ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

Last Updated 11 ಫೆಬ್ರುವರಿ 2020, 17:31 IST
ಅಕ್ಷರ ಗಾತ್ರ

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ, ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ನೀಡಿದೆ.

ಗಲ್ಲುಶಿಕ್ಷೆ ಜಾರಿಗೆ ವಿಧಿಸಿರುವ ತಡೆಯಾಜ್ಞೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಈಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಮನವಿಗೆ ಅವಕಾಶ: ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸದಾಗಿ ದಿನಾಂಕ ನಿಗದಿಪಡಿಸುವಂತೆ ವಿಚಾರಣಾ ನ್ಯಾಯಾಲಯವನ್ನು ಕೋರಲು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.

‘ಕೇಂದ್ರ ಹಾಗೂ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಗಳ ಇತ್ಯರ್ಥ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದರೂ ಸಹ, ಗಲ್ಲುಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ’ ಎಂದು ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಎ.ಎಸ್. ಬೋಪಣ್ಣ ಅವರು ಇರುವ ಮೂವರು ಸದಸ್ಯರ ಪೀಠ ಹೇಳಿದೆ.

ನಿರ್ಭಯಾ ಪೋಷಕರಿಂದ ಅರ್ಜಿ: ಗಲ್ಲುಶಿಕ್ಷೆ ಜಾರಿಗೆ ಹೊಸದಾಗಿ ವಾರಂಟ್ ಹೊರಡಿಸಬೇಕೆಂದು ಕೋರಿ ನಿರ್ಭಯಾ ಪೋಷಕರು ಹಾಗೂ ದೆಹಲಿ ಸರ್ಕಾರದಿಂದ ಮಂಗಳವಾರ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ದೆಹಲಿ ಸೆಷನ್ಸ್‌ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ನಾಲ್ವರು ಅಪರಾಧಿಗಳಿಗೆ ನೋಟಿಸ್ ನೀಡಿದ್ದು, ಈ ಸಂಬಂಧ ಬುಧವಾರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

‘ಅಪರಾಧಿಗಳು ಕಾನೂನನ್ನು ಅವಹೇಳನ ಮಾಡುತ್ತಿದ್ದಾರೆ’ ಎಂದು ಸಂತ್ರಸ್ತರ ಪೋಷಕರು ಅರ್ಜಿಯಲ್ಲಿ ಹೇಳಿದ್ದಾರೆ.

ಗಲ್ಲುಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿಪಡಿಸುವಂತೆ ವಿಚಾರಣಾನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದ ಬಳಿಕ, ನಿರ್ಭಯಾ ಪೋಷಕರು ಈ ಅರ್ಜಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT