ಶುಕ್ರವಾರ, ಏಪ್ರಿಲ್ 23, 2021
32 °C
ಹಾಡಹಗಲೇ ನಡೆದಿದ್ದ ಯುವಕನ ಕೊಲೆ: ಪ್ರಮುಖ ಆರೋಪಿ ಬಿಡುಗಡೆಗೊಳಿಸಿ ಆದೇಶ

ಮರ್ಯಾದೆಗೇಡು ಹತ್ಯೆ : ಐವರ ಗಲ್ಲು ಶಿಕ್ಷೆ ರದ್ದುಗೊಳಿಸಿದ ಮದ್ರಾಸ್‌ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ 2016ರಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿದ್ದ 22 ವರ್ಷದ ಯುವಕನ ಮರ್ಯಾದೆಗೇಡು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಮದ್ರಾಸ್‌ ಹೈಕೋರ್ಟ್‌ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಜತೆಗೆ, ಐವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಆದೇಶ ನೀಡಿದೆ.

ಉದುಮ್ಲಾಪೇಟ್‌ ನಗರದಲ್ಲಿ ಪತ್ನಿಯ ಮುಂದೆಯೇ ಪರಿಶಿಷ್ಟ ಜಾತಿಗೆ ಸೇರಿದ ಶಂಕರ್‌ ಎನ್ನುವ ಯುವಕನ ಹತ್ಯೆ ನಡೆದಿತ್ತು. ಶಂಕರ ಪತ್ನಿ ಕೌಶಲ್ಯ ತಂದೆ ಚಿನ್ನಸ್ವಾಮಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ಕ್ರಿಮಿನಲ್‌ ಸಂಚು ಸೇರಿದಂತೆ ಎಲ್ಲ ಆರೋಪಗಳಿಂದ ಚಿನ್ನಸ್ವಾಮಿಯನ್ನು ಮುಕ್ತಗೊಳಿಸಲಾಗಿದೆ. ಉಳಿದ ಐವರು ಆರೋಪಿಗಳಿಗೆ ಕನಿಷ್ಠ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ಕೌಶಲ್ಯ ತಾಯಿ ಮತ್ತು ಇತರ ಇಬ್ಬರನ್ನು ಸಹ ಹೈಕೋರ್ಟ್‌ ಬಿಡುಗಡೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಂ. ಸತ್ಯನಾರಾಯಣ ಮತ್ತು ಎಂ. ನಿರ್ಮಲ್‌ ಕುಮಾರ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:

ಪೊಲ್ಲಚಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಉದುಮ್ಲಾಪೇಟ್‌ ಸಮೀಪದ ಕುಮಾರಲಿಂಗಂ ನಿವಾಸಿ ಶಂಕರ್‌ ಮತ್ತು ಕೌಶಲ್ಯ ಪ್ರೀತಿಸಿ ವಿವಾಹವಾಗಿದ್ದರು. ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೌಶಲ್ಯ ಅವರ ಪೋಷಕರು ಶಂಕರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

2016ರ ಮಾರ್ಚ್‌ 13ರಂದು ಮೂವರಿದ್ದ ಗ್ಯಾಂಗ್‌ವೊಂದು ಶಂಕರ್‌ನನ್ನು ಕೊಲೆ ಮಾಡಿತ್ತು. ಕೌಶಲ್ಯ ಸಹ ಆಗ ಗಾಯಗೊಂಡಿದ್ದರು. ಹಾಡಹಗಲೇ ನಡೆದಿದ್ದ ಶಂಕರನ ಭೀಕರ ಕೊಲೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಾರ್ವಜನಿಕ ವಲಯದಲ್ಲಿಯೂ ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಡಿಸೆಂಬರ್‌ 12ರಂದು ತಿರುಪುರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಚಿನ್ನಸ್ವಾಮಿ ಮತ್ತು ಇತರ ಐವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ಚಿನ್ನಸ್ವಾಮಿ ಮತ್ತು ಇತರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು