ಶನಿವಾರ, ಅಕ್ಟೋಬರ್ 19, 2019
22 °C
370ನೇ ವಿಧಿ ರದ್ದತಿ ಸಮರ್ಥಿಸಿಕೊಂಡ ಪ್ರಧಾನಿ * ಪವಾರ್ ಹೇಳಿಕೆಗೆ ತಿರುಗೇಟು

‘ಕಾಶ್ಮೀರಿಗಳ ರಕ್ಷಣೆಗಾಗಿ ದೃಢನಿರ್ಧಾರ’

Published:
Updated:
Prajavani

ನಾಸಿಕ್ (ಪಿಟಿಐ): ‘ಕಾಶ್ಮೀರಿ ಜನರನ್ನು ಹಿಂಸಾಚಾರ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವರ್ತುಲದಿಂದ ರಕ್ಷಿಸುವ ಸಲುವಾಗಿ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರ ಮಾಡಲಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಈ ಸಲುವಾಗಿ ನಾಸಿಕ್‌ನಲ್ಲಿ ಗುರುವಾರ ರಾಜ್ಯ ಬಿಜೆಪಿ ಘಟಕವು ಆಯೋಜಿಸಿದ್ದ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

‘ಈ ಹಿಂದಿನ ಸರ್ಕಾರಗಳ ತಪ್ಪು ನೀತಿಗಳ ಕಾರಣದಿಂದ ಕಾಶ್ಮೀರಿ ಜನರು ಈ ವರ್ತುಲದಲ್ಲಿ ಸಿಲುಕಿ 40 ವರ್ಷಗಳಿಂದ ನರಳುತ್ತಿದ್ದರು. ಈ ಅವಧಿಯಲ್ಲಿ 42,000 ಜನರು ಬಲಿಯಾಗಿದ್ದಾರೆ. ಹೀಗಾಗಿ 370ನೇ ವಿಧಿಯನ್ನು ರದ್ದುಮಾಡಬೇಕು ಎಂಬುದು ದೇಶದ 130 ಕೋಟಿ ಜನರ ಆಶಯವಾಗಿತ್ತು’ ಎಂದು ಅವರು ಹೇಳಿದ್ದಾರೆ.

ವಿರೋಧಕ್ಕೆ ಟೀಕೆ: 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ವ್ಯಕ್ತವಾಗಿದ್ದ ವಿರೋಧವನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ.

‘ಸರ್ಕಾರದ ಈ ನಿರ್ಧಾರದ ಬೆಂಬಲಕ್ಕೆ ಇಡೀ ದೇಶವೇ ನಿಂತಿತ್ತು. ಆದರೆ ವಿರೋಧ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ಮಾತ್ರ ನಮ್ಮ ಈ ನಿರ್ಧಾರವನ್ನು ವಿರೋಧಿಸಿದವು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಮ್ಮ ಈ ನಿರ್ಧಾರವನ್ನು ಈಗಲೂ ವಿರೋಧಿಸುತ್ತಿವೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಗೊಂದಲದಲ್ಲಿ ಇರುವುದು ಗೊತ್ತೇ ಇದೆ. ಆದರೆ ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ಈ ಗೊಂದಲ ಇರಬಾರದಿತ್ತು. ಅವರು ಕೇವಲ ಕೆಲವು ಮತಗಳನ್ನು ಸೆಳೆಯುವ ಕಾರಣಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ’ ಎಂದು ಮೋದಿ ಟೀಕಿಸಿದ್ದಾರೆ.

ಫಡಣವೀಸ್ ಮತ್ತೆ ಮುಖ್ಯಮಂತ್ರಿ

‘ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಇರಲೇ ಇಲ್ಲ. ಹೀಗಾಗಿಯೇ ನಿರೀಕ್ಷಿತ ಮಟ್ಟದಲ್ಲಿ ರಾಜ್ಯವು ಪ್ರಗತಿ ಸಾಧಿಸಿರಲಿಲ್ಲ. ಆದರೆ ಬಹುಮತದ ಕೊರತೆ ಇದ್ದರೂ ದೇವೇಂದ್ರ ಫಡಣವೀಸ್ ಅವರು ಸ್ಥಿರ ಸರ್ಕಾರ ನೀಡಿದ್ದಾರೆ’ ಎಂದು ಮೋದಿ ಹೊಗಳಿದ್ದಾರೆ.

‘ಅಭಿವೃದ್ಧಿ ಸಾಧಿಸಿದ್ದರಿಂದಲೇ ಗುಜರಾತ್‌ನಲ್ಲಿ ನಾನು ಮತ್ತೆ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದೆ. ದೇವೇಂದ್ರ ಫಡಣವೀಸ್ ಸಹ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಮುಂದಿನ ಬಾರಿಯೂ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ಬುಲೆಟ್‌ ನಿರೋಧಕ ಜಾಕೆಟ್‌ ರಫ್ತು

ಯುಪಿಎ ಸರ್ಕಾರ ಸೈನಿಕರಿಗೆ ಬುಲೆಟ್‌ ನಿರೋಧಕ ಜಾಕೆಟ್‌ಗಳನ್ನು ನೀಡಿರಲಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ತಯಾರಾದ ಬುಲೆಟ್‌ ನಿರೋಧಕ ಜಾಕೆಟ್‌ಗಳು 100 ದೇಶಗಳಿಗೆ ರಫ್ತಾಗುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ನಮ್ಮ ಸೈನಿಕರಿಗೆ 1.86 ಲಕ್ಷ ಬುಲೆಟ್‌ ನಿರೋಧಕ ಜಾಕೆಟ್‌ಗಳು ಬೇಕಿದ್ದವು. 2009ರಲ್ಲೇ ಅದಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. 2014 ಬಂದಾಗಲೂ ಒಂದೂ ಜಾಕೆಟ್ ಪೂರೈಕೆಯಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಭಾರತವೇ ಅಂತರರಾಷ್ಟ್ರೀಯ ಗುಣಮಟ್ಟದ ಬುಲೆಟ್‌ ನಿರೋಧಕ ಜಾಕೆಟ್‌ಗಳನ್ನು ತಯಾರಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಅಯೋಧ್ಯೆ ವಿಚಾರದಲ್ಲಿ ನ್ಯಾಯಾಂಗವನ್ನು ಗೌರವಿಸಿ’

ನ್ಯಾಯಾಲಯದ ತೀರ್ಪಿಗೆ ಕಾಯದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂದು ಹೇಳಿಕೆ ನೀಡುವವರನ್ನು ಪ್ರಧಾನಿ ಟೀಕಿಸಿದ್ದಾರೆ.

‘ಈ ಮಾತಿನ ಶೂರರು ಮತ್ತು ಬಾಯಿಬಡುಕರನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಎಲ್ಲರೂ ನ್ಯಾಯಾಂಗವನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಮೋದಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರವಷ್ಟೇ ಆಗ್ರಹಿಸಿದ್ದರು.

Post Comments (+)