ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ರಾಜಕಾರಣ| ಸ್ವಲ್ಪ ಸಮಾಧಾನ ಬೇಕೆಂದ ಅಜಿತ್‌: ತಿರುಗೇಟು ಕೊಟ್ಟ ಶರದ್‌ ಪವಾರ್‌

Last Updated 25 ನವೆಂಬರ್ 2019, 4:20 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಸರ್ಕಾರ ಮತ್ತು ಮೈತ್ರಿಕೂಟಗಳು ಡೋಲಾಯಮಾನ ಪರಿಸ್ಥಿತಿ ಅನುಭವಿಸುತ್ತಿರುವ ಮಧ್ಯೆಯೇ ಎನ್‌ಸಿಪಿಯ ವರಿಷ್ಠ ಶರದ್‌ ಪವಾರ್‌ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನಡುವೆ ಟ್ವೀಟ್‌ಗಳ ವಿನಿಮಯವಾಗಿದೆ.

‘ನಾನು ಎನ್‌ಸಿಪಿಯವನೇ, ಶರದ್‌ ಪವಾರ್‌ ಅವರೇ ನಮ್ಮ ನಾಯಕ. ಸ್ವಲ್ಪ ಸಮಾಧಾನದಿಂದ ಇದ್ದರೆ ಈ ಪರಿಸ್ಥಿತಿ ತಿಳಿಯಾಗುತ್ತದೆ,’ ಎಂದು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಟ್ವೀಟ್‌ ಮಾಡಿದರೆ, ‘ಇದು ದಾರಿ ತಪ್ಪಿಸುವ ಹುನ್ನಾರ,’ ಎಂದು ಅಜಿತ್‌ ವಿರುದ್ಧ ಶರದ್‌ ಪವಾರ್‌ ಕಿಡಿಕಾರಿದ್ದಾರೆ.

‘ನಾನು ಎನ್‌ಸಿಪಿಯಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ. ಪವಾರ್‌ ಸಾಹೇಬ್‌ ಅವರು ನಮ್ಮ ನಾಯಕರು. ಬಿಜೆಪಿ ಮತ್ತು ಎನ್‌ಸಿಪಿಯ ನಮ್ಮ ಮೈತ್ರಿ ಮುಂದಿನ ಐದು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ನೀಡಲಿದೆ. ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ತಲೆ ಕೆಡಿಸಿಕೊಳ್ಳಬೇಕಾದ್ದು ಏನೂ ಇಲ್ಲ. ಎಲ್ಲವೂ ಸರಿಯಾಗೇ ಇದೆ. ಹಾಗೆಯೇ ಸ್ವಲ್ಪ ತಾಳ್ಮೆಯೂ ಇರಬೇಕು. ನಮ್ಮೆಲ್ಲ ಬೆಂಬಲಿಗರಿಗೆ ಧನ್ಯವಾದಗಳು,’ ಎಂದು ಡಿಸಿಎಂ ಅಜಿತ್‌ ಪವಾರ್‌ ಅವರು ಭಾನುವಾರ ಸಂಜೆ ಮೊದಲಿಗೆ ಟ್ವೀಟ್‌ ಮಾಡಿದರು.

ಇದಾದ ಕೆಲವೇ ಹೊತ್ತಿನಲ್ಲೇ ಟ್ವೀಟ್‌ ಮಾಡಿರುವ ಶರದ್‌ ಪವಾರ್‌, ‘ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಶಿವಸೇನೆ ಮತ್ತು ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಬೇಕು ಎಂಬುದು ಪಕ್ಷದ ನಿರ್ಧಾರ. ಅಜಿತ್‌ ಪವಾರ್‌ ಅವರು ಹೇಳುತ್ತಿರುವುದೆಲ್ಲವೂ ಸುಳ್ಳು. ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳಿವು. ಜನರಲ್ಲಿ ತಪ್ಪು ಭಾವನೆ ಮೂಡವಂತೆ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ,’ ಎಂದು ತಿರುಗೇಟು ನೀಡಿದ್ದಾರೆ.

ಇದೆಲ್ಲದರ ನಡುವೆ ಮಹಾರಾಷ್ಟ್ರದಲ್ಲಿ ಭಾನುವಾರ ಬಿರುಸಿನ ರಾಜಕೀಯ ಬೆಳವಣಿಗೆಗಳು ನಡೆದವು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಡಿಸಿಎಂ ಅಜಿತ್‌ ಪವಾರ್‌ ಮಧ್ಯರಾತ್ರಿಯ ವರೆಗೆ ಸಭೆ ನಡೆಸಿದರು. ಸಭೆಯಿಂದ ಹೊರ ಬಂದ ನಾಯಕರು ರಾಜ್ಯದ ರೈತರ ಬಗ್ಗೆ ಚರ್ಚೆ ಮಾಡಿದೆವು,’ ಎಂದು ಹೇಳಿದರು.

ಎನ್‌ಸಿಪಿಯ ಶಾಸಕರು ಮುಂಬೈನ ಹಯಾತ್‌ ಹೋಟೆಲ್‌ನಲ್ಲಿ ಬೀಡು ಬಿಟ್ಟರು. ಈ ಮೊದಲು ಅವರು ರಿನೇಸಾನ್ಸ್‌ ಹೋಟೆಲ್‌ನಲ್ಲಿ ತಂಗಿದ್ದರು. ಕಾಂಗ್ರೆಸ್‌ ಶಾಸಕರು ಜೆ.ಡಬ್ಲ್ಯೂ ಮ್ಯಾರಿಯಟ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT