ನವದೆಹಲಿ: ‘ಜಾತಿಯ ಕಾರಣಕ್ಕೆ ನನ್ನ ಮಗಳನ್ನುಹಿರಿಯ ವಿದ್ಯಾರ್ಥಿಗಳು ಹೀನಾಯವಾಗಿ ನಿಂದಿಸಿದ್ದೇ ಅವಳ ಆತ್ಮಹತ್ಯೆಗೆ ಕಾರಣ’ ಎಂದು ಮುಂಬೈನ ಬಿ.ವೈ.ಎಲ್.ನಾಯರ್ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿನಿಯ ತಾಯಿ ನೀಡಿರುವ ಹೇಳಿಕೆ ದೇಶದ ಗಮನ ಸೆಳೆದಿದೆ. ನಾಯರ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಗೈನಕಾಲಜಿ (ಸ್ತ್ರೀರೋಗ) ಅಭ್ಯಾಸ ಮಾಡುತ್ತಿದ್ದ ಪಾಯಲ್ ಸಲ್ಮಾನ್ ತಡ್ವಿ ಅವರ ಶವ ಮೇ 22ರಂದು ಅವರ ಕೊಠಡಿಯಲ್ಲಿ ಪತ್ತೆಯಾಗಿತ್ತು.
ತಡ್ವಿಗೆ ಜಾತಿ ನಿಂದನೆಯಿಂದ ಮಾನಸಿಕ ಕಿರುಕುಳ ಕೊಡುತ್ತಿದ್ದ ಆರೋಪ ಎದುರಿಸುತ್ತಿರುವ ಹೇಮಾ ಅಹುಜಾ, ಭಕ್ತಿ ಮೆಹಾರ್ ಮತ್ತು ಅಂಕಿತಾ ಖಂಡಿಲ್‌ವಾಲ್ ಇದೀಗ ತಲೆ ಮರೆಸಿಕೊಂಡಿದ್ದಾರೆ. ಮೂವರು ಆರೋಪಿಗಳ ವೈದ್ಯಕೀಯ ಸದಸ್ಯತ್ವವನ್ನು ಮಹಾರಾಷ್ಟ್ರದ ವೈದ್ಯರ ಒಕ್ಕೂಟ ರದ್ದುಪಡಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಾತಿನಿಂದನೆ ಮಾಡಿರುವ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರಿಗೆ ಜಾಮೀನು ಸಿಗುವುದಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ದೀಪಕ್ ಕುಂದಲ್ ಹೇಳಿದ್ದಾರೆ.
‘ನನ್ನ ಮಗಳಿಗೆ ಜಾತಿನಿಂದನೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಿದ್ದೆವು. ಅದರೆ ಏನೂ ಪ್ರಯೋಜನವಾಗಿಲ್ಲ. ನನಗೆ ಯಾವಾಗ ಫೋನ್ ಮಾಡಿದರೂ ಮಗಳು ಈ ಮೂವರೂ ಜಾತಿಯ ಕಾರಣಕ್ಕೆ ಕೊಡುತ್ತಿದ್ದ ತೊಂದರೆಯ ಬಗ್ಗೆ ನೊಂದು ಮಾತನಾಡುತ್ತಿದ್ದಳು. ಅವಳ ಸಾವು ವ್ಯರ್ಥವಾಗಬಾರದು. ನಮಗೆ ನ್ಯಾಯಬೇಕು. ನನ್ನ ಮಗಳಿಗೆ ಆದ ಗತಿ ಬೇರೆ ಯಾರಿಗೂ ಆಗಬಾರದು’ ಎಂದು ಪಾಯಲ್ ತಾಯಿ ಅಬಿದಾ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.