ಶುಕ್ರವಾರ, ಜೂನ್ 5, 2020
27 °C

ಸಿಬಿಐ ಮೇಲೆ ಬಿಜೆಪಿ ಸವಾರಿ? ಬಿಜೆಪಿ ನಾಯಕರ ಫೋನ್ ಸಂಭಾಷಣೆ ಇದಕ್ಕೆ ಸಾಕ್ಷ್ಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋಲ್ಕತ್ತ ಪೊಲೀಸ್ ಆಯುಕ್ತರ ವಿರುದ್ಧ ಸಿಬಿಐ ವಿಚಾರಣೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆಯೇ ಬಿಜೆಪಿಯ ಹಿರಿಯ ನಾಯಕರಿಬ್ಬರು ನಡೆಸಿದ ಫೋನ್ ಸಂಭಾಷಣೆಯ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದಿ ವೈರ್ ಪ್ರಕಟಿಸಿದ ವರದಿ ಹೀಗಿದೆ.

ಬಿಜೆಪಿ ನಾಯಕರಾದ ಕೈಲಾಶ್ ವಿಜಯ್‍ವರ್ಗಿಯ ಮತ್ತು ಮುಕುಲ್ ರಾಯ್ ಅವರು ನಡೆಸಿದ ಫೋನ್ ಸಂಭಾಷಣೆ ಇದಾಗಿದೆ ಎಂದು ಹೇಳುತ್ತಿದ್ದು, ಇದರಲ್ಲಿನ ಸಂಭಾಷಣೆಗಳು ಕೇಂದ್ರೀಯ ತನಿಖಾ ಸಂಸ್ಥೆಯ ಸ್ವಾಯತ್ತತೆ ಮೇಲೆ  ಬಿಜೆಪಿ ಸವಾರಿ ಮಾಡುತ್ತಿರುವುದಕ್ಕೆ ಸಾಕ್ಷ್ಯ ಎಂಬಂತಿದೆ.

ಈ ಬಗ್ಗೆ ಬಂಗಾಳಿ ಪತ್ರಿಕೆ ಆನಂದ ಬಜಾರ್ ಪತ್ರಿಕಾ  2018 ಅಕ್ಟೋಬರ್‌ನಲ್ಲಿ ಸುದ್ದಿ ಪ್ರಕಟಿಸಿತ್ತು. ಆಡಿಯೊ ತುಣುಕುನಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್,  ಬಂಗಾಳದ ಉಸ್ತುವಾರಿ ವಹಿಸಿರುವ ಬಿಜೆಪಿ ನಾಯಕ ಕೈಲಾಶ್ ವಿಜಯ್‍ವರ್ಗಿಯ ಅವರಲ್ಲಿ ಮಾತನಾಡುತ್ತಾ, ನಾಲ್ವರು ಐಪಿಎಸ್ ಅಧಿಕಾರಿಗಳ ವಿರುದ್ಧ ಕಾರ್ಯವೆಸಗಲು ಬಂಗಾಳಕ್ಕೆ ಎರಡು ಕೇಂದ್ರ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿ ಎಂದಿದ್ದಾರೆ.

ಈ ಎಲ್ಲ  ಸಂಭಾಷಣೆಗಳು ಹಿಂದಿಯಲ್ಲಿ ನಡೆದಿದ್ದು ಅದು ಈ ರೀತಿ ಇದೆ
ಮೊದಲನೆಯಾಗಿ ವಿಜಯ್‍ವರ್ಗಿಯ ಅವರು ಬಂಗಾಳದ ಮತುವಾ ಸಮುದಾಯದಲ್ಲಿ ಕಾರ್ಯವೆಸಗಲು ಬಯಸುವ ಹೊಸ ನಾಯಕರ ಬಗ್ಗೆ ವಿಚಾರಿಸುತ್ತಾರೆ.
ಆನಂತರ ವಿಜಯ್‍ವರ್ಗಿಯ ರಾಯ್ ಅವರಲ್ಲಿ, ತಾನು ಶೀಘ್ರದಲ್ಲೇ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇನೆ. ಅಧ್ಯಕ್ಷರಲ್ಲಿ ಏನಾದರೂ ಹೇಳುವುದು ಇದೆಯೇ? ಎಂದು ಕೇಳುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸಿದ ರಾಯ್, ನಾಲ್ಕು ಐಪಿಎಸ್ ಅಧಿಕಾರಿಗಳ ಮೇಲೆ  ನಿಗಾ ಇಡಲು ಸಿಬಿಐಗೆ ಸಾಧ್ಯವೇ? ಇದು ಬಂಗಾಳದ ಐಪಿಎಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸುತ್ತದೆ ಎಂದು ಹೇಳುತ್ತಾರೆ. ಇಲ್ಲಿ ರಾಯ್ ಐಪಿಎಸ್ ಅಧಿಕಾರಿಗಳ ಹೆಸರನ್ನು ಹೇಳಲಿಲ್ಲ.
ಈ ಫೋನ್ ಸಂಭಾಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕೂಡಲೇ ಅಕ್ಟೋಬರ್ 2018ರಲ್ಲಿ ತಮ್ಮ ಫೋನ್ ಸಂಭಾಷಣೆಗಳನ್ನು ಕದ್ದಾಲಿಸಲಾಗುತ್ತಿವೆ ಎಂದು ರಾಯ್ , ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸಿದ್ದರು.

ಅಂದಹಾಗೆ ಸಿಬಿಐ ತನಿಖೆ ನಡೆಸುತ್ತಿರುವ ಚಿಟ್ ಫಂಡ್ ಹಗರಣದಲ್ಲಿ ರಾಯ್ ಅವರು ಪ್ರಧಾನ ಆರೋಪಿಯಾಗಿದ್ದಾರೆ. ರಾಯ್ ಈ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕರಾಗಿದ್ದು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕೇಂದ್ರ ರೈಲ್ವೆ ಸಚಿವರಾಗಿದ್ದರು. 2017ರಲ್ಲಿ ಅವರು ಬಿಜೆಪಿಗೆ ಸೇರಿದ್ದರು.
ಸಂಭಾಷಣೆಯ ಆಯ್ದ ಭಾಗಗಳು ಹೀಗಿವೆ
ವಿಜಯ್‍ವರ್ಗಿಯ:  ನಾನು ಅಧ್ಯಕ್ಷರ ಮನೆಗೆ ಹೋಗುತ್ತಿದ್ದೇನೆ, ನಾನು ಯಾವುದರ ಬಗ್ಗೆ ಮಾತನಾಡಲಿ? 
ರಾಯ್ : ಸದ್ಯ, ನಾಲ್ಕು ಐಪಿಎಸ್ ಅಧಿಕಾರಿಗಳ ಮೇಲೆ ನಿಗಾ ಇರಿಸಬೇಕು. ಸಿಬಿಐ ಅವರ ಮೇಲೆ ಕಣ್ಣಿಟ್ಟರೆ, ಐಪಿಎಸ್ ಅಧಿಕಾರಿಗಳು ಹೆದರುತ್ತಾರೆ.
ಅದಲ್ಲದೆ  ಆದಾಯ ತೆರಿಗೆ ಇಲಾಖೆಗೆ ನಿರ್ದೇಶಕ (ತನಿಖೆ)  ಮತ್ತು ಹೆಚ್ಚುವರಿ ನಿರ್ದೇಶಕ (ತನಿಖೆ) - ಹೀಗೆ ಎರಡು ಅಧಿಕಾರಿಗಳನ್ನು ಬಂಗಾಳಕ್ಕೆ ವರ್ಗಾವಣೆ ಮಾಡಲು ಹೇಳಿ. ನನ್ನ ಮನಸ್ಸಿನಲ್ಲಿ ಎರಡು ಹೆಸರಿದೆ. ನಾನು ಆ ಹೆಸರನ್ನು ನಿಮಗೆ ತಿಳಿಸುವೆ.

ನಾನು ಸಂಜಯ್ ಸಿಂಗ್ ಜತೆ ಆಪ್ತವಾಗಿದ್ದೇನೆ
ವಿಜಯ್‍ವರ್ಗಿಯ: ಸಂಜಯ್ ಸಿಂಗ್ ಯಾರು ? 
ರಾಯ್:  ನಿಮ್ಮನ್ನು ಭೇಟಿ ಮಾಡಲಿರುವ ಸಿಎ
ವಿಜಯ್‍ವರ್ಗಿಯ: ಆ ಎರಡು ಹೆಸರುಗಳನ್ನು ಮತ್ತು ಅವರು ಈಗ ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ? ರಾಜ್ಯಕ್ಕೆ ಕರೆ ತರುವಾಗ ಯಾವ ಹುದ್ದೆ ನೀಡಬೇಕು ಎಂಬುದರ ಬಗ್ಗೆ  ನನಗೆ ಎಸ್‍ಎಂಎಸ್ ಮಾಡಿ.
ಈ ಆಡಿಯೊ ತುಣುಕಿನ ಬಗ್ಗೆ ಹೆಚ್ಚಿನ ವಿವರಗಳನ್ನು ದೃಡೀಕರಿಸಲು ದಿ ವೈರ್ ನಿಂದ ಸಾಧ್ಯವಾಗಿಲ್ಲ.
ಆಡಿಯೊ ನಿಜವಾಗಿದ್ದರೆ, ಬಿಜೆಪಿ ಸಿಬಿಐ ಮೇಲೆ ತಮ್ಮ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷ್ಯವಾಗಲಿದೆ.

ಆಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ನ್ಯಾಯವಾದಿ ಪ್ರಶಾಂತ್ ಭೂಷಣ್ ಈ ರೀತಿ  ಟ್ವೀಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು