ಶನಿವಾರ, ಏಪ್ರಿಲ್ 4, 2020
19 °C
ಮೆಹಬೂಬಾ ಕುಟುಂಬ ಸದಸ್ಯರ ಜತೆ ಫಾರೂಕ್‌ ಅಬ್ದುಲ್ಲಾ ಮಾತುಕತೆ

ಕಾಶ್ಮೀರ ರಾಜಕಾರಣ: ಹೊಸ ಸಮೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು, ರಾಜಕೀಯವಾಗಿ ತಮ್ಮ ವೈರಿ ಎನಿಸಿಕೊಂಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಕುಟುಂಬದ ಸದಸ್ಯರನ್ನು ಈಚೆಗೆ ಭೇಟಿಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಉದ್ಭವಿಸಿರುವ ಸನ್ನಿವೇಶವನ್ನು ಎದುರಿಸಲು ಎರಡೂ ಪಕ್ಷಗಳು ಜಂಟಿಯಾಗಿ ಯೋಜನೆ ರೂಪಿಸುತ್ತಿವೆ ಎಂದು ಬಲವಾಗಿ ನಂಬಲಾಗುತ್ತಿದೆ.

ಏಳು ತಿಂಗಳ ಬಂಧನದದಿಂದ ಇತ್ತೀಚೆಗಷ್ಟೇ ಬಿಡುಗಡೆ ಹೊಂದಿರುವ ಫಾರೂಕ್‌ ಅವರು ಮಾರ್ಚ್‌ 13ರಂದು ಮೆಹಬೂಬಾ ಅವರ ಮನೆಗೆ ತೆರಳಿ ಅವರ ತಾಯಿ ಗುಲ್ಷನ್‌ ಆರಾ ಹಾಗೂ ಪುತ್ರಿ ಇಲ್ತಿಜಾ ಮುಫ್ತಿ ಅವರನ್ನು ಭೇಟಿಮಾಡಿದ್ದರು. ಇವರ ಮಧ್ಯೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ‘ಒಗ್ಗಟ್ಟಿನಿಂದ ಈಗಿನ ಪರಿಸ್ಥಿತಿಯನ್ನು ಎದುರಿಸಬೇಕು’ ಎಂಬ ವಿಚಾರ ಚರ್ಚೆಯಾಗಿದೆ ಎಂದು ಹೇಳಲಾಗಿದೆ.

ಫಾರೂಕ್‌ ಅಬ್ದುಲ್ಲಾ ಅವರ ಪುತ್ರ ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರು ಈಗಲೂ ಬಂಧನದಲ್ಲಿದ್ದಾರೆ.

2019ರ ಆಗಸ್ಟ್‌ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದಕ್ಕೆ ಕೆಲವೇ ಗಂಟೆಗಳ ಮೊದಲು ಮೆಹಬೂಬಾ ಹಾಗೂ ಫಾರೂಕ್‌ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ವಿವಿಧ ರಾಜಕೀಯ ನಾಯಕರ ಸಭೆ ನಡೆದಿತ್ತು. ಅಲ್ಲಿ ರಾಜ್ಯದ ಸ್ವಾಯತ್ತೆಯನ್ನು ಉಳಿಸಿಕೊಳ್ಳುವಂಥ ‘ಗುಪ್ಕಾರ್‌’ ಘೋಷಣಾಪತ್ರಕ್ಕೆ ಎಲ್ಲರೂ ಸಹಿ ಮಾಡಿದ್ದರು.

ಮಾರ್ಚ್‌ 8ರಂದು ಪಿಡಿಪಿಯ ಮಾಜಿ ಮುಖಂಡ ಅಲ್ತಾಫ್‌ ಬುಖಾರಿ ನೇತೃತ್ವದ ‘ಜಮ್ಮು ಕಾಶ್ಮೀರ ಅಪನಿ ಪಾರ್ಟಿ’ ಎಂಬ ಹೊಸ ರಾಜಕೀಯ ಪಕ್ಷವು ಹುಟ್ಟಿಕೊಂಡಿದೆ. ಈ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದರು. ಕೇಂದ್ರದ ಜತೆಗೆ ಮಾತುಕತೆಗೆ ಮುಂದಾಗುವಂತೆ ಪಿಡಿಪಿ ಹಾಗೂ ಎನ್‌ಸಿ ಮೇಲೆ ಒತ್ತಡ ಹೇರುವ ಸಲುವಾಗಿ ಕೇಂದ್ರ ಸರ್ಕಾರವು ಈ ಪಕ್ಷಕ್ಕೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಲಾಗಿದೆ.

ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ಮುಖಂಡ ಗುಲಾಂನಬಿ ಆಜಾದ್‌ ಅವರು ಕೆಲವು ದಿನಗಳ ಹಿಂದೆ ಫಾರೂಕ್‌ ಅಬ್ದುಲ್ಲಾ ಅವರನ್ನು ಭೇಟಿಮಾಡಿದ್ದರು. ಅಲ್ಲದೆ, ಕಾಂಗ್ರೆಸ್‌ನ ಜಮ್ಮು ಕಾಶ್ಮೀರ ಘಟಕದ ಮುಖಂಡರ ನಿಯೋಗವೊಂದು ಜಿ.ಎನ್‌. ಮೊಂಗ ಅವರ ನೇತೃತ್ವದಲ್ಲಿ ಫಾರೂಕ್‌ ಅವರನ್ನು ಭೇಟಿಮಾಡಿತ್ತು.

ರಾಜ್ಯದ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಫಾರೂಕ್‌ ಅಬ್ದುಲ್ಲಾ ಅವರು ತಮ್ಮ ಪಕ್ಷವನ್ನು ಬಲಗೊಳಿಸುವುದರ ಜತೆಗೆ ಪಿಡಿಪಿ, ಕಾಂಗ್ರೆಸ್‌ ಹಾಗೂ ಸ್ಥಳೀಯವಾದ ಇತರ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬಿಜೆಪಿ ಹಾಗೂ ಅಪನಿ ಪಾರ್ಟಿಯ ವಿರುದ್ಧ ಸಂಘಟಿತ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವಂತೆ ಕಂಡುಬರುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಮೆಹಬೂಬಾ ಹಾಗೂ ಒಮರ್‌ ಅಬ್ದುಲ್ಲಾ ಅವರು ಬಿಡುಗಡೆಯಾಗುತ್ತಿದ್ದಂತೆ ಹೊಸ ಕಾರ್ಯತಂತ್ರ ರಚನೆಯಾಗುವ ನಿರೀಕ್ಷೆ ಇದೆ. ಗುಪ್ಕಾರ್‌ ಘೋಷಣೆಯು ಇದಕ್ಕೆ ಅಡಿಪಾಯವಾಗಲಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು