ಭಾನುವಾರ, ಜೂನ್ 20, 2021
28 °C

ಉಪನ್ಯಾಸಕಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪೀಡಕ, ಚಿಕಿತ್ಸೆ ಫಲಿಸದೆ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನಾಗಪುರ: ದುಷ್ಕರ್ಮಿಯೊಬ್ಬ ಪೆಟ್ರೋಲ್‌ ಸುರಿದು ಕೊಲೆ ಮಾಡಲು ಯತ್ನಿಸಿದ್ದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ 25 ವರ್ಷ ಉಪನ್ಯಾಸಕಿ ಮೃತಪಟ್ಟಿದ್ದಾರೆ. ಈ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಕಳೆದ ಎರಡು ವರ್ಷಗಳಿಂದಲೂ ಯುವತಿಯನ್ನು ಪೀಡಿಸುತ್ತಿದ್ದ 27 ವರ್ಷದ ವಿಕೇಶ್ ನಾಗರಾಳೆ ಎಂಬಾತ ಫೆಬ್ರುವರಿ 3ರಂದು ಕಾಲೇಜಿಗೆ ತೆರಳುತ್ತಿದ್ದ ವೇಳೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದ. ಈ ವೇಳೆ ಶೇ 40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ 6.55ಗಂಟೆಗೆ ಸಂತ್ರಸ್ತೆಯು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಆರೆಂಜ್ ಸಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಅನೂಪ್ ಮರಾರ್ ತಿಳಿಸಿದ್ದಾರೆ.

ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿ ವಿಕೇಶ್‌ನನ್ನು ಬಂಧಿಸಲಾಗಿದೆ. ವಿಕೇಶ್‌ ಮತ್ತು ಸಂತ್ರಸ್ತೆಯು ಎರಡು ವರ್ಷದ ಹಿಂದೆ ಸ್ನೇಹಿತರಾಗಿದ್ದರು. ಆದರೆ ವಿಕೇಶ್‌ನ ವರ್ತನೆಯಿಂದ ಬೇಸತ್ತ ಉಪನ್ಯಾಸಕಿ ಆತನಿಂದ ದೂರವಿದ್ದರು. ಇದರಿಂದ ಬೇಸತ್ತ ವಿಕೇಶ್ ಎರಡು ವರ್ಷಗಳಿಂದಲೂ ಆಕೆಯನ್ನು ಪೀಡಿಸಲು ಶುರು ಮಾಡಿದ್ದ. 

ವಿಕೇಶ್‌ಗೆ ಈಗಾಗಲೇ ಮದುವೆಯಾಗಿದ್ದು, ಏಳು ತಿಂಗಳ ಮಗನಿದ್ದಾನೆ. ಹೀಗಿದ್ದರೂ ಉಪನ್ಯಾಸಕಿ ಹಿಂದೆ ಬಿದ್ದು ಪೀಡಿಸುತ್ತಿದ್ದ. ಕಳೆದ ವರ್ಷ ಆತ್ಮಹತ್ಯೆಗೂ ಪ್ರಯತ್ನಿಸಿದ್ದ ಎಂದು ಸಂತ್ರಸ್ತೆಯ ಸಂಬಂಧಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಾರ್ಧಾದ ಹಿಂಗಾನ್‌ಘಾಟ್ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿ ಹಲವಾರು ಸ್ಥಳೀಯರು, ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಕಳೆದ ಗುರುವಾರ ಮೆರವಣಿಗೆ ಕೈಗೊಂಡಿದ್ದರು.

ಘಟನೆಯನ್ನು ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಖಂಡಿಸಿದ್ದು, ಸಂತ್ರಸ್ತೆ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಪ್ರಕರಣಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಆಗಿ ವಕೀಲ ಉಜ್ವಲ್ ನಿಕಾಂ ಅವರನ್ನು ನೇಮಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು