ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಕಾಲುವೆ ಒಡೆದು ಬೆಳೆ ಹಾನಿ

30 ಗಂಟೆಗಳ ನಂತರ ದುರಸ್ತಿ ಕಾರ್ಯ ಮುಂದಾದ ಅಧಿಕಾರಿಗಳು
Last Updated 8 ಮಾರ್ಚ್ 2018, 7:42 IST
ಅಕ್ಷರ ಗಾತ್ರ

ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ)ಯ ಉಪ ಕಾಲುವೆ 15ರ ವ್ಯಾಪ್ತಿಯ ಅಂಚೆಸೂಗೂರು –ಅಂಜಳ ಗ್ರಾಮದ ಹತ್ತಿರ ಇರುವ ಬಿಡಿ–5 ಮಂಗಳವಾರ ಬೆಳಿಗ್ಗೆ ಒಡೆದಿರುವುದರಿಂದ ಕೆಳ ಭಾಗದ ಜಮೀನುಗಳು ಜಲಾವೃತಗೊಂಡಿದ್ದು, ರೈತರ ಬೆಳೆ ಹಾನಿಗೊಳಗಾಗಿದೆ.

ನಿರ್ಮಾಣದ ಹಂತದಲ್ಲಿಯೇ ಗುಣಮಟ್ಟದ ಕಾಮಗಾರಿ ಮಾಡಲು ಅನೇಕ ಬಾರಿ ಮನವಿ ಮಾಡಿಕೊಂಡರೂ ಗುತ್ತಿಗೆದಾರರು ಗಮನ ಹರಿಸದೆ ಕಳಪೆ ಕಾಮಗಾರಿ ಕೈಗೊಂಡ ಪರಿಣಾಮ ಕಾಲುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಾಲುವೆ ಯಾವುದೇ ಸಂದರ್ಭದಲ್ಲಿ ಒಡೆಯುವ ಸಾಧ್ಯತೆಯಿದೆ.

ರೈತ ರಾಮಣ್ಣ ಕಳೆದ ಆರು ತಿಂಗಳ ಹಿಂದೆಯೇ ಕಾಲುವೆ ಬಿರುಕು ಬಿಟ್ಟಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದಾರೆ ಮಂಗಳವಾರ ಬೆಳಿಗ್ಗೆ ಅದೇ ಸ್ಥಳದಲ್ಲಿಯೇ ನೀರಿನ ಒತ್ತಡ ಹೆಚ್ಚಾದ್ದರಿಂದ ಒಡೆದಿದ್ದು, 4.28 ಗುಂಟೆ ಜಮೀನಿನಲ್ಲಿ ಇದ್ದ ಹತ್ತಿ ಬೆಳೆಗೆ ನೀರು ನುಗ್ಗಿ ಸಂಪೂರ್ಣವಾಗಿ ಹಾಳಾಗಿದೆ. ಇದರ ಪಕ್ಕದಲ್ಲಿ ಇದ್ದ ವೀರನಗೌಡ ಲಿಂಗನಗೌಡ ಹೂವಿನಹೆಡ್ಗಿ ಅಂಚೆಸೂಗೂರು ಅವರ ಜಮೀನಿಗೆ ನೀರು ನುಗ್ಗಿ 12 ಎಕರೆಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಜಲಾವೃತಗೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಇಬ್ಬರೂ ರೈತರು ಆರೋಪಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಜಮೀನು ಕಡೆ ಬಂದಿದ್ದ ರೈತರು ಕಾಲುವೆ ಒಡೆದ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಗಿದ್ದರೂ ಬುಧವಾರ ಮಧ್ಯಾಹ್ನದವರೆಗೂ ಯಾರೊಬ್ಬರೂ ಅತ್ತಕಡೆ ಸುಳಿದಿಲ್ಲ. ಕಾಲುವೆ ನೀರು ಸ್ಥಗಿತಗೊಳಿಸದೆ ಇರುವುದರಿಂದ 30 ಗಂಟೆಗಿಂತ ಹೆಚ್ಚು ಕಾಲ ಸತತವಾಗಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾನಿಯಾಗಿದೆ.

‘ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲು ನೀರಾವರಿ ಇಲಾಖೆಗೆ ಕಳೆದ ಆರು ತಿಂಗಳ ಹಿಂದೆಯೇ ಮನವಿ ಮಾಡಿದ್ದರೂ ಇದಕ್ಕೆ ಅಧಿಕಾರಿಗಳು ಗಮನ ಹರಿಸಿಲ್ಲ. ಅಲ್ಲದೇ ನೀರಾವರಿ ಸಚಿವರಿಗೆ ಮನವಿ ಮಾಡಿದ್ದರೂ ಯಾರೊಬ್ಬರೂ ಇತ್ತಕಡೆ ಸುಳಿದಿಲ್ಲ’ ಎಂದು ಕೆಳ ಭಾಗದ ರೈತ ರಾಮಣ್ಣ ಅಂಬಿಗೆರ ಅಂಚೆಸುಗೂರು ತಿಳಿಸಿದರು.

ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲುವೆ ಒಡೆಯಲು ಮುಖ್ಯ ಕಾರಣವಾಗಿದ್ದು, ಬೆಳೆ ಹಾನಿಗೆ ಕೂಡಲೇ ಪರಿಹಾರ ನೀಡಬೇಕು ಮತ್ತು ಒಡೆದ ಕಾಲುವೆಯನ್ನು ಗುಣಮಟ್ಟದ ರೀತಿಯಲ್ಲಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

**

ನೀರಿನ ಒತ್ತಡ ಹೆಚ್ಚಾಗಿ ಉಪ ಕಾಲುವೆ ಒಡೆದಿದ್ದು, ದುರಸ್ತಿ ಕಾರ್ಯ ನಡೆದಿದೆ. ಗುರುವಾರ ಕಾಲುವೆಗೆ ನೀರು ಹರಿಸಲಾಗುವುದು.

-ಶ್ರೀನಿವಾಸ, ಎಇಇ, ಎನ್‌ಆರ್‌ಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT