ಗುರುವಾರ , ಜನವರಿ 23, 2020
18 °C

ಸಂವಿಧಾನದ 126ನೇ ತಿದ್ದುಪಡಿ ಮಸೂದೆಗೆ ಅಂಗೀಕಾರ: ಆಂಗ್ಲೊ ಇಂಡಿಯನ್‌ ಮೀಸಲಾತಿ ಕೊನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನಿಗದಿ ಮಾಡಿರುವ ಮೀಸಲಾತಿಯನ್ನು ಇನ್ನೂ10 ವರ್ಷಗಳ ಅವಧಿಗೆ ಮುಂದುವರಿಸುವ ಸಂವಿಧಾನದ (126ನೇ ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆ ಅಂಗೀಕರಿಸಿದೆ.

ಆದರೆ, ಆಂಗ್ಲೊ ಇಂಡಿಯನ್ನರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಮುಂದುವರಿಸದಿರಲು ಸರ್ಕಾರ ತೀರ್ಮಾನಿಸಿದ್ದರಿಂದ 2020ರ ಜನವರಿಯ ಬಳಿಕ ಈ ಸಮುದಾಯದವರಿಗೆ ಮೀಸಲಾತಿ ಲಭ್ಯ ಇರುವುದಿಲ್ಲ.

ಮಸೂದೆಯನ್ನು ಮಂಡಿಸಿದ  ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು, ‘ಆಂಗ್ಲೊ ಇಂಡಿಯನ್ನರಿಗೆ ಮೀಸಲಾತಿಯನ್ನು ಕೊನೆಗೊಳಿಸುವ ವಿಚಾರವಾಗಿ ನಾವು ಚರ್ಚೆಯನ್ನು ಇಲ್ಲಿಗೆ ಕೊನೆಗೊಳಿಸುತ್ತಿಲ್ಲ. ಆದ್ದರಿಂದ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದರು.

‘ಎಸ್‌ಸಿ, ಎಸ್‌ಟಿ ಸಮುದಾಯದವರು ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದಾರೆ. ಆದರೆ ಈ ಸಮುದಾಯಕ್ಕೆ ಮೀಸಲಾತಿ ನೀಡುವುದರ ಹಿಂದಿನ ಉದ್ದೇಶ ಇನ್ನೂ ಈಡೇರಿಲ್ಲವಾದ್ದರಿಂದ ಅವರ ಮೀಸಲಾತಿಯನ್ನು ಮುಂದುವರಿಸಲು ಉದ್ದೇಶಿಸಲಾಗಿದೆ’ ಎಂದರು.

ಆಂಗ್ಲೊ ಇಂಡಿಯನ್‌ ಸಮುದಾಯದ ಮೀಸಲಾತಿಯನ್ನು ಕೊನೆಗೊಳಿಸಿರುವುದನ್ನು ವಿರೋಧಿಸಿದ ಕಾಂಗ್ರೆಸ್‌ ಸಂಸದ ಹಿಬಿ ಏಡನ್‌ ಅವರು ಈ ಬಗ್ಗೆ ರಾಷ್ಟ್ರಪತಿಗೆ ಪತ್ರಬರೆದಿದ್ದರು. ‘ದೇಶದಲ್ಲಿ ಈ ಸಮುದಾಯದವರ ಸಂಖ್ಯೆ ಅತ್ಯಂತ ಕಡಿಮೆಯಾಗಿರುವುದರಿಂದ ಲೋಕಸಭೆ ಅಥವಾ ವಿಧಾನಸಭೆಗಳಿಗೆ ಆಯ್ಕೆ
ಯಾಗುವ ಸಾಧ್ಯತೆಯೂ ಇಲ್ಲ. ಮೀಸಲಾತಿಯಿಂದ ಅವರ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮವಾಗದಿದ್ದರೂ, ನಾವು ಈ ದೇಶಕ್ಕೆ ಸೇರಿದವರೆಂಬ ಭಾವನೆ ಅವರಲ್ಲಿ ಮೂಡಿಸಲು ಸಹಾಯಕವಾಗಿತ್ತು’ ಎಂದು ಪತ್ರದಲ್ಲಿ ಹೇಳಿದ್ದಾರೆ.

***

ನಮ್ಮ ಸಮುದಾಯದ ಯಾರೊಬ್ಬರ ಅಭಿಪ್ರಾಯವನ್ನೂ ಪಡೆಯದೆ, ಮೀಸಲಾತಿಯನ್ನು ಕೊನೆಗೊಳಿಸಿದ ಹಿಂದಿನ ಉದ್ದೇಶವೇನೆಂಬುದು ಅರ್ಥವಾಗುತ್ತಿಲ್ಲ
- ಬರ್ರಿ ಒ’ಬ್ರಯಾನ್‌, ಆಲ್‌ ಇಂಡಿಯಾ ಆಂಗ್ಲೊ ಇಂಡಿಯನ್‌ ಅಸೋಸಿಯೇಶನ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು