ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿರುವ ಕಾಂಗ್ರೆಸ್‍ನ್ನು ಅಮಿತ್ ಶಾ ಮುನ್ನಡೆಸುತ್ತಿದ್ದಾರೆ: ಪಿಣರಾಯಿ

Last Updated 5 ಡಿಸೆಂಬರ್ 2018, 12:40 IST
ಅಕ್ಷರ ಗಾತ್ರ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.ಕೇರಳ ಸರ್ಕಾರ ಈ ತೀರ್ಪನ್ನು ಅನುಷ್ಠಾನಗೊಳಿಸಲು ಮುಂದಾದಾಗ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ.ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏನು ಹೇಳುತ್ತಾರೆ? ಔಟ್ ಲುಕ್ ಪತ್ರಿಕೆಗಾಗಿ ಪ್ರೀತಾ ನಾಯರ್ ಅವರು ಪಿಣರಾಯಿ ಜತೆ ನಡೆಸಿದ ಸಂದರ್ಶನದ ಪೂರ್ಣರೂಪ ಇಲ್ಲಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಷಯ ಕೇರಳದಲ್ಲಿ ಆತಂಕವುಂಟು ಮಾಡಿದೆ.ಇದು ಧಾರ್ಮಿಕ ವಿಷಯವೇ ಅಥವಾ ಇದರಲ್ಲಿ ರಾಜಕೀಯ ಇದೆಯೇ?
ಆರ್‌ಎಸ್‌ಎಸ್‌ ಮತ್ತು ಬಿಜೆಪಿ ರಾಜಕೀಯ ಲಾಭಕ್ಕಾಗಿ ಶಬರಿಮಲೆ ವಿಷಯವನ್ನು ಬಳಸುತ್ತಿದೆ.ಸಮಾಜದಲ್ಲಿ ಧ್ರುವೀಕರಣ ಮಾಡುವುದೇ ಆರ್‌‍ಎಸ್ಎಸ್ ನ ಏಕೈಕ ಉದ್ದೇಶ. ರಾಜಕೀಯ ಹಿತಾಸಕ್ತಿಗಾಗಿ ಶಬರಿಮಲೆ ಮತ್ತು ಅಲ್ಲಿನ ಸಂಪ್ರದಾಯಗಳನ್ನು ಎಳೆದು ತರಲಾಗುತ್ತಿದೆ.ಈ ಹಿಂದೆ ಸುಪ್ರೀಂ ತೀರ್ಪನ್ನು ಸ್ವಾಗತಿಸಿದವರೇ ಈಗ ತಿರುಗಿಬಿದ್ದಿದ್ದಾರೆ. ಈ ರೀತಿ ಮಾಡುತ್ತಿರುವುದು ಯಾಕೆ?.ಮತ ಬ್ಯಾಂಕ್‍ಗಾಗಿ ಜನರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಜನರಿಗೆ ಈ ಎಲ್ಲ ಆಟ ಅರ್ಥವಾಗುತ್ತದೆ. ಕ್ರಮೇಣ ಜನರೇ ಇದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ.

ಈ ವಿಷಯ ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆಯೇ?
12 ವರ್ಷಗಳ ನಂತರ ನ್ಯಾಯಾಲಯ ಈ ತೀರ್ಪು ನೀಡಿದೆ. ಸಮಾನ ಹಕ್ಕುಗಳಿಗೆ ನಾವು ಆದ್ಯತೆ ನೀಡುತ್ತಲೇ ಬಂದಿದ್ದೇವೆ.ಎಲ್ಲ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಬೇಕೆಂದು ಅಫಿಡವಿಟ್ ನ್ನು ನಾವು ಸಲ್ಲಿಸಿದ್ದೆವು. ನ್ಯಾಯಾಲಯ ಎಲ್ಲ ವಯಸ್ಸಿನ ಮಹಿಳೆಗಳಿಗೆ ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿದಾಗ ಅದನ್ನು ಪಾಲಿಸದೆ ನಮಗೆ ನಿರ್ವಾಹವಿಲ್ಲ. ಇದರಲ್ಲಿ ರಾಜ್ಯ ಸರ್ಕಾರ ರಾಜಕೀಯ ಆಟವಾಡುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸಂವಿಧಾನಕ್ಕಿಂತ ಮೇಲೆ ಆಚಾರಗಳಿಗೆ ಆದ್ಯತೆ ಕೊಡುತ್ತಿರುವುದನ್ನು ನೋಡಿದರೆ ಬೇಸರವಾಗುತ್ತಿದೆ.ತೀರ್ಪನ್ನು ಪಾಲಿಸದೇ ಇದ್ದರೆ ಅದು ಸಂವಿಧಾನವನ್ನು ವಿರೋಧಿಸಿದಂತಾಗುತ್ತದೆ.

ಶಬರಿಮಲೆಯನ್ನು ಅಯೋಧ್ಯೆಯನ್ನಾಗಿ ಮಾಡಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ನೀವು ಹೇಳಿದ್ದೀರಿ. ನಾಯಕರೇ ಇಲ್ಲಿ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ, ಈ ಆರೋಪಕ್ಕೆ ನಿಮ್ಮಲ್ಲಿ ಸಾಕ್ಷ್ಯ ಇದೆಯೇ?

ಶಬರಿಮಲೆ ಒಂದು ಪುಣ್ಯಕ್ಷೇತ್ರ.ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಬರಿಮವೆಯಲ್ಲಿ ಗಲಭೆಯುಂಟುಮಾಡಲು ಆರ್‌ಎಸ್‌ಎಸ್‌ಗೆ ಅವಕಾಶ ಸಿಕ್ಕಿದಂತಾಯಿತು. ಒಂದಕ್ಕಿಂತ ಹೆಚ್ಚು ಕಾರ್ಯತಂತ್ರಗಳು ಅವರಿಗೆ ಇದೆ. ಅದರಲ್ಲೊಂದು ದೇವಸ್ಥಾನದ ಆಚಾರಗಳನ್ನು ನಾಶ ಮಾಡುವುದು. ಶಬರಿಮಲೆಯ ಪಾವಿತ್ರ್ಯವನ್ನು ಹಾಳು ಮಾಡಲು ನಮ್ಮಸರ್ಕಾರ ಅನುಮತಿ ನೀಡುವುದಿಲ್ಲ.

ಸುಪ್ರೀಂ ತೀರ್ಪಿನಿಂದಾಗಿ ಎದುರಾದ ತೊಡಕುಗಳು ಏನು? ರಾಮಜನ್ಮಭೂಮಿ ಬಗ್ಗೆ ಸುಪ್ರೀಂ ವಿಚಾರಣೆಗೆ ಮುನ್ನ ಸಂಘ ಶಬರಿಮಲೆಯನ್ನು ದಾಳವಾಗಿ ಬಳಸಬಹುದೇ?

ಶಬರಿಮಲೆ ಮತ್ತು ಅಯೋಧ್ಯೆ ನಡುವೆ ಸಾದೃಶ್ಯಇದೆ.ಅಯೋಧ್ಯೆಯನ್ನು ರಾಜಕೀಯ ದಾಳವಾಗಿ ಬಳಸಿದ ಸಂಘ ತಕ್ಕ ಪಾಠ ಕಲಿತಿದೆ.ಶಬರಿಮಲೆ ವಿಷಯವನ್ನುಬಳಸಿ ಕೇರಳದಲ್ಲಿ ಚಿಗುರಬಹುದು ಎಂದು ಅವರು ಯೋಚಿಸುತ್ತಿದ್ದಾರೆ.ಅವರ ಈ ಯೋಚನೆಯಿಂದ ಸ್ವಲ್ಪ ಹೆಚ್ಚು ಮತಗಳು ಸಿಗಬಹುದೇ ಹೊರತು ಬೇರೇನೂ ಇಲ್ಲ.

ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವಿನ ಗುದ್ದಾಟ ಮುಂದುವರಿಯುತ್ತಿದ್ದರೂ ಕೇಂದ್ರ ಸಚಿವರು ಶಬರಿಮಲೆಗೆ ಭೇಟಿ ನೀಡುವ ಯೋಚನೆ ಮಾಡುತ್ತಿದ್ದಾರೆ.ಬಿಜೆಪಿ ನೇತೃತ್ವ ರಾಜ್ಯ ಸರ್ಕಾರಕ್ಕೆ ಬೆದರಿಕೆಯನ್ನುಂಟುಮಾಡಿದೆಯೇ?

ಶಬರಿಮಲೆ ವಿಷಯವನ್ನಿಟ್ಟುಕೊಂಡೇ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ನಮ್ಮ ಸರ್ಕಾರವನ್ನು ಕೆಳಗಿಳಿಸುವುದಾಗಿ ಗುಡುಗಿದ್ದಾರೆ. ಇದು ಫ್ಯಾಸಿಸ್ಟ್ ಮತ್ತು ಅಧಿಕಾರಯುತ ಸ್ವಭಾವವನ್ನು ತೋರಿಸುತ್ತದೆ.ಪ್ರತಿಭಟನೆಯ ಅಂಗವಾಗಿಯೇ ಕೇಂದ್ರ ಸಚಿವರು ಶಬರಿಮಲೆಗೆ ಬಂದಿದ್ದರು.

ಶಬರಿಮಲೆಯಲ್ಲಿ ದೇವರ ದರ್ಶನಕ್ಕಾಗಿ ಮಹಿಳೆಯರಿಗಾಗಿ ಪ್ರತ್ಯೇಕ ದಿನ ನೀಡಬೇಕೆಂದು ರಾಜ್ಯ ಸರ್ಕಾರ ಪ್ರಸ್ತಾಪ ಮುಂದಿಟ್ಟಿತ್ತು.ಇದು ಕಾರ್ಯಗತವಾಗುವುದೇ?
ಕೇರಳ ಹೈಕೋರ್ಟ್ ಕೇಳಿದ ಪ್ರಶ್ನೆಗೆ ನಾವು ಈ ಉತ್ತರ ನೀಡಿದ್ದೆವು. ಇದಕ್ಕೆ ಎಲ್ಲ ಪಕ್ಷಗಳು ಒಪ್ಪಿದ್ದವು.ಶಬರಿಮಲೆಯ ಆಚಾರ ಮತ್ತು ಸಂಪ್ರದಾಯದಲ್ಲಿ ಬದಲಾವಣೆಗಳು ಬಂದಿವೆ.ಪ್ರತಿ ತಿಂಗಳು ದೇವಾಲಯದ ಬಾಗಿಲು ತೆರೆಯುವ ಸಂಪ್ರದಾಯ ಈ ಹಿಂದೆ ಇರಲಿಲ್ಲ. ದೇವರ ದರ್ಶನದ ದಿನಗಳೂ ಹೆಚ್ಚಿವೆ. ಹೀಗಿರುವಾಗ ದೇವರ ದರ್ಶನಕ್ಕಾಗಿ ಮಹಿಳೆಯರಿಗಾಗಿ ಪ್ರತ್ಯೇಕ ದಿನ ನೀಡುವುದು ಕಷ್ಟವಾಗಲ್ಲ,

ಹೊಸ ಮರುಪರಿಶೀಲನಾ ಅರ್ಜಿ ಬಗ್ಗೆ ಜನವರಿ 22ರಂದು ಸುಪ್ರೀಂ ವಿಚಾರಣೆ ನಡೆಸಲಿದೆ. ಅರ್ಜಿದಾರರು ವಾದಿಸುವಂತೆ ಸಂಪ್ರದಾಯ ರಕ್ಷಣೆಗಾಗಿ ಕಾನೂನಿನಲ್ಲಿ ವಿನಾಯಿತಿ ಪಡೆಯುವ ಹಕ್ಕು ಧರ್ಮಗಳಿಗೆ ಇದೆಯೇ?
ಸಂಪ್ರದಾಯದ ಬಗ್ಗೆಯೂ ಸಂವಿಧಾನದ ಬಗ್ಗೆಯೂ ಹಲವಾರು ಬಾರಿ ಸುಪ್ರೀಂಕೋರ್ಟ್ ಹೇಳಿದೆ.ಇದರಲ್ಲಿ ಸಂದಿಗ್ಧತೆ ಇದೆ ಎಂದು ನನಗನಿಸುವುದಿಲ್ಲ.
ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಬಲವಂತವಾಗಿ ಹಿಂದಿರುಗಿಸಿ ಕಳಿಸಲಾಗುತ್ತದೆ. ಸರ್ಕಾರ ಭದ್ರತೆ ಒದಗಿಸಿದರೂ ಈ ರೀತಿ ಮಾಡಲಾಗುತ್ತದೆ, ಸರ್ಕಾರ ತಮ್ಮ ಭರವಸೆ ಪೂರೈಸುವಲ್ಲಿ ವಿಫಲವಾಗಿದೆ ಎಂದು ಅವರು ಅಂದುಕೊಂಡಿದ್ದಾರೆ. ಕೆಲವೊಬ್ಬರು ಹೋರಾಟಗಾರರಾಗಿದ್ದ ಕಾರಣ ದೇವಾಲಯದಿಂದ ಅವರನ್ನು ವಾಪಸ್ ಕಳುಹಿಸಲಾಯಿತು.
ಹಲವಾರು ಕಾಂಗ್ರೆಸ್ಸಿಗರು ಸೂರ್ಯಾಸ್ತಮಾನದ ನಂತರ ಆರ್‌ಎಸ್‌ಎಸ್‌ನವರಾಗುತ್ತಾರೆ ಎಂದು ಎ.ಕೆ ಆ್ಯಂಟನಿ ಹೇಳಿದ್ದರು.ಶಬರಿಮಲೆ ವಿಷಯದಲ್ಲಿ ಹೇಳುವುದಾದರೆ ರಾತ್ರಿ ಅಲ್ಲ, ಬೆಳಕಿದ್ದಾಗಲೇ ಅವರು ಆರ್‌ಎಸ್ಎಸ್‍ನವರಾಗುತ್ತಾರೆ.
ಅಯ್ಯಪ್ಪನ ವಿಷಯದಲ್ಲಿ ಕೋಮುಶಕ್ತಿಗಳನ್ನು ಬಳಸಿ ರಕ್ತ ಹರಿಸುವ ಕಾರ್ಯವನ್ನು ನಾವು ಮಾಡುವುದಿಲ್ಲ, ಹೋರಾಟಗಾರರು ಮತ್ತು ಹೋರಾಟಗಾರರು ಅಲ್ಲದವರ ನಡುವೆ ವೈಮನಸ್ಸು ಉಂಟುಮಾಡಲು ಇಚ್ಚಿಸುವುದಿಲ್ಲ.ಒಬ್ಬ ರಾಜಕಾರಣಿ ವ್ರತಾಧಾರಿಯಾಗಬಹುದಾದರೆ ಹೋರಾಟಗಾರರೊಬ್ಬರು ಭಕ್ತರಾಗಲಾರರೇ? ಹಲವಾರು ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದರೂ ಆರ್‌ಎಸ್‌ಎಸ್‌ ಅವರನ್ನು ತಡೆದುದರಿಂದ ಅವರು ವಾಪಸ್ ಹೋಗಬೇಕಾಗಿಬಂತು.

ಸುಪ್ರೀಂಕೋರ್ಟ್ ತೀರ್ಪಿಗೆ ಬೆಂಬಲ ನೀಡಿದ್ದಕ್ಕಾಗಿ ಕೆಲವು ವಿದ್ವಾಂಸರಿಗೆ ಹತ್ಯೆ ಬೆದರಿಕೆ ಎದುರಿಸಬೇಕಾಗಿ ಬಂತು.ದಲಿತ ಶಿಕ್ಷಕಿ ಬಿಂದು ತಂಗಂ ಕಲ್ಯಾಣಿ ಶಬರಿಮಲೆಗೆ ಬಂದಾಗ ಅವರಿಗೆ ಬೆದರಿಕೆಯೊಡ್ಡಲಾಯಿತು.ಈ ರೀತಿಯ ಸಂಘರ್ಷ ಶಕ್ತಿಗಳಿಗೆ ಕಡಿವಾಣ ಹಾಕಿಲ್ಲವೇ?
ಇಂಥಾ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇದೆ. ಜನರಿಗೆ ಬೆದರಿಕೆಯೊಡ್ಡುವ ಶಕ್ತಿಗಳನ್ನು ನಾನು ಖಂಡಿಸಿದ್ದೇನೆ.ನಾವು ಸಂಪೂರ್ಣ ಭದ್ರತೆ ಒದಗಿಸುತ್ತೇವೆ.ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 3,000ಕ್ಕಿಂತಲೂ ಹೆಚ್ಚು ಮಂದಿ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ.
ಇಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತೋರಬಹುದು.ಆದರೆ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.

ನೀವು ಕಠಿಣ ನಿಲುವು ಸ್ವೀಕರಿಸಿದ್ದೀರಿ ಮತ್ತು ನಿಮ್ಮ ಕೆಳಗಿರುವ ನಾಯಕರು ಮೌನವಹಿಸಿದ್ದಾರೆ.ನಿಮ್ಮ ಪಕ್ಷದಲ್ಲಿ ಭಿನ್ನಮತ ಇದೆಯೇ? ಯಾಕೆಂದರೆ ಸರ್ಕಾರ ತರಾತುರಿಯ ನಿರ್ಧಾರ ಕೈಗೊಂಡಿದೆ ಎಂದು ಕೆಲವು ನಾಯಕರಿಗೆ ಅನಿಸಿದೆ.

ಕೋಮು ಶಕ್ತಿಗಳ ವಿರುದ್ಧ ಎಲ್‍ಡಿಎಫ್ ಆಯೋಜಿಸಿದ ರ‍್ಯಾಲಿಗಳನ್ನು ನೋಡಲು ನಾನು ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ.ಎಡಪಕ್ಷ ಒಗ್ಗಟಾಗಿಯೇ ಇದೆ. ನಮ್ಮಲ್ಲಿ ಯಾವುದೇ ಭಿನ್ನಮತ ಅಥವಾ ಗೊಂದಲ ಇಲ್ಲ.

ಶಬರಿಮಲೆ ವಿಷಯದಿಂದಾಗಿ ಮೇಲ್ಜಾತಿಯವರ ಬೆಂಬಲ ಬಿಜೆಪಿ- ಆರ್‌ಎಸ್ಎಸ್‍ಗೆ ದೊರಕಲು ಸಹಾಯವಾಗುತ್ತಿದೆಯೇ?
ಅದು ಅವರ ಉದ್ದೇಶ ಆಗಿರಬಹುದು.ಆದರೆ ಅವರ ಮುಖವಾಡ ಕಳಚಿ ಬಿದ್ದು, ಅವರೀಗ ಏಕಾಂಗಿಯಾಗಿದ್ದಾರೆ.ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಒಂದು ತಿಂಗಳಲ್ಲಿ ಆರು ಹರತಾಳಗಳಿಗೆ ಕರೆ ನೀಡಿತ್ತು.ಅವರು ತೀರ್ಥ ಯಾತ್ರೆ ಕೈಗೊಂಡ ಭಕ್ತರನ್ನೂ ಸುಮ್ಮನೆ ಬಿಟ್ಟಿಲ್ಲ, ಈಗ ಜನರಿಗೆ ಬಿಜೆಪಿಯವರ ಸ್ವಭಾವ ಏನು ಎಂಬುದು ಗೊತ್ತಾಗಿದೆ.

ಕೇರಳದಲ್ಲಿನ ಜಾತ್ಯಾತೀತ ನಿಲುವಿನಿಂದಾಗಿ ಶಬರಿಮಲೆ ಬಗ್ಗೆ ಕಾಂಗ್ರೆಸ್‍ನೊಳಗೆ ಇದ್ದ ವಿರೋಧಾಭಾಸಗಳು ಕಡಿಮೆಯಾಗಿವೆ ಎಂದು ನಿಮಗನಿಸುತ್ತಿದೆಯೇ?

ಕೇರಳದಲ್ಲಿರುವ ಕಾಂಗ್ರೆಸ್‍ನ್ನು ಅಮಿತ್ ಶಾ ಮುನ್ನಡೆಸುತ್ತಿದ್ದಾರೆ.ಇಲ್ಲಿ ರಾಹುಲ್ ಗಾಂಧಿಗೆ ಪಾತ್ರ ಇದೆ ಎಂದು ನನಗೆ ಅನಿಸುತ್ತಿಲ್ಲ.ಸುಪ್ರೀಂಕೋರ್ಟ್ ತೀರ್ಪನ್ನು ಐತಿಹಾಸಿಕ ಎಂದು ಹೇಳಿರುವ ರಾಹುಲ್ ಹೇಳಿಕೆಯನ್ನು ಕೇರಳ ಕಾಂಗ್ರೆಸ್ ನಾಯಕರು ಕಸದ ಬುಟ್ಟಿಗೆ ಎಸೆದಿದ್ದಾರೆ.ಬಿಜೆಪಿ ಬ್ಯಾನರ್ ಅಡಿಯಲ್ಲಿಯೇ ಕಾಂಗ್ರೆಸ್‍ನವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.ಇದಕ್ಕಿಂತ ಹಾಸ್ಯಾಸ್ಪದವಾದುದು ಇನ್ನೇನಿದೆ? ಅಂದೊಮ್ಮೆ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆ್ಯಂಟನಿ ಹೇಳಿದ್ದರು, ಕತ್ತಲಾದ ಮೇಲೆ ಕಾಂಗ್ರೆಸ್‍ನವರು ಆರ್‌ಎಸ್‌ಎಸ್‌‍ನವರಾಗುತ್ತಾರೆ ಎಂದು.ಆದರೆ ಶಬರಿಮಲೆಯಲ್ಲಿ ಬೆಳಗ್ಗಿನ ಹೊತ್ತೇ ಅವರು ಆರ್‌ಎಸ್‌ಎಸ್‌‍ನವರಾಗಿದ್ದರು. ಆರ್‌ಎಸ್‌ಎಸ್‌‍ನ ಈ 'ಬಿ' ಟೀಂ ಕಾಂಗ್ರೆಸ್‍ಗೆ ಮಾರಕವಾಗಲಿದೆ.

ಮಹಿಳೆಯರಿಗೆ ಪ್ರವೇಶಾನುಮತಿ ನೀಡಿದ ಸುಪ್ರೀಂ ತೀರ್ಪು ವಿರುದ್ಧ ನೂರಾರು ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದು ನೋಡಿ ಅಚ್ಚರಿಯಾಯಿತು.ಅಭಿವೃದ್ಧಿ ಹೊಂದಿದ ರಾಜ್ಯವೊಂದರಲ್ಲಿ ಸುಪ್ರೀಂ ತೀರ್ಪು ವಿರುದ್ಧ ಪ್ರತಿಭಟನೆಯೇ?
ಕೆಲವು ಮಹಿಳೆಯರಿಗೆ ತಪ್ಪಾದ ಮಾಹಿತಿ ನೀಡಲಾಗಿದೆ ಎಂಬುದು ಸತ್ಯ. ಪ್ರತಿಭಟನೆಯಲ್ಲಿ ಭಾಗಿಯಾಗದೇ ಇರುವ ಮಹಿಳೆಯರ ಅಭಿಪ್ರಾಯವನ್ನು ಕೇಳಲು ಯಾರೊಬ್ಬರೂ ಮುಂದಾಗಿಲ್ಲ, ಇಷ್ಟೊಂದು ಅಲ್ಪ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುವರನ್ನು ನೋಡಿ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ.ಈ ರೀತಿ ಪ್ರತಿಭಟನೆ ಮಾಡುವವರು ಸದಾ ಇದ್ದೇ ಇರುತ್ತಾರೆ.ಆದರೆ ಇಂಥಾ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಲ್ಲಲುಕೇರಳಕ್ಕೆ ಸಾಧ್ಯವಾಗಿದೆ.ಈ ಹಿಂದೆಯೂ ನಾವು ಅದನ್ನು ತೋರಿಸಿದ್ದೆವು. ಮುಂದೆಯೂ ನಾವು ಅದನ್ನು ಸಾಧಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT