ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಸ್ವರ್ಗ– ಭೂನರಕ’ದ ನಡುವೆ | ದಿನೇಶ್‌ ಅಮಿನ್ ಮಟ್ಟು ಬರಹ

ಜಮ್ಮು ಮತ್ತು ಕಾಶ್ಮೀರ ಕುರಿತು ಚರಿತ್ರೆಯ ಪುಟಗಳು ಹೇಳುವುದೇನು?
Last Updated 6 ಆಗಸ್ಟ್ 2019, 4:29 IST
ಅಕ್ಷರ ಗಾತ್ರ

ಬಿಜೆಪಿ ನುಡಿದಂತೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ರಾಷ್ಟ್ರಪತಿಯವರ ಅಧಿಸೂಚನೆಯ ನಿರ್ಣಯವನ್ನು ಆ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ. ಈ ಐತಿಹಾಸಿಕ ನಿರ್ಧಾರದಿಂದ ಆ ರಾಜ್ಯದಲ್ಲಿ ಶಾಂತಿಯ ಹೊಸ ಶಕೆ ಪ್ರಾರಂಭವಾಗಬಹುದೇ? ಚರಿತ್ರೆಯ ಪುಟಗಳು ನಿರೀಕ್ಷೆ ಹುಟ್ಟಿಸುವುದಿಲ್ಲ.

ಕಾಶ್ಮೀರದ ಚರಿತ್ರೆ ಎಂದರೆ ‘ಭೂಸ್ವರ್ಗ’ವನ್ನು ‘ನರಕ’ ಮಾಡುತ್ತಲೇ ಹೋದ ಅವಕಾಶವಾದಿ ರಾಜಕಾರಣದ ಕತೆ. ಇದಕ್ಕೆ ಭಾರತ ಮತ್ತು ಪಾಕಿಸ್ತಾನವನ್ನು ಆಳಿದವರೆಲ್ಲರ ಕಾಣಿಕೆಯೂ ಇದೆ.

ಕಾಶ್ಮೀರ ಇಂದಿನಂತೆ ಇರಲಿಲ್ಲ. ಭಾರತ ವಿಭಜನೆಯ ಕಾಲದಲ್ಲಿಯೂ ಅಲ್ಲಿ ಕೋಮುಗಲಭೆಯಾಗಿರಲಿಲ್ಲ. ಹಿಂದೂ ಬಾಹುಳ್ಯದ ಜುನಾಗಡದ ಜನರು ಮುಸ್ಲಿಂ ದೊರೆಯ ವಿರುದ್ಧ ದಂಗೆ ಎದ್ದು ಭಾರತದ ಜತೆ ಸೇರಿಕೊಂಡರೆ, ಮುಸ್ಲಿಂ ಬಾಹುಳ್ಯದ ಕಾಶ್ಮೀರವು ಹಿಂದೂ ದೊರೆಯ ಇಚ್ಛೆಗೆ ಮಣಿದು ಇಷ್ಟಪಟ್ಟು ಭಾರತದ ಜತೆ ಉಳಿದುಕೊಂಡಿತು. ಕಾಶ್ಮೀರದ ಮಹಾರಾಜ ಹರಿಸಿಂಗ್ ವಿರುದ್ಧ ಹೋರಾಡಿ ಜೈಲು ಸೇರಿದ್ದ ಶೇಖ್ ಅಬ್ದುಲ್ಲಾ ಕೂಡ ಈ ನಿರ್ಧಾರವನ್ನು ವಿರೋಧಿಸಿರಲಿಲ್ಲ.

ಸ್ವಾತಂತ್ರ್ಯ ಸಿಕ್ಕಾಗ ಕಾಶ್ಮೀರವು ಭಾರತದ ಭಾಗವಾಗಿರಲಿಲ್ಲ. ಅದಕ್ಷ, ವಿಲಾಸಿ ಮಹಾರಾಜ ಹರಿಸಿಂಗ್ ಆಳ್ವಿಕೆಯಲ್ಲಿದ್ದ ಕಾಶ್ಮೀರ ತಟಸ್ಥವಾಗಿ ಉಳಿದಿತ್ತು. ಹರಿಸಿಂಗ್ ತಮ್ಮ ಪರವಾಗಿ ಇಲ್ಲ ಎನ್ನುವುದು ಗೊತ್ತಾದ ಕೂಡಲೇ ಜಿನ್ನಾ ಬಲಪ್ರಯೋಗಕ್ಕೆ ಮುಂದಾದರು. ಸೇನಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಗಡಿನಾಡಿನ ಪಠಾಣರನ್ನು ಸಂಘಟಿಸಿ ಕಾಶ್ಮೀರದ ಮೇಲೆ ಛೂ ಬಿಟ್ಟರು. ಹಿಂಸೆ, ಲೂಟಿಯಿಂದ ರಾಜ್ಯ ತತ್ತರಿಸಿದ್ದಾಗ ಹರಿಸಿಂಗ್ ಭಾರತದ ನೆರವು ಬಯಸಿದರು, ಬೇಷರತ್ತಾಗಿ ಭಾರತದ ಜತೆ ವಿಲೀನಗೊಳ್ಳುವುದಾಗಿ ತಿಳಿಸಿದರು.

ಈ ವಿಶಿಷ್ಟ ಹಿನ್ನೆಲೆಯಿಂದಾಗಿ, ಭಾರತ ಗಣರಾಜ್ಯವಾದಾಗ ಕಾಶ್ಮೀರಕ್ಕೆ ಸಂವಿಧಾನದಲ್ಲಿ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲಾಯಿತು. ಸಂವಿಧಾನದ ಎಲ್ಲ ವಿಧಿಗಳು ಆ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಪ್ರತ್ಯೇಕ ಸ್ಥಾನಮಾನ, ಪ್ರತ್ಯೇಕ ಧ್ವಜ. ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ಕಾಶ್ಮೀರ ವಿಧಾನಸಭೆ ಅಂಗೀಕಾರ ನೀಡದೆ ಜಾರಿಗೆ ಬರಲಾರವು. ಕಾಶ್ಮೀರಿಗರೆಲ್ಲರೂ ಭಾರತೀಯರು, ಭಾರತೀಯರೆಲ್ಲರೂ ಕಾಶ್ಮೀರಿಗರಲ್ಲ. ಕಾಶ್ಮೀರೇತರರಿಗೆ ಅಲ್ಲಿ ಆಸ್ತಿ ಹಕ್ಕು ಇರುವುದಿಲ್ಲ, ಕಾಶ್ಮೀರಿಗರು ಆಸ್ತಿ ಮಾರುವುದಿದ್ದರೆ ತಮ್ಮೊಳಗೆ ಮಾತ್ರ ವ್ಯವಹಾರ ನಡೆಸಬೇಕು.

ಈ ಒಪ್ಪಂದದ ನಂತರ ಪಾಕ್‌ ಜತೆ ನಡೆದಿದ್ದ ಅಘೋಷಿತ ಯುದ್ಧದಲ್ಲಿ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್ ಪ್ರದೇಶವನ್ನು ಭಾರತ ಉಳಿಸಿಕೊಂಡಿತು ನಿಜ. ಆದರೆ ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಾಕಿಸ್ತಾನ ನಿಯಂತ್ರಣಕ್ಕೆ ಪಡೆಯಿತು. ಅದೇ ಇಂದಿನ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ). ಈ ಹಂತದಲ್ಲಿ ಭಾರತ ಮೊದಲ ಬಾರಿ ಎಡವಿತ್ತು. ಪ್ರಧಾನಿ ನೆಹರೂ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು 2ನೇ ಬಾರಿ ಎಡವಿದರು. ಕಾಶ್ಮೀರವನ್ನು ವಿವಾದಾತ್ಮಕ ಪ್ರದೇಶವೆಂದು ಪರಿಗಣಿಸಿದ ವಿಶ್ವಸಂಸ್ಥೆ, ಎರಡೂ ದೇಶಗಳು ತಾವು ಆಕ್ರಮಿಸಿಕೊಂಡಿರುವ ಭೂಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಪಡೆಯಬೇಕು, ಅಲ್ಲಿ ಜನಮತಗಣನೆ ನಡೆಸಬೇಕು ಎಂದು ಸೂಚಿಸಿತು.

ಜನಮತಗಣನೆಯನ್ನು ವಿರೋಧಿಸುತ್ತಲೇ ಬಂದಿರುವ ಭಾರತಕ್ಕೆ ಕಾಶ್ಮೀರದ ಜನಮನವನ್ನು ವಿಶ್ವದ ಮುಂದಿಡಲು ನ್ಯಾಯಬದ್ಧ ಚುನಾವಣೆಯ ಒಳ್ಳೆಯ ಅವಕಾಶ ಇತ್ತು. ಆದರೆ ಪ್ರಾರಂಭದಿಂದಲೂ ಅಲ್ಲಿ ಭಯ, ಅಕ್ರಮಗಳಿಂದ ಮುಕ್ತವಾದ ಚುನಾವಣೆ ನಡೆದೇ ಇಲ್ಲ. 1951ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶೇಖ್ ಅಬ್ದುಲ್ಲಾ ಅವರು ನೆಹರೂ ಜತೆಗೂಡಿ ನಡೆಸಿದ ‘ಅಕ್ರಮ ಚುನಾವಣೆ’ಯಲ್ಲಿ 75 ಸ್ಥಾನಗಳಲ್ಲಿ 73ನ್ನು ನ್ಯಾಷನಲ್ ಕಾನ್ಫರೆನ್ಸ್ ಗೆದ್ದಿತ್ತು. ನಂತರ ನೆಹರೂ ದೇಶದ್ರೋಹದ ಸಂಶಯದಿಂದ 1953ರಲ್ಲಿ ಶೇಖ್ ಅವರನ್ನು ಪದಚ್ಯುತಗೊಳಿಸಿ ಜೈಲಿಗೆ ತಳ್ಳಿ, ಅಲ್ಲಿ ಕೈಗೊಂಬೆ ಸರ್ಕಾರವನ್ನು ಪ್ರತಿಷ್ಠಾಪಿಸಿದರು. ಐದು ವರ್ಷಗಳ ನಂತರ ಬಿಡುಗಡೆಗೊಂಡ ಶೇಖ್ ತಮ್ಮ ಜೈಲುವಾಸದ ಅವಧಿಯಲ್ಲಿ ವಿಧಾನಸಭೆಯು ಕಾಶ್ಮೀರ ವಿಲೀನಕ್ಕೆ ಅಂಗೀಕಾರ ನೀಡಿದ್ದನ್ನು ಒಪ್ಪಿಕೊಳ್ಳಲಿಲ್ಲ. ಜನಮತಗಣನೆ ನಡೆಯಬೇಕೆಂದು ಪಟ್ಟು ಹಿಡಿದ ಅವರನ್ನು ಆರು ವರ್ಷಗಳ ಕಾಲ ಮತ್ತೆ ಸೆರೆಮನೆಗೆ ತಳ್ಳಲಾಯಿತು.

ಈ ನಡುವೆ, ಪಾಕಿಸ್ತಾನದ ಕಿರುಕುಳ ಮಿತಿಮೀರಿ 1965ರಲ್ಲಿ ಯುದ್ಧ ನಡೆದೇಹೋಯಿತು. ಮೂರೇ ವಾರಗಳಲ್ಲಿ ಪಾಕಿಸ್ತಾನ ಶರಣಾಗುವಂತೆ ಮಾಡಿದ ಆ ಯುದ್ಧದ ನಿಜವಾದ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ, ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ಮೃತರಾದರು. 1971ರಲ್ಲಿ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೊ ನಡುವೆ ಶಿಮ್ಲಾ ಒಪ್ಪಂದ ಕೂಡ ಮುರಿದುಬಿತ್ತು. ವಯಸ್ಸಿನಿಂದಾಗಿ ಮಾಗಿದ್ದ ಶೇಖ್ ಮೆತ್ತಗಾಗಿದ್ದರು. 1975ರಲ್ಲಿ ಶೇಖ್ ಮತ್ತು ಇಂದಿರಾ ನಡುವೆ ಒಪ್ಪಂದ ನಡೆದು ಅವರು ಮತ್ತೆ ಮುಖ್ಯಮಂತ್ರಿಯಾದರು. ಕಾಶ್ಮೀರದ ಹುಲಿಯನ್ನು ಇಂದಿರಾ ಮಣಿಸಿಬಿಟ್ಟಿದ್ದರು.

ತಂದೆಯ ಸಾವಿನ ನಂತರ 1983ರ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಫಾರೂಕ್ ಅಬ್ದುಲ್ಲಾ ಅವರನ್ನೂ ಇಂದಿರಾ ಸಹಿಸಿಕೊಳ್ಳಲಿಲ್ಲ. ಹತ್ಯೆಗೀಡಾಗುವ ಮೊದಲು ಇಂದಿರಾ ಮಾಡಿದ್ದ ಕೊನೆಯ ರಾಜಕೀಯ ಪ್ರಮಾದಗಳಲ್ಲಿ ಫಾರೂಕ್ ಸರ್ಕಾರವನ್ನು ಪದಚ್ಯುತಗೊಳಿಸಿದ್ದೂ ಒಂದು. ಇದರ ವಿರುದ್ಧ ಇಡೀ ದೇಶದಲ್ಲಿ ವಿರೋಧದ ಅಲೆ ಎದ್ದಿತ್ತು. ಆದರೆ ಇಂದಿರಾ ಹತ್ಯೆಯ ನಂತರ ಫಾರೂಕ್, ಕಾಂಗ್ರೆಸ್ ಜೊತೆ ಸೇರಿಯೇ ಸರ್ಕಾರವನ್ನು ರಚಿಸಿದ್ದು ಇನ್ನೊಂದು ವಿಪರ್ಯಾಸ.

ಕಾಶ್ಮೀರ ಕಣಿವೆ ಹೊತ್ತಿ ಉರಿಯಲಾರಂಭಿಸಿದ್ದು 1989ರ ನಂತರದ ದಿನಗಳಲ್ಲಿ. ಜಿಹಾದಿಗಳನ್ನು ಕಾಶ್ಮೀರದೊಳಕ್ಕೆ ನುಗ್ಗಿಸಿದ್ದ ಪಾಕಿಸ್ತಾನ, ಭಯೋತ್ಪಾದನೆಯ ಹೊಸ ಶಕೆಯನ್ನು ಪ್ರಾರಂಭಿಸಿತು. ಬಾಂಬ್‌ ಸ್ಫೋಟ, ಎನ್‌ಕೌಂಟರ್, ಮಾನಭಂಗಗಳು, ಕೊನೆಗೆ ಕಲ್ಲು ತೂರಾಟ... ಒಂದೆಡೆ ಉಗ್ರರ ದಾಳಿ, ಇನ್ನೊಂದೆಡೆ ಸೇನೆಯ ಅತಿರೇಕದ ನಡುವೆ ಸಿಕ್ಕಿದ ಕಾಶ್ಮೀರದ ಜನ ನಲುಗಿಹೋಗಿದ್ದರು.

ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಶಾಂತಿ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಲಾಹೋರ್ ಬಸ್ ಯಾತ್ರೆಯಿಂದ ಶುರುವಾದ ಈ ಪ್ರಯತ್ನಕ್ಕೆ ಪರ್ವೇಜ್ ಮುಷರಫ್‌ರ ಕಾರ್ಗಿಲ್ ದುಸ್ಸಾಹಸದಿಂದ ತಡೆ ಉಂಟಾದರೂ ಅದನ್ನು ಆಗ್ರಾ ಶೃಂಗಸಭೆಯವರೆಗೂ ಎಳೆದೊಯ್ದರು. ಕೊನೇ ಗಳಿಗೆಯಲ್ಲಿ ಆಂತರಿಕ ಒತ್ತಡಕ್ಕೆ ವಾಜಪೇಯಿ– ಮುಷರಫ್‌ ಇಬ್ಬರೂ ಮಣಿಯುವ ಮೂಲಕ ಆ ಶೃಂಗಸಭೆಯೂ ವಿಫಲವಾಯಿತು. ಯುಪಿಎ ಸರ್ಕಾರ 2ನೇ ಅವಧಿಯಲ್ಲಿ ಇನ್ನೊಂದು ಎಡವಟ್ಟು ಮಾಡಿತು. ಮುಖ್ಯಮಂತ್ರಿಯಾಗಿದ್ದ ಗುಲಾಂ ನಬಿ ಆಜಾದ್ ಅವರು ರಾಜ್ಯಪಾಲ ಎಸ್.ಕೆ.ಸಿನ್ಹಾ ಅವರ ಒತ್ತಡಕ್ಕೆ ಮಣಿದು, ಅಮರನಾಥ ಯಾತ್ರೆಯ ಸಮಯದಲ್ಲಿ ತಾತ್ಕಾಲಿಕ ಶೆಡ್ ಹಾಕುತ್ತಿದ್ದ ಪ್ರದೇಶವನ್ನು ಅಮರನಾಥ ದೇವಾಲಯ ಮಂಡಳಿಗೆ ಹಸ್ತಾಂತರಿಸಿಬಿಟ್ಟರು. ಈ ಮೂಲಕ ಜಮ್ಮುವಿನಲ್ಲಿನ ಹಿಂದೂ ಮತದಾರರನ್ನು ಓಲೈಸುವ ದೂರಾಲೋಚನೆಯೂ ಆಜಾದ್ ಅವರಿಗಿತ್ತು. ಇದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತು.

ಈ ಅಶಾಂತ ಸ್ಥಿತಿಯಲ್ಲಿಯೇ ನಡೆದ 2014ರ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಬಿಜೆಪಿ ಅಲ್ಲಿಯವರೆಗೆ ಯಾವ ಪಿಡಿಪಿ ಪಕ್ಷವನ್ನು ಉಗ್ರಗಾಮಿಗಳ ಪರ ಎಂದು ಆರೋಪಿಸುತ್ತಿತ್ತೋ, ಅದೇ ಪಕ್ಷದ ಜತೆಗೂಡಿ ಸರ್ಕಾರ ರಚಿಸಿತು. ಆ ಮೈತ್ರಿ ಮುರಿದುಬಿತ್ತು. ಈಗ ದೈತ್ಯ ಬಹುಮತದ ಬೆನ್ನೇರಿ ಕಾಶ್ಮೀರದಲ್ಲಿ ಇನ್ನೊಂದು ಪ್ರಯೋಗಕ್ಕೆ ಸರ್ಕಾರ ಹೊರಟಿದೆ. ಕಾಶ್ಮೀರ ‘ಭೂಸ್ವರ್ಗ’ ಮತ್ತು ‘ಭೂ ನರಕ’ಗಳ ನಡುವೆ ತೊಯ್ದಾಡುತ್ತಿದೆ.

‘ಕಾಶ್ಮೀರದ ದುರ್ದಿನಗಳು ಇವು, ವಿದೇಶಿ ದಾಳಿಕೋರರು ಕೇವಲ ಸುಡುವ, ಸುಲಿಯುವಂತಹ ಬಲಪ್ರಯೋಗದಲ್ಲಿ ತೊಡಗಿದ್ದಾರೆ, ನನ್ನ ಕಾಶ್ಮೀರ ಆಧ್ಯಾತ್ಮಿಕ ಬಲಕ್ಕೆ ಒಲಿಯಬಹುದು, ಸೇನೆಯ ಬಲಕ್ಕಲ್ಲ...’ ಎಂದು 12ನೇ ಶತಮಾನದ ಕಾಶ್ಮೀರದ ಕವಿ ಕಲ್ಹಣ ಹೇಳಿದ್ದ. ಆ ದುರ್ದಿನಗಳು ಇನ್ನೂ ಕೊನೆಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT