ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಂತೆ ಮಧ್ಯಪ್ರದೇಶದಲ್ಲಿ ಪಕ್ಷಾಂತರ ಇಲ್ಲ

ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್ ವಿಶ್ವಾಸ
Last Updated 8 ಜೂನ್ 2020, 11:01 IST
ಅಕ್ಷರ ಗಾತ್ರ

ಭೋಪಾಲ್: ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಶಾಸಕರು ಪಕ್ಷಾಂತರ ಮಾಡುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ವರ್ಷದ ಮಾರ್ಚ್ ತಿಂಗಳು 22 ಶಾಸಕರು ರಾಜೀನಾಮೆ ನೀಡಿದ ಬಳಿಕ ದಿಗ್ವಿಜಯ ಸಿಂಗ್ ಅವರು ದೇಶದಲ್ಲಿ ಪ್ರಬಲವಾದ ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಗುಜರಾತಿನಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿದ ಅವರು, ಬಿಜೆಪಿ ಈಗಾಗಲೇ ಹಣದ ರಾಜಜಕಾರಣ ಮತ್ತು ಶಾಸಕರ ಖರೀದಿಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು.

‘ಆದರೆ, ಮಧ್ಯಪ್ರದೇಶದಲ್ಲಿ ಹಾಗಾಗುವುದಿಲ್ಲ. ಇಲ್ಲಿ, ಕಾಂಗ್ರೆಸ್ ಪಕ್ಷ ಬಿಟ್ಟುಹೋಗಬೇಕೆಂದಿದ್ದ ಶಾಸಕರೆಲ್ಲಾ ಈಗಾಗಲೇ ಪಕ್ಷ ತ್ಯಜಿಸಿದ್ದಾರೆ’ ಎಂದು ಸಿಂಗ್‌ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ22 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿದಿತ್ತು.

ಪಕ್ಷದಿಂದ ಸಿಂಧಿಯಾ ನಿರ್ಗಮನ ಕುರಿತು ಪ್ರತಿಕ್ರಿಯಿಸಿದ ಅವರು, ‘ನನಗೆ ಮತ್ತು ಕಮಲನಾಥ್‌ ಅವರಿಗೆ ವಯಸ್ಸಾಗುತ್ತಿದೆ. ಆದ್ದರಿಂದ ಮುಂದಿನ 25 ವರ್ಷಗಳ ಕಾಲ ನಿಮ್ಮದೇ ಪ್ರಭಾವ ಇರುತ್ತದೆ ಎಂದು ಸಿಂಧಿಯಾ ಅವರಿಗೆ ತಿಳಿಸಿದ್ದೆ. ಆದರೆ, ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಮೋದಿ ಸಂಪುಟದಲ್ಲಿ ಸಚಿವರಾಗಲು ಅವಸರ ತೋರಿದರು. ಸಿಂಧಿಯಾ ತಮಗೆ ಮಗನಿದ್ದಂತೆ’ ಎಂದು ಹೇಳಿದರು.

ಕಾಂಗ್ರೆಸ್‌, ಸಿಂಧಿಯಾ ಅವರನ್ನು ಗೌರವದಿಂದ ನಡೆಸಿಕೊಂಡು ಬಂದಿತ್ತು ಎಂದಿದ್ದಾರೆ. ‘ರಾಹುಲ್‌ ಮತ್ತು ಪ್ರಿಯಾಂಕಾ ವಾದ್ರಾ ಅವರು ಸಿಂಧಿಯಾ ನಿವಾಸದಲ್ಲೇ ಕಾರ್ಯಕರ್ತರ ಸಭೆ ನಡೆಸುತ್ತಿದ್ದರು. ಯಾವುದೇ ಪೂರ್ವಾನುಮತಿ ಇಲ್ಲದೇ ಸಿಂಧಿಯಾ ತಮ್ಮನ್ನು ನೇರವಾಗಿ ಭೇಟಿಯಾಗಬಹುದು ಎಂದು ರಾಹುಲ್‌ ಗಾಂಧಿ ಅವರೂ ಹೇಳಿದ್ದರು. ಹೀಗಾಗಿ ಸೋತ (2019ರ ಗುನಾ ಲೋಕಸಭಾ ಕ್ಷೇತ್ರ) ನಂತರ ಪಕ್ಷ ಬಿಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT