ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ| ಮೋಸ್ಟ್ ವಾಂಟೆಡ್ ಹಿಜ್ಬುಲ್ ಕಮಾಂಡರ್ ರಿಯಾಜ್ ನೈಕೂ ಹತ್ಯೆ

Last Updated 6 ಮೇ 2020, 9:08 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಬುಧವಾರ ನಡೆದ ಎನ್‍ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ನೈಕೂನ್ನು ಭದ್ರತಾ ಪಡೆಹತ್ಯೆ ಮಾಡಿದೆ.

ಬುರ್ಹಾನ್ ವಾನಿ ನಂತರ ಹಿಜ್ಬುಲ್ ಸಂಘಟನೆಯ ನಾಯಕತ್ವ ವಹಿಸಿದ್ದ ನೈಕೂ ಕಳೆದ ವರ್ಷದಿಂದ ತನ್ನ ಸಂಘಟನೆಗೆ ಯುವಕರನ್ನು ಸೇರಿಸಲು ಹಲವಾರು ಅಪಹರಣ ಕೃತ್ಯಗಳನ್ನು ನಡೆಸಿದ್ದನು.ಭದ್ರತಾ ಪಡೆ ನಡೆಸಿದ ಈ ಎನ್‍ಕೌಂಟರ್‌ನಲ್ಲಿ ನೈಕೂ ಜತೆ ಇನ್ನೊಬ್ಬ ಉಗ್ರ ಜುನೈದ್ ಸೆಹರೈ ಕೂಡಾ ಹತನಾಗಿದ್ದಾನೆ. ಜುನೈದ್ ತಹರೀಕ್ ಎ ಹುರಿಯತ್ ಸಂಘಟನೆಯ ಮುಖ್ಯಸ್ಥ ಅಶ್ರಫ್ ಸೆಹ್ರಾ ಮಗ ಮತ್ತು ಹುರಿಯತ್ ಮುಖ್ಯಸ್ಥ ಸಯೀದ್ ಅಲಿ ಗಿಲಾನಿಯ ಆಪ್ತ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ನೈಕೂ ಪುಲ್ವಾಮದ ಬೈಗ್‍‌ಪೊರ ಗ್ರಾಮದಲ್ಲಿರುವ ಅಮ್ಮನನ್ನು ಭೇಟಿ ಮಾಡಲು ಬಂದಿದ್ದನು. ಮಂಗಳವಾರ ಸಂಜೆಯೇ ಭದ್ರತಾಪಡೆ ಅಲ್ಲಿ ಉಗ್ರರಿಗಾಗಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿತ್ತು.

2016 ಜುಲೈ8ರಂದು ಅನಂತನಾಗ್ ಜಿಲ್ಲೆಯ ಕೊಕರ್‌ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಯ ಗುಂಡಿನ ಚಕಮಕಿಯಲ್ಲಿ ಬುರ್ಹಾನ್ ವಾನಿ ಹತ್ಯೆಯಾಗಿತ್ತು. ಆನಂತರ ಹಿಜ್ಬುಲ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ನೈಕೂತಲೆಗೆ ₹12 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಉಗ್ರ ಸಂಘಟನೆ ಸೇರುವ ಮುನ್ನ ನೈಕೂ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡಿದ್ದನು. ಗುಲಾಬಿ ಹೂಗಳ ಚಿತ್ರ ಬಿಡಿಸುವ ಹವ್ಯಾಸವಿದ್ದ ನೈಕೂ 33ನೇ ವಯಸ್ಸಿನಲ್ಲಿ ಉಗ್ರ ಸಂಘಟನೆ ಸೇರಿದ್ದನು.

ಕಾಶ್ಮೀರದಲ್ಲಿ ಮುಂಜಾಗ್ರತಾ ಕ್ರಮವಾಗಿ 2ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 2019 ಆಗಸ್ಟ್ 5 ರಿಂದ ಇಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ್ದು ಜನವರಿಯಲ್ಲಿ 2ಜಿ ಇಂಟರ್ನೆಟ್ ಸೇವೆ ಮಾತ್ರ ನೀಡಲಾಗಿತ್ತು.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಕರ್ನಲ್ ಅಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್ ಕುಮಾರ್, ಲಾನ್ಸ್ ನಾಯಕ್ ದಿನೇಶ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಗೀರ್ ಪಠಾಣ್ ಅಲಿಯಾಸ್ ಖಾಜಿ ಹುತಾತ್ಮರಾದ ಬೆನ್ನಲ್ಲೇ ಉಗ್ರ ನೈಕೂನ್ನು ಹತ್ಯೆ ಮಾಡಲಾಗಿದೆ.

ಪುಲ್ವಾಮ ಜಿಲ್ಲೆಯ ಪಂಪೋರ್‌ನ ಶಾರ್ ಪ್ರದೇಶದಲ್ಲಿ ಇನ್ನೊಂದು ಕಾರ್ಯಾಚರಣೆ ನಡೆದು ಬರುತ್ತಿದೆ.ಮಂಗಳವಾರ ಸಂಜೆ ಮತ್ತು ಬುಧವಾರ ಭದ್ರತಾ ಪಡೆ ಈ ಕಾರ್ಯಾಚರಣೆ ನಡೆಸಿದೆ. ಶಾರ್ ಎನ್‍ಕೌಂಟರ್‌ನಲ್ಲಿ ಇಲ್ಲಿಯವರೆಗೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಅಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಂಗಳವಾರ ಸ್ಥಗಿತಗೊಂಡಿದ್ದಕಾರ್ಯಾಚರಣೆ ಬುಧವಾರ ಪುನರಾಂಭವಾಗಿದ್ದು ಅಲ್ಲಿರುವ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT