ಸೋಮವಾರ, ಮಾರ್ಚ್ 30, 2020
19 °C

ಮಧ್ಯಪ್ರದೇಶ: ಕಾಂಗ್ರೆಸ್‌ ‘ಸಂಪರ್ಕಕ್ಕೆ ಸಿಗದ’ ಸಿಂಧಿಯಾ, 17 ಶಾಸಕರು

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯ ಪ್ರದೇಶದ ರಾಜಕಾರಣ ದಿನೇ ದಿನೇ ಕುತೂಹಲಕರ ತಿರುವು ಪಡೆಯುತ್ತಿದೆ. ರಾಜ್ಯಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗರಾಗಿರುವ 17 ಶಾಸಕರು ‘ಸಂಪರ್ಕ’ಕ್ಕೆ ಸಿಗದೆ ಇರುವುದು ಪಕ್ಷಕ್ಕೆ ಆತಂಕ ಉಂಟು ಮಾಡಿದೆ.

ಕಾಂಗ್ರೆಸ್‌ನ ಬಣಗಳ ನಡುವೆ ಕಚ್ಚಾಟವಿದೆ. ಅದರ ನಡುವಲ್ಲಿಯೇ, ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ವರದಿಯು ಕಾಂಗ್ರೆಸ್‌ ಹೈಕಮಾಂಡ್‌ನ ಕಳವಳಕ್ಕೆ ಕಾರಣವಾಗಿದೆ. 

ಸಿಂಧಿಯಾ ಅವರು ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ. ಅವರ ಬೆಂಬಲಿಗರು ಎನ್ನಲಾದ ಆರು ಮಂದಿ ಸಚಿವರ ಮೊಬೈಲ್‌ ಫೋನ್‌ಗಳು ಸ್ವಿಚ್ಡ್‌ ಆಫ್‌ ಆಗಿವೆ. ಆದರೆ, ‘ಅಂಥ ಗಂಭೀರವಾದ ಸ್ಥಿತಿ ಇಲ್ಲ’ ಎಂದು ಕಾಂಗ್ರೆಸ್‌ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯ ಹಿಂದೆಯೇ ನವದೆಹಲಿಯಲ್ಲಿದ್ದ ಮುಖ್ಯಮಂತ್ರಿ ಕಮಲನಾಥ್‌ ಪ್ರವಾಸ ಮೊಟಕುಗೊಳಿಸಿ ರಾಜಧಾನಿಗೆ ಹಿಂದಿರುಗಿದ್ದಾರೆ.

ಪ್ರಿಯಾಂಕಾ ಕಣಕ್ಕಿಳಿಸಲು ಆಗ್ರಹ: ರಾಜ್ಯಸಭೆಗೆ ಮಾರ್ಚ್‌ 26ರಂದು ಚುನಾವಣೆ ನಡೆಯಲಿದ್ದು, ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್‌ನ ಒಂದು ವರ್ಗ ಆಗ್ರಹಪಡಿಸಿದೆ.

ರಾಜ್ಯಸಭೆಯ ಮೂರು ಸ್ಥಾನಗಳು ಏಪ್ರಿಲ್‌ನಲ್ಲಿ ತೆರವಾಗಲಿವೆ. ವಿಧಾನಸಭೆಯ ಸದಸ್ಯ ಬಲ 230. 114 ಸದಸ್ಯ ಬಲಹೊಂದಿರುವ ಕಾಂಗ್ರೆಸ್, 107 ಶಾಸಕರಿರುವ ಬಿಜೆಪಿ ತಲಾ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ಮೂರನೇ ಸ್ಥಾನಕ್ಕೆ ತೀವ್ರ ಸ್ಪರ್ಧೆ ನಡೆಯಬಹುದು.

ಸೋನಿಯಾ–ಕಮಲನಾಥ್‌ ಭೇಟಿ: ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಮುಖ್ಯಮಂತ್ರಿ ಕಮಲನಾಥ್ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಸೋಮವಾರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು.

ಅಲ್ಲದೆ, ಸೋನಿಯಾ ಅವರು ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್ ಹೂಡಾ ಮತ್ತು ಜಮ್ಮು–ಕಾಶ್ಮೀರದ ಪಕ್ಷದ ಉಸ್ತುವಾರಿ ಅಂಬಿಕಾ ಸೋನಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಈ ವಿಷಯ ಚರ್ಚಿಸಿದರು.

ಪಕ್ಷದಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳನ್ನು ಕುರಿತು ಕಮಲನಾಥ್‌ ಅವರು ತಮ್ಮ ಭೇಟಿಯ ವೇಳೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು