ಶನಿವಾರ, ನವೆಂಬರ್ 23, 2019
17 °C
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ: ಪಟ್ಟು ಬಿಡದ ಶಿವಸೇನಾ–ಬಿಜೆಪಿ: ಪವಾರ್‌ ಜತೆ ಮಾತನಾಡಿದ ಉದ್ಧವ್‌

ಸಿ.ಎಂ ಪಟ್ಟ: ಪರ್ಯಾಯಕ್ಕೆ ಹುಡುಕಾಟ

Published:
Updated:
Prajavani

ಮುಂಬೈ : ಚುನಾವಣೆ ಫಲಿತಾಂಶ ಘೋಷಣೆಯಾಗಿ ವಾರ ಕಳೆದರೂ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿದಿಲ್ಲ. ಬಿಜೆಪಿ–ಶಿವಸೇನಾ ಮೈತ್ರಿಕೂಟಕ್ಕೆ ಸರಳ ಬಹುಮತ ಇದೆ. ಆದರೆ, ಮುಖ್ಯಮಂತ್ರಿ ಹುದ್ದೆ 50:50 ಅನುಪಾತದಲ್ಲಿ ಹಂಚಿಕೆಯಾಗಬೇಕು ಎಂದು ಶಿವಸೇನಾ ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ. 

ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬಿಟ್ಟು ಸರ್ಕಾರ ರಚನೆಯು ಪರ್ಯಾಯ ಪ್ರಯತ್ನಗಳನ್ನು ಸೇನಾ ಮಾಡುತ್ತಿದೆ ಎಂಬ ಅರ್ಥ ಬರುವ ಕೆಲವು ಬೆಳವಣಿಗೆಗಳು ನಡೆದಿವೆ. ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಸೇನಾ ಮುಖಂಡ ಸಂಜಯ ರಾವತ್‌ ಅವರು ಪವಾರ್‌ ಅವರನ್ನು ಗುರುವಾರ ಭೇಟಿಯಾಗಿದ್ದ ಸಂದರ್ಭದಲ್ಲಿಯೇ ಈ ದೂರವಾಣಿ ಸಂಭಾಷಣೆ ನಡೆದಿದೆ ಎಂದು ವರದಿಯಾಗಿದೆ. 

ಆದರೆ, ಸರ್ಕಾರದಲ್ಲಿ ಭಾಗಿಯಾಗುವ ಅಸಕ್ತಿ ಇಲ್ಲ ಎಂದು ಪವಾರ್‌ ಹೇಳಿದ್ದಾರೆ. ‘ಅವರು (ಬಿಜೆಪಿ–ಸೇನಾ) ಜತೆಯಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲವೂ ಇದೆ. ಅವರೇ ಸರ್ಕಾರ ರಚಿಸಬೇಕು’ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷವಾಗುವಂತೆ ಜನರು ತಮಗೆ ಸೂಚಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ. 

ರಾಷ್ಟ್ರಪತಿ ಆಳ್ವಿಕೆ?: ‘ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾದ ಸಂದರ್ಭ ಬರಬಹುದು’ ಎಂದು ಬಿಜೆಪಿಯ ನಾಯಕ ಸುಧೀರ್‌ ಮುನಗಂಟಿವಾರ್‌ ಹೇಳಿದ್ದಾರೆ. ಪ್ರಸಕ್ತ ವಿಧಾನಸಭೆಯ ಅವಧಿಯು ಇದೇ 8ಕ್ಕೆ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗಬೇಕಾಗಿದೆ. ಇನ್ನೊಂದೆಡೆ, ‘ಬಿಜೆಪಿಯು ಶಿವಸೇನೆ ಯನ್ನು ವಂಚಿಸಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ದೀಪಾವಳಿ ಹಬ್ಬ ಬಂದ ಕಾರಣ ಬಿಜೆಪಿ- ಶಿವಸೇನಾ ಮಾತುಕತೆ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿ ಮಾತುಕತೆ ಆರಂಭಿಸುತ್ತೇವೆ. ಮಹಾರಾಷ್ಟ್ರದ ಜನರು ಬಿಜೆಪಿ– ಶಿವಸೇನಾ ಮೈತ್ರಿಗೆ ಬಹುಮತ ನೀಡಿದ್ದಾರೆಯೇ ವಿನಾ ಬೇರೆ ಮೈತ್ರಿಗಲ್ಲ. ನಮ್ಮ ಬಂಧವು ಫೆವಿಕಾಲ್‌ ಅಥವಾ ಅಂಬುಜಾ ಸಿಮೆಂಟ್‌ನಂತೆ ಭದ್ರವಾಗಿದೆ’ ಎಂದು ಮುನಗಂಟಿವಾರ್‌ ಹೇಳಿದ್ದಾರೆ.

ಇನ್ನೊಂದೆಡೆ, ಶಿವಸೇನಾ ನಾಯಕ ಸಂಜಯ್‌ ರಾವತ್‌ ಅವರು, ‘ಮಹಾರಾಷ್ಟ್ರದಲ್ಲಿ ಶಿವಸೇನಾದ ವ್ಯಕ್ತಿಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಪಕ್ಷವು ಪಟ್ಟು ಸಡಿಲಿಸಿಲ್ಲ ಎಂಬ ಸೂಚನೆ ನೀಡಿದ್ದಾರೆ. ‘ಅಧಿಕಾರವನ್ನು ಸಮಾನವಾಗಿ ಹಂಚಿಕೊಳ್ಳಬೇಕು’ ಎಂಬ ಶಿವಸೇನಾದ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿದೆ.

 

ಪರ್ಯಾಯಕ್ಕೆ ಸಿದ್ಧ: ಎನ್‌ಸಿಪಿ

‘ಬಿಜೆಪಿ– ಶಿವಸೇನಾ ಮೈತ್ರಿಯು ಸರ್ಕಾರ ರಚಿಸುವಲ್ಲಿ ವಿಫಲವಾದರೆ, ನಾವು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂದು ಎನ್‌ಸಿಪಿಯ ವಕ್ತಾರ ನವಾಬ್‌ ಮಲಿಕ್‌ ಹೇಳಿದ್ದಾರೆ.

‘ಜನರು ಬಿಜೆಪಿ– ಸೇನಾಕ್ಕೆ ಬಹುಮತ ನೀಡಿದ್ದಾರೆ. ಸರ್ಕಾರ ರಚಿಸಲು ಅವರು ವಿಫಲರಾದರೆ ನಾವು ಪರ್ಯಾಯವನ್ನು ನೀಡಲು ಸಿದ್ಧ’ ಎಂದು ಮಲಿಕ್‌ ಹೇಳಿದ್ದಾರೆ. ಆದರೆ ಪರ್ಯಾಯ ಯಾವುದು ಎಂಬುದನ್ನು ಅವರು ವಿವರಿಸಿಲ್ಲ.

ಸೇನಾಕ್ಕೆ ಬೆಂಬಲ ಇಲ್ಲ: ಸೋನಿಯಾ

ಶಿವಸೇನಾ ಜತೆಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಸ್ಪಷ್ಟಡಿಸಿದ್ದಾರೆ.

ಸಂಪೂರ್ಣವಾಗಿ ಭಿನ್ನ ಸಿದ್ಧಾಂತವನ್ನು ಹೊಂದಿರುವ ಮತ್ತು ಬಿಜೆಪಿ ಜತೆ ಸೇರಿ ಸ್ಪರ್ಧಿಸಿರುವ ಸೇನಾ ಜತೆಗೆ ಸೇರುವುದು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಬಾಳಾಸಾಹೇಬ್‌ ಥೋರಟ್‌, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್‌ ಹಾಗೂ ಹಿರಿಯ ಮುಖಂಡರಾದ ವಿಜಯ ವಡ್ಡೆಟ್ಟಿವರ್‌ ಮತ್ತು ಮಾಣಿಕ್‌ರಾವ್‌ ಠಾಕ್ರೆ ಅವರು ಸೋನಿಯಾರನ್ನು ಶುಕ್ರವಾರ ಭೇಟಿಯಾಗಿ ರಾಜ್ಯದ ರಾಜಕೀಯ ಸ್ಥಿತಿಯನ್ನು ವಿವರಿಸಿದರು.

ಸೇನಾ ಮತ್ತು ಬಿಜೆಪಿ ನಡುವೆ ಅಧಿಕಾರ ಹಂಚಿಕೆಗಾಗಿ ಸಂಘರ್ಷವಿದೆ. ಇದು ತತ್ವ ಅಥವಾ ಸಿದ್ಧಾಂತದ ಸಂಘರ್ಷ ಅಲ್ಲ. ಹಾಗಾಗಿ, ಸೇನಾಕ್ಕೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್‌ ಯೋಚನೆಯನ್ನೇ ಮಾಡುವುದಿಲ್ಲ ಎಂದು ಸೋನಿಯಾ ಅವರು ಮುಖಂಡರಿಗೆ ಹೇಳಿದ್ದಾರೆ.

ಸೇನಾ ನೇತೃತ್ವದ ಸರ್ಕಾರಕ್ಕೆ ಬೆಂಬಲ ಕೊಟ್ಟರೆ, ಅದನ್ನು ಕಾರ್ಯಕರ್ತರ ಬಳಿ ಸಮರ್ಥಿಸಿಕೊಳ್ಳುವುದು ಕಷ್ಟವಾಗಲಿದೆ. ಅಯೋಧ್ಯೆಯ ರಾಮಮಂದಿರ, ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ಏಕರೂಪ ನಾಗರಿಕ ಸಂಹಿತೆ
ಯಂತಹ ವಿಚಾರಗಳಲ್ಲಿ ಕಾಂಗ್ರೆಸ್‌ಗಿಂತ ಬಹಳ ಭಿನ್ನವಾದ ನಿಲುವನ್ನು ಸೇನಾ ಹೊಂದಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಸೇನಾಕ್ಕೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್‌ ಪರಿಶೀಲಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಹೇಳಿದ್ದರು. ಆದರೆ, ಸುಶೀಲ್‌ ಕುಮಾರ್‌ ಶಿಂಧೆ, ಸಂಜಯ್‌ ನಿರುಪಮ್‌ ಮತ್ತು ಅಶೋಕ್‌ ಚವಾಣ್‌ ಅವರು ಪೃಥ್ವಿರಾಜ್‌ ಅವರ ಹೇಳಿಕೆಯನ್ನು ವಿರೋಧಿಸಿದ್ದರು.

 

ಅನಿಲ್‌ ಕಪೂರ್‌ ‘ನಾಯಕ್‌’ ಆಗಲಿ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯು ಕಗ್ಗಂಟಾಗುತ್ತಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ‍ಪರ್ಯಾಯ ಚಿಂತನೆಗಳನ್ನು ಜನರು ಹರಿಬಿಡುತ್ತಿದ್ದಾರೆ.

ಇನ್ನೊಂದೆಡೆ, ‘ಬಿಜೆಪಿ– ಶಿವಸೇನಾ ಸರ್ಕಾರ ರಚನೆಯಾಗುವುದು ವಿಳಂಬವಾಗುತ್ತಿದ್ದು, ನನ್ನನ್ನು ತಾತ್ಕಾಲಿಕ ಮುಖ್ಯಮಂತ್ರಿ ಮಾಡಿ’ ಎಂದು ಬೀಡ್‌ ಜಿಲ್ಲೆಯ ವಡಮಾವುಲಿ ಗ್ರಾಮದ ರೈತ ಶ್ರೀಕಾಂತ ವಿಷ್ಣು ಕದಳೆ ಎಂಬುವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಬಾಲಿವುಡ್‌ ನಟ ಅನಿಲ್‌ ಕಪೂರ್‌ ಅವರನ್ನು ಮುಖ್ಯಮಂತ್ರಿ ಮಾಡಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಲಹೆ ನೀಡಿದ್ದಾರೆ.

2001ರಲ್ಲಿ ಅನಿಲ್‌ ಕಪೂರ್‌ ನಟನೆಯ ‘ನಾಯಕ್‌’ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದರಲ್ಲಿ ಅನಿಲ್‌ ಕಪೂರ್‌ ಅವರು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗುವ ಪತ್ರಕರ್ತನ ಪಾತ್ರವನ್ನು ವಹಿಸಿದ್ದರು. ಇದನ್ನು ಉಲ್ಲೇಖಿಸಿ ನೆಟ್ಟಿಗರು ಈ ಸಲಹೆ ನೀಡಿದ್ದಾರೆ.

ಈ ಸಲಹೆಗೆ ಲಘುಧಾಟಿಯಲ್ಲೇ ಪ್ರತಿಕ್ರಿಯೆ ನೀಡಿರುವ ಅನಿಲ್‌ ಕಪೂರ್‌, ‘ನಾನು ನಾಯಕನಾಗಿ (ನಟ) ಚೆನ್ನಾಗಿದ್ದೇನೆ. ಅಷ್ಟೇ ಸಾಕು’ ಎಂದಿದ್ದಾರೆ. ‘ನಾಯಕ್‌–2’ ಸಿನಿಮಾ ಮಾಡಿ  ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

 

ಸೇನಾ ಜತೆಗೆ ಹೊಂದಾಣಿಕೆ ಸಾಧ್ಯತೆ: ಮೊಯಿಲಿ

ಧಾರವಾಡ: ‘ಮಹಾರಾಷ್ಟ್ರ ರಾಜ್ಯದ ಹಾಗೂ ಜನರ ಹಿತದೃಷ್ಟಿಯಿಂದ ಶಿವಸೇನಾ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಬಹುದು’ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವು ಶಿವಸೇನಾ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ’ ಎಂದರು.

 

ಪ್ರತಿಕ್ರಿಯಿಸಿ (+)