ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಮರಳಿ ಬರುತ್ತೇನೆ ಹೇಳಿಕೆಗೆ ಉದ್ಧವ್ ವ್ಯಂಗ್ಯ

ರಾಜಕೀಯ ಕಾಲೆಳೆದಾಟ
Last Updated 2 ಡಿಸೆಂಬರ್ 2019, 3:18 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಅತ್ಯುತ್ಸಾಹದಿಂದ ಹೇಳಿಕೊಂಡಿದ್ದ ‘ಮರಳಿ ಬರುತ್ತೇನೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಲೇವಡಿ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಫಡಣವೀಸ್ ಅವರನ್ನು ಅಭಿನಂದಿಸಿ ಮಾತನಾಡಿದ ಉದ್ಧವ್,‘ಮರಳಿ ಬರುತ್ತೇನೆ ಎಂಬುದಾಗಿ ಎಂದೂ ಹೇಳಿರಲಿಲ್ಲ. ಆದರೆ ನಾನು ಸದನಕ್ಕೆ ಬಂದಿದ್ದೇನೆ ಮಧ್ಯರಾತ್ರಿಯ ಹೊತ್ತು ತರಾತುರಿಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಸದನ ಹಾಗೂ ಮಹಾರಾಷ್ಟ್ರದ ಜನತೆಗೆ ಭರವಸೆ ನೀಡುತ್ತೇನೆ’ ಎಂದರು. ಈ ಮೂಲಕ ನವೆಂಬರ್ 23ರ ಮುಂಜಾನೆ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಫಡಣವೀಸ್‌ಗೆ ತಿರುಗೇಟು ನೀಡಿದರು.

ರೈತರಿಗೆ ನೆರವಾಗುವುದು ಸರ್ಕಾರದ ಆದ್ಯತೆ. ರೈತರ ಸಾಲಮನ್ನಾವೊಂದೇ ಸಮಸ್ಯೆಗೆ ಪರಿಹಾರವಲ್ಲ. ಅವರ ಸಂಕಷ್ಟಗಳನ್ನು ಕಡಿಮೆಗೊಳಿಸಬೇಕಿದೆ ಎಂದರು. ‘ಹಲವು ವರ್ಷ ಪ್ರತಿಪಕ್ಷದಲ್ಲಿದ್ದವರು ಈಗ ನಮ್ಮ ಜತೆ ಸರ್ಕಾರ ರಚಿಸಿದ್ದಾರೆ. ಬಿಜೆಪಿಯ ಸ್ನೇಹಿತರು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಿದ್ದಾರೆ. ಫಡಣವೀಸ್ ಅವರನ್ನು ಸ್ನೇಹಿತ ಎಂದು ಕರೆಯಲು ಯಾವುದೇ ಹಿಂಜರಿಗೆ ಇಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ಅರ್ಹತೆಗಿಂತ ಲೆಕ್ಕಾಚಾರವೇ ಮೇಲಾಯಿತು: ಫಡಣವೀಸ್

‘ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯುವಲ್ಲಿ ರಾಜಕೀಯ ಲೆಕ್ಕಾಚಾರ ಮೇಲುಗೈ ಸಾಧಿಸಿತು’ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಹೇಳಿದರು.

‘ನಾನು ಮರಳಿ ಬರುತ್ತೇನೆ’ ಎಂಬ ಹೇಳಿಕೆ ಮುಂದಿಟ್ಟು ಲೇವಡಿ ಮಾಡಿದ ಆಡಳಿತ ಪಕ್ಷದ ಮುಖಂಡರಿಗೆ ಉತ್ತರಿಸುತ್ತಾ, ‘ನಾನು ಆ ರೀತಿ ಹೇಳಿದ್ದೆನಾದರೂ, ಅದಕ್ಕೆ ಕಾಲಮಿತಿ ತಿಳಿಸಿರಲಿಲ್ಲ. ಇನ್ನು ಸ್ವಲ್ಪ ಕಾಯಿರಿ’ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರತಿಪಕ್ಷದ ನಾಯಕರಾಗಿ ನೇಮಕವಾದಫಡಣವೀಸ್ ಅವರನ್ನು ಅಭಿನಂದಿಸುವ ನಿರ್ಣಯವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಡಿಸಿದರು. ಎನ್‌ಸಿಪಿಯ ಜಯಂತ್ ಪಾಟೀಲ್, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಬೆಂಬಲಿಸಿದರು.

‘ಐದು ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದೆ. ಕೆಲಸವನ್ನು ಆರಂಭಿಸಿದ್ದೆ. ನಾನು ಮರಳಿ ಬಂದು ಯೋಜನೆಗಳನ್ನು ಉದ್ಘಾಟಿಸಬಹುದು’ ಎಂದು ಫಡಣವೀಸ್ ಹೇಳಿದರು.

‘ಮೂರೂ ಪಕ್ಷಗಳು ಒಂದಾಗಿ ಸರ್ಕಾರ ರಚಿಸಿರುವುದನ್ನು ಪ್ರಜಾಪ್ರಭುತ್ವದ ಭಾಗವಾಗಿ ಒಪ್ಪಿಕೊಳ್ಳುತ್ತೇನೆ. ವೈಯಕ್ತಿಯ ಹಿತಾಸಕ್ತಿ ಸೋಕದಂತೆ, ತತ್ವಾಧಾರಿತವಾಗಿ ಸರ್ಕಾರದ ನಡೆ ವಿರೋಧಿಸುತ್ತೇನೆ’ ಎಂದರು.

‘ಗಡಿಭಾಗದ ಮರಾಠಿಗರ ಹಿತ ಕಾಯಲು ಬದ್ಧ’

‘ಮಹಾರಾಷ್ಟ್ರ–ಕರ್ನಾಟಕ ಗಡಿಭಾಗದ ಮರಾಠಿ ಭಾಷಿಕರ ಹಿತ ಕಾಯಲು ಬದ್ಧ’ ಎಂದು ಮಹಾರಾಷ್ಟ್ರದ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟ ಸರ್ಕಾರ ಭಾನುವಾರ ಹೇಳಿದೆ.

‘ಮರಾಠಿ ಭಾಷೆ ಮಾತನಾಡುವ ಗಡಿಭಾಗದ 865 ಹಳ್ಳಿಗರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ರಾಜ್ಯಪಾಲ ಕೋಶಿಯಾರಿ ಅವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಜನರಿಗೆ ನ್ಯಾಯ ಒದಗಿಸಲು, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವ ಪ್ರಕರಣದ ಹೋರಾಟವನ್ನು ಸರ್ಕಾರ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರ ಹೇಳಿದ್ದು...

*ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 80ರಷ್ಟು ಮೀಸಲಾತಿಗೆ ಕಾಯ್ದೆ ರಚನೆ

*₹10ಕ್ಕೆ ಊಟ; ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT