ಮೇನಕಾ–‘ಮಹಾ’ ಸಚಿವರ ವಾಕ್ಸಮರ

7
ನರಭಕ್ಷಕ ಹುಲಿ ‘ಅವನಿ’ ಹತ್ಯೆ ಪ್ರಕರಣ * ಸಚಿವೆ ಬಯಸಿದರೆ ತನಿಖೆಗೆ ಸಿದ್ಧ

ಮೇನಕಾ–‘ಮಹಾ’ ಸಚಿವರ ವಾಕ್ಸಮರ

Published:
Updated:

ಮುಂಬೈ: ನರಭಕ್ಷಕ ಹೆಣ್ಣು ಹುಲಿ ‘ಅವನಿ’ಯನ್ನು ಮಹಾರಾಷ್ಟ್ರ ಸರ್ಕಾರ ಗುಂಡಿಟ್ಟು ಕೊಲ್ಲಿಸಿರುವುದನ್ನು ಕೇಂದ್ರ ಸಚಿವೆ ಮೇನಕಾ ಗಾಂಧಿ ತೀವ್ರವಾಗಿ ವಿರೋಧಿಸಿ ಸರಣಿ ಟ್ವೀಟ್‌ ಮಾಡಿರುವುದಕ್ಕೆ, ರಾಜ್ಯ ಅರಣ್ಯ ಸಚಿವ ಸುಧೀರ್‌ ಮುಂಗಂತಿವಾರ್‌ ಸೋಮವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮೇನಕಾ ಗಾಂಧಿಯವರು ಬಯಸಿದರೆ ಮತ್ತು ಹುಲಿ ಹತ್ಯೆ ವಿರುದ್ಧ ಅವರು ಮುಖ್ಯಮಂತ್ರಿಗೆ ದೂರು ನೀಡಿದರೆ, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೇನಕಾ ಅವರ ಆರೋಪಗಳ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿರುವ ಸಚಿವರು, ‘ನರಭಕ್ಷಕ ಹುಲಿಗಳನ್ನು ಕೊಲ್ಲಲು ಆದೇಶಿಸುವ ಹಕ್ಕು ಸಂಬಂಧಿಸಿದ ಸಚಿವರು ಅಥವಾ ಸಚಿವಾಲಯಕ್ಕೆ ಇದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿ ಪ್ರಕಾರವೇ ಈ ಕಾರ್ಯಾಚರಣೆ ನಡೆದಿದೆ. ಇದು ಸರಿಯಲ್ಲ ಎನಿಸಿದರೆ ಅವರು ಎನ್‌ಟಿಸಿಯ ಮಾರ್ಗಸೂಚಿಗಳಿಗೇ ಬದಲಾವಣೆ ತರುವಂತೆ ಸೂಚಿಸಬಹುದು. ಹುಲಿ ಕೊಂದ ಶಾರ್ಪ್‌ ಶೂಟರ್‌ ವಿರುದ್ಧ ಕ್ರಿಮಿನಲ್‌ ಅಪರಾಧದ ಪ್ರಕರಣಗಳಿದ್ದರೆ ಆತನನ್ನು ಬಂಧಿಸುವಂತೆ ಮೇನಕಾ ಅವರೇ ಆದೇಶಿಸಬಹುದು’ ಎಂದಿದ್ದಾರೆ.

‘ಮೇನಕಾ ಪ್ರಾಣಿಪ್ರಿಯರು. ಆದಾಗ್ಯೂ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಎನ್ನುವುದನ್ನು ಮರೆಯಬಾರದು. ಈ ಹುಲಿ ಮಹಿಳೆಯರನ್ನು ಕೊಂದಿರುವುದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಸುಧೀರ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

‘ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಲೋಪಗಳಾಗಿದ್ದರೆ ತನಿಖೆ ನಡೆಸಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ಅವನಿ ಹತ್ಯೆ: ಶಿವಸೇನಾ ವಾಗ್ದಾಳಿ
‘ಜನರ ಸಾವಿಗೆ ಕಾರಣವಾಯಿತೆಂದು ಹುಲಿ ಅವನಿಯನ್ನು ಹತ್ಯೆ ಮಾಡಲಾಯಿತು. ಆದರೆ, ಇದೇ ರೀತಿ ರೈತರ ಸಾವಿಗೆ ಕಾರಣರಾದ ಯಾರೊಬ್ಬರಿಗೂ ಶಿಕ್ಷೆ ನೀಡಿದ್ದನ್ನು ನಾವು ಕಾಣಲೇ ಇಲ್ಲ’ ಎಂದು ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನಾ ವ್ಯಂಗ್ಯವಾಡಿದೆ.

ಹರ್ಷವರ್ಧನ್‌ ಎದಿರೇಟು
‘ಅವನಿ’ ಹತ್ಯೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ‘ನಿಮ್ಮಿಂದ ನಮಗೆ ಪ್ರಮಾಣಪತ್ರ ಬೇಕಿಲ್ಲ’ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಎದಿರೇಟು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !