ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳನ್ನು ಗುಂಪುಹಲ್ಲೆಯ ಬ್ರ್ಯಾಂಡ್‌ ಮಾಡಲಾಗುತ್ತಿದೆ: ಭಾಗವತ್

ಗುಂಪುಹತ್ಯೆ: ಕಳಂಕದ ಸಂಚು
Last Updated 8 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ನಾಗಪುರ/ಮುಂಬೈ: ‘ಹಿಂದೂ ಸಮುದಾಯ ಮತ್ತು ಭಾರತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ‘ಗುಂಪುಹಲ್ಲೆ ಮತ್ತು ಗುಂಪುಹತ್ಯೆ’ (ಲಿಂಚಿಂಗ್‌) ಎಂಬ ಪದಗಳನ್ನು ಬಳಸುತ್ತಿವೆ. ಹಿಂದೂ ಸಮಾಜಕ್ಕೆ ಕಳಂಕ ತರುವ ಉದ್ದೇಶದಿಂದ ಸಂಚು ರೂಪಿಸಲಾಗುತ್ತಿದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದ್ದಾರೆ.

ನಾಗಪುರದಲ್ಲಿನ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ನಮ್ಮ ಸ್ವಯಂಸೇವಕರು ಇಂತಹ ಹಲ್ಲೆ–ಹತ್ಯೆಗಳಲ್ಲಿ ಭಾಗಿಯಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಗುಂಪುಹಲ್ಲೆ–ಹತ್ಯೆಗಳನ್ನು ಯಾವುದೋ ಒಂದು ಧರ್ಮದ ಜನರ ವಿರುದ್ಧ ಮಾತ್ರ ನಡೆಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಒಂದು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಇದಕ್ಕೆ ಸಂಬಂಧಿಸಿ ಭಯ ಹುಟ್ಟಿಸಲಾಗುತ್ತಿದೆ. ಇದು ಒಂದು ಸಂಚು.ಈ ಮೂಲಕ ಹಿಂದೂಗಳನ್ನು ಗುಂಪುಹತ್ಯೆಯ ಬ್ರ್ಯಾಂಡ್ ಮಾಡಲಾಗು
ತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಎರಡೂ ಧರ್ಮದವರು ಈ ರೀತಿಯ ಹಲ್ಲೆ ಮತ್ತು ಹತ್ಯೆಗಳನ್ನು ನಡೆಸಿದ್ದಾರೆ. ಆದರೆ, ಒಂದು ಧರ್ಮದ ಜನರನ್ನೇ ಇಂತಹ ದಾಳಿಗಳಿಗೆ ಗುರಿ ಮಾಡಲಾಗುತ್ತಿದೆ ಎಂಬಂತಹ ವರದಿಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿದೆ.ಇದು ಸಂಚು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು’ ಎಂದು ಅವರು ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಕರೆ ನೀಡಿದ್ದಾರೆ.

‘ಗುಂಪುಹತ್ಯೆ–ಹಲ್ಲೆ ಎಂಬುದು ಭಾರತದ ಸಂಸ್ಕೃತಿಯಲ್ಲಿ ಇಲ್ಲ, ನಮ್ಮ ಸಂವಿಧಾನದಲ್ಲೂ ಅದಕ್ಕೆ ಅವಕಾಶವಿಲ್ಲ. ಇದು ಪಶ್ಚಿಮದ ದೇಶಗಳಲ್ಲಿ ಇರುವಂತಹುದು. ಅಲ್ಲಿ ಒಂದು ಧರ್ಮದವರು ಇಂತಹ ಹಲ್ಲೆ–ಹತ್ಯೆ ನಡೆಸುತ್ತಾರೆ.ಭಾರತಕ್ಕೆ ಗುಂಪುಹತ್ಯೆಯ ಹಣೆಪಟ್ಟಿಯನ್ನು ಹಚ್ಚುವ ಕೆಲಸ ಆಗಬಾರದು’ ಎಂದು ಅವರು ಕರೆ ನೀಡಿದ್ದಾರೆ.

