನರು ಇದಕ್ಕೆ ದೊಡ್ಡ ಬೆಲೆ ಕೊಡಲಿಲ್ಲ.

ನಂತರದ 13 ವರ್ಷ ರಜನಿ ರಾಜಕೀಯವಾಗಿ ಸುಮ್ಮನಿದ್ದರು.ಜಯಲಲಿತಾ ನಿಧನ ಮತ್ತು ಕರುಣಾನಿಧಿ ಅನಾರೋಗ್ಯದಿಂದ ಮನೆಗೆ ಸೀಮಿತರಾಗುವ ತನಕ ರಜನಿ ರಾಜಕೀಯ ವಿಚಾರ ಮಾತನಾಡಲೇ ಇಲ್ಲ. 1996ರಲ್ಲಿ ಅವರಿಗೆ ಅತ್ಯುತ್ತಮವಾದ ಅವಕಾಶ ಇತ್ತು. ಜಯಲಲಿತಾ ಅವರು ಐದು ವರ್ಷಗಳ ಆಳ್ವಿಕೆಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಕೆಟ್ಟ ರೀತಿಯ ಅತ್ಯಾಡಂಬರದಿಂದ ಜನ ಬೇಸತ್ತಿದ್ದರು. ಪರ್ಯಾಯಕ್ಕಾಗಿ ಎದುರು ನೋಡುತ್ತಿದ್ದರು. ಆ ಅವಕಾಶವನ್ನು ರಜನಿ ಬಳಸಿಕೊಳ್ಳಲಿಲ್ಲ.

2019ರಲ್ಲಿ ತಮಿಳುನಾಡು ರಾಜಕೀಯ ಚಿತ್ರಣ ಬದಲಾಗಿದೆ. ಹಲವು ಪಕ್ಷಗಳು ಮುನ್ನೆಲೆಗೆ ಬಂದಿವೆ. ಜಾತಿ ಆಧರಿತ ಪಕ್ಷಗಳು, ತಮಿಳು ರಾಷ್ಟ್ರೀಯತೆಯ ಪಕ್ಷಗಳು ಪ್ರಬಲವಾಗಿವೆ. ಇಂತಹ ಸನ್ನಿವೇಶದಲ್ಲಿ ಯಾವುದೇ ಪ್ರಭಾವ ಬೀರುವುದು ರಜನಿಗೆ ಕಷ್ಟ. ಹಾಗಿದ್ದರೂ, ಮತ್ತೊಂದು ಅವಕಾಶವನ್ನು ಅವರು ಈಗ ಕೈಚೆಲ್ಲಿದ್ದಾರೆ. ರಜನಿಕಾಂತ್‌ಗೆ ಇನ್ನೊಂದು ಅವಕಾಶ ಸಿಗಬಹುದೇ ಎಂಬುದು ಯಕ್ಷಪ್ರಶ್ನೆ.

ಮೈತ್ರಿಯಲ್ಲಿ ಕಾಂಗ್ರೆಸ್ ದೊಡ್ಡಣ್ಣ: ಜೆಎಂಎಂ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಜತೆಗೆ ಜೆಎಂಎಂ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವುದು ಇಂದಿನ ಅಗತ್ಯ ಎಂದು ಜೆಎಂಎಂ ಮುಖ್ಯಸ್ಥ ಹೇಮಂತ್‌ ಸೊರೇನ್‌ ಹೇಳಿದ್ದಾರೆ. ಇಂತಹ ಮೈತ್ರಿಯಲ್ಲಿ ಕುಟುಂಬದ ‘ದೊಡ್ಡಣ್ಣ’ನ ಪಾತ್ರವನ್ನು ಕಾಂಗ್ರೆಸ್‌ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಜೆಡಿ ಮತ್ತು ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಪ್ರಜಾತಾಂತ್ರಿಕ್) ಪಕ್ಷಗಳ ಜತೆಗಿನ ಹಿಂದಿನ ಕಹಿ ಅನುಭವಗಳನ್ನು ಮರೆತು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಜೆಎಂಎಂ ಮತ್ತು ಕಾಂಗ್ರೆಸ್‌ ನಿರ್ಧರಿಸಿವೆ ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಸೊರೇನ್‌ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 2019ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT