ಭಾನುವಾರ, ಸೆಪ್ಟೆಂಬರ್ 15, 2019
27 °C

ಅ.2ರಂದು ಪ್ಲಾಸ್ಟಿಕ್‌ಮುಕ್ತ ಭಾರತಕ್ಕೆ ಚಾಲನೆ: ‘ಮನದ ಮಾತಿ’ನಲ್ಲಿ ಪ್ರಧಾನಿ ಮೋದಿ

Published:
Updated:
Prajavani

ನವದೆಹಲಿ: ಈ ಬಾರಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನವನ್ನು ‘ಪ್ಲಾಸ್ಟಿಕ್ ಮುಕ್ತ’ ಧ್ಯೇಯದೊಂದಿಗೆ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. 

ತಿಂಗಳ ಬಾನುಲಿ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಪ್ರಧಾನಿ, ಪ್ಲಾಸ್ಟಿಕ್ ತಾಜ್ಯದ ಸುರಕ್ಷಿತ ವಿಲೇವಾರಿಗೆ ಇರುವ ಮಾರ್ಗಗಳನ್ನು ದೀಪಾವಳಿ ಹಬ್ಬದ ಒಳಗೆ ಸೂಚಿಸುವಂತೆ ನಗರಸಭೆ, ಎನ್‌ಜಿಒ ಹಾಗೂ ಕಾರ್ಪೊರೇಟ್ ವಲಯಕ್ಕೆ ಕರೆ ಕೊಟ್ಟಿದ್ದಾರೆ. 

‘ಅಕ್ಟೋಬರ್ 2ರ ಗಾಂಧೀಜಿ ಜನ್ಮದಿನದಂದು ಬಹಿರ್ದೆಸೆ ಮುಕ್ತ ಭಾರತವನ್ನು ಮಹಾತ್ಮರಿಗೆ ಅರ್ಪಿಸುವುದರ ಜತೆಗೆ ಪ್ಲಾಸ್ಟಿಕ್ ಬಳಕೆ ವಿರುದ್ಧ ದೇಶದಾದ್ಯಂತ ಹೊಸ ಜನಾಂದೋಲನಕ್ಕೆ ಅಡಿಪಾಯ ಹಾಕಬೇಕು. ಈ ಮೂಲಕ ‘ಪ್ಲಾಸ್ಟಿಕ್ ಮುಕ್ತ ಭಾರತ ಮಾತೆ’ಯ ದಿನವನ್ನು ಅಚರಿಸಬೇಕಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು. 

‘ಜಿಲ್ಲಾಡಳಿತಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಹಾಗೂ ದಾಸ್ತಾನಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮರುಬಳಕೆ, ಅದನ್ನು ಇಂಧನವಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಸೂಚಿಸಬಹುದು. ಎಲ್ಲವೂ ಸಾಕಾರಗೊಂಡಲ್ಲಿ, ಅಕ್ಟೋಬರ್ 27ರ ಒಳಗೆ ಪ್ಲಾಸ್ಟಿಕ್ ಕಸದ ಸುರಕ್ಷಿತ ವಿಲೇವಾರಿಯ ಗುರಿ ಈಡೇರಲಿದೆ’ ಎಂದು ಮೋದಿ ಹೇಳಿದ್ದಾರೆ. 

‘ಈ ಚಳವಳಿ ಈಗಾಗಲೇ ಶುರುವಾಗಿದೆ. ಕೆಲವು ವ್ಯಾಪಾರಿ ಸ್ನೇಹಿತರು ಕೈಚೀಲಗಳನ್ನು ತರುವಂತೆ ಗ್ರಾಹಕರಿಗೆ ಸೂಚಿಸುವ ಬೋರ್ಡ್‌ಗಳನ್ನು ತಮ್ಮ ಅಂಗಡಿಗಳಲ್ಲಿ ಹಾಕಿದ್ದಾರೆ. ಇದು ಹಣಕಾಸಿನ ಉಳಿತಾಯವಷ್ಟೇ ಅಲ್ಲದೇ ಪರಿಸರಕ್ಕೆ ನೀಡುವ ಕೊಡುಗೆಯೂ ಹೌದು’ ಎಂದು ಪ್ರಧಾನಿ ವಿವರಿಸಿದ್ದಾರೆ. 

ಈ ಮುನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಮಾತನಾಡಿದ್ದ ಪ್ರಧಾನಿ, ಪರಿಸರವನ್ನು ಸಂರಕ್ಷಿಸಬೇಕಾದರೆ, ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಿದ್ದರು. ಪರಿಸರಸ್ನೇಹಿ ಕೈಚೀಲಗಳನ್ನು ಗ್ರಾಹಕರಿಗೆ ಒದಗಿಸುವಂತೆ ವ್ಯಾಪಾರಿಗಳಿಗೆ ಸೂಚಿಸಿದ್ದರು. 

ಸೆಪ್ಟೆಂಬರ್ 11ರಿಂದ ಆರಂಭವಾಗಲಿರುವ ‘ಸ್ವಚ್ಛತೆಯೇ ಸೇವೆ’ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಅವರು ಮನವಿ ಮಾಡಿದ್ದಾರೆ. 

‘ಹುಲಿಗಳಿಂದ ಉಳಿದಿದೆ ಕಾಡು’

ಅರಣ್ಯ, ವನ್ಯಜೀವಿ ಸಂರಕ್ಷಣೆಯ ಜೊತೆಗೆ ಅವುಗಳ ಏಳ್ಗೆಗೆ ಪೂರಕ ವಾತಾವರಣ ಸೃಷ್ಟಿಸಿಬೇಕಾದ ಸಮಯದಲ್ಲಿ ನಾವಿದ್ದೇವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದಲ್ಲಿ ಧರ್ಮಗ್ರಂಥಗಳು ಮಾರ್ಗದರ್ಶನ ನೀಡಿವೆ ಎಂದಿದ್ದಾರೆ.

ಸೂಕ್ತಿಯೊಂದರ ಸಾರಾಂಶವನ್ನು ಉಲ್ಲೇಖಿಸಿದ ಅವರು, ‘ಅರಣ್ಯಗಳು ನಾಶವಾದರೆ, ಅಲ್ಲಿನ ಹುಲಿಗಳು ನಾಡಿಗೆ ಬರುತ್ತವೆ. ಆಗ ಮನುಷ್ಯ ಅವುಗಳನ್ನು ಕೊಲ್ಲುತ್ತಾನೆ. ಹುಲಿಗಳಿಲ್ಲದ ಕಾಡನ್ನು ಕಡಿದು ನಾಶಗೊಳಿಸುತ್ತಾನೆ. ನಿಜವಾಗಿಯೂ ಕಾಡನ್ನು ರಕ್ಷಿಸುತ್ತಿರುವುದು ಹುಲಿಗಳೇ ಹೊರತು, ಕಾಡು ಅವುಗಳನ್ನು ರಕ್ಷಿಸುತ್ತಿಲ್ಲ. ನಮ್ಮ ಹಿಂದಿನವರು ಈ ಸತ್ಯವನ್ನು ಹೇಳಿಹೋಗಿದ್ದಾರೆ. ನಾವು ಕಾಡು, ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡುವುದಷ್ಟೇ ಅಲ್ಲದೇ, ಅವುಗಳು ಬದುಕಿ ಬಾಳುವ ಪೂರಕ ವಾತಾವರಣ ನಿರ್ಮಿಸಬೇಕು’ ಎಂದು ಮೋದಿ ಕರೆ ಕೊಟ್ಟರು.

ದೇಶದಲ್ಲಿ ಈಗ 2,967 ಹುಲಿಗಳಿವೆ. ಕೆಲ ವರ್ಷಗಳ ಹಿಂದೆ ಈ ಸಂಖ್ಯೆಯ ಅರ್ಧದಷ್ಟೂ ಹುಲಿಗಳು ಇರಲಿಲ್ಲ. ಹುಲಿಗಳ ಜೊತೆ ರಕ್ಷಿತಾರಣ್ಯಗಳ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಹೇಳಿದರು. 

ಬೇರ್ ಗ್ರಿಲ್ಸ್‌ಗೆ ಹಿಂದಿ ಅರ್ಥವಾಗಿದ್ದು ಹೀಗೆ!

ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾದ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಹಾಗೂ ಪ್ರಧಾನಿ ಮೋದಿ ನಡುವಿನ ಸಂಭಾಷಣೆ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇತ್ತು. ಮೋದಿ ಮಾತನಾಡಿದ ಹಿಂದಿ ಭಾಷೆ ಗ್ರಿಲ್ಸ್‌ಗೆ ಅರ್ಥವಾಗುತ್ತಾ ಎಂದು ಹಲವರು ಪ್ರಶ್ನಿಸಿದ್ದರು. ಇದನ್ನು ಸಾಧ್ಯವಾಗಿಸಿದ್ದು ತಂತ್ರಜ್ಞಾನ ಎಂದು ಮೋದಿ ಉತ್ತರಿಸಿದ್ದಾರೆ. 

‘ನನ್ನ ಮಾತುಗಳು ತಕ್ಷಣಕ್ಕೆ ಇಂಗ್ಲಿಷ್‌ಗೆ ತರ್ಜುಮೆಯಾಗುತ್ತಿದ್ದವು. ಗ್ರಿಲ್ಸ್ ಅವರ ಕಿವಿಗೆ ಪುಟ್ಟ ಉಪಕರಣವೊಂದನ್ನು ಅಳವಡಿಸಲಾಗಿತ್ತು. ನಾನು ಹಿಂದಿಯಲ್ಲಿ ಮಾತನಾಡಿದರೆ, ಅವರಿಗೆ ಇಂಗ್ಲಿಷ್‌ನಲ್ಲಿ ಕೇಳಿಸುತ್ತಿತ್ತು. ಹೀಗಾಗಿ ಸಂವಹನ ಸುಲಭವಾಯಿತು. ಇದು ತಂತ್ರಜ್ಞಾನದ ಅದ್ಭುತ ಅಂಶ’ ಎಂದು ಅವರು ರಹಸ್ಯ ಬಿಚ್ಚಿಟ್ಟಿದ್ದಾರೆ.

‘ಸದೃಢ ಭಾರತ’

* ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮ ‘ಫಿಟ್ ಇಂಡಿಯಾ’ ಅಭಿಯಾನ

* ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ‘ಸದೃಢ ಭಾರತ’ಕ್ಕೆ ಪ್ರಧಾನಿ ಚಾಲನೆ

* ಎಲ್ಲ ವಿ.ವಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಯುಜಿಸಿ

* ಜನರಲ್ಲಿ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ

* ನಾವು ಸದೃಢರಾಗಿದ್ದರೆ, ದೇಶವೂ ಸದೃಢ; ಇದು ನಿಮ್ಮ ಅಭಿಯಾನ–ಮೋದಿ

* ಕ್ರೀಡೆ ಹಾಗೂ ಮಾನವ ಸಂಪನ್ಮೂಲ ಸಚಿವಾಲಯದಿಂದ ಕಾರ್ಯಕ್ರಮ

Post Comments (+)