ಗುರುವಾರ , ಆಗಸ್ಟ್ 5, 2021
22 °C
ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಹೊರಬಂದ ಆರು ಶಾಸಕರು; ಕಾಂಗ್ರೆಸ್‌ಗೆ ಬೆಂಬಲ

ಪತನದತ್ತ ಮಣಿಪುರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ್‌ (ಪಿಟಿಐ): ಮಣಿಪುರದಲ್ಲಿ ನಾಲ್ವರು ಸಚಿವರು ಸೇರಿದಂತೆ ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿದ್ದ ಆರು ಮಂದಿ ಶಾಸಕರು ಹೊರಬಂದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ ನೇತೃತ್ವದ ಸೆಕ್ಯುಲರ್‌ ಪ್ರೊಗ್ರೆಸಿವ್‌ ಫ್ರಂಟ್‌ (ಎಸ್‌ಪಿಎಫ್‌) ಮುಖಂಡರು ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಅವರನ್ನು ಗುರುವಾರ ಭೇಟಿಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ನಾಲ್ವರು ನ್ಯಾಷನಲ್‌ ಪೀಪಲ್‌ ಪಾರ್ಟಿ (ಎನ್‌ಪಿಪಿ), ಒಬ್ಬರು ಟಿಎಂಸಿ ಹಾಗೂ ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ.

‘ಬಿಜೆಪಿ ನೇತೃತ್ವದ ಅಲ್ಪಮತದ ಸರ್ಕಾರವನ್ನು ವಜಾಗೊಳಿಸಿ ಹೊಸ ಸರ್ಕಾರ ರಚಿಸಲು ಮಾಜಿ ಮುಖ್ಯಮಂತ್ರಿ ಓಕ್ರಾಂ ಐಬೊಬಿ ಅವರಿಗೆ ಆಹ್ವಾನ ನೀಡುವಂತೆ ರಾಜ್ಯಪಾಲರನ್ನು ನಾವು ಒತ್ತಾಯಿಸಿದ್ದೇವೆ’ ಎಂದು ಕಾಂಗ್ರೆಸ್‌ ವಕ್ತಾರ ನಿಂಗೊಂಬಂ ಭೂಮೇಂದ್ರ ಮೆಯಿಟಿ ತಿಳಿಸಿದ್ದಾರೆ.

ಪಕ್ಷಾಂತರ ನಡೆಸಿದ್ದ ಕಾಂಗ್ರೆಸ್‌ ಶಾಸಕರೊಬ್ಬರನ್ನು ಅನರ್ಹಗೊಳಿಸಿದ ನಂತರ, ಮಣಿಪುರ ವಿಧಾನಸಭೆಯ ಸದಸ್ಯರ ಸಂಖ್ಯೆಯು 59ಕ್ಕೆ ಇಳಿದಿದೆ. ಚುನಾವಣೆಯ ನಂತರ ಪಕ್ಷಾಂತರ ನಡೆಸಿ, ಬಿಜೆಪಿ ಸೇರಿದ್ದ ಕಾಂಗ್ರೆಸ್‌ನ 7 ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಚಾರಣೆ ಎದುರಿಸುತ್ತಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೂ ಈ ಶಾಸಕರು ವಿಧಾನಸಭೆ ಪ್ರವೇಶಿಸುವುದನ್ನು ಹೈಕೋರ್ಟ್‌ ನಿಷೇಧಿಸಿದೆ.

‘ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿರುವ ಎಸ್‌ಪಿಎಫ್‌ ಮುಖಂಡರು ತಮಗೆ 26 ಶಾಸಕರ ಬೆಂಬಲವಿದೆ, ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ 23 ಶಾಸಕರು ಮಾತ್ರ ಇದ್ದಾರೆ. ಆದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಒಂದೆರಡು ದಿನಗಳಲ್ಲೇ ವಿಶೇಷ ಅಧಿವೇಶನವನ್ನು ಕರೆದು ಅವಿಶ್ವಾಸಮತ ಮಂಡನೆಗೆ ಅವಕಾಶ ನೀಡಬೇಕು’ ಎಂದು ಎಸ್‌ಪಿಎಫ್‌ ನಾಯಕರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ತಮ್ಮ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಉಪಮುಖ್ಯಮಂತ್ರಿ ವೈ ಜೋಯ್‌ಕುಮಾರ್‌ ಅವರಿಗೆ ನೀಡಿದ್ದ ಎಲ್ಲಾ ಖಾತೆಗಳನ್ನು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ಕಳೆದ ಏಪ್ರಿಲ್‌ ತಿಂಗಳಲ್ಲಿ ಕಿತ್ತುಕೊಂಡಿದ್ದರು. ಅಲ್ಲಿಂದ ರಾಜಕೀಯ ತುಮುಲ ಆರಂಭವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು