ಬುಧವಾರ, ಜನವರಿ 29, 2020
30 °C

ಐಪಿಸಿ, ಸಿಆರ್‌ಪಿಸಿ ಬದಲಿಗೆ ಮೋದಿ ಸರ್ಕಾರ ಬದ್ಧ: ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಪುಣೆ: ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯು (ಸಿಆರ್‌ಪಿಸಿ) ಭಾರತದ ಈಗಿನ ಸ್ಥಿತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಅತ್ಯಾಚಾರದಂತಹ ಹೀನ ಕೃತ್ಯಗಳಲ್ಲಿ ಅಪರಾಧ ನ್ಯಾಯದಾನವು ವಿಳಂಬವಾಗುತ್ತಿದೆ ಎಂಬುದರ ಚರ್ಚೆಯ ಸಂದರ್ಭದಲ್ಲಿ ಶಾ ಅವರ ಹೇಳಿಕೆಯು ಮಹತ್ವ ಪಡೆದಿದೆ. 

ಐಪಿಸಿ ಮತ್ತು ಸಿಆರ್‌ಪಿಸಿ ತಿದ್ದುಪಡಿಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳನ್ನು ಮೂರು ದಿನಗಳ ಹಿಂದೆ ಕೋರಿತ್ತು. ಆಧುನಿಕ ಪ್ರಜಾಪ್ರಭುತ್ವದ ಆಕಾಂಕ್ಷೆಗಳು ಮತ್ತು ತ್ವರಿತ ನ್ಯಾಯದಾನಕ್ಕೆ ಅನುಗುಣವಾದ ಸಲಹೆಗಳಿರಲಿ ಎಂದು ಸೂಚಿಸಲಾಗಿತ್ತು. 

ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಪೊಲೀಸ್‌ ಮಹಾನಿರೀಕ್ಷಕರ 54ನೇ ಸಮಾವೇಶವನ್ನು ಉದ್ದೇಶಿಸಿ ಶಾ ಮಾತನಾಡಿದ್ದಾರೆ. ಈಗಿನ ಸನ್ನಿವೇಶಕ್ಕೆ ಬೇಕಾದಂತೆ ಐಪಿಸಿ ಮತ್ತು ಸಿಆರ್‌ಪಿಸಿಯನ್ನು ಬದಲಾಯಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾ ಹೇಳಿದ್ದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ. 

2012ರ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವೂ ಸೇರಿ ಅತ್ಯಾಚಾರದಂತಹ ದುಷ್ಕೃತ್ಯಗಳಲ್ಲಿ ತ್ವರಿತ ನ್ಯಾಯದಾನ ಆಗುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ನಿರ್ಭಯಾ ಹಂತಕರಿಗೆ ಇನ್ನೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ ಎಂಬ ವಿಚಾರವೂ ಚರ್ಚೆಯಾಗುತ್ತಿದೆ. 

ದಿಢೀರ್‌ ನ್ಯಾಯದಾನ ಸಾಧ್ಯವಿಲ್ಲ. ನ್ಯಾಯದಾನವು ಸೇಡಿನ ಕ್ರಮವಾದರೆ ನ್ಯಾಯವು ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ಶನಿವಾರ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು