ಭಾನುವಾರ, ಸೆಪ್ಟೆಂಬರ್ 15, 2019
30 °C
ದೂರಸಂಪರ್ಕ ನಿಷೇಧಕ್ಕೆ ಜಮ್ಮು–ಕಾಶ್ಮೀರ ರಾಜ್ಯಪಾಲ್ ಸತ್ಯಪಾಲ್ ಮಲಿಕ್ ಸಮರ್ಥನೆ

‘ಸಂಪರ್ಕ ನಿರ್ಬಂಧಿಸಿ ಜೀವಹಾನಿ ತಡೆದಿದ್ದೇವೆ’

Published:
Updated:
Prajavani

ನವದೆಹಲಿ: ‘ಜಮ್ಮು–ಕಾಶ್ಮೀರದಲ್ಲಿ ಔಷಧಗಳ ಕೊರತೆ ಉಂಟಾಗಿಲ್ಲ. ಅಗತ್ಯ ಪ್ರಮಾಣದ ಔಷಧ ಲಭ್ಯವಿದೆ. ಸರ್ಕಾರ ಇಲ್ಲಿ ಹೇರಿರುವ ನಿರ್ಬಂಧದ ಮೂಲಕ ಜೀವ ಹಾನಿಯನ್ನು ತಪ್ಪಿಸಲಾಗಿದೆ’ ಎಂದು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಔಷಧಗಳ ಕೊರತೆ ಉಂಟಾಗಿದೆ ಎಂದು ಹಲವು ಜಾಗತಿಕ ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು. ಪಾಕಿಸ್ತಾನದ ಪತ್ರಕರ್ತರ ಸಂಘವು ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಕಾಶ್ಮೀರಕ್ಕೆ ಔಷಧಗಳನ್ನು ಪೂರೈಸಲು ಮುಂದಾಗಿತ್ತು. ಇದರ ಬೆನ್ನಲ್ಲೇ ಸತ್ಯಪಾಲ್ ಮಲಿಕ್ ಈ ಮಾಹಿತಿ ನೀಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಅಂತ್ಯಸಂಸ್ಕಾರಕ್ಕೆ ಬಂದಿದ್ದ ವೇಳೆ ಸತ್ಯಪಾಲ್ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಈ ಮಾಹಿತಿ ಹಂಚಿಕೊಂಡರು.

‘ಮಾನವ ಜೀವಕ್ಕೆ ಹಾನಿಯಾಗ ಬಾರದು ಎಂಬುದಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. 10 ದಿನ ದೂರವಾಣಿ ಸಂಪರ್ಕ ಇರುವುದಿಲ್ಲ ಎಂದು ಹೇಳಿದ್ದೇವೆ, ದೂರವಾಣಿ ಇರುವುದಿಲ್ಲ ಅಷ್ಟೆ. ದೂರವಾಣಿ ಇಲ್ಲದಿದ್ದರೆ ಏನಾಯಿತು? ದೂರವಾಣಿ ಇಲ್ಲದಿದ್ದರಿಂದ ರಕ್ತಪಾತ ನಡೆಯುವುದು ತಪ್ಪಿದೆ. ಆದರೆ ಈ ಸವಲತ್ತುಗಳೆಲ್ಲಾ ಶೀಘ್ರವೇ ವಾಪಸ್ ಬರಲಿವೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಬಕ್ರೀದ್ ಹಬ್ಬದ ದಿನ ಜನರಿಗೆ ಮಾಂಸ, ಮೊಟ್ಟೆ ಮತ್ತು ತರಕಾರಿಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಧ್ವಜ ತೆರವು

ಜಮ್ಮು–ಕಾಶ್ಮೀರ ವಿಧಾನಸಭೆ ಭವನದ ಮೇಲೆ ಹಾರಿಸಲಾಗುತ್ತಿದ್ದ ರಾಜ್ಯದ ಪ್ರತ್ಯೇಕ ಧ್ವಜವನ್ನು ಭಾನುವಾರ ತೆರವು ಮಾಡಲಾಗಿದೆ.

370ನೇ ವಿಧಿಯ ಪ್ರಕಾರ ಪ್ರತ್ಯೇಕ ಧ್ವಜ ಹೊಂದಲು ಜಮ್ಮು–ಕಾಶ್ಮೀರಕ್ಕೆ ಅವಕಾಶವಿತ್ತು. ಈ ಪ್ರಕಾರ 1952ರಿಂದಲೂ ಇಲ್ಲಿನ ವಿಧಾನಸಭೆ ಭವನದ ಮೇಲೆ ತ್ರಿವರ್ಣ ಧ್ವಜ ಮತ್ತು ರಾಜ್ಯದ ಪ್ರತ್ಯೇಕ ಧ್ವಜ ಹಾರಿಸಲಾಗುತ್ತಿತ್ತು. ಜಮ್ಮು–ಕಾಶ್ಮೀರ ವಿಭಜನೆ ಕಾಯ್ದೆ (2019) ಪ್ರಕಾರ ಇದೇ ಅಕ್ಟೋಬರ್ 31ರಂದು ಈ ಧ್ವಜವನ್ನು ತೆರವು ಮಾಡಬೇಕಿತ್ತು. ಆದರೆ ಅವಧಿಗೂ ಎರಡು ತಿಂಗಳು ಮೊದಲೇ ಧ್ವಜವನ್ನು ತೆರವು ಮಾಡಲಾಗಿದೆ.

‘ಸಾಕಷ್ಟು ಸಂಗ್ರಹವಿದೆ’

‘ಕಾಶ್ಮೀರ ಕಣಿವೆಯಲ್ಲಿ ಆಹಾರದ ಕೊರತೆಯಾಗಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ. ಕಾಶ್ಮೀರ ಕಣಿವೆಯಲ್ಲಿ ನೋಂದಣಿ ಆಗಿರುವ ಎಲ್ಲಾ ಔಷಧಾಲಯಗಳಲ್ಲಿ ಶೇ 65ರಷ್ಟು ಔಷಧಾಲಯಗಳು ಪ್ರತಿದಿನ ಕಾರ್ಯನಿರ್ವಹಿಸುತ್ತಿವೆ. ಜನರು ಅಗತ್ಯ ಔಷಧಗಳನ್ನು ಮುಕ್ತವಾಗಿ ಖರೀದಿಸುತ್ತಿದ್ದಾರೆ’ ಎಂದು ಸತ್ಯಪಾಲ್ ಮಾಹಿತಿ ನೀಡಿದ್ದಾರೆ.

‘ಆರಂಭದ ಕೆಲವು ದಿನಗಳಲ್ಲಿ ಶಿಶುಆಹಾರದ ಕೊರತೆ ಇತ್ತು. ಆದರೆ ಈಗ ಅದನ್ನು ನಿವಾರಿಸಲಾಗಿದೆ. ಇನ್ನೂ ಮೂರು ವಾರಗಳಿಗೆ ಸಾಕಾಗುವಷ್ಟು ಶಿಶುಆಹಾರದ ಸಂಗ್ರಹ ಕಾಶ್ಮೀರ ಕಣಿವೆಯಲ್ಲಿದೆ’ ಎಂದು ಅವರು ಹೇಳಿದ್ದಾರೆ.

‘ಜನರಿಗೆ ದಿನಬಳಕೆ ವಸ್ತುಗಳು ದೊರೆತಿಲ್ಲ ಎಂಬುದು ಸುಳ್ಳು. ಬಕ್ರೀದ್ ಹಬ್ಬದ ದಿನ ಜನರಿಗೆ ಮಾಂಸ, ಮೊಟ್ಟೆ ಮತ್ತು ತರಕಾರಿಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ

ಲಡಾಕ್ ಪ್ರಾಂತದ ಅಂತರರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳ ಕಾಮಗಾರಿಯನ್ನು ಪರಿಶೀಲಿಸಲು ‘ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ) ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಹರಪಾಲ್‌ ಸಿಂಗ್ ಅವರು, ಲೇಹ್‌ಗೆ ಬಂದಿಳಿದಿದ್ದಾರೆ.

‘ಲಡಾಕ್ ಪ್ರಾಂತದಲ್ಲಿ ಸೇನೆ ಮತ್ತು ಸೇನಾ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿರುವ ರಸ್ತೆಗಳ ಕಾಮಗಾರಿಗಳನ್ನು ಅವರು ಪರಿಶೀಲಿಸಲಿದ್ದಾರೆ. ಅಲ್ಲದೆ, ಇಲ್ಲಿನ ಸೇನಾಠಾಣೆಗಳು ಮತ್ತು ಗಡಿಠಾಣೆಗಳಿಗೆ ಭೇಟಿ ನೀಡಲಿದ್ದಾರೆ. ರಸ್ತೆ ಸಂಪರ್ಕ ಹೇಗಿದೆ ಎಂಬುದರ ಮಾಹಿತಿ ಕಲೆ ಹಾಕಲಿದ್ದಾರೆ’ ಎಂದು ಬಿಆರ್‌ಒ ಮೂಲಗಳು ಮಾಹಿತಿ ನೀಡಿವೆ.

‘ಲಡಾಕ್ ಪ್ರಾಂತವು ಪಾಕಿಸ್ತಾನ ಮತ್ತು ಚೀನಾ (ಟಿಬೆಟ್‌) ಜತೆ ಗಡಿ ಹಂಚಿಕೊಂಡಿದೆ. ಹೀಗಾಗಿ ರಕ್ಷಣೆ ವಿಚಾರದಲ್ಲಿ ಇದು ಅತ್ಯಂತ ಸೂಕ್ಷ್ಮ ಪ್ರದೇಶ. ಈ ಪರಿಶೀಲನೆಯ ನಂತರ ಲಡಾಕ್‌ನಲ್ಲಿ ರಸ್ತೆ ಸಂಪರ್ಕವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ನೀಲನಕ್ಷೆ ರೂಪಿಸತವಾಗಲಿದೆ’ ಎಂದು ಮೂಲಗಳು ಹೇಳಿವೆ.

ಅಭಿವೃದ್ಧಿ ಸಾಧ್ಯತೆ ಪರಿಶೀಲನೆ

ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಬಹುದಾದ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕಲೆಹಾಕಲು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಉನ್ನತ ತಂಡವು ಕಾಶ್ಮೀರಕ್ಕೆ ಇದೇ 27–28ರಂದು ಭೇಟಿ ನೀಡಲಿದೆ. 

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಸಚಿವಾಲಯದ ಕಾರ್ಯದರ್ಶಿ ಹಾಗೂ ಉನ್ನತ ಅಧಿಕಾರಿಗಳು ಇರಲಿದ್ದಾರೆ. ಇದೇ ತಂಡವು ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಲಡಾಕ್‌ಗೂ ಭೇಟಿ ನೀಡಲಿದೆ.

ನಿರಂಕುಶ ಆಡಳಿತದ ಪರಿಚಯವಾಯಿತು: ರಾಹುಲ್ ಗಾಂಧಿ 

ಶ್ರೀನಗರದ ಭೇಟಿಗೆಂದು ಶ್ರೀನಗರ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದಿದ್ದ ವಿರೋಧಪಕ್ಷಗಳ ನಿಯೋಗವು, ತಮ್ಮನ್ನು ವಾಪಸ್ ಕಳುಹಿಸಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಇದು ಟೀಕೆ–ಪ್ರತಿಟೀಕೆಗೆ ಕಾರಣವಾಗಿದೆ

* ಜಮ್ಮು ಮತ್ತು ಕಾಶ್ಮೀರದ ಜನತೆಗೆ 20 ದಿನಗಳಿಂದ ಸ್ವಾತಂತ್ರ್ಯ ಮತ್ತು ನಾಗರೀಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಅಲ್ಲಿ ನಿರಂಕುಶ ಆಡಳಿತ ಮತ್ತು ದೌರ್ಜನ್ಯ ತಾಂಡವವಾಡುತ್ತಿದೆ. ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ ವಿರೋಧ ಪಕ್ಷಗಳ ನಾಯಕರಿಗೆ ಮತ್ತು ಪತ್ರಕರ್ತರಿಗೆ ಇದರ ಅನುಭವ ಚೆನ್ನಾಗೇ ಆಗಿದೆ –ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

* ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ. ಸ್ಥಿರ ದೂರವಾಣಿ ಕೆಲಸ ಮಾಡುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯಾವುದೇ ಸ್ಥಿರ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಶಾಲಾ–ಕಾಲೇಜುಗಳು ಬಾಗಿಲು ತೆರೆದಿವೆ. ಆದರೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಶಾಲೆ–ಕಾಲೇಜುಗಳಿಗೆ ಕಳುಹಿಸುತ್ತಿಲ್ಲ. ಸಾರ್ವಜನಿಕರು ಆಸ್ಪತ್ರೆಗಳಿಗೂ ಹೋಗಲಾಗದಂತಹ ಸ್ಥಿತಿ ಇದೆ. ಕರ್ಫ್ಯೂ ಇನ್ನೂ ಜಾರಿಯಲ್ಲಿದೆ. ಪರಿಸ್ಥಿತಿ ತಿಳಿಯಾಗಿದ್ದಲ್ಲಿ, ಕರ್ಫ್ಯೂ ಏಕೆ ಮುಂದುವರಿಯಬೇಕು? – ಡಿ.ರಾಜಾ, ಸಿ‍ಪಿಐ ಪ್ರಧಾನ ಕಾರ್ಯದರ್ಶಿ

* ಜನರಿಗೆ ನೀಡಲಾಗಿರುವ ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ. ರಾಷ್ಟ್ರೀಯತೆ ಹೆಸರಿನಲ್ಲಿ ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇನ್ನೂ ಎಷ್ಟು ದಿನ ಇದು ಮುಂದುವರಿಯುತ್ತದೆ? –ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

* ಶ್ರೀನಗರ ಭೇಟಿಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿ ಅವರು ಶ್ರೀನಗರ ವಿಮಾನ ನಿಲ್ದಾಣದ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ನಿಮ್ಮನ್ನು ಹೊರಗೆ ಬಿಡಲು ಆಗುವುದಿಲ್ಲ. ದಯವಿಟ್ಟು ಹಿಂತಿರುಗಿ’ ಎಂದು ನಿಲ್ದಾಣದ ಸಿಬ್ಬಂದಿ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ನಿಯೋಗಕ್ಕೆ ಸೂಚನೆ ನೀಡಿದ್ದಾರೆ. 

* ಜನರು ಮತ್ತು ಜನರ ಸೇವೆಗೆಂದು ನಿಯೋಜಿತರಾದ ಅಧಿಕಾರಗಳ ಧ್ವನಿಯನ್ನು ಸರ್ಕಾರ ಅಡಗಿಸುತ್ತಿದೆ. ಇದರಿಂದ ಮನನೊಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೇರಳ ಕೇಡರ್‌ನ ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ಜಾರಿಯಲ್ಲಿರುವ ನಿರ್ಬಂಧದಿಂದ ಮನನೊಂದು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಈಗ ಅವರು ದಾದರ್ ಮತ್ತು ನಗರಹವೇಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು

* ಕಾಶ್ಮೀರಕ್ಕೆ ಭಾನುವಾರ ಔಷಧಗಳನ್ನು ಪೂರೈಸಲು ಮುಂದಾಗಿದ್ದ ಪಾಕಿಸ್ತಾನದ ಪತ್ರಕರ್ತರನ್ನು ಅಲ್ಲಿನ ಪೊಲೀಸರು ತಡೆದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಪ್ಫರಾಬಾದ್‌ನಿಂದ ಗಡಿ ನಿಯಂತ್ರಣ ರೇಖೆವರೆಗೆ 400 ಪತ್ರಕರ್ತರು ಮೆರವಣಿಗೆ ನಡೆಸಿದ್ದರು. ಆದರೆ ಅವರನ್ನು ಪಾಕಿಸ್ತಾನದ ರೇಂಜರ್ಸ್‌ ತಡೆದಿದ್ದಾರೆ. ಇದರ ವಿರುದ್ಧ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ

ಅಮೆರಿಕ ಸಂಸದೆ ಕಳವಳ

‘ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವು 2,000ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಎಂಬ ವರದಿಯನ್ನು ನೋಡಿ ನೋವಾಗಿದೆ. ಪರಿಸ್ಥಿತಿ ಎಂತಹದ್ದೇ ಇರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಬಾರದು’ ಎಂದು ಅಮೆರಿಕದ ಪ್ರತಿನಿಧಿ ಸಭೆಯ ಸದಸ್ಯೆ ಪ್ರಮೀಳಾ ಜಯಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಮೀಳಾ ಅವರು ಈ ಸ್ಥಾನದಲ್ಲಿರುವ ಏಕೈಕ ಭಾರತ–ಅಮೆರಿಕನ್ ಮಹಿಳೆಯಾಗಿದ್ದಾರೆ.

‘ಕಾಶ್ಮೀರದಲ್ಲಿ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ. ಭಾರತದ ಕಳವಳ ನನಗೆ ಅರ್ಥವಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ವಿಚಾರದಲ್ಲಿ ಎರಡೂ ದೇಶಗಳು (ಭಾರತ–ಪಾಕಿಸ್ತಾನ) ಪ್ರಜಾತಾಂತ್ರಿಕ ನೆಲೆಯಲ್ಲಿ ಮುಂದುವರಿಯಬೇಕು. ಪರಿಸ್ಥಿತಿ ಎಂತಹದ್ದೇ ಇರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆಯಶಗಬಾರದು’ ಎಂದು ಅವರು ಹೇಳಿದ್ದಾರೆ.

***

370ನೇ ವಿಧಿಯ ಕಾರಣ ಜಮ್ಮು–ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಎಲ್ಲವನ್ನೂ ಅಭಿವೃದ್ಧಿಪಡಿಸಲಾಗುತ್ತದೆ

–ಮುಕ್ತಾರ್‌ ಅಬ್ಬಾಸ್ ನಖ್ವಿ

ಜಮ್ಮು ಮತ್ತು ಕಾಶ್ಮೀರದ ಜನತೆಗೆ 20 ದಿನಗಳಿಂದ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಅಲ್ಲಿ ನಿರಂಕುಶ ಆಡಳಿತ ಮತ್ತು ದೌರ್ಜನ್ಯ ತಾಂಡವವಾಡುತ್ತಿದೆ. ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ ವಿರೋಧ ಪಕ್ಷಗಳ ನಾಯಕರಿಗೆ ಮತ್ತು ಪತ್ರಕರ್ತರಿಗೆ ಇದರ ಅನುಭವ ಚೆನ್ನಾಗೇ ಆಗಿದೆ

–ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ. ಸ್ಥಿರ ದೂರವಾಣಿ ಕೆಲಸ ಮಾಡುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯಾವುದೇ ಸ್ಥಿರ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಶಾಲಾ–ಕಾಲೇಜುಗಳು ಬಾಗಿಲು ತೆರೆದಿವೆ. ಆದರೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಶಾಲೆ–ಕಾಲೇಜುಗಳಿಗೆ ಕಳುಹಿಸುತ್ತಿಲ್ಲ. ಜನರು ಆಸ್ಪತ್ರೆಗಳಿಗೂ ಹೋಗಲಾಗದಂತಹ ಸ್ಥಿತಿ ಇದೆ. ಕರ್ಫ್ಯೂ ಇನ್ನೂ ಜಾರಿಯಲ್ಲಿದೆ. ಪರಿಸ್ಥಿತಿ ತಿಳಿಯಾಗಿದ್ದಲ್ಲಿ, ಕರ್ಫ್ಯೂ ಏಕೆ ಮುಂದುವರಿಯಬೇಕು?

– ಡಿ.ರಾಜಾ, ಸಿ‍ಪಿಐ ಪ್ರಧಾನ ಕಾರ್ಯದರ್ಶಿ

ಜನರಿಗೆ ನೀಡಲಾಗಿರುವ ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ. ರಾಷ್ಟ್ರೀಯತೆ ಹೆಸರಿನಲ್ಲಿ ಜನರ ಧ್ವನಿ ಹತ್ತಿಕ್ಕಲಾಗುತ್ತಿದೆ. ಎಷ್ಟು ದಿನ ಇದು ಮುಂದುವರಿಯುತ್ತದೆ?

–ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

Post Comments (+)