ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್, ಮತದಾರರ ಗುರುತಿನ ಚೀಟಿ ಜೋಡಣೆಗೆ ಕಾನೂನು ರೂಪಿಸಲು ಕೇಂದ್ರ ಸಿದ್ಧತೆ

Last Updated 25 ಜನವರಿ 2020, 10:38 IST
ಅಕ್ಷರ ಗಾತ್ರ

ನವದೆಹಲಿ:ಆಧಾರ್ ಮತ್ತುಮತದಾರರ ಗುರುತಿನ ಚೀಟಿ ಜೋಡಣೆಗೆ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಕಾನೂನು ಸಚಿವಾಲಯ ಸಂಪುಟ ಟಿಪ್ಪಣಿ ಸಿದ್ಧಪಡಿಸುತ್ತಿದೆಎಂದು ಮೂಲಗಳು ತಿಳಿಸಿವೆ.

ಮತದಾರರ ಗುರುತಿನ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರ ಮತ್ತು ಹಾಲಿ ಮತದಾರರ ಆಧಾರ್ ವಿವರ ಸಂಗ್ರಹಿಸಲು ಶಾಸನಬದ್ಧ ಅಧಿಕಾರ ನೀಡಬೇಕು ಎಂದು ಚುನಾವಣಾ ಆಯೋಗ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಪರಿಗಣಿಸಿ ‘ಜನಪ್ರತಿನಿಧಿಗಳ ಕಾಯ್ದೆ’ಗೆ ತಿದ್ದುಪಡಿ ತರುವ ಬಗ್ಗೆ ಕ್ರಮ ಕೈಗೊಳ್ಳಲು ಸಚಿವಾಲಯ ಮುಂದಾಗಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಮಿತಿಗೆ ಸಂಪುಟ ಟಿಪ್ಪಣಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಜೋಡಣೆ ಮಾಡಬೇಕಿದ್ದರೆ ‘ಜನಪ್ರತಿನಿಧಿಗಳ ಕಾಯ್ದೆ’ಗೆ ತಿದ್ದುಪಡಿ ತರಬೇಕಿದೆ. ಹಾಗೆಯೇ, ಗೋಪ್ಯತೆ ಕಾಪಾಡುವ ಬಗ್ಗೆ ಖಾತರಿಯನ್ನೂ ನೀಡಬೇಕಾಗುತ್ತದೆ.

‘ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಅವಕಾಶವಾಗುವಂತೆ ಕಾನೂನಿನಲ್ಲಿ ಬದಲಾವಣೆ ತನ್ನಿ’ ಎಂದು ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ 2019ರ ಆಗಸ್ಟ್‌ನಲ್ಲಿ ಪತ್ರ ಬರೆದಿತ್ತು.ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವುದನ್ನು ತಪ್ಪಿಸಲು ಇದು ಅನಿವಾರ್ಯ ಎಂದೂ ಆಯೋಗ ಹೇಳಿತ್ತು.

‘ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವವರು, ಅದರ ಜತೆಯಲ್ಲೇ ಆಧಾರ್ ಸಂಖ್ಯೆಯನ್ನೂ ನೀಡಬೇಕು. ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿರುವವರೂ ಆಧಾರ್ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕು. ಇದಕ್ಕಾಗಿ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಆಯೋಗವು ತನ್ನ ಪತ್ರದಲ್ಲಿ ವಿವರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT