ಶನಿವಾರ, ಫೆಬ್ರವರಿ 29, 2020
19 °C
ವಿಶ್ವ ಆರ್ಥಿಕ ವೇದಿಕೆ ಸಮಾವೇಶ * ಹೊಣೆಯರಿತ, ಸಮಾಜಮುಖಿ ವ್ಯಾಪಾರಕ್ಕೆ ಒತ್ತು

Explainer | ಪರಿಸರದ ಸುತ್ತ ಸುತ್ತಲಿದೆ 'ದಾವೋಸ್‌' ವಿಶ್ವ ಆರ್ಥಿಕ ವೇದಿಕೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ಸಭೆಗೆ ಈಗ 50 ವರ್ಷ ತುಂಬಿದೆ. ಡಬ್ಲ್ಯುಇಎಫ್‌ನ ಕಾರ್ಯಸೂಚಿಯಲ್ಲಿಯೂ ಈ ಪ್ರಬುದ್ಧತೆ ಕಾಣಿಸಿಕೊಂಡಿದೆ. ಉದ್ಯಮ ರಂಗದ ನಾಯಕರ ಚರ್ಚಾಕೂಟವಾಗಿದ್ದ ಸಭೆಯು ಈಗ, ರಾಜಕೀಯ ನಾಯಕರು, ವಿಜ್ಞಾನಿಗಳು ಮತ್ತು ಸಾಮಾಜಿಕ, ಪರಿಸರ ಕಾರ್ಯಕರ್ತರನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ತಂತ್ರಜ್ಞಾನವು ಬದುಕನ್ನು ಹೇಗೆ ಬದಲಿಸಬಲ್ಲುದು ಎಂಬಂತಹ ವಿಚಾರಗಳು ಹಿಂದೆ ಚರ್ಚೆ ಆಗಿದ್ದವು. ಈ ಬಾರಿ, ಪರಿಸರ ರಕ್ಷಣೆಯು ಮುಖ್ಯ ವಿಷಯಗಳಲ್ಲಿ ಒಂದಾಗಿದೆ. ಉದ್ಯೋಗ ಸೃಷ್ಟಿ, ಹವಾಮಾನ ಬದಲಾವಣೆ ತಡೆ ಹೋರಾಟ, ಎಲ್ಲರಿಗೂ ಒಳಿತಾಗುವ ರೀತಿಯ ಹೊಣೆಗಾರಿಕೆಯುಳ್ಳ ವ್ಯಾಪಾರ ಪದ್ಧತಿಗಳ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ. ವ್ಯಾಪಾರದ ಲಾಭದಾಯಕತೆಯ ಬಗೆಗಿನ ಮಾತೂ ಜತೆಯಲ್ಲಿ ಇರಲಿದೆ.

ವಿಶ್ವ ಆರ್ಥಿಕ ವೇದಿಕೆಯ 50ನೇ ವರ್ಷದ ಸಮಾವೇಶವು ಮಂಗಳವಾರದಿಂದ ಶುಕ್ರವಾರದವರೆಗೆ (ಜ. 21 ರಿಂದ 24) ದಾವೋಸ್‌ನಲ್ಲಿ ನಡೆಯಲಿದೆ.

ಜಗತ್ತಿನ ವಿವಿಧ ರಾಷ್ಟ್ರಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಅಥವಾ ಒಂದು ಸಂಸ್ಥೆಗೆ ಮಾತ್ರ ಸಾಧ್ಯವಾಗಲಾರದು. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಿಂದ, ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿಸಬಹುದು ಎಂಬ ಕಾರಣಕ್ಕೆ ಅಂಥ ಯೋಜನೆಗಳನ್ನು ರೂಪಿಸಲು ಪ್ರೋತ್ಸಾಹ ನೀಡುವುದು ಈ ಅಂತರರಾಷ್ಟ್ರೀಯ ವೇದಿಕೆಯ ಉದ್ದೇಶ ಎಂದು ವೇದಿಕೆ ಹೇಳಿಕೊಂಡಿದೆ.

ಆದಾಯದ ಅಸಮಾನತೆ ಹಾಗೂ ರಾಜಕೀಯ ಧ್ರುವೀಕರಣದಿಂದ ಉಂಟಾದ ಸಾಮಾಜಿಕ ವಿಭಜನೆಯಿಂದ ಆರಂಭಿಸಿ, ಹವಾಮಾನ ಬದಲಾವಣೆಯವರೆಗೆ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವೇದಿಕೆ ಕೆಲಸ ಮಾಡುತ್ತಿದೆ. ಕಳೆದ ಐದು ದಶಕಗಳಿಂದ ವಿವಿಧ ಸರ್ಕಾರಗಳು, ಅಂತರರಾಷ್ಟ್ರೀಯ ಸಂಘಟನೆಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಗೆ ತರುವ ಕೆಲಸವನ್ನು ದಾವೋಸ್‌ ಸಭೆಯು ಮಾಡುತ್ತಿದೆ. ಈ ಬಾರಿಯ ಸಭೆಯಲ್ಲಿ ನಾಲ್ಕು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಆಯೋಜಕರು ಹೇಳಿದ್ದಾರೆ.

* ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟುಮಾಡುತ್ತಿರುವ ‘ಹವಾಮಾನ ವೈಪರೀತ್ಯ ಮತ್ತು ಇತರ ಸಮಸ್ಯೆ’ಗಳನ್ನು ನಿವಾರಿಸುವುದು ಹೇಗೆ?

* ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಆದ್ಯತೆಗಳು ಬದಲಾಗಿರುವುದರ ಪರಿಣಾಮ, ವ್ಯಾಪಾರ ಮತ್ತು ಗ್ರಾಹಕ ಬಳಕೆಯ ಮಾದರಿಗಳೂ ಬದಲಾಗಿವೆ. ಇದಕ್ಕೆ ಅನುಗುಣವಾಗಿ ಹೆಚ್ಚು ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಳ್ಳುವ ವ್ಯಾಪಾರ ಮಾದರಿಗಳನ್ನು ಸೃಷ್ಟಿಸುವ ರೀತಿಯಲ್ಲಿ ನಮ್ಮ ಕೈಗಾರಿಕೆಗಳನ್ನು ರೂಪಿಸುವುದು ಹೇಗೆ?

ನಾಲ್ಕನೆಯ ಕೈಗಾರಿಕಾ ಕ್ರಾಂತಿಯನ್ನು ತಂತ್ರಜ್ಞಾನವೇ ಮುನ್ನಡೆಸುತ್ತಿದೆ. ತಂತ್ರಜ್ಞಾನವು ಕೈಗಾರಿಕೆಗಳು ಮತ್ತು ಸಮಾಜಕ್ಕೆ ಲಾಭದಾಯಕವಾಗಿ ಪರಿಣಮಿಸುತ್ತಿದೆ. ಸಮಾಜ ಮತ್ತು ಕೈಗಾರಿಕೆಗಳಿಗೆ ಹಾನಿಯಾಗದ ರೀತಿಯಲ್ಲಿ ಈ ತಂತ್ರಜ್ಞಾನ ಕೇಂದ್ರಿತ ಕ್ರಾಂತಿಯನ್ನು ಮುನ್ನಡೆಸುವುದು ಹೇಗೆ?

* ಎಲ್ಲಾ ವರ್ಗದವರಿಗೂ ಸೇವೆ ಲಭ್ಯವಾಗಿಸುವ ನಿಟ್ಟಿನಲ್ಲಿ ಕೈಗಾರಿಕಾ ಪ್ರಮುಖರು ತಮ್ಮ ವ್ಯಾಪಾರ ನೀತಿಗಳನ್ನು ಬದಲಿಸುತ್ತಿದ್ದಾರೆ. ಕೈಗಾರಿಕಾ ಕ್ಷೇತ್ರವು ಈಗ ಹೊಸ ರೀತಿಯ ಉದ್ಯೋಗಿಗಳು ಹಾಗೂ ಉದ್ಯಮಶೀಲತೆಯನ್ನು ಬಯಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ಮೂಲಕ ಜನ ಸಮುದಾಯಗಳು, ಸಮಾಜ ಹಾಗೂ ತಂತ್ರಜ್ಞಾನಗಳನ್ನು ಹೊಸ ವ್ಯವಸ್ಥೆಗೆ ಒಗ್ಗಿಸಿಕೊಳ್ಳುವುದು ಹೇಗೆ?

ಈ ಬಾರಿಯ ಸಭೆಯಲ್ಲಿ...

ರಾಜಕೀಯ, ಕೈಗಾರಿಕೆ, ಸಮಾಜಸೇವೆ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 3000ಕ್ಕೂ ಹೆಚ್ಚು ಪ್ರತಿನಿಧಿಗಳು  50ನೇ ವರ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪರಿಸರ ಹೋರಾಟಗಾರ್ತಿ, ಸ್ವೀಡನ್‌ನ ಗ್ರೆಟ್ಟಾ ಥನ್‌ಬರ್ಗ್‌ ಪರಿಸರ ವಿಚಾರವಾಗಿ ಮಾತನಾಡುವರು. ನೀರಿನಿಂದ ಮೈಕ್ರೊ ಪ್ಲಾಸ್ಟಿಕ್‌ ಅನ್ನು ಬೇರ್ಪಡಿಸುವ ತಂತ್ರಜ್ಞಾನವನ್ನು ಕಂಡುಹಿಡಿದ ವಿಜ್ಞಾನಿ, ನೆದರ್ಲೆಂಡ್‌ನ ಫಿಯೊನ್‌ ಫೆರೇರಾ ಸೇರಿದಂತೆ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾದ ಅನೇಕ ಹದಿಹರೆಯದವರು ಪಾಲ್ಗೊಳ್ಳಲಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬ್ರಿಟನ್‌ನ ಪ್ರಿನ್ಸ್‌ ಚಾರ್ಲ್ಸ್‌, ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌, ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿದಂತೆ ವಿವಿಧ ರಾಷ್ಟ್ರಗಳ 250ಕ್ಕೂ ಹೆಚ್ಚು ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.

ಈ ಸಂದರ್ಭದಲ್ಲೇ ಇಮ್ರಾನ್‌ ಖಾನ್‌ ಅವರು ಟ್ರಂಪ್‌ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ.

ಜಾಗತಿಕ ಮಟ್ಟದ ವಿವಿಧ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು. ವಿವಿಧ ರಾಷ್ಟ್ರಗಳ ಸುಮಾರು 500 ಪತ್ರಕರ್ತರು ಈ ಸಭೆಯ ವರದಿ ಮಾಡಲಿದ್ದಾರೆ.

ಇದನ್ನೂ ಓದಿ: ಮಹಿಳೆಯೇ ವಿಶ್ವ ಆರ್ಥಿಕತೆಯ ಚಾಲನಾ ಶಕ್ತಿ

ಡೊನಾಲ್ಡ್‌ ಟ್ರಂಪ್‌ ಮತ್ತು ಗ್ರೆಟ್ಟಾ ಥನ್‌ಬರ್ಗ್‌

ಟ್ರಂಪ್‌–ಗ್ರೆಟ್ಟಾ: ಎರಡು ಸಿದ್ಧಾಂತಗಳ ಮುಖಾಮುಖಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೆಟ್ಟಾ ಥನ್‌ಬರ್ಗ್‌ ಅವರು ದಾವೋಸ್‌ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪರಿಸರದ ಕಾಳಜಿಯೇ ಈ ಬಾರಿಯ ಮುಖ್ಯ ವಿಚಾರ ಆಗಿರುವುದರಿಂದ ಈ ಇಬ್ಬರೂ ಭಾಗವಹಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ವೇದಿಕೆಯ ಮುಖ್ಯಸ್ಥರು ಹೇಳಿದ್ದಾರೆ. 

ಉಷ್ಣಾಂಶ ಭಾರಿ ಪ‍್ರಮಾಣದಲ್ಲಿ ಏರಿಕೆ, ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚುಗಳು, ಮಂಜುಗಡ್ಡೆ ಪ್ರದೇಶಗಳ ಕರಗುವಿಕೆಯಿಂದ ಆಗಬಹುದಾದ ದೀರ್ಘಾವಧಿ ಸಮಸ್ಯೆಗಳು ಜಾಗತಿಕ ಆರ್ಥಿಕತೆಯ ಮುಂದೆ ಇರುವ ದೊಡ್ಡ ಅಪಾಯಗಳಾಗಿವೆ. ಹಾಗಾಗಿ, ಪರಿಸರ ಈ ಬಾರಿಯ ಮುಖ್ಯ ವಿಷಯಗಳಲ್ಲಿ ಒಂದು. 

ಇದು ಟ್ರಂಪ್‌ ಅವರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಇಂಗಾಲ ಹೊರಚೆಲ್ಲುವ ಕಲ್ಲಿದ್ದಲು ಬಳಕೆಯನ್ನು ಇನ್ನಷ್ಟು ಹೆಚ್ಚಿಸಿ ಎಂದು ಅವರು ಕರೆ ನೀಡಿದ್ದಾರೆ. ಪರಿಸರ ರಕ್ಷಣಾ ಕ್ರಮಗಳನ್ನು ಅವರ ಸರ್ಕಾರ ರದ್ದು ಮಾಡಿದೆ. ಹವಾಮಾನ ಬದಲಾವಣೆಯ ಅಪಾಯಗಳ ಬಗ್ಗೆ ವಿಜ್ಞಾನಿಗಳ ಕಳಕಳಿಯನ್ನು ಅವರು ಅಲ್ಲಗಳೆದಿದ್ದಾರೆ. ಹವಾಮಾನ ಬದಲಾವಣೆ ತಡೆ ಪ್ರಯತ್ನದ ಮೈಲುಗಲ್ಲುಗಳಲ್ಲಿ ಒಂದಾದ 2015ರ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರಗೆ ಬಂದಿದೆ. 

ಜಾಗತಿಕ ಮಟ್ಟದಲ್ಲಿ ಟ್ರಂಪ್‌ ಅವರ ಪ್ರಭಾವ ಇದೆ. ಹಾಗಾಗಿ, ಅವರು ಸಮಾವೇಶಕ್ಕೆ ಬರು ವುದು ಸ್ವಾಗತಾರ್ಹ. ಹಾಗೆಯೇ, ಸಮಾವೇಶದ ಗಮನ ಕೇಂದ್ರವು ಪರಿಸರವೇ ಆಗಿ ಉಳಿಯುವಂತೆ ಗ್ರೆಟ್ಟಾ ಅವರು ನೋಡಿಕೊಳ್ಳಲಿದ್ದಾರೆ ಎಂದು ಡಬ್ಲ್ಯುಇಎಫ್‌ ಹೇಳಿದೆ. 

ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶವು ಕಳೆದ ವರ್ಷ ಮ್ಯಾಡ್ರಿಡ್‌ನಲ್ಲಿ ನಡೆದಾಗ ಅಲ್ಲಿ ಟ್ರಂಪ್ ಮತ್ತು ಗ್ರೆಟ್ಟಾ ಮುಖಾಮುಖಿಯಾಗಿದ್ದರು. ಗ್ರೆಟ್ಟಾ ಬಗ್ಗೆ ಟ್ರಂಪ್‌ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದರು ಎಂದು ಆಗ ಹೇಳಲಾಗಿತ್ತು. ಟ್ರಂಪ್‌ ಅವರನ್ನು ಗ್ರೆಟ್ಟಾ ಆಕ್ರೋಶದಿಂದ ದಿಟ್ಟಿಸುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ನಂತರವೂ, ಗ್ರೆಟ್ಟಾ ವಿಚಾರದಲ್ಲಿ ಟ್ರಂಪ್‌ ಸಂವೇದನಾರಹಿತರಾಗಿ ಟ್ವೀಟ್‌ ಮಾಡಿದ್ದಾರೆ ಎಂಬ ಆಕ್ರೋಶ ಟ್ವಿಟರ್‌ನಲ್ಲಿ ವ್ಯಕ್ತವಾಗಿತ್ತು.

ಇದನ್ನೂ ಓದಿ: ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ: ಕರ್ನಾಟಕಕ್ಕೆ ಏಕೆ ಮುಖ್ಯ?

ಸಮಾವೇಶ ಕೇಂದ್ರದ ಬಳಿ ಪೊಲೀಸ್‌ ಕಾವಲು

ಭಾರತದಿಂದ ಯಾರ್‍ಯಾರು?
ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಾಲ್ಗೊಳ್ಳುವರು.

ಉದ್ಯಮ ಕ್ಷೇತ್ರದ ಅನೇಕ ದಿಗ್ಗಜರು, ವಿವಿಧ ಕಂಪನಿಗಳ ಸುಮಾರು ನೂರು ಮಂದಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್‌ನ ಕೆಲವು ನಟರು ಈಗಾಗಲೇ ದಾವೋಸ್‌ಗೆ ತೆರಳಿದ್ದಾರೆ.

ಸಂರಕ್ಷಣಾ ವಿಜ್ಞಾನಿ, ವನ್ಯಜೀವಿ ಅಧ್ಯಯನ ಕೇಂದ್ರದ ನಿರ್ದೇಶಕಿ ಕೀರ್ತಿ ಕಾರಂತ್‌ ಅವರು ಮಾನವ– ವನ್ಯಮೃಗ ಸಂಘರ್ಷದ ಬಗ್ಗೆ ಮತ್ತು ನಟಿ ದೀಪಿಕಾ ಪಡುಕೋಣೆ, ‘ಮಾನಸಿಕ ಆರೋಗ್ಯ’ ವಿಚಾರವಾಗಿ ಮಾತನಾಡಲಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್‌ ಅವರು ಪ್ರತಿದಿನ ಮುಂಜಾನೆ ಯೋಗ–ಧ್ಯಾನ ಕಾರ್ಯಕ್ರಮ ನಡೆಸಲಿದ್ದಾರೆ.

ಅಭೂತಪೂರ್ವ ಭದ್ರತೆ
ಐರೋಪ್ಯ ರಾಷ್ಟ್ರಗಳಲ್ಲಿ ಇತ್ತೀ ಚಿನ ವರ್ಷಗಳಲ್ಲಿ ಜಿಹಾದಿ ಸಂಘಟನೆಗಳ ಚಟುವಟಿಕೆಗಳು ತೀವ್ರಗೊಂಡಿರುವುದರಿಂದ ದಾವೋಸ್‌ನಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ಪೊಲೀಸ್‌ ಸಿಬ್ಬಂದಿ, ಖಾಸಗಿ ಭದ್ರತಾ ಸಿಬ್ಬಂದಿಗಳಲ್ಲದೆ ಸಶಸ್ತ್ರ ಪಡೆಗಳ ಸುಮಾರು 5000 ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿವಿಧ ರಾಷ್ಟ್ರಗಳಿಂದ ಬರುವ ಪ್ರಮುಖರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅಗತ್ಯವೆನಿಸಿದರೆ ವಿಶೇಷ ಭದ್ರತಾ ವ್ಯವಸ್ಥೆಯನ್ನೂ ಮಾಡುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ಸ್ವಿಡ್ಜರ್ಲೆಂಡ್‌ನ ವಾಯು ಪ್ರದೇಶದಲ್ಲಿ ಹಾರಾಡುವ ವಿಮಾ ನಗಳ ಮೇಲೂ ಕಣ್ಣಿಡಲಾಗಿದೆ. ವಾಯು ದಾಳಿಯನ್ನು ತಡೆಯಲು ಯುದ್ಧ ವಿಮಾನಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.

ಇದನ್ನೂ ಓದಿ: ದಾವೋಸ್‌ ಸಭೆ: ಭಾರತದ ನಿಯೋಗಕ್ಕೆ ಗೋಯಲ್‌ ನೇತೃತ್ವ

ಕರ್ನಾಟಕದ ನಿರೀಕ್ಷೆ ಏನು?
ಆರ್ಥಿಕ ಹಿಂಜರಿತದ ಪರಿಣಾಮದಿಂದ ಬಂಡವಾಳ ಹೂಡಿಕೆಯಲ್ಲಿ ಪ್ರಗತಿ ಕಾಣದ ಕರ್ನಾಟಕ, ದಾವೋಸ್‌ ಸಮ್ಮೇಳನದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ಹಿರಿಯ ಅಧಿಕಾರಿಗಳ ದಂಡೇ ಸಮ್ಮೇಳನದಲ್ಲಿ ಭಾಗಿಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಉದ್ಯಮ ನಡೆಸುತ್ತಿರುವ ಕಂಪನಿಗಳು ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರ ಜತೆ ಸಭೆ ನಿಗದಿಯಾಗಿದೆ. ದೊಡ್ಡ ಮೊತ್ತ ಹೂಡಿಕೆಯ ಒಪ್ಪಂದದ ಆಶಾಭಾವ ಅಧಿಕಾರಿಗಳದ್ದಾಗಿದೆ.

ಸಮ್ಮೇಳನದಲ್ಲಿ ಕರ್ನಾಟಕದ ಪ್ರದರ್ಶನ ಮಳಿಗೆಯನ್ನು ಯಡಿಯೂರಪ್ಪ ಅವರು ಸೋಮವಾರ ಉದ್ಘಾಟಿಸಿದರು. 23ರವರೆಗೆ ಸಮ್ಮೇಳನ ನಡೆಯಲಿದೆ. ಅದಾನಿ, ವಿಎಮ್‌ ವೇರ್, ಭಾರತ್ ಫೋರ್ಜ್‌, ಅರಬ್‌ ರಾಷ್ಟ್ರಗಳ ಒಕ್ಕೂಟದ ಶೇಖ್ ಅಲ್‌ ಮಕ್‌ದೂಮ್‌, ಸದ್ಗುರು, ಡೆನ್ಸೊ, ಹ್ಯೂಲೆಟ್‌ ಪ್ಯಾಕಾರ್ಡ್ ಎಂಟರ್‌ಪ್ರೈಸ್‌, ಕೋಕಾ ಕೋಲಾ ಕಂಪನಿ, ಡಾಸೋ, ಪ್ರಾಕ್ಟರ್ ಅಂಡ್ ಗ್ಯಾಂಬಲ್‌, ಟೆಕ್‌ ಮಹೀಂದ್ರ, ನೋವೊ ನೊರ್ಡಿಕ್ಸ್‌, ಜನರಲ್ ಎಲೆಕ್ಟ್ರಿಕ್‌ (ಜಿ.ಇ), ನೆಸ್ಲೆ, ಜೆಮಿನಿ ಗ್ರೂಪ್‌, 2000 ವೋಲ್ಟ್‌, ಕ್ರಸೆಂಟ್‌ ಪೆಟ್ರೋಲಿಯಂ, ಲುಲು ಗ್ರೂಪ್‌, ಲಾಕ್‌ಹೀಡ್‌ ಮಾರ್ಟಿನ್‌, ತನ್ಲೇಝ್‌/ಟ್ವೆಂಟಿ 14–ಲುಲು ಫೈನಾನ್ಶಿಯಲ್‌, ಎನ್‌ಇಸಿ, ರಿನ್ಯೂ ಎನರ್ಜಿ, ಕಾರಿಸ್ಬೆರ್ಗ್‌ ಗ್ರೂಪ್‌ ಮುಖ್ಯಸ್ಥರ ಜತೆ ಸಮಾಲೋಚನಾ ಸಭೆಗಳು ನಿಗದಿಯಾಗಿವೆ.

ಟಿಸಿಎಸ್‌, ಮಿತ್ತಲ್‌, ಆನಂದ್ ಮಹೀಂದ್ರ, ತಕೆಡಾ ಫಾರ್ಮಾಶ್ಯೂಟಿಕಲ್ಸ್‌, ಎಬಿಬಿ ಮುಖ್ಯಸ್ಥರ ಜತೆ ಸಭೆಗಳು ನಡೆಯಲಿವೆ. 

ಆಧಾರ: ರಾಯಿಟರ್ಸ್‌, ಪಿಟಿಐ, ಡಬ್ಲ್ಯುಇಎಫ್‌ ಜಾಲತಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು