ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ, ಉದ್ಯೋಗ, ಕುಟುಂಬ– ವ್ಯಕ್ತಿಯ ಎಲ್ಲ ಮಾಹಿತಿ ಮೇಲೂ ಕೇಂದ್ರದ ಕಣ್ಗಾವಲು

Last Updated 16 ಮಾರ್ಚ್ 2020, 23:30 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಭಾರತದ ಪ್ರತಿ ಪ್ರಜೆಯ ಸಮಗ್ರ ವಿವರ ಮತ್ತು ಅವರ ವೈಯಕ್ತಿಕ ಬದುಕಿನ ಪ್ರತಿ ಚಲನವಲನದ ಮೇಲೂ ನಿಗಾ ಇರಿಸುವ ಮಹಾ ಕಣ್ಗಾವಲು ವ್ಯವಸ್ಥೆಯನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಂತಿಮ ಹಂತದ ಸಿದ್ಧತೆ ನಡೆಸಿದೆ.ರಾಷ್ಟ್ರೀಯ ಸಾಮಾಜಿಕ ನೋಂದಣಿ (ಎನ್‌ಎಸ್‌ಆರ್‌) ಎಂಬ ಹೆಸರಿನಲ್ಲಿ ದೇಶದ ಸಮಗ್ರ ಡೇಟಾಬೇಸ್‌ (ದತ್ತಾಂಶ ಕೋಶ) ಅನ್ನು ರೂಪಿಸಲಾಗುತ್ತಿದೆ. ಸ್ವಯಂಚಾಲಿತವಾಗಿ ಪರಿಷ್ಕರಣೆ ಆಗಬಲ್ಲ ಈ ವ್ಯವಸ್ಥೆಯನ್ನು 2020ರ ಅಂತ್ಯದ ವೇಳೆಗೆ ಜಾರಿಗೆ ತರಲು ತೆರೆಮರೆಯಲ್ಲಿ ಕೆಲಸಗಳು ನಡೆಯುತ್ತಿವೆ.

2011ರ ಜನಸಂಖ್ಯಾ ಗಣತಿಯ ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯನ್ನೂ (ಎಸ್‌ಇಸಿಸಿ) ನಡೆಸಲಾಗಿದೆ. ಎಸ್‌ಇಸಿಸಿಯ ದತ್ತಾಂಶವು, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನವನ್ನು ಅನರ್ಹರು ಪಡೆಯುವುದನ್ನು ತಪ್ಪಿಸಲು ನೆರವಾಗಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಲಾಗಿದೆ. ಎಸ್‌ಇಸಿಸಿಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವೇ ರೂಪಿಸಿದ್ದರಿಂದ ಈ ಅಭಿಪ್ರಾಯ ಇನ್ನಷ್ಟು ದೃಢಗೊಳ್ಳುವುದು ಸಾಧ್ಯವಾಯಿತು. ಎಸ್‌ಇಸಿಸಿಯ ಪರಿಷ್ಕರಣೆಯು ವಿಶೇಷವೇನೂ ಇಲ್ಲದ, ಆತಳಿತಾತ್ಮಕ ಕ್ರಮ ಎಂಬ ಭಾವನೆ ಬರುವಂತೆಯೂ ಮಾಡಲಾಗಿದೆ.ಪ್ರಸ್ತಾವಿತ ‘ರಾಷ್ಟ್ರೀಯ ಸಾಮಾಜಿಕ ನೋಂದಣಿ’ ಸಿದ್ಧಪಡಿಸುವುದಕ್ಕಾಗಿ ಐದು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ.

ಕುಮಾರ ಸಂಭವ ಶ್ರೀವಾಸ್ತವ

ಆದರೆ,ಸರ್ಕಾರದ ವಿವಿಧ ಇಲಾಖೆಗಳ ನಡುವೆ ನಡೆದಿರುವ ಪತ್ರ ವ್ಯವಹಾರಗಳು ಮತ್ತು ಸಭೆಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಇದಕ್ಕೆ ವ್ಯತಿರಿಕ್ತವಾಗಿವೆ.

‘ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಮಾಹಿತಿ ಮಾತ್ರವಲ್ಲ, ಬದಲಿಗೆ ಭಾರತದ ಪ್ರತಿಯೊಬ್ಬನ ವಿವರವನ್ನೂ ‘ರಾಷ್ಟ್ರೀಯ ಸಾಮಾಜಿಕ ನೋಂದಣಿ’ಯಲ್ಲಿ ಸಂಗ್ರಹಿಸಲಾಗುತ್ತದೆ.ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳ ಬಳಿ ಇರುವ ದತ್ತಾಂಶಗಳನ್ನು ಕಲೆಹಾಕಿ, ಸಮಗ್ರ ದತ್ತಾಂಶವನ್ನು ರೂಪಿಸಲಾಗುತ್ತದೆ.ರಾಷ್ಟ್ರೀಯ ಸಾಮಾಜಿಕ ನೋಂದಣಿ ಅಡಿ ಪ್ರತಿ ವ್ಯಕ್ತಿಯ ಸಮಗ್ರ ವಿವರ ಒಂದು ಡೇಟಾಬೇಸ್‌ನಲ್ಲಿ ಸಂಗ್ರಹವಾಗಲಿದೆ.ಆ ವ್ಯಕ್ತಿಯ ಧರ್ಮ, ಜಾತಿ, ವೈವಾಹಿಕ ಮತ್ತು ಕೌಟುಂಬಿಕ ಮಾಹಿತಿ, ಉದ್ಯೋಗ–ವ್ಯವಹಾರ–ವೇತನ–ವೆಚ್ಚದ ವಿವರ, ಆಸ್ತಿವಿವರ, ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳೂ ಈ ಡೇಟಾಬೇಸ್‌ನಲ್ಲಿ ಇರಲಿವೆ.ಈ ಎಲ್ಲಾ ವಿವರಗಳ ಜತೆಗೆ ಆತನ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗುತ್ತದೆ.ಆಧಾರ್ ಸಂಖ್ಯೆಯನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬನ ಸಮಗ್ರ ವಿವರವನ್ನು ಪರಿಶೀಲಿಸಲು ಈ ಡೇಟಾಬೇಸ್‌ ಅನುವು ಮಾಡಿಕೊಡುತ್ತದೆ. ಒಂದೇ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಗಳ ಆಧಾರ್ ಸಂಖ್ಯೆಯ ಆಧಾರದಲ್ಲಿ ಆ ಕುಟುಂಬದ ವಂಶವೃಕ್ಷವನ್ನೂ ಸೇರಿಸಲಾಗುತ್ತದೆ...’

ಇ–ಆಡಳಿತ ಸಂಶೋಧಕ ಶ್ರೀನಿವಾಸ ಕೊಡಲಿ ಮತ್ತು ಕುಮಾರ ಸಂಭವ ಶ್ರೀವಾಸ್ತವ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳು ಇವನ್ನು ದೃಢಪಡಿಸಿವೆ ಎಂದು ಹಫ್‌ಪೋಸ್ಟ್‌ ಇಂಡಿಯಾ ಹೇಳಿದೆ.

ಭಾರತೀಯ ಜನಸಂಖ್ಯಾ ಗಣತಿ ಅಡಿ ಸಂಗ್ರಹಿಸಲಾದ ಮಾಹಿತಿಯ ಗೌಪ್ಯತೆಯನ್ನು ಕಾಪಾಡಬೇಕಾದ ನಿರ್ಬಂಧವನ್ನು 1948ರ ಜನಸಂಖ್ಯಾ ಗಣತಿ ಕಾಯ್ದೆ ಹೇರುತ್ತದೆ. ಆದರೆ, ರಾಷ್ಟ್ರೀಯ ಸಾಮಾಜಿಕ ನೋಂದಣಿಗೆ ಇಂತಹ ಯಾವುದೇ ಕಾಯ್ದೆಯ ನಿಯಂತ್ರಣವಿಲ್ಲ. ಇಲ್ಲಿ ದತ್ತಾಂಶ ಸಂಗ್ರಹಕ್ಕೆ ಯಾವುದೇ ಮಿತಿ ಇಲ್ಲ. ಸರ್ಕಾರದ ಬೆಂಬಲದ ಮೇಲೆ ಅವಲಂಬಿತರಾಗಿರುವ ಬಡತನ ರೇಖೆಗಿಂತ ಕೆಳಗಿನ ಜನರ ದತ್ತಾಂಶ ಸಂಗ್ರಹಕ್ಕಷ್ಟೇ ಇದು ಸೀಮಿತ ಅಲ್ಲ, ಭಾರತದ ಪ್ರತಿ ಪ್ರಜೆಯ ಮಾಹಿತಿಯೂ ಇಲ್ಲಿ ಸಂಗ್ರಹ ಆಗಲಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಿಗಳು ಮತ್ತು ಸಲಹೆಗಾರರ ಕಲ್ಪನೆಗಳೆಲ್ಲ ಜಾರಿಗೆ ಬಂದರೆ, ಸಾಮಾಜಿಕ ನೋಂದಣಿಯು ಎಲ್ಲ ಪೌರರ ಎಲ್ಲ ಚಲನವಲನಗಳ ಮೇಲೆ ನಿಗಾ ಇರಿಸಲಿದೆ. ಅಂದರೆ, ವ್ಯಕ್ತಿಯು ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋದರೆ, ಕೆಲಸ ಬದಲಾಯಿಸಿದರೆ, ಹೊಸ ಆಸ್ತಿ ಖರೀದಿಸಿದರೆ, ಕುಟುಂಬದಲ್ಲಿ ಮಗುವೊಂದು ಜನಿಸಿದರೆ, ಯಾರಾದರೂ ಸತ್ತರೆ, ಮದುವೆಯಾದರೆ, ಮದುವೆಯಾದ ಬಳಿಕ ಹುಡುಗಿಯು ಹುಡುಗನ ಮನೆಗೆ ವಾಸ್ತವ್ಯ ಬದಲಿಸಿದರೆ ಮುಂತಾದ ಎಲ್ಲ ವಿವರಗಳೂ ಸ್ವಯಂಚಾಲಿತವಾಗಿ ದಾಖಲಾಗಲಿವೆ. ಆಧುನಿಕ ಡೇಟಾಬೇಸ್‌ ವ್ಯವಸ್ಥೆಯು ಎಷ್ಟು ಸುಸಜ್ಜಿತವಾಗಿದೆ ಎಂದರೆ, ಇಲ್ಲಿ ಸಂಗ್ರಹಿಸಬಹುದಾದ ದತ್ತಾಂಶದ ಪ್ರಮಾಣಕ್ಕೆ ಯಾವ ಮಿತಿಯೂ ಇಲ್ಲ.

ಭಾರತದಲ್ಲಿರುವ ಪ್ರತಿಮನೆಯನ್ನೂ ಇಸ್ರೊ ಅಭಿವೃದ್ಧಿಪಡಿಸಿರುವ ಭುವನ್ ಆ್ಯಪ್‌ನಲ್ಲಿ ಜಿಯೋಟ್ಯಾಗ್‌ ಮಾಡಬೇಕು ಎಂದು ನೀತಿ ಆಯೋಗದ ವಿಶೇಷ ಕಾರ್ಯದರ್ಶಿ ಒಬ್ಬರು ಶಿಫಾರಸು ಮಾಡಿದ್ದಾರೆ. 2019ರ ಅಕ್ಟೋಬರ್ 4ರಂದು ನಡೆದಿರುವ ಸಭೆಯಲ್ಲಿ ಈ ಶಿಫಾರಸಿನ ಬಗ್ಗೆ ಚರ್ಚೆಯಾಗಿದೆ.

ಸಾಮಾಜಿಕ ನೋಂದಣಿ ಸಿದ್ಧಪಡಿಸುವುದು ದೂರದ ಕನಸಾಗಿಯೇನೂ ಉಳಿದಿಲ್ಲ.

ಇದನ್ನು ಜಾರಿಗೆ ತರಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಂಬಂಧ ನಡೆಸಲಾದ ಪತ್ರಗಳು ಸೋರಿಕೆ ಆಗಿವೆ.

ಇಂತಹ ಸಾಮಾಜಿಕ ನೋಂದಣಿ ಸಿದ್ಧಪಡಿಸಲು ಗಟ್ಟಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂಬುದು ಕಡತ ಟಿಪ್ಪಣಿಗಳು, ಸಭೆ ನಡಾವಳಿಗಳು, ಅಂತರ ಇಲಾಖಾ ಪತ್ರವ್ಯವಹಾರಗಳಿಂದ ದೃಢವಾಗುತ್ತಿದೆ. ಈ ಎಲ್ಲ ದಾಖಲೆಗಳನ್ನು ಹಫ್‌ಪೋಸ್ಟ್‌ ಇಂಡಿಯಾ ಪರಿಶೀಲನೆಗೆ ಒಳಪಡಿಸಿದೆ.

2021ರ ಹೊತ್ತಿಗೆ ಸಾಮಾಜಿಕ ನೋಂದಣಿಯನ್ನು ಜಾರಿಗೆ ತರುವ ಸಂಬಂಧ ಪರಿಣತರ ಸಮಿತಿಯೊಂದನ್ನು ರಚಿಸಲಾಗಿದೆ. ಇದನ್ನು ಹೇಗೆ ಜಾರಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಪ್ರಾಯೋಗಿಕ ಯೋಜನೆಯನ್ನು ಸಮಿತಿಯು ಅಂತಿಮಗೊಳಿಸಿದೆ.

ಆಧಾರ್‌ ಮಾಹಿತಿ ಬಳಕೆಯನ್ನು ಸೀಮಿತಗೊಳಿಸಿ ಸುಪ್ರೀಂ ಕೋರ್ಟ್‌ 2018ರಲ್ಲಿ ತೀರ್ಪು ನೀಡಿತ್ತು. ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು ಎಂದೂ ಈ ತೀರ್ಪಿನಲ್ಲಿ ಹೇಳಲಾಗಿತ್ತು. ಈ ತೀರ್ಪನ್ನು ಉಲ್ಲಂಘಿಸದೆಯೇ ಸರ್ಕಾರವು ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ಆಧಾರ್‌ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಪರಿಣತರ ಸಮಿತಿಯು ಮುಂದಿಟ್ಟಿದೆ.ಹೀಗಾಗಿ ಆಧಾರ್ ಕಾಯ್ದೆಗೆ ತಿದ್ದುಪಡಿ ತರಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಧಿಕಾರ ಸಿದ್ಧತೆ ನಡೆಸಿದೆ ಎಂಬುದನ್ನು ಅಕ್ಟೋಬರ್‌ 4ರ ಸಭೆಯ ನಡಾವಳಿ ತೋರಿಸುತ್ತದೆ. ಆಧಾರ್‌ ಮೂಲ ಕಾಯ್ದೆಯ ಭಾಗವಾಗಿರುವ ಖಾಸಗಿತನ ಸುರಕ್ಷತೆ ಕ್ರಮಗಳನ್ನು ತೆಗೆದು ಹಾಕುವ ಮೂಲಕ 2018ರ ತೀರ್ಪನ್ನು ಅರ್ಥಹೀನಗೊಳಿಸುವುದು ಈ ತಿದ್ದುಪಡಿಯ ಉದ್ದೇಶ.

ಕೇಂದ್ರ ಮತ್ತು ರಾಜ್ಯ ಮಟ್ಟದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹಂಚಿಹೋಗಿರುವ ಡೇಟಾಬೇಸ್‌ಗಳ ನಡುವೆ ಮಾಹಿತಿಯ ಸುಲಭ ವಿನಿಮಯಕ್ಕಾಗಿ ‘ಮಾಹಿತಿ ವಿನಿಮಯ ಚೌಕಟ್ಟಿನ’ ಬಗ್ಗೆ ಆಧಾರ್‌ ಪ್ರಾಧಿಕಾರವು ಚರ್ಚೆ ನಡೆಸಿದೆ.

2019ರ ಜೂನ್‌ 17ರ ಕಡತದ ಟಿಪ್ಪಣಿಯ ಪ್ರಕಾರ, ಈ ಯೋಜನೆಗೆ ವಿಶ್ವ ಬ್ಯಾಂಕ್‌ ‘ಸಹಕಾರದ ಭರವಸೆ’ ಕೊಟ್ಟಿದೆ. ಈ ಯೋಜನೆಗಾಗಿ ತಾಂತ್ರಿಕ ನೆರವು ಕಾರ್ಯಕ್ರಮ ಅಡಿಯಲ್ಲಿ 20 ಲಕ್ಷ ಡಾಲರ್‌ (ಸುಮಾರು ₹ 15 ಕೋಟಿ) ನೆರವು ನೀಡುವುದಾಗಿಯೂ ಹೇಳಿದೆ.

ಭಾರತವನ್ನು ಗೆದ್ದಲಿನಂತೆ ಕೊರೆಯುತ್ತಿರುವ ‘ಅಕ್ರಮ ವಲಸಿಗ’ರನ್ನು ರಾಷ್ಟ್ರೀಯ ಪೌರತ್ವ ನೋಂದಣಿಯ ಮೂಲಕ ಹೊರಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಲವು ಬಾರಿ ಹೇಳಿರುವ ಸಂದರ್ಭದಲ್ಲಿಯೇ ಕಣ್ಗಾವಲಿಗೆ ಸಂಬಂಧಿಸಿದ ಮಾಹಿತಿಗಳು ಬಹಿರಂಗವಾಗಿವುದು ಗಮನಾರ್ಹ. ಅಕ್ರಮ ವಲಸಿಗರಿಗೆ ಸಂಬಂಧಿಸಿ ಶಾ ಹೇಳಿರುವ ಮಾತುಗಳಿಗೆ ಅವರು ಯಾವುದೇ ಆಧಾರಗಳನ್ನು ನೀಡಿಲ್ಲ.

ಸಮಗ್ರ ವಿವರ ಇಲ್ಲಿ ಲಭ್ಯವಿರುವ ಕಾರಣ, ಜನರನ್ನು ಜರಡಿ ಹಿಡಿಯಲು ಸರ್ಕಾರಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ. ತನಗೆ ತೋಚಿದವರನ್ನು, ‘ಇವರು ಭಾರತದ ನಾಗರಿಕರು’ ಮತ್ತು ‘ಇವರು ಭಾರತದ ನಾಗರಿಕರು ಅಲ್ಲ’ ಎಂದು ವರ್ಗೀಕರಿಸುವ ಅಧಿಕಾರ ಸರ್ಕಾರಕ್ಕೆ ದೊರೆಯಲಿದೆ. ಈ ಜರಡಿ ಹಿಡಿಯುವ ಕ್ರಿಯೆಯಲ್ಲವೂ ರಹಸ್ಯವಾಗಿ ನಡೆಯಲಿದೆ ಎಂದು ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಯಾವುದೇ ನಿಯಂತ್ರಣವಿಲ್ಲದ, ಇಂತಹ ಮಹಾನ್ ಕಣ್ಗಾವಲು ವ್ಯವಸ್ಥೆಯಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಂದೆಂದೂ ಇಲ್ಲದಂತಹ ಅಪಾಯ ಬಂದೊದಗುತ್ತದೆ’ ಎಂದು ಯೇಲ್ ವಿಶ್ವವಿದ್ಯಾಲಯದ ಫೆಲೋ ಆಗಿದ್ದ ಚಿನ್ಮಯಿ ಅರುಣ್ ಹೇಳುತ್ತಾರೆ.

‘ಸರ್ಕಾರದ ಕಣ್ಗಾವಲಿನ ವಿರುದ್ಧದ ರಕ್ಷಣಾ ವ್ಯವಸ್ಥೆ ಭಾರತದಲ್ಲಿ ಸದಾ ದುರ್ಬಲವಾಗಿಯೇ ಇತ್ತು. ಇನ್ನೇನು ಜಾರಿಯಾಗುವ ಹಂತದಲ್ಲಿರುವ ಆರ್ವೆಲಿಯನ್ (ಮುಕ್ತ ಸಮಾಜಕ್ಕೆ ಕಂಟಕವಾಗಿರುವ ಮನೋಭಾವ) ಕಣ್ಗಾವಲು ವ್ಯವಸ್ಥೆಯು, ಪ್ರಜೆ ಮತ್ತು ಸರ್ಕಾರದ ನಡುವಣ ಅಧಿಕಾರ ಹಂಚಿಕೆಯ ಸಮತೋಲನವನ್ನು ಬುಡಮೇಲು ಮಾಡುತ್ತದೆ. ನಮ್ಮ ಪ್ರತಿ ನಡವಳಿಕೆಯನ್ನೂ ಅತ್ಯಂತ ಸನಿಹದಿಂದ ಗಮನಿಸುವಲ್ಲಿ ಸರ್ಕಾರ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಇದು ಸಾಧ್ಯವಾದರೆ, ಭಾರತದ ಪ್ರಜಾಪ್ರಭುತ್ವವು ಗುರುತಿಸಲಾಗದಷ್ಟು ಬದಲಾಗಿ ಹೋಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

2011ರಲ್ಲಿ, ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವು ಜಾತಿ ಆಧಾರಿತ ಜನಗಣತಿಯನ್ನು ನಡೆಸಿತ್ತು. 1931ರ ನಂತರ ದೇಶದಲ್ಲಿ ನಡೆದ ಮೊದಲ ಜಾತಿ ಆಧಾರಿತ ಗಣತಿ ಅದಾಗಿತ್ತು. ‘ಎಸ್‌ಇಸಿಸಿ–2011’ ಎಂಬ ಹೆಸರೇ ಸೂಚಿಸುವಂತೆ ಅದು ಜನಗಣತಿಯಾಗಿತ್ತೇ ವಿನಾ ಸರ್ವೆ ಅಲ್ಲ. ಸರ್ಕಾರವು ಪ್ರತಿಯೊಬ್ಬ ಭಾರತೀಯನ ಜಾತಿ, ಆದಾಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕುರಿತ ದತ್ತಾಂಶವನ್ನು ಸಂಗ್ರಹಿಸಲು ಬಯಸಿತ್ತು ಎಂಬುದು ಅದರ ಅರ್ಥ.

ಸರ್ಕಾರದ ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಂಯೋಜಿಸಿತ್ತು. ಸರ್ಕಾರದ ಮೂರು ಬೇರೆಬೇರೆ ಸಂಸ್ಥೆಗಳು ಜಾರಿ ಮಾಡಿದ್ದವು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ, ನಗರ ಪ್ರದೇಶದ ಗಣತಿಯನ್ನು ವಸತಿ, ನಗರ ಬಡತನ ನಿರ್ಮೂಲನ ಸಚಿವಾಲಯ ಹಾಗೂ ರಾಜಕೀಯವಾಗಿ ಸೂಕ್ಷ್ಮವಾದ ಗಣತಿಯನ್ನು ಗೃಹ ಸಚಿವಾಲಯದ ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ (ಆರ್‌ಜಿಐ) ಹಾಗೂ ಭಾರತೀಯ ಜನಗಣತಿ ಆಯೋಗ ನಿರ್ವಹಿಸಿದವು.

2015ರ ಜುಲೈ 3ರಂದು ಬಿಜೆಪಿ ನೇತೃತ್ವದ ಸರ್ಕಾರವು ಎಸ್‌ಇಸಿಸಿ ಮೂಲಕ ಸಂಗ್ರಹಿಸಲಾಗಿದ್ದ ಸಾಮಾಜಿಕ– ಆರ್ಥಿಕ ದತ್ತಾಂಶವನ್ನು ಪ್ರಕಟಿಸಿತು. ಆದರೆ, ರಾಜಕೀಯವಾಗಿ ಸೂಕ್ಷ್ಮವಾದ ಜಾತಿ ಕುರಿತ ದತ್ತಾಂಶದ ಪ್ರಕಟಣೆಯನ್ನು ತಡೆಹಿಡಿಯಿತು.

ಎಸ್‌ಇಸಿಸಿಯ ದತ್ತಾಂಶವು ಬಡತನ ಮತ್ತು ಅರ್ಹತೆಗಳನ್ನು ಕುರಿತ ಭಾರತೀಯ ತಿಳಿವಳಿಕೆಯನ್ನೇ ಬದಲಾಯಿಸಿತು. ‘ಬಡತನ ರೇಖೆ’ಗೆ ನಿಗದಿ ಮಾಡಿದ ಪ್ರಮಾಣಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವ ಕುಟುಂಬದವರನ್ನು ‘ಬಡವರು’ ಎಂದು ಭಾರತೀಯ ನೀತಿನಿರೂಪಕರು ದಶಕಗಳಿಂದಲೂ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ.

ಎಸ್‌ಇಸಿಸಿ, ಭಾರತೀಯ ನಾಗರಿಕರ ಜೀವನದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸಂಕೀರ್ಣತೆಯ ಬಗ್ಗೆ ಇನ್ನಷ್ಟು ಸೂಕ್ಷ್ಮವಾದ ಚಿತ್ರಣವನ್ನು ನೀಡಿತು. ವಿಶೇಷವಾಗಿ ಇದು ಸರ್ಕಾರಿ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. ಪರಿಣಾಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗ ಕುಟುಂಬದ ವಾರ್ಷಿಕ ಆದಾಯವನ್ನು ಆಧಾರವಾಗಿಟ್ಟು ಯೋಜನೆಗಳನ್ನು ರೂಪಿಸುವ ಬದಲು, ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು, ಸಣ್ಣ ವ್ಯಾಪಾರ ಆರಂಭಿಸಲು ಸಾಲ ನೀಡುವುದು ಮುಂತಾದ ಯೋಜನೆಗಳಿಗೆ ಆದ್ಯತೆ ನೀಡುತ್ತಿವೆ.

‘ಈ ದತ್ತಾಂಶವು ಬಡತನದ ಹಲವು ಆಯಾಮಗಳಿಗೆ ಪರಿಹಾರ ಕಲ್ಪಿಸುತ್ತದೆ ಮತ್ತು ಗ್ರಾಮಪಂಚಾಯಿತಿಯನ್ನು ಒಂದು ಘಟಕವೆಂದು ಪರಿಗಣಿಸಿ, ಪುರಾವೆಗಳನ್ನು ಆಧರಿಸಿದ ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸುತ್ತದೆ’ ಎಂದು ಕೇಂದ್ರದ ಗ್ರಾಮೀಣಾಬಿವೃದ್ಧಿ ಖಾತೆಯ ಮಾಜಿ ಸಚಿವ ಚೌಧರಿ ಬೀರೇಂದ್ರ ಸಿಂಗ್‌ ಹೇಳಿದ್ದರು.

ಎಸ್‌ಇಸಿಸಿ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ 2015ರ ಅಕ್ಟೋಬರ್‌ 13ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೇಶದಲ್ಲಿ ಸಾಮಾಜಿಕ ನೋಂದಣಿ ವ್ಯವಸ್ಥೆಯನ್ನು ಜಾರಿ ಮಾಡುವ ಪ್ರಸ್ತಾವವನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಇಟ್ಟಿತ್ತು ಎಂದು ಹಫ್‌ಪೋಸ್ಟ್‌ ವರದಿ ಮಾಡಿತ್ತು.

ಈ ನೋಂದಣಿಯನ್ನು ಸತತವಾಗಿ ಪರಿಷ್ಕರಿಸಬಹುದಾದಂಥ ಮಹತ್ವಾಕಾಂಕ್ಷೆಯ ಯೋಜನೆ ಕುರಿತ ಟಿಪ್ಪಣಿಯೊಂದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂದಿನ ಆರ್ಥಿಕ ಸಲಹೆಗಾರ ಮನೋರಂಜನ್‌ ಕುಮಾರ್‌ ಅವರು 2015ರ ನ.27ರಂದು ತಯಾರಿಸಿದರು. ‘ಎಸ್‌ಇಸಿಸಿಯನ್ನು ಒಂದು ಕ್ರಿಯಾಶೀಲ ದತ್ತಾಂಶವಾಗಿಸಬೇಕಾದರೆ ಅದು ಸತತವಾಗಿ ಪರಿಷ್ಕರಣೆಗೊಳ್ಳುವಂತೆ ನೋಡಿಕೊಳ್ಳುವುದು ಅಗತ್ಯ’ ಎಂದು ಕುಮಾರ್‌ ಹೇಳಿದ್ದರು.

‘ಉದ್ದೇಶಿತ ಯೋಜನೆಯಲ್ಲಿ, ಫಲಾನುಭವಿಯು ಸರ್ಕಾರದಿಂದ ಯಾವುದೇ ಸೌಲಭ್ಯವನ್ನು ಪಡೆದ ಕೂಡಲೇ ಅವರನ್ನು ಕುರಿತ ಮಾಹಿತಿಯು ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳುವ ವ್ಯವಸ್ಥೆಯು ಭವಿಷ್ಯದಲ್ಲಿ ಜಾರಿಗೆ ಬರಲಿದೆ’ ಎಂದು ಇನ್ನೊಬ್ಬ ಅಧಿಕಾರಿ ಧ್ರುವಕುಮಾರ್‌ ಸಿಂಗ್‌ ಹೇಳಿದ್ದರು.

ಇದರಿಂದ ಬಡತನದ ಅಂಚಿನಲ್ಲಿರುವ ಕುಟುಂಬವೊಂದಕ್ಕೆ ಯಾವಾಗ ಸರ್ಕಾರದ ಸಹಾಯದ ಅಗತ್ಯ ಇರುತ್ತದೆ ಮತ್ತು ಯಾವಾಗ ಅದು ಆರ್ಥಿಕವಾಗಿ ದೃಢವಾಗುತ್ತದೆ ಎಂಬ ಮಾಹಿತಿ ಸರ್ಕಾರಕ್ಕೆ ಸ್ವಯಂಚಾಲಿತವಾಗಿ ಲಭಿಸುತ್ತದೆ. ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡ ಕುಟುಂಬವೊಂದು ಆರ್ಥಿಕವಾಗಿ ಬಲಗೊಂಡರೆ ಅಂಥ ಕುಟುಂಬಗಳು ಆ ನಂತರ ಸರ್ಕಾರಿ ಸೌಲಭ್ಯ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತವೆ.

ಹಲವು ಕುಟುಂಬಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಲೇ ಇರುವುದರಿಂದ ಅನೇಕ ಸಂದರ್ಭಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಕುಟುಂಬಗಳನ್ನು (ಸೌಲಭ್ಯ ನೀಡುವುದಕ್ಕಾಗಿ) ಬೇರ್ಪಡಿಸುವುದು ಕಷ್ಟವಾಗುತ್ತದೆ. ಆಧಾರ್‌ ಸಂಖ್ಯೆಯ ಆಧಾರದಲ್ಲಿ, ಕೇಂದ್ರೀಕೃತ ದತ್ತಾಂಶ ಸಂಗ್ರಹ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು. ಯಾವುದೇ ಭೇದಭಾವ ಮಾಡದೆ, ದೇಶದ ಬಡತನದ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಬೇಕಾದರೆ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೇಶದ ಪ್ರತಿಯೊಂದು ಕುಟುಂಬದ ಸಮಗ್ರ ಮಾಹಿತಿಯ ದತ್ತಾಂಶವನ್ನು ಸಂಗ್ರಹಿಸುವುದು ಅಗತ್ಯ ಎಂದು ಕುಮಾರ್‌ ಹೇಳಿದ್ದರು.

ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿ ತಯಾರಿಸಿಡುವ ಸಂಪ್ರದಾಯವನ್ನು ಸರ್ಕಾರದ ಇಲಾಖೆಗಳು ಈ ಹಿಂದೆ ಅನುಸರಿಸುತ್ತಿದ್ದವು. ಇನ್ನು ಮುಂದೆ ಆ ಜಾಗದಲ್ಲಿ ‘ಸಂಭಾವ್ಯ ಫಲಾನುಭವಿಗಳ’ ಪಟ್ಟಿ ಬರಲಿದೆ. ಉದ್ದೇಶಿತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಭಾರತೀಯನ ಮಾಹಿತಿಯೂ ದಾಖಲಾಗುವುದರಿಂದ ಅಗತ್ಯ ಸಂದರ್ಭದಲ್ಲಿ ಪ್ರತಿಯೊಬ್ಬನಿಗೂ ಸರ್ಕಾರಿ ಯೋಜನೆಗಳ ಲಾಭ ಲಭಿಸಲಿದೆ.

ಕುಮಾರ್ ಅವರು ಗುರುತಿಸಿದಂತೆ ಐದು ವರ್ಷಗಳ ಈ ನಿರಂತರ ಪ್ರಕ್ರಿಯೆ ಈಗಲೂ ಪ್ರಗತಿಯಲ್ಲಿದೆ. ಇಷ್ಟು ಸುದೀರ್ಘ ಅವಧಿಯಲ್ಲಿ ಹಲವಾರು ಇಲಾಖೆಗಳು, ಸಚಿವಾಲಯಗಳು, ಚಿಂತಕರ ಚಾವಡಿಗಳು, ನೀತಿ ಆಯೋಗ, ಯುಐಡಿಎಐ, ವಿಶ್ವಬ್ಯಾಂಕ್ ಮೊದಲಾದ ಸಂಸ್ಥೆಗಳು ಸಲಹೆಗಳನ್ನು ನೀಡಿವೆ.

ಸೈದ್ಧಾಂತಿಕವಾಗಿ, ಸರ್ಕಾರದ ಯೋಜನೆಗಳ ಲಾಭ ಬಯಸುವ ಎಲ್ಲರನ್ನೂ ಒಳಗೊಂಡ ಕ್ರಿಯಾಶೀಲ ಡೇಟಾಬೇಸ್‌ ತಯಾರಿ ಒಂದು ಅದ್ಭುತ ಪರಿಕಲ್ಪನೆ. ಆದರೆ ಪ್ರಾಯೋಗಿಕವಾಗಿ ಅದನ್ನು ಸಾಧಿಸಬೇಕಾದರೆ, ಎಲ್ಲ ನಾಗರಿಕರ ಆರ್ಥಿಕ ಹಾಗೂ ಸಾಮಾಜಿಕ ಜೀವನದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. ಒಳ್ಳೆಯ ಉದ್ದೇಶ ಹೊಂದಿದ್ದ ತಜ್ಞರಿಗೆ ಅಂದು ಅದು ಅರ್ಥವಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿ ನೀಡಲಾದ ಹೆಚ್ಚುವರಿ ಸಲಹೆಗಳೆಲ್ಲವೂ ರಾಷ್ಟ್ರೀಯ ಸಾಮಾಜಿಕ ನೋಂದಣಿ ಕುರಿತಾದ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿವೆ.

ಉದಾಹರಣೆಗೆ, 2016ರಜನವರಿಯಲ್ಲಿ ಮಾಜಿ ಹಣಕಾಸು ಕಾರ್ಯದರ್ಶಿ ಸುಮಿತ್ ಬೋಸ್ ನೇತೃತ್ವದಲ್ಲಿ ತಜ್ಞರ ತಂಡವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ರಚಿಸಿತ್ತು. ಸಾಮಾಜಿಕ–ಆರ್ಥಿಕ ಜಾತಿಗಣತಿ ಆಧರಿಸಿ, ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳನ್ನು ಗುರುತಿಸುವ ಮಾನದಂಡವನ್ನು ವ್ಯಾಖ್ಯಾನಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು. ನವೆಂಬರ್‌ನಲ್ಲಿ ವರದಿ ಸಲ್ಲಿಸಿದ ಸಮಿತಿ, ಕ್ರಿಯಾಶೀಲ ಡೇಟಾಬೇಸ್ ಪರಿಕಲ್ಪನೆಯನ್ನು ಅನುಮೋದಿಸಿ, ಸಾಮಾಜಿಕ ನೋಂದಣಿ ರಚನೆಗೆ ಶಿಫಾರಸು ಮಾಡಿತು. ಆದರೆಸಮಿತಿಯ ಕೆಲವು ಸದಸ್ಯರು ಇದಕ್ಕೆ ಅಸಮ್ಮತಿ ಸೂಚಿಸಿದರು.

‘ಆಧಾರ್ ಬಳಸಿಕೊಂಡುವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಶಿಫಾರಸು ಮಾಡಿರಲಿಲ್ಲ’ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಹಿಮಾಂಶು ಹೇಳಿದ್ದಾರೆ.

‘ಸಾಮಾಜಿಕ–ಆರ್ಥಿಕ ಜಾತಿ ಗಣತಿ ಆಧರಿಸಿ, ಎಲ್ಲ ಅರ್ಹ ಕುಟುಂಬಗಳು ಹಾಗೂ ಸರ್ಕಾರದ ಎಲ್ಲ ಸಬ್ಸಿಡಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡ ಸಾಮಾನ್ಯ ನೋಂದಣಿಯನ್ನು ರಚಿಸುವಂತೆ ನಾವು ಸಲಹೆ ನೀಡಿದ್ದೆವು. ಇದರಿಂದ ದತ್ತಾಂಶಗಳು ನಿರಂತರವಾಗಿ ಪರಿಷ್ಕರಣೆಗೆ ಒಳಗಾಗುತ್ತಿರಬೇಕು ಎಂಬುದು ನಮ್ಮ ಆಶಯವಾಗಿತ್ತು. ಆದರೆ ಸರ್ಕಾರ ಮತ್ತೆ ನಮ್ಮ ಬಳಿ ಬರಲಿಲ್ಲ’ ಎಂದು ಹಿಮಾಂಶು ಅವರು ಹಫ್‌ಪೋಸ್ಟ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸರ್ಕಾರವು ನೀತಿ ಆಯೋಗದ ಸಲಹೆಗಳನ್ನೂ ಕೇಳಿತ್ತು. ‘ಮಾಹಿತಿ ವ್ಯವಸ್ಥೆಗೆ ಹೆಚ್ಚುವರಿಯಾಗಿ, ‘ವಂಶವೃಕ್ಷ’ ಕಲ್ಪನೆಯನ್ನು ಸೇರ್ಪಡೆ ಮಾಡಬೇಕು’ ಎಂದು ನೀತಿ ಆಯೋಗ ಸಲಹೆ ನೀಡಿತ್ತು. ಹಿರಿಯ ಸಾಂಖ್ಯಿಕ ಅಧಿಕಾರಿ ಎಸ್‌.ಸಿ. ಝಾ ಅವರು ಮೇ 13, 2016ರಲ್ಲಿ ಬರೆದ ಟಿಪ್ಪಣಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ.

‘ಸಾಮಾಜಿಕ ನೋಂದಣಿಯು ಎಲ್ಲ ಕಾಲಕ್ಕೂ ಸೂಕ್ತ ಮತ್ತು ವಿವಿಧ ಸರ್ಕಾರಿ ಯೋಜನೆಗಳಿಗೆ ಬಳಕೆಯಾಗುತ್ತದೆ. ನೋಂದಣಿಯು ಜನನ–ಮರಣ ಮತ್ತು ಮದುವೆ ನೋಂದಣಿಯೊಂದಿಗೆ ಜೋಡಿಸಬೇಕು’ ಎಂದು ಆಯೋಗ ಹೇಳಿತ್ತು. ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಚಿವಾಲಯ ಒಪ್ಪಿಕೊಂಡಿದ್ದ ಅಂಶವು 2016ರ ಮೇ 20ರಂದು ನಿರ್ದೇಶಕ ಧ್ರುವ್ ಕುಮಾರ್ ಸಿಂಗ್ ಅವರು ಬರೆದಿದ್ದ ಟಿಪ್ಪಣಿಯಿಂದ ದೃಢಪಟ್ಟಿದೆ.

ಈ ನಡುವೆ ಸರ್ಕಾರ ಮತ್ತು ವಿಶ್ವಬ್ಯಾಂಕ್‌ನ ಭಾರತದ ಕಚೇರಿ ನಡುವೆ ಮಾತುಕತೆಗಳು ಮುಂದುವರಿದಿದ್ದವು. ಆದರೆ 2017ರ ಮಾರ್ಚ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೆಲ ಅಧಿಕಾರಿಗಳಿಗೆ ಬ್ಯಾಂಕ್‌ ಸಲಹೆಗಳು ಇಷ್ಟವಾಗಿರಲಿಲ್ಲ.

‘ವಿಶ್ವಬ್ಯಾಂಕ್‌ ಮುಂದಿಟ್ಟ ಆಯ್ಕೆಗಳು ಭಾರತದ ಯಾವ ರಾಜ್ಯಗಳೂ ಮುಂದಿಡದ ಆಯ್ಕೆಗಳಷ್ಟು ದುರ್ಬಲವಾಗಿದ್ದವು’ ಎಂದು ಸಚಿವಾಲಯದ ಆರ್ಥಿಕ ಸಲಹೆಗಾರ ಮನೋರಂಜನ್ ಕುಮಾರ್ ಅವರು 2017ರ ಮಾರ್ಚ್ 15ರಂದು ಬರೆದಿದ್ದ ಟಿಪ್ಪಣಿ ಹೇಳುತ್ತದೆ. ಅಮೆರಿಕದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಒಂದು ಶಿಷ್ಟ ಮಾದರಿಯಾಗಿ ಪರಿಗಣಿಸುವಂತೆ ಅವರು ಸಚಿವಾಲಯಕ್ಕೆ ಸಲಹೆ ನೀಡಿದ್ದರು. ಅಮೆರಿಕದ ವ್ಯವಸ್ಥೆಯು ವ್ಯಕ್ತಿಗಳ ಆರ್ಥಿಕ ಸ್ಥಿತಿಯ ಜಾಡು ಹಿಡಿಯುವುದಕ್ಕಷ್ಟೇ ನೆರವಾಗದೆ, ಸರ್ಕಾರದ ಯಾವುದಾದರೂ ಯೋಜನೆಗಳೊಂದಿಗೆ ಅವರ ನೇರ ಒಳಗೊಳ್ಳುವಿಕೆಯನ್ನೂ ಸೂಚಿಸುತ್ತದೆ’ ಎಂದು ಹೇಳಿದ್ದರು.

2017ರ ಜೂನ್‌ನಲ್ಲಿ ಸಚಿವಾಲಯವು ಅಂತರಸಚಿವಾಲಯ ತಜ್ಞರ ಸಮಿತಿಯನ್ನು ರಚಿಸಿತ್ತು. 2011ರ ಸಾಮಾಜಿಕ–ಆರ್ಥಿಕ ಜಾತಿಗಣತಿಯನ್ನು ಪರಿಷ್ಕರಿಸುವ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಿ, ಸಾಮಾಜಿಕ ನೋಂದಣಿ ನಿರ್ವಹಣೆಗೆ ಸಾಂಸ್ಥಿಕ ಚೌಕಟ್ಟು ರೂಪಿಸುವ ಬಗ್ಗೆ ಸಲಹೆ ನೀಡುವಂತೆ ಸೂಚಿಸಿತ್ತು.

ಯುಐಎಐ, ವಿಶ್ವಬ್ಯಾಂಕ್, ರಾಷ್ಟ್ರೀಯ ಮಾಹಿತಿ ಕೇಂದ್ರ, ಸಾಂಖ್ಯಿಕ ಮತ್ತು ಯೋಜನೆ ಜಾರಿ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ, ವಿದ್ಯುನ್ಮಾನ ಹಣಕಾಸು ಕೇಂದ್ರ ಮತ್ತು ನೇರ ನಗದು ವರ್ಗಾವಣೆ ಅಭಿಯಾನದ ಸದಸ್ಯರನ್ನು ಸಮಿತಿ ಒಳಗೊಂಡಿತ್ತು. 2017ರ ಜೂನ್ ಹಾಗೂ 2019ರ ಅಕ್ಟೋಬರ್‌ ನಡುವೆಸಮಿತಿಯು ನಾಲ್ಕು ಬಾರಿ ಸಭೆ ಸೇರಿತ್ತು.

ಹಲವು ಬಾರಿ ನೆನಪಿಸಿದರೂ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಯುಐಡಿಎಐ, ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್‌ ಅವರು ಹಫ್‌ಪೋಸ್ಟ್ ಸ್ಪಂದನೆಗೆ ಪ್ರತಿಕ್ರಿಯಿಸಲಿಲ್ಲ. ಇ–ಮೇಲ್‌ನಲ್ಲಿ ಪ್ರತಿಕ್ರಿಯಿಸಿದ ವಿಶ್ವಬ್ಯಾಂಕ್, ಸಾಮಾಜಿಕ ನೋಂದಣಿ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜತೆ ತೊಡಗಿಸಿಕೊಂಡಿರುವುದನ್ನು ಖಚಿತಪಡಿಸಿತು. ಯಾವುದೇ ರೀತಿಯ ಸಾಲ ನೀಡಿಲ್ಲ, ಆದರೆ ಸ್ವಲ್ಪಮಟ್ಟಿದ ಜ್ಞಾನ ವಿನಿಮಯ ಆಗಿದೆ ಎಂದು ತಿಳಿಸಿತು.

ನಿಗಾ ಮತ್ತು ಖಾಸಗಿತನದ ಉಲ್ಲಂಘನೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ವಿಶ್ವಬ್ಯಾಂಕ್, ‘ಖಾಸಗಿತನ ಉಲ್ಲಂಘನೆ ಮತ್ತು ದುರ್ಬಳಕೆ/ನಿಗಾ ವಿಚಾರಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ವಿಶ್ವಬ್ಯಾಂಕ್‌ನ ಅತ್ಯಂತ ಕಾಳಜಿಯ ವಿಷಯಗಳು. ತಾಂತ್ರಿಕ ನೆರವಿಗೆ ಸಂಬಂಧಪಟ್ಟಂತೆ, ಖಾಸಗಿತನ, ರಕ್ಷಣೆ, ದತ್ತಾಂಶ ಹಂಚಿಕೆಯ ಮಹತ್ವವನ್ನು ಒತ್ತಿಹೇಳುವ ವಿವಿಧ ದೇಶಗಳ ವಿಧಾನಗಳು ಹಾಗೂ ಉದಾಹರಣೆಗಳನ್ನುವಿಶ್ವಬ್ಯಾಂಕ್ ಹಂಚಿಕೊಂಡಿದೆ’ ಎಂದು ತಿಳಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿರುವ ಬ್ಯಾಂಕ್‌, ಎಲ್ಲವೂ ಚರ್ಚೆಯ ಹಂತದಲ್ಲಿವೆ ಎಂದು ಸ್ಪಷ್ಟಪಡಿಸಿದೆ.

ಸಾಮಾಜಿಕ–ಆರ್ಥಿಕ ಜಾತಿಗಣತಿಯನ್ನು ಪರಿಷ್ಕರಿಸುವ ಪ್ರಸ್ತಾವಕ್ಕೆ 2018ರ ಮಾರ್ಚ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕಿದ್ದರು. ಈ ನೋಂದಣಿಯ ಸ್ವರೂಪ ಮತ್ತು ಸುರಕ್ಷಾ ಕ್ರಮಗಳನ್ನು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ. ಆದರೆ ಒಂದಂತೂ ಸ್ಪಷ್ಟವಾಗಿದೆ. ಸಾಮಾಜಿಕ ನೋಂದಣಿ ರಚನೆಯಾಗುತ್ತದೆಯೇ ಎಂಬುದಕ್ಕಿಂತ, ಅದನ್ನು ಯಾವಾಗ ರಚಿಸಲಾಗುತ್ತದೆ ಎಂಬುದೇ ಈಗಿನ ಪ್ರಶ್ನೆ.

ಆಧಾರ್‌ ಪರಿಣಾಮ

‘ಆಧಾರ್‌’ ಇಲ್ಲದೇ ಇರುತ್ತಿದ್ದರೆ, ಸಾಮಾಜಿಕ ನೋಂದಣಿಯ ಯೋಜನೆ ಸಾಧ್ಯವೇ ಆಗುತ್ತಿರಲಿಲ್ಲ. ಹಲವು ದತ್ತಾಂಶಗಳನ್ನು ಒಂದೇ ರಿಜಿಸ್ಟ್ರಿಯಲ್ಲಿ ವಿಲೀನಗೊಳಿಸುವುದು ಸಾಧ್ಯವಾಗುವಂತೆ ಮಾಡಿದ್ದು ಆಧಾರ್‌ ಎಂಬ ‘ಏಕ ಗುರುತು’.

ಉದಾಹರಣೆಗೆ, ಪ್ಯಾನ್‌ ಸಂಖ್ಯೆಗಳು ಮತ್ತು ಮೊಬೈಲ್‌ ಸಂಖ್ಯೆಗಳ ಎರಡು ಪ್ರತ್ಯೇಕ ಪಟ್ಟಿಗಳನ್ನು ಊಹಿಸಿ. ಈ ಎರಡರ ಜತೆಗೂ ವಿಶಿಷ್ಟ ಗುರುತು ಸಂಖ್ಯೆಯನ್ನು (ಆಧಾರ್‌) ಜೋಡಿಸಲಾಗಿದೆ. ಆಧಾರ್‌ ಈಗ ಈ ಎರಡಕ್ಕೂ ಸಾಮಾನ್ಯವಾಗಿರುವ ಗುರುತಿನ ಸಂಖ್ಯೆ. ಹಾಗಾಗಿ, ಪ್ಯಾನ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳ ಏಕೀಕೃತ ಡೇಟಾಬೇಸ್‌ ಸೃಷ್ಟಿಸುವುದು ಸುಲಭ.

ಆದರೆ, ಇಲ್ಲೊಂದು ತೊಡಕು ಇದೆ.

ಖಾಸಗಿತನದ ಹಕ್ಕಿನ ಪರಿಣತರು ಸುಪ್ರೀಂ ಕೋರ್ಟ್‌ನಲ್ಲಿ ಸರಣಿ ಅರ್ಜಿಗಳನ್ನು ಸಲ್ಲಿಸಿ ಇಂತಹುದೊಂದು ಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ. ವಿಮಾನ ನಿಲ್ದಾಣದ ಬೋರ್ಡಿಂಗ್‌ ವ್ಯವಸ್ಥೆಯಿಂದ, ಮತದಾರರ ಗುರುತಿನ ಚೀಟಿ, ಬ್ಯಾಂಕ್‌ ಖಾತೆ ತೆರೆಯುವುದು, ಮೊಬೈಲ್‌ ಸಂಪರ್ಕ, ಮದುವೆ ನೋಂದಣಿ ಎಲ್ಲವಕ್ಕೂ ಆಧಾರ್‌ ಸಂಖ್ಯೆ ಜೋಡಣೆಯನ್ನು ಕಡ್ಡಾಯಗೊಳಿಸಿದರೆ ಸಾಮಾಜಿಕ ನೋಂದಣಿ ವ್ಯವಸ್ಥೆಗೆ ಸಮನಾದ ಭಾರಿ ಕಣ್ಗಾವಲು ಡೇಟಾಬೇಸ್‌ ಸೃಷ್ಟಿಸುವುದು ಸರ್ಕಾರಕ್ಕೆ ಸಾಧ್ಯವಾಗುತ್ತದೆ.

ಖಾಸಗಿತನದ ಹಕ್ಕು ಪ್ರತಿಪಾದಕರ ವಾದ ಸರಿ. ಯಾಕೆಂದರೆ, ಈ ಹಿಂದೆಯೇ ಉಲ್ಲೇಖಿಸಿರುವಂತೆ, ಸಾಮಾಜಿಕ ನೋಂದಣಿ ವ್ಯವಸ್ಥೆ ಜಾರಿಗಾಗಿ 2017ರ ಜೂನ್‌ನಲ್ಲಿ ರಚಿಸಲಾದ ಅಂತರಸಚಿವಾಲಯ ಸಮಿತಿಯಲ್ಲಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವೂ ಭಾಗವಾಗಿತ್ತು.

ಆದರೆ, ಇದಕ್ಕೆ ತದ್ವಿರುದ್ಧವಾದ ಪ್ರಮಾಣಪತ್ರವನ್ನು ಪ್ರಾಧಿಕಾರವು ಸುಪ್ರೀಂ ಕೋರ್ಟ್‌ಗೆ 2017ರ ಜುಲೈನಲ್ಲಿ ಸಲ್ಲಿಸಿತ್ತು.

ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಸಾಧ್ಯತೆಯೇ ಇಲ್ಲದಂತೆ ಯುಐಡಿಎಐನ ತಾಂತ್ರಿಕ ವಿನ್ಯಾಸ ಇದೆ ಎಂದು 2017ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಾಧಿಕಾರವು ಪ್ರಮಾಣಪತ್ರ ನೀಡಿತ್ತು. ತನ್ನ ಯಾವುದೇ ಗ್ರಾಹಕ ಅಥವಾ ಫಲಾನುಭವಿಯ ಮೇಲೆ 360 ಡಿಗ್ರಿ ನಿಗಾವನ್ನು ಯಾವತ್ತೂ ಇರಿಸುವುದಿಲ್ಲ ಮತ್ತು ಅಂತಹ ಸಾಮರ್ಥ್ಯವೂ ಇಲ್ಲ ಎಂದು ಪ್ರಮಾಣಪ‍ತ್ರದಲ್ಲಿ ಹೇಳಲಾಗಿತ್ತು.

‘ಪ್ರಾಧಿಕಾರವು ಆಧಾರ್‌ ನೋಂದಣಿಯನ್ನು ಇರಿಸಿಕೊಂಡು ಏನು ಮಾಡಬಹುದು ಅಥವಾ ಏನು ಮಾಡಲಾಗದು ಎಂಬುದರತ್ತ ಮಾತ್ರ ಸುಪ್ರೀಂ ಕೋರ್ಟ್‌ ಗಮನ ಕೇಂದ್ರೀಕರಿಸಿತೇ ಹೊರತು ಈ ದತ್ತಾಂಶವನ್ನು ಇರಿಸಿಕೊಂಡು ಸರ್ಕಾರ ಏನು ಮಾಡಬಹುದು ಅಥವಾ ಏನು ಮಾಡಬಾರದು ಎಂಬುದನ್ನು ನಿರ್ಲಕ್ಷಿಸಿತು. ಇದುವೇ ಸುಪ್ರೀಂ ಕೋರ್ಟ್‌ ಎಸಗಿದ ಅತಿ ದೊಡ್ಡ ಲೋಪ (error apparent ). ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಅಜಯಭೂಷಣ್‌ ಪಾಂಡೆ ಅವರು ಮಂಡಿಸಿದ ವಿಚಾರಗಳನ್ನೇ ಸರ್ಕಾರದ ನಿಲುವು ಕೂಡ ಎಂದು ಭಾವಿಸಲಾಗದು. ಪೌರರ 360 ಡಿಗ್ರಿಯ ಚಿತ್ರಣವನ್ನು ಪಡೆಯುವುದು ಸಾಧ್ಯವಿಲ್ಲ ಎಂಬ ಪ್ರಾಧಿಕಾರದ ಹೇಳಿಕೆ ನಿಜ ಇರಬಹುದು. ಆದರೆ, ಸರ್ಕಾರದ ಬೇರೆ ಸಂಸ್ಥೆಗಳು ಇಂತಹ ಕಣ್ಗಾವಲು ನಡೆಸುವುದನ್ನು ನಿಲ್ಲಿಸಲಾಗದು’ ಎಂದು ಆಧಾರ್‌ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಅನುಪಮ್‌ ಸರಾಫ್‌ ಹೇಳುತ್ತಾರೆ.

‘ಚುನಾವಣಾ ಅಕ್ರಮ, ಹಣ ಅಕ್ರಮ ವರ್ಗಾವಣೆ, ಸರ್ಕಾರದ ಬೊಕ್ಕಸದಿಂದ ಹಣ ಲೂಟಿಯಂತಹ ಹಲವು ದುರುದ್ದೇಶಪೂರಿತ ಕೃತ್ಯಗಳು ಮತ್ತು ವಂಚನೆಗಳಿಗೆ ಆಧಾರ್‌ ಬಳಕೆಯಾಗಬಹುದು ಎಂಬ ಅಂಶವನ್ನು ನಾವು ನ್ಯಾಯಾಲಯದ ಮುಂದೆ ಇಟ್ಟಿದ್ದೆವು. ಜನರ ಮೇಲೆ ಕಣ್ಗಾವಲು ದುರ್ಬಳಕೆಯ ಒಂದು ಭಾಗ ಮಾತ್ರ. ಇಂತಹ 32 ಅರ್ಜಿಗಳನ್ನು ಸಲ್ಲಿಸಿದ್ದೆವು. ಅಂತಹ ಹಲವು ಅರ್ಜಿಗಳಲ್ಲಿ ಪ್ರಾಧಿಕಾರವನ್ನು ನಾವು ಕಕ್ಷಿದಾರರನ್ನಾಗಿಯೂ ಮಾಡಿಲ್ಲ. ಆದರೆ, ಎಲ್ಲವನ್ನೂ ಪ್ರಾಧಿಕಾರದ ವಿರುದ್ಧದ ಒಂದು ಅರ್ಜಿಯಾಗಿ ಸುಪ್ರೀಂ ಕೋರ್ಟ್‌ ಪರಿವರ್ತಿಸಿತು. ಏನು ಮಾಡಲು ಸಾಧ್ಯ ಅಥವಾ ಏನು ಮಾಡಲು ಸಾಧ್ಯವಿಲ್ಲ ಎಂದುಪ್ರಾಧಿಕಾರವು ಹೇಳಿದ್ದರ ಆಧಾರದಲ್ಲಿ ತೀರ್ಮಾನ ನೀಡಿತು. ಎಲ್ಲ 32 ಪ್ರಕರಣಗಳನ್ನು ಮತ್ತೆ ವಿಚಾರಣೆ ನಡೆಸಬೇಕು’ ಎಂದು ಸರಾಫ್‌ ಒತ್ತಾಯಿಸುತ್ತಾರೆ.

ಸುಪ್ರೀಂ ಕೋರ್ಟ್ ಕೊನೆಗೂ 2018ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತು. ಸರ್ಕಾರದ ಸಹಾಯಧನವನ್ನು ಬಡವರಿಗೆ ವಿತರಿಸುವುದಕ್ಕೆ ಆಧಾರ್‌ ಸಂಖ್ಯೆಯನ್ನು ಸೀಮಿತಗೊಳಿಸಿತು.

ಎಸ್‌ಇಸಿಸಿ ದತ್ತಾಂಶವನ್ನು ಪರಿಷ್ಕರಿಸಲು ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಒಂದೇ ಗುರುತು ಸಂಖ್ಯೆಯಾದ ಆಧಾರ್‌ ಬದಲಿಗೆ ಪರ್ಯಾಯ ಸಾಧ್ಯತೆಗಳನ್ನು ಶೋಧಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವುಮೇಲ್ವಿಚಾರಣಾ ತಂಡವನ್ನು 2019ರ ಏಪ್ರಿಲ್‌ನಲ್ಲಿ ರಚಿಸಿತ್ತು ಎಂಬುದನ್ನು ದಾಖಲೆಗಳು ತೋರಿಸುತ್ತವೆ.

ಕ್ರಮೇಣ, ಅದರ ಬದಲಿಗೆ, ಆಧಾರ್‌ ಕಾಯ್ದೆಯನ್ನೇ ಬದಲಾಯಿಸಿಬಿಡಲು ನಿರ್ಧರಿಸಲಾಯಿತು. ಆಧಾರ್‌ ದೃಢೀಕರಣ ಮತ್ತು ಆಧಾರ್‌ ದತ್ತಾಂಶ ಹಂಚಿಕೆಗೆ ಕುರಿತಂತೆ ಬೇಕಾಗುವ ನಿಬಂಧನೆಗಳಿಗಾಗಿ ಯಾವೆಲ್ಲ ಬದಲಾವಣೆಗಳು ಅಗತ್ಯ ಎಂಬ ವಿವರಗಳು ಇರುವ ಟಿಪ್ಪಣಿಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು 2019ರ ಜೂನ್‌ನಲ್ಲಿ ಸಿದ್ಧಪಡಿಸಿತು.

ಅಂತರಸಚಿವಾಲಯ ಪರಿಣತರ ಸಮಿತಿಯ ನಾಲ್ಕನೇ ಮತ್ತು ತೀರಾ ಇತ್ತೀಚಿನ ಸಭೆಯು 2019ರ ಅಕ್ಟೋಬರ್‌ 4ರಂದು ನಡೆಯಿತು. ಆಧಾರ್‌ (ದೃಢೀಕರಣ) ನಿಯಮಗಳು 2016 ಮತ್ತು ಆಧಾರ್‌ (ಮಾಹಿತಿ ಹಂಚಿಕೆ) ನಿಯಮಗಳು 2016ಕ್ಕೆ ಬೇಕಾಗಿರುವ ತಿದ್ದುಪಡಿಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಪ್ರಾಧಿಕಾರವು ಈ ಸಭೆಯಲ್ಲಿ ತಿಳಿಸಿತು.

ಇವು ಜಾರಿಗೆ ಬಂದರೆ, ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ಆಧಾರ್‌ನ ಮೂಲ ನಿಯಮಗಳು ಅರ್ಥಹೀನವಾಗುತ್ತವೆ: ಆಧಾರ್‌ ಆಧರಿತ ವ್ಯವಹಾರವೊಂದರಲ್ಲಿ ವ್ಯಕ್ತಿಯೊಬ್ಬರಿಂದ ಪಡೆದ ಮಾಹಿತಿಯನ್ನು ಆ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಅದನ್ನು ಬಳಸುವಂತಿಲ್ಲ ಎಂಬುದು ಈಗ ಇರುವ ಮಹತ್ವದ ಸುರಕ್ಷಾ ಕ್ರಮಗಳಲ್ಲಿ ಒಂದು.

ಆಧಾರ್‌ ದೃಢೀಕರಣಕ್ಕೆ ಸಂಬಂಧಿಸಿದ ಇತರ ಸುರಕ್ಷತಾ ಕ್ರಮಗಳೂ ಇವೆ. ಆಧಾರ್‌ ದೃಢೀಕರಣದಲ್ಲಿ ದೃಢೀಕರಣದ ಸ್ಥಳ ಮತ್ತು ಸಮಯ, ಆಧಾರ್‌ ಹೊಂದಿರುವ ವ್ಯಕ್ತಿಯ ವೈಯಕ್ತಿಕ ವಿವರಗಳು ಮತ್ತು ಬಯೊಮೆಟ್ರಿಕ್‌ ಮಾಹಿತಿಯು ಈ ದೃಢೀಕರಣದ ಮೂಲಕ ಸಂಗ್ರಹವಾಗುತ್ತದೆ. ದೃಢೀಕರಣ ಮಾಡಿಕೊಂಡ ಸಂಸ್ಥೆಯುಆ ಆಧಾರ್‌ ಸಂಖ್ಯೆ ಹೊಂದಿರುವ ವ್ಯಕ್ತಿಯನ್ನು ಬಿಟ್ಟು ಬೇರೆ ಯಾರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ಇಲ್ಲ ಎಂಬುದು ಈಗಿನ ನಿಯಮ.

ಸರ್ಕಾರದ ಯಾವುದೇ ಇಲಾಖೆಯ ಜತೆಗೆ ಹಂಚಿಕೊಂಡ ಪೌರರ ಮಾಹಿತಿಗಳು ಅದರಲ್ಲೂ ವಿಶೇಷವಾಗಿ ಆಧಾರ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಯಾವ ಅಡೆತಡೆಯೂ ಇಲ್ಲದೆ ಒಟ್ಟುಗೂಡಿಸಿ, ಸರ್ಕಾರದ ಯಾವುದೇ ಸಂಸ್ಥೆಗೆ ಲಭ್ಯವಿರುವ ರೀತಿಯ ಡೇಟಾಬೇಸ್‌ ಮಾಡಿಸಿಕೊಳ್ಳಬಹುದು ಎಂಬುದೇ ಸಾಮಾಜಿಕ ನೋಂದಣಿಯ ನೆಲೆಗಟ್ಟಾಗಿದೆ. ಆದರೆ, ಆಧಾರ್‌ಗೆ ಸಂಬಂಧಿಸಿ ಇರುವ ಸುರಕ್ಷತಾ ಕ್ರಮಗಳಿಂದಾಗಿ ಸಾಮಾಜಿಕ ನೋಂದಣಿ ರೂಪಿಸುವುದು ಬಹಳ ಕಷ್ಟ ಎಂದು 2019ರ ಅಕ್ಟೋಬರ್‌ನ ಸಭೆಯಲ್ಲಿ ಅಧಿಕಾರಿಗಳು ದೂರಿದ್ದರು.‌

ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಸಮಸ್ಯೆಗೆ ಒಂದು ಪರಿಹಾರವನ್ನು ಸೂಚಿಸಿತ್ತು. ಒಬ್ಬ ಬಳಕೆದಾರ ತನ್ನ ಮಾಹಿತಿಯನ್ನು ಬಳಸಿಕೊಳ್ಳಲು ಒಂದು ಇಲಾಖೆಗೆ ಸಮ್ಮತಿ ಸೂಚಿಸಿದರೆ ಅದು ಸರ್ಕಾರದ ಎಲ್ಲ ಇಲಾಖೆಗಳಿಗೂ ನೀಡಿದ ಸಮ್ಮತಿ ಎಂದು ಪರಿಗಣಿಸಬಹುದು ಎಂಬುದೇ ಆ ಪರಿಹಾರ.

‘ಎಲ್ಲ ತಿದ್ದುಪಡಿಗಳು ರೂಪುಗೊಳ್ಳುವ ಹಾದಿಯಲ್ಲಿವೆ’ ಎಂದು ಆ ಸಭೆಯಲ್ಲಿ ಪ್ರಾಧಿಕಾರವು ಹೇಳಿತ್ತು ಎಂದು ಸಭೆಯ ನಡಾವಳಿಯು ತಿಳಿಸುತ್ತದೆ.

ಸೀಮಿತ ಮತ್ತು ನ್ಯಾಯಬದ್ಧತೆ ಇಲ್ಲದ ಸಾರಾಸಗಟು ಸಮ್ಮತಿಯು ವ್ಯಕ್ತಿಯ ಖಾಸಗಿತನದ ಹಕ್ಕನ್ನು ನಿರ್ಬಂಧಿಸಲು ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು (ಪುಟ್ಟಸ್ವಾಮಿ ಪರೀಕ್ಷೆಯ–ಆಧಾರ್‌ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಕಡ್ಡಾಯಗೊಳಿಸಿರುವ ನ್ಯಾಯಬದ್ಧತೆ ಪರೀಕ್ಷೆ) ಪರೀಕ್ಷೆಗೆ ಒಡ್ಡುವ ಅವಕಾಶವನ್ನೇ ವಿಫಲಗೊಳಿಸುತ್ತದೆ ಎಂದು ಆಧಾರ್‌ ಪ್ರಕರಣದಲ್ಲಿ ವಕೀಲರಾಗಿದ್ದ ಪ್ರಸನ್ನ ಎಸ್‌. ಹೇಳುತ್ತಾರೆ.

ಪರೀಕ್ಷೆಯು ಕಡ್ಡಾಯಗೊಳಿಸುವ ಕೆಲವು ಅಂಶಗಳೆಂದರೆ, 1. ಸರ್ಕಾರದ ಕ್ರಮವು ಕಾನೂನುಬದ್ಧವಾಗಿರಬೇಕು– ಅಂದರೆ, ಅದಕ್ಕೆ ಕಾಯ್ದೆಯ ಬೆಂಬಲ ಇರಲೇಬೇಕು. 2. ಅದಕ್ಕೆ ಒಂದು ಕಾನೂನುಬದ್ಧ ಉದ್ದೇಶ ಇರಬೇಕು. 3. ಈ ಉದ್ದೇಶವು, ಸರ್ಕಾರವು ಯಾವ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತದೆಯೋ ಆ ಕಾಯ್ದೆಯ ಉದ್ದೇಶದ ಜತೆಗೆ ತರ್ಕಬದ್ಧ ಸಂಬಂಧ ಹೊಂದಿರಬೇಕು.4. ಕಾಯ್ದೆಯ ಉದ್ದೇಶದ ಈಡೇರಿಕೆಗೆ ಸರ್ಕಾರದ ಕ್ರಮವು ಅನಿವಾರ್ಯ ಆಗಿರಬೇಕು ಮತ್ತು 5. ಸರ್ಕಾರವು ಕೈಗೊಳ್ಳುವ ಇಂತಹ ಕ್ರಮವು ಪ್ರಮಾಣಬದ್ಧವಾಗಿರಬೇಕು, ಅಂದರೆ, ಈ ಉದ್ದೇಶ ಈಡೇರಿಕೆಗೆ ಲಭ್ಯವಿರುವ ಕ್ರಮಗಳಲ್ಲಿ ಇದು ಅತಿ ಕನಿಷ್ಠ ಪ‍್ರಮಾಣದಲ್ಲಿ ನಿರ್ಬಂಧ ಹೊಂದಿರಬೇಕು’ ಎಂದು ಪ್ರಸನ್ನ ವಿವರಿಸುತ್ತಾರೆ.

‘ನ್ಯಾಯಬದ್ಧ ಉದ್ದೇಶ ಎಂದು ಹೇಳುವಾಗ, ಅದರಲ್ಲಿ ಒಂದು ಉದ್ದೇಶವಷ್ಟೇ ಇರಬೇಕು ಮತ್ತು ಅದು ಸೀಮಿತವೂ ಆಗಿರಬೇಕು. ಒಂದು ಉದ್ದೇಶಕ್ಕೆ ದತ್ತಾಂಶ ಸಂಗ್ರಹ ಮಾಡಿ, ಅದನ್ನು ಸಮ್ಮತಿ ಇಲ್ಲದೆ ಅಥವಾ ಸಾಮಾನ್ಯ ಉದ್ದೇಶದ ದತ್ತಾಂಶ ಸಂಗ್ರಹ ಸಮ್ಮತಿಯ ಮೂಲಕ ಹಂಚಿಕೊಳ್ಳುವುದು ಉದ್ದೇಶ ಮಿತಿ ಸಿದ್ಧಾಂತಕ್ಕೆ ವ್ಯತಿರಿಕ್ತವಾದುದಾಗಿದೆ’.

(ಲೇಖಕ: ಪತ್ರಕರ್ತ ಮತ್ತು ಲ್ಯಾಂಡ್‌ ಕಾನ್‌ಫ್ಲಿಕ್ಟ್‌ ವಾಚ್‌ ಸಂಸ್ಥೆಯ ಸಹ ಸಂಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT