ಸೋಮವಾರ, ಆಗಸ್ಟ್ 26, 2019
20 °C

ಭೂಸ್ವರ್ಗಕ್ಕೆ ಭರಪೂರ ಭರವಸೆ

Published:
Updated:

ನವದೆಹಲಿ:ಭೂಸ್ವರ್ಗಕ್ಕೆ ಇಡೀ ವಿಶ್ವವೇ ಆಕರ್ಷಗೊಳ್ಳುವಂತೆ ಮಾಡೋಣ. ಜನರಿಗೆ ಎಲ್ಲ ರೀತಿಯ ಹಕ್ಕುಗಳು ಸಿಗುವಂತೆ ಮಾಡೋಣ ಬನ್ನಿ ಎನ್ನುವ ಮೂಲಕ ಜಮ್ಮು ಕಾಶ್ಮೀರ ಮತ್ತು ಲಡಾಕ್‌ಗೆ ಭರಪೂರ ಭರವಸೆಗಳನ್ನು ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಜತೆಗೇ ಜಮ್ಮು–ಕಾಶ್ಮೀರ ಮತ್ತು ಲಡಾಕ್‌ನ ಯುವಕರಿಗೆ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ಗುರುವಾರ ರಾತ್ರಿ ದೇಶವನ್ನುದ್ದೇಶಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪ್ರಮುಖ ಕಂಪನಿಗಳು, ಖಾಸಗಿ ಕಂಪನಿಗಳಲ್ಲಿಯೂ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಯುವಜನರಿಗೆ ಉದ್ಯೋಗ ಸಿಗುವಂತೆ ಮಾಡಲು ವ್ಯವಸ್ಥೆ ಮಾಡುತ್ತೇವೆ. ಉದ್ಯೋಗ ರ್‍ಯಾಲಿಗಳನ್ನು ಆಯೋಜಿಸುತ್ತೇವೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯನ್ನು ಆದ್ಯತೆಯ ಮೇರೆಗೆ ವಿಸ್ತರಿಸುತ್ತೇವೆ. ಕಂದಾಯ ಸೋರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಅಲ್ಲಿ ಯಾವಾಗಿನಿಂದ ರಾಜ್ಯಪಾಲರ ಆಡಳಿತ ಆರಂಭವಾಗಿದೆಯೋ ಅಂದಿನಿಂದ ಅಲ್ಲಿ ಕೇಂದ್ರ ಸರ್ಕಾರದ ಆಡಳಿತವೇ ನಡೆಯುತ್ತಿದೆ. ಹೀಗಾಗಿ ಕಳೆದ ಕೆಲ ತಿಂಗಳುಗಳಿಂದ ಅಲ್ಲಿ ಉತ್ತಮ ಆಡಳಿತ ಮತ್ತು ಅದರ ಪ್ರಭಾವ ಸಮಾಜದಲ್ಲಿ ಕಾಣಿಸುತ್ತಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಹೊಸ ವೇಗ ಸಿಕ್ಕಿದೆ ಎಂದು ತಿಳಿಸಿದರು. 

ಇದನ್ನೂ ಓದಿ: ‘ಭೂಸ್ವರ್ಗ– ಭೂನರಕ’ದ ನಡುವೆ | ದಿನೇಶ್‌ ಅಮಿನ್ ಮಟ್ಟು ಬರಹ

ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುತ್ತಿದ್ದೇವೆ. ಐಐಟಿ, ಐಐಎಂ, ಏಮ್ಸ್‌ ಸೇರಿದಂತೆ ಪ್ರತಿಷ್ಠಿತ ಕಂಪನಿಗಳನ್ನು ಆರಂಭಿಸುತ್ತೇವೆ. ರೈಲು ಯೋಜನೆ, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು, ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. 

ಕೇಂದ್ರಾಡಳಿತ ವ್ಯವಸ್ಥೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ಇದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಭರವಸೆ ಕೊಡುತ್ತೇನೆ. ಪೂರ್ಣ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಿಮ್ಮ ಪ್ರತಿನಿಧಿಯನ್ನು ಆರಿಸಿಕೊಳ್ಳಲು ನಿಮಗೆ ಅವಕಾಶ ಸಿಗಲಿದೆ. ಆ ರಾಜ್ಯದ ರಾಜ್ಯಪಾಲರಿಗೆ ನಾನು ಆಗ್ರಹ ಮಾಡುತ್ತೇನೆ. ವಿಭಾಗ ಅಭಿವೃದ್ಧಿ ಮಂಡಳಿಗಳನ್ನೂ ಶೀಘ್ರ ರಚಿಸಬೇಕು ಎಂದು ಭಾಷಣದ ಮೂಲಕವೇ ಆಗ್ರಹಿಸಿದರು. 

ನಾನು ಅಲ್ಲಿನ ಯುವಜನರಿಗೆ ಕರೆ ನೀಡುತ್ತೇನೆ. ಇನ್ನು ನೀವು ಮುಂದೆ ಬನ್ನಿ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ. ಜಮ್ಮು ಮತ್ತು ಕಾಶ್ಮೀರವನ್ನು ವಿಶ್ವ ಪ್ರವಾಸೋದ್ಯಮದ ಕೇಂದ್ರ ಬಿಂದು ಮಾಡೋಣ ಬನ್ನಿ. ನನ್ನ ಈ ಪ್ರಯತ್ನಕ್ಕೆ ಭಾರತದ ಎಲ್ಲ ನಾಗರಿಕರ ಸಹಕಾರ ಬೇಕು ಎಂದು ಅವರು ಅಪೇಕ್ಷಿಸಿದರು. 

ಲಡಾಖ್‌ನಲ್ಲಿ ಅಧ್ಯಾತ್ಮ ನಿಸರ್ಗ, ಸಾಹಸ ಪ್ರವಾಸೋದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಅಲ್ಲಿ ಸೋಲಾರ್ ಉದ್ಯಮಗಳಿಗೂ ಅವಕಾಶವಿದೆ. ಲಡಾಖ್‌ನ ಯುವಜನತೆಯ ಆವಿಷ್ಕಾರ ಶಕ್ತಿ ಹೆಚ್ಚಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಅಲ್ಲಿ ಮೂಲ ಸೌಕರ್ಯ ಸುಧಾರಣೆಗೆ ನಾವು ಸಾಕಷ್ಟು ಗಮನ ಕೊಡುತ್ತೇವೆ ಎಂದು ವಚನ ನೀಡಿದರು. 

ದೇಶದ ಉದ್ಯಮಿಗಳಿಗೆ, ಆಹಾರ ಸಂಸ್ಕರಣೆ ಮತ್ತು ರಫ್ತು ಉದ್ಯಮಿಗಳನ್ನು ಆಗ್ರಹಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ಕಳುಹಿಸಲು ಮುಂದೆ ಬನ್ನಿ. ಲಡಾಖ್–ಕಾರ್ಗಿಲ್ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಅಭಿವೃದ್ಧಿಯ ಯೋಜನೆಗಳನ್ನು ಇನ್ನಷ್ಟು ವೇಗವಾಗಿ ಮುನ್ನಡೆಸುತ್ತೇವೆ ಎಂದರು. 

ದೇಶದ ಉದ್ಯಮಿಗಳಿಗೆ, ಆಹಾರ ಸಂಸ್ಕರಣೆ ಮತ್ತು ರಫ್ತು ಉದ್ಯಮಿಗಳನ್ನು ಆಗ್ರಹಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ಕಳುಹಿಸಲು ಮುಂದೆ ಬನ್ನಿ. ಲಡಾಖ್–ಕಾರ್ಗಿಲ್ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಅಭಿವೃದ್ಧಿಯ ಯೋಜನೆಗಳನ್ನು ಇನ್ನಷ್ಟು ವೇಗವಾಗಿ ಮುನ್ನಡೆಸುತ್ತೇವೆ ಎಂದು ಹೇಳಿದರು. 

Post Comments (+)