ಆರ್ಥಿಕತೆ ಚೆನ್ನಾಗಿದೆ:ದೇಶದಲ್ಲಿ ಆರ್ಥಿಕತೆ ಕುಂಟುತ್ತಿಲ್ಲ. ಜಿಡಿಪಿ ಮತ್ತು ದೇಶದ ಅಭಿವೃದ್ಧಿಗೆ ನೇರ ಸಂಬಂಧ
ವಿಲ್ಲ. ಈ ಬಗ್ಗೆ ಅತಿಯಾಗಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ. ಚರ್ಚೆ ನಡೆಸಿದಷ್ಟೂ ಹೂಡಿಕೆದಾರರು ಹಿಂದೇಟು ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.

ಭಾರತ ಎಂದಿಗೂ ಹಿಂದೂ ರಾಷ್ಟ್ರ
‘ಭಾರತ ಮತ್ತು ಭಾರತೀಯತೆಯ ಅಸ್ಮಿತೆಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಭಾರತವು ಹಿಂದುಸ್ಥಾನ ಮತ್ತು ಹಿಂದೂ ರಾಷ್ಟ್ರ ಎಂಬ ನಿಲುವಿಗೆ ಆರ್‌ಎಸ್‌ಎಸ್‌ ಬದ್ಧವಾಗಿದೆ’ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

‘ಹಿಂದುತ್ವವು ಬಹುತ್ವವನ್ನು ಒಪ್ಪುತ್ತದೆ ಎಂಬ ಮಾತು ಕೇಳಲು ಮಾತ್ರ ಚೆನ್ನಾಗಿರುತ್ತದೆ. ಆದರೆ ಜಗತ್ತು ಶಕ್ತಿವಂತರ ಮಾತನ್ನು ಮಾತ್ರ ಪಾಲಿಸುತ್ತದೆ. ಹಿಂದೂಗಳು ಒಗ್ಗಟ್ಟಾದಾಗ ಮತ್ತು ಹಿಂದೂಗಳ ಕೈಯಲ್ಲಿ ಅಧಿಕಾರವಿದ್ದಾಗ ಮಾತ್ರ ಜಗತ್ತು ಅವರ ಮಾತನ್ನು ಕೇಳುತ್ತದೆ. ಹೀಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು ಮತ್ತು ಅವರ ಕೈಯಲ್ಲಿ ಅಧಿಕಾರ ಇರಬೇಕು’ ಎಂದು ಅವರು ಹೇಳಿದ್ದಾರೆ.

ಗುಂಪುಹಲ್ಲೆ ಏರಿಕೆ
2019ರ ಮೊದಲ ಆರು ತಿಂಗಳಲ್ಲಿ 72 ಗುಂಪುಹಲ್ಲೆಗಳು ನಡೆದಿವೆ. ಐವರು ಮುಸ್ಲಿಮರು ಮೃತಪಟ್ಟಿದ್ದಾರೆ: ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ವರದಿ.

**
ಭಾರತದಲ್ಲಿ ಗುಂಪುಹತ್ಯೆಗಳು ನಡೆಯಬಾರದಿತ್ತು. ಕಾನೂನನ್ನು ಮೀರುವ ಕೆಲಸ ಆಗಬಾರದಿತ್ತು. ಮುಂದೆ ಕಾನೂನಿನ ಮಿತಿಯಲ್ಲಿ ನಡೆದುಕೊಳ್ಳಬೇಕು.
-ಮೋಹನ್ ಭಾಗವತ್‌, ಆರ್‌ಎಸ್‌ಎಸ್ ಮುಖ್ಯಸ್ಥ

**
ಗುಂಪುಹತ್ಯೆಗೆ ಸಂಬಂಧಿಸಿದಂತೆ ಮೋಹನ್ ಭಾಗವತ್ ಅವರ ಮಾತುಗಳನ್ನು ಆರ್‌ಎಸ್‌ಎಸ್‌ ಪಾಲಿಸಿದ ದಿನ ಭಾರತದಲ್ಲಿ ಗುಂಪುಹತ್ಯೆ ನಿಲ್ಲುತ್ತದೆ.
-ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT