ಮಂಗಳವಾರ, ಜುಲೈ 5, 2022
21 °C
ಟ್ವಿಟರ್‌ ಲೋಕದೊಳಗೆ

ನಾನು ಬುದ್ಧಿಜೀವಿ ಅಲ್ಲ, ಹಾಗೆ ಕರೀಬೇಡಿ: ಕಾಟ್ಜುಗೆ ಚೇತನ್ ಭಗತ್ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಲೇಖಕ, ಬರಹಗಾರ ಚೇತನ್ ಭಗತ್ ಅವರನ್ನು ಕಪಟ 'ಬುದ್ದಿಜೀವಿ' ಎಂದು ಹೇಳುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಚೇತನ್ ಭಗತ್ ಅವರನ್ನು ಆಹ್ವಾನಿಸಿತ್ತು. ಈ ಕುರಿತು ನವೆಂಬರ್ 4ರಂದು ಚೇತನ್ ಭಗತ್ ಟ್ವೀಟ್ ಮಾಡಿ ಇಸ್ರೊಗೆ ಧನ್ಯವಾದ ಅರ್ಪಿಸಿದ್ದರು. ಚಿತ್ರಗಳನ್ನೂ ಲಗತ್ತಿಸಿ, 'ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇಸ್ರೊ ಭಾಷಣ ಮಾಡಲು ನನ್ನನ್ನು ಆಯ್ಕೆ ಮಾಡಿದ್ದನ್ನು ನನಗೆ ನಂಬಲಾಗುತ್ತಿಲ್ಲ. ನಿಜಕ್ಕೂ ಇದು ನನ್ನ ಜೀವನದ ಪ್ರಮುಖ ಕ್ಷಣ–ಸ್ವತಃ ಚಂದ್ರನ ಮೇಲೆ ಇಳಿದ ಕ್ಷಣ!' ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಾರ್ಕಂಡೇಯ ಕಾಟ್ಜು ಅವರು, ಭಾರತದ ಇತಿಹಾಸಕಾರ ಇರ್ಫಾನ್ ಹಬೀಬ್ ಅವರನ್ನು ಉಲ್ಲೇಖಿಸಿ, 'ಚೇತನ್ ಭಗತ್ ಅಂತಹ ಕಪಟ 'ಬುದ್ಧಿಜೀವಿ'ಯನ್ನು ಮುಖ್ಯ ಅತಿಥಿಯಾಗಿ ಮಾಡುವುದು ಕೆಲ ಜನರ ಅಲ್ಪ ಬುದ್ದಿಯನ್ನು ತೋರಿಸುತ್ತದೆ' ಎಂದು ಟ್ವೀಟಿಸಿದ್ದರು. 

'ಬುದ್ದಿಜೀವಿಗಳು ಎಲ್ಲರಲ್ಲಿಯೂ ತಪ್ಪನ್ನೇ ಹುಡುಕುತ್ತಿರುತ್ತಾರೆ, ಆದರೆ ಅವರಲ್ಲಿನ ತಪ್ಪು ಕಂಡುಕೊಳ್ಳಲು ಸಮಯವಿರುವುದಿಲ್ಲ. ದಯಮಾಡಿ ಸ್ವಲ್ಪ ನಕ್ಕುಬಿಡಿ ಮತ್ತು ಅದನ್ನೇ ಎಲ್ಲೆಡೆ ಹಂಚಿ.... ನೀವು ಯೋಗಾಭ್ಯಾಸ ಮಾಡಿ' ಎಂದು ಟ್ವೀಟಿಗರೊಬ್ಬರು ಕಾಟ್ಜು ಅವರಿಗೆ ಸಲಹೆ ನೀಡಿದ್ದಾರೆ. 

'ನಿಮ್ಮನ್ನು ಆಹ್ವಾನಿಸಿಲ್ಲ ಎಂದು ಹೊಟ್ಟೆಯುರಿಯೇ?' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 

ಕಾಟ್ಜು ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಭಗತ್, 'ನಾನು ಬುದ್ಧಿಜೀವಿಯಲ್ಲ. ನನ್ನನ್ನು ನಿಂದಿಸಿ, ಆದರೆ ನನ್ನನ್ನು ಆ ರೀತಿ ಕರೆಯಬೇಡಿ. ಅಂದಹಾಗೆ ಮುಖ್ಯ ಅತಿಥಿಗಳು ಬುದ್ದಿಜೀವಿಗಳಾಗಿರಬೇಕಿಲ್ಲ. ಹಲವು ಸಂಸ್ಥೆಗಳು ಮುಕ್ತ ಯೋಚನೆ ಹೊಂದಿರುತ್ತವೆ ಮತ್ತು ಎಲ್ಲ ರೀತಿಯ ಜನರಿಂದಲೂ ಕಲಿಯಲು ಸಿದ್ಧರಿರುತ್ತಾರೆ. ಅವರು ಗಣ್ಯರಂತೆ ವರ್ತಿಸುವುದಿಲ್ಲ. ನಾವು ಅದ್ಭುತವಾದ ಕಾರ್ಯಕ್ರಮವನ್ನು ಸವಿದೆವು, ಅದೊಂದು ತುಂಬಿದ ಸಭೆಯಾಗಿತ್ತು' ಎಂದಿದ್ದಾರೆ. 

'ಮುಖ್ಯ ಅತಿಥಿಯಾಗಲು ವರ್ಷವೊಂದಕ್ಕೆ ಸಾವಿರಕ್ಕೂ ಅಧಿಕ ಆಹ್ವಾನಗಳು ಬರುತ್ತವೆ. ಅವುಗಳಲ್ಲಿ ಕೇವಲ ಶೇ. 2ರಷ್ಟನ್ನು ಮಾತ್ರ ಸ್ವೀಕರಿಸುತ್ತೇನೆ. ಆದರೆ ಕೆಲವರು ನಾನು ಅದನ್ನೇ ಕಾಯುತ್ತಿರುತ್ತೇನೆ ಎಂದುಕೊಳ್ಳುತ್ತಾರೆ. ದೇವರು ನನ್ನ ಮೇಲೆ ಕರುಣಾಮಯಿಯಾಗಿದ್ದಾನೆ. ನೀವೂ ಸಹ ಸಕಾರಾತ್ಮಕ ಯೋಚನೆಗಳನ್ನು ಹೊಂದಿದರೆ, ಉತ್ತಮ ಸಂಗತಿಗಳು ನಿಮ್ಮಲ್ಲೂ ಸಂಭವಿಸುತ್ತವೆ' ಎಂದು ಮತ್ತೊಂದು ಪ್ರತಿಕ್ರಿಯೆ ನೀಡಿದ್ದಾರೆ. ‌

'ಇದು ಭಾರತದಲ್ಲಿ ಮಾತ್ರ ಸಾಧ್ಯ, ಯಾರು ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರುವುದಿಲ್ಲವೋ ಅಂಥವರು ವಕೀಲರಾಗುತ್ತಾರೆ, ಬಳಿಕ ನ್ಯಾಯಾಧೀಶರು ಅಥವಾ ರಾಜಕಾರಣಿಗಳಾಗುತ್ತಾರೆ ಮತ್ತು ಐಎಎಸ್ ಮಾಡುತ್ತಾರೆ ನಂತರ ಗಣ್ಯರ ರೀತಿ ವರ್ತಿಸುತ್ತಾರೆ. ಯಾರು ಕಠಿಣ ಪರಿಶ್ರಮ ಪಡುತ್ತಾರೋ, ಐಐಟಿ, ಐಐಎಂ ಪ್ರವೇಶಿಸುವರೊ ಅವರನ್ನು ಅಲ್ಪ ಜ್ಞಾನಿಗಳು ಎಂದು ಭಾವಿಸುತ್ತಾರೆ. ದೇವರೇ ಅವರಿಗೆ ಜ್ಞಾನೋದಯ ಮಾಡಿಸು‘ ಎಂದು ಕಾಟ್ಜು ಕಾಲೆಳೆದಿದ್ದಾರೆ. 

ಕಾಟ್ಜು ಮತ್ತು ಚೇತನ್ ಭಗತ್‌ ಅವರ ಟ್ವೀಟ್‌ಗಳಿಗೆ ವ್ಯಕ್ತವಾಗಿರುವ ಇನ್ನೂ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು