ಮಂಗಳವಾರ, ಮಾರ್ಚ್ 2, 2021
29 °C
ಲೋಕಸಭಾ ಚುನಾವಣೆ; ವಿವಿಪ್ಯಾಟ್‌ ಎಣಿಕೆಗೆ ಒತ್ತಾಯ

ಇವಿಎಂ ವಿಚಾರ: ಚುನಾವಣೆಯಲ್ಲಿ ಮತಪತ್ರ ಬಳಕೆ ನಿಲುವು ಬದಲಿಸಿದ ವಿರೋಧ ಪಕ್ಷಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮತ ಪತ್ರಗಳ ಬಳಕೆಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿರುವ ಬೆನ್ನಲೇ ವಿರೋಧ ಪಕ್ಷಗಳು ತಮ್ಮ ನಿಲುವು ಬದಲಿಸಿಕೊಂಡಿದ್ದು, ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಫಲಿತಾಂಶದೊಂದಿಗೆ ವಿವಿಪ್ಯಾಟ್‌ಗಳ ಎಣಿಕೆ ನಡೆಸುವಂತೆ ಆಗ್ರಹಿಸಿವೆ. 

ಹಲವು ವಿರೋಧ ಪಕ್ಷಗಳ ಮುಖಂಡರು ಸೋಮವಾರ ಸಭೆ ಸೇರಿ ಇವಿಎಂ ದುರುಪಯೋಗದ ಕುರಿತು ಚರ್ಚಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಘೋಷಣೆಗೂ ಮುನ್ನ ಇವಿಎಂ ಫಲಿತಾಂಶದ ಶೇ 50ರಷ್ಟು ವಿವಿಪ್ಯಾಟ್‌ಗಳ ಎಣಿಕೆ ನಡೆಸಬೇಕು. ಫಲಿತಾಂಶದ ಹೋಲಿಕೆ ಮಾಡಬೇಕು ಹಾಗೂ ಅದು ಸಮವಾಗಿರಬೇಕು ಎಂದು ಚುನಾವಣಾ ಆಯೋಗದ ಸಮಿತಿಗೆ ವಿರೋಧ ಪಕ್ಷಗಳು ಒತ್ತಾಯಿಸಿವೆ. 

ಎವಿಎಂ ವಿಶ್ವಾಸಾರ್ಹತೆ ಬಗ್ಗೆ ದೇಶದ ಜನರಿಗೆ ಅನುಮಾನಗಳಿವೆ ಎಂದು ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷಗಳ ಮುಖಂಡರು ತಿಳಿಸಿದ್ದಾರೆ. 

ಇವಿಎಂಗಳ ವಿರುದ್ಧದ ಹೋರಾಟ ತೀವ್ರಗೊಳಿಸಲು ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಸಭೆ ಸೇರಿದ್ದರು. ಹಿಂದಿನ ಚುನಾವಣಾ ಪ್ರಕ್ರಿಯೆಯಂತೆ ಮತಪತ್ರಗಳ ವ್ಯವಸ್ಥೆ ಬಳಸಲು ಒತ್ತಾಯಿಸಿದ್ದವು. ಆದರೆ, ಹಿಂದಿನ ವ್ಯವಸ್ಥೆ ಮರಳುವುದು ಅಸಾಧ್ಯವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸುತ್ತಿದ್ದಂತೆ, ವಿರೋಧ ಪಕ್ಷಗಳು ತಮ್ಮ ನಿಲುವು ಬದಲಿಸಿಕೊಂಡಿವೆ. ಶೇ 50ರಷ್ಟು ಇವಿಎಂ ಫಲಿತಾಂಶವನ್ನು ವಿವಿಪ್ಯಾಟ್‌ ಎಣಿಕೆಯೊಂದಿಗೆ ಹೋಲಿಸುವಂತೆ ಒತ್ತಾಯಿಸಿವೆ. 

ವಿರೋಧ ಪಕ್ಷಗಳ ಮುಖಂಡರ ಸಭೆಯಲ್ಲಿ ಕಾಂಗ್ರೆಸ್‌ನ ಗುಲಾಮ್‌ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಹಮದ್‌ ಪಟೇಲ್‌ ಹಾಗೂ ಆನಂದ್‌ ಶರ್ಮಾ ಇದ್ದರು. ಚಂದ್ರಬಾಬು ನಾಯ್ಡು(ಟಿಡಿಪಿ), ಮಜಿದ್‌ ಮೆನನ್‌(ಎನ್‌ಸಿಪಿ), ರಾಮ್‌ಗೋಪಾಲ್‌ ಯಾದವ್‌(ಎಸ್‌ಪಿ), ಸತೀಶ್‌ ಚಂದ್ರ ಮಿಶ್ರಾ(ಬಿಎಸ್‌ಪಿ), ಓಮರ್‌ ಅಬ್ದುಲ್ಲಾ(ಎನ್‌ಸಿ), ಮೊಹಮ್ಮದ್‌ ಸಲೀಂ ಹಾಗೂ ಟಿ.ಕೆ.ರಂಗರಾಜನ್‌(ಸಿಪಿಐಎಂ), ಮನೋಜ್‌ ಝಾ(ಆರ್‌ಜೆಡಿ), ಡ್ಯಾನಿಶ್‌ ಅಲಿ(ಜೆಡಿಎಸ್‌) ಸೇರಿದಂತೆ ಹಲವರು ಭಾಗಿಯಾಗಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು