ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ನಲ್ಲಿ 1,000 ಕಿ.ಮೀ.ದೂರದ ಊರಿಗೆ ಹೊರಟ ವಲಸೆ ಕಾರ್ಮಿಕ; ತಲುಪಿದ್ದು ಮೃತದೇಹ

Last Updated 11 ಮೇ 2020, 6:14 IST
ಅಕ್ಷರ ಗಾತ್ರ

ಲಖನೌ: ಕೋವಿಡ್‌–19 ಲಾಕ್‌ಡೌನ್‌ನಿಂದ ತನ್ನ ಊರಿಗೂ ಹೋಗಲಾಗದೆ, ದೆಹಲಿಯಲ್ಲೂ ಬದುಕು ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕ, ಬೈಸಿಕಲ್‌ನಲ್ಲೇ ಊರು ಸೇರುವ ನಿರ್ಧಾರ ಮಾಡಿದರು. ಸುಮಾರು 1,000 ಕಿ.ಮೀ. ದೂರದ ಪ್ರಯಾಣವನ್ನು ಸೈಕಲ್‌ ಏರಿ ಹೊರಟ ವಲಸೆ ಕಾರ್ಮಿಕ ಊರು ಸೇರುವ ಮುನ್ನವೇ ಅಪಘಾತದಲ್ಲಿ ಸಾವೀಗೀಡಾದ ದುರ್ಘಟನೆ ಶನಿವಾರ ಸಂಭವಿಸಿದೆ.

ಸಘೀರ್‌ ಅನ್ಸಾರಿ (26), ಮೇ 5ರಂದು ಏಳು ಮಂದಿ ಸ್ನೇಹಿತರೊಂದಿಗೆ ಬಿಹಾರ್‌ನ ಪೂರ್ವ ಚಂಪಾರಣದ ಊರಿನತ್ತ ಸೈಕಲ್‌ ಪ್ರಯಾಣ ಆರಂಭಿಸಿದ್ದರು. ಐದು ದಿನಗಳಲ್ಲಿ ಅವರು ಅರ್ಧದಷ್ಟು ಪ್ರಯಾಣ, ಅಂದರೆ ಲಖನೌವರೆಗೂ ತಲುಪಿದ್ದಾರೆ. ಪ್ರಯಾಣದ ನಡುವೆ ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಎಲ್ಲರೂ ರಸ್ತೆಯ ವಿಭಜಕದ ಮೇಲೆ ಕುಳಿತು ತಿಂಡಿ ತಿನ್ನಲು ಮುಂದಾಗಿದ್ದಾರೆ. ತಿಂಡಿಗೆ ಮಂಡಕ್ಕಿ ಸೇವಿಸುತ್ತ ಕುಳಿತವರ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಜವರಾಯನಂತೆ ಎರಗಿದೆ.

ಪೊಲೀಸ್‌ ಎಫ್‌ಐಆರ್‌ ಪ್ರಕಾರ, ಲಖನೌ ನೋಂದಣಿ ಸಂಖ್ಯೆ ಹೊಂದಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಹಾಗೂ ಅನ್ಸಾರಿಗೆ ಗುದ್ದಿದೆ. ವಿಭಜಕದಲ್ಲಿ ಬೆಳೆದಿದ್ದ ಮರದಿಂದಾಗಿ ಉಳಿದ ಕಾರ್ಮಿಕರು ಅಪಘಾತದಿಂದ ಪಾರಾಗಿದ್ದಾರೆ. ಅಪಘಾತದ ನಂತರ ಕಾರಿನ ಚಾಲಕ, ಕಾರ್ಮಿಕರಿಗೆ ಪರಿಹಾರವಾಗಿ ಹಣ ನೀಡಲು ಪ್ರಯತ್ನಿಸಿದ್ದಾರೆ. ಸ್ನೇಹಿತರೆಲ್ಲ ಸೇರಿ ಅನ್ಸಾರಿ ಅವರನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರು ಸಾವಿಗೀಡಾಗಿದ್ದಾರೆ. ಅನ್ಸಾರಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದಾರೆ.

ಸ್ಥಳೀಯ ಸ್ವಯಂ ಸೇವಕ ಸಂಘ ಹಾಗೂ ರಾಜಕೀಯ ಕಾರ್ಯಕರ್ತರು ಹಣ ಹೊಂದಿಸಿ ಆಂಬ್ಯುಲೆನ್ಸ್‌ನಲ್ಲಿ ಮೃತ ದೇಹವನ್ನು ಊರಿಗೆ ಕಳುಹಿಸಿದ್ದಾರೆ. ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಬೆಳಿಗ್ಗೆ ಉತ್ತರ ಪ್ರದೇಶ ಲಖನೌದ ಅದೇ ರಸ್ತೆಯಲ್ಲಿ ಛತ್ತೀಸ್‌ಗಢ ಮೂಲದ ಕಾರ್ಮಿಕ ಮತ್ತು ಆತನ ಹೆಂಡತಿ, ಮಕ್ಕಳು 750 ಕಿ.ಮೀ. ದೂರದ ತಮ್ಮ ಊರಿಗೆ ಹೊರಟಿದ್ದರು. ಅಪಘಾತದಿಂದ ದಂಪತಿ ಸಾವಿಗೀಡಾದರು. ಐದು ವರ್ಷಕ್ಕಿಂತಲೂ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ.

ಊರುಗಳಿಗೆ ನಡೆಯುತ್ತಲೇ ಸಾಗುತ್ತಿದ್ದ ವಲಸೆ ಕಾರ್ಮಿಕರು ಶುಕ್ರವಾರ ಮಹಾರಾಷ್ಟ್ರದ ಔರಂಗಬಾದ್‌ನ ನಗರದ ರೈಲು ಹಳಿಗಳ ಮೇಲೆ ವಿಶ್ರಮಿಸುತ್ತಿದ್ದಾಗ, ಗೂಡ್ಸ್ ರೈಲು ಹರಿದು 16 ಮಂದಿ ಸಾವಿಗೀಡಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಲಾಕ್‌ಡೌನ್‌ನಿಂದಾಗಿ ದೇಶದಾದ್ಯಂತ ಲಕ್ಷಾಂತರ ಕಾರ್ಮಿಕರು ಕೆಲಸ ಹಾಗೂ ಹಣವಿಲ್ಲದೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅವರನ್ನೆಲ್ಲ ತಮ್ಮ ಊರು, ಹಳ್ಳಿಗಳಿಗೆ ತಲುಪಿಸಲು ರೈಲು, ಬಸ್‌ ವ್ಯವಸ್ಥೆ ಕಲ್ಪಿಸಿವೆ. ಭಾರತೀಯ ರೈಲ್ವೆ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ಈ ನಡುವೆಯೂ ಹಲವಾರು ಕಾರ್ಮಿಕರು ಸೈಕಲ್‌ನಲ್ಲೋ ಅಥವಾ ನಡೆಯುತ್ತಲೋ ಮುನ್ನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT