ಶನಿವಾರ, ಫೆಬ್ರವರಿ 27, 2021
19 °C
ಜಮ್ಮು ಕಾಶ್ಮೀರ: ಅಲ್ಲಲ್ಲಿ ಪ್ರತಿಭಟನೆ l ಪೊಲೀಸರಿಂದ ತಪ್ಪಿಸಿಕೊಂಡ ಯುವಕ ನದಿಗೆ ಹಾರಿ ಸಾವು

ನೂರಕ್ಕೂ ಹೆಚ್ಚು ಮಂದಿಗೆ ಗೃಹ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡಬಹುದೆಂಬ ಕಾರಣಕ್ಕೆ, ಮುನ್ನೆಚ್ಚರಿಕೆಯಾಗಿ ಕಾಶ್ಮೀರದ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಬಂಧಿತರಲ್ಲಿ ರಾಜಕೀಯ ನಾಯಕರು, ಹೋರಾಟಗಾರರು ಸೇರಿದ್ದಾರೆ.

ಎಲ್ಲರನ್ನೂ ಗೃಹಬಂಧನದಲ್ಲಿ ಇಡಲಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು, ಬಂಧನಕ್ಕೆ ಒಳಗಾದವರ ಹೆಸರು ಬಹಿರಂಗಪಡಿಸಲಿಲ್ಲ. ‘ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರ ಗೃಹಬಂಧನವನ್ನು ಮುಂದುವರಿಸಲಾಗಿದೆ. ಇದರ ಜೊತೆಗೆ ಜಮ್ಮು ಕಾಶ್ಮೀರ ಪೀಪಲ್ಸ್‌ ಕಾನ್ಫರೆನ್ಸ್‌ನ ನಾಯಕ ಸಜ್ಜದ್‌ ಲೊನ್‌ ಹಾಗೂ ಇಮ್ರಾನ್‌ ಅನ್ಸಾರಿ ಅವರನ್ನೂ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ಶಾಂತ: ಕಲ್ಲು ತೂರಾಟದ ಒಂದೆರಡು ಘಟನೆಗಳು ನಡೆದಿರುವುದನ್ನು ಬಿಟ್ಟರೆ, ಉಳಿದಂತೆ ಇಡೀ ಜಮ್ಮು ಕಾಶ್ಮೀರ ಶಾಂತಿಯುತವಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೆಲವರು ಬೀದಿಗಿಳಿದು ಬುಧವಾರ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಯುವಕನೊಬ್ಬ ನದಿಗೆ ಹಾರಿ ಸಾವನ್ನಪ್ಪಿದ್ದಾನೆ. ಗಾಯಗೊಂಡಿದ್ದ ಕನಿಷ್ಠ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಸಂವಹನ ಮಾಧ್ಯಮಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇತರ ಕೆಲವು ನಿಷೇಧಗಳು ಇನ್ನೂ ಜಾರಿಯಲ್ಲಿವೆ. ಹಂತ ಹಂತವಾಗಿ ಪರಿಸ್ಥಿತಿ ತಿಳಿಗೊಳ್ಳುತ್ತಿದೆ. ಶ್ರೀನಗರದಲ್ಲಿ ಬುಧವಾರ ಕೆಲವು ಅಂಗಡಿಗಳು ಬಾಗಿಲು ತೆರೆದಿವೆ. ಜನರು ರಸ್ತೆಗಳಲ್ಲಿ ಓಡಾಡಲು ಆರಂಭಿಸಿದ್ದಾರೆ. ದ್ವಿಚಕ್ರವಾಹನಗಳು ಹಾಗೂ ಕಾರುಗಳು ಓಡಾಡುತ್ತಿವೆ. ಮದುವೆ ಮುಂತಾದ ಸಮಾರಂಭಗಳನ್ನು ಆಯೋಜಿಸಿರುವವರಿಗೆ ಅಧಿಕಾರಿಗಳು ಅಗತ್ಯ ಸಹಾಯ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಜಮ್ಮು ಕಾಶ್ಮೀರದಲ್ಲಿ ಜನರು ಓಡಾಡುತ್ತಿರುವ ಮತ್ತು ಪರಿಸ್ಥಿತಿ ತಿಳಿಗೊಳ್ಳುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ಪೂಂಛ್‌ ಜಿಲ್ಲೆಯ ಒಂದು ಕಡೆ ಜನರು ಸರ್ಕಾರದ ನಿಲುವನ್ನು ಖಂಡಿಸಿ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. ಘಟನೆಯಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. 370ನೇ ವಿಧಿಯನ್ನು ರದ್ದು ಮಾಡಿರುವುದನ್ನು ಖಂಡಿಸಿ ಕಾರ್ಗಿಲ್‌ ಪಟ್ಟಣದಲ್ಲಿ ಬುಧವಾರ ಬಂದ್‌ ಆಚರಿಸಲಾಯಿತು.

ರಾಜ್ಯ ಧ್ವಜ ತೆರವು ಶೀಘ್ರ:  370ನೇ ವಿಧಿಯನ್ನು ರದ್ದು ಮಾಡಿರುವುದರಿಂದ ಜಮ್ಮು ಕಾಶ್ಮೀರದಲ್ಲಿ ಬಳಕೆಯಾಗುತ್ತಿದ್ದ ರಾಜ್ಯ ಧ್ವಜವನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಪ್ರಸಕ್ತ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜದ ಜೊತೆಯಲ್ಲೇ ರಾಜ್ಯದ ಧ್ವಜವನ್ನೂ ಹಾರಿಸಲಾಗುತ್ತಿದೆ. 

ಜಮ್ಮು ಕಾಶ್ಮೀರ ವಿಧಾನಸಭೆಯ ಸ್ಪೀಕರ್‌ ನಿರ್ಮಲಾ ಸಿಂಗ್‌ ಅವರು ಮಂಗಳವಾರ ತಮ್ಮ ವಾಹನದ ಮೇಲಿಂದ ರಾಜ್ಯ ಧ್ವಜವನ್ನು ತೆರವುಗೊಳಿಸಿ ಇಂಥ ಕ್ರಮ ಕೈಗೊಂಡ ಮೊದಲಿಗರೆನಿಸಿದ್ದಾರೆ.

ಡೊಭಾಲ್‌ ಭೇಟಿ: ದಕ್ಷಿಣ ಕಾಶ್ಮೀರಕ್ಕೆ ಬುಧವಾರ ಭೇಟಿ ನೀಡಿ, ಸ್ಥಳೀಯರ ಜೊತೆ ಸಂವಾದ ನಡೆಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಸ್ಥಳೀಯರಿಗೆ ಸುರಕ್ಷತೆಯ ಭರವಸೆ ನೀಡಿದರು.

‘ಎಲ್ಲವೂ ಸರಿಯಾಗುತ್ತದೆ. ನಿಮ್ಮ ರಕ್ಷಣೆ ಮತ್ತು ಭದ್ರತೆಯ ಜವಾಬ್ದಾರಿ ನಮ್ಮದು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಇಲ್ಲೇ ಬಾಳಿ ಬದುಕುತ್ತಾರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆ’ ಎಂದು ಅವರು ಸ್ಥಳೀಯರಲ್ಲಿ ವಿಶ್ವಾಸ ತುಂಬಿದರು.

ಡೊಭಾಲ್‌ ಅವರು ರಸ್ತೆಬದಿಯಲ್ಲೇ ಆಹಾರ ಸೇವಿಸುತ್ತಾ, ಸ್ಥಳೀಯರ ಜೊತೆ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಾಜ್ಯಪಾಲರಿಂದ ಪರಿಶೀಲನೆ

ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಬುಧವಾರ ಜಮ್ಮು ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಪರಿಶೀಲನೆ ನಡೆಸಿದರು. ರಾಜಭವನದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿದ ರಾಜ್ಯಪಾಲರು ಅಗತ್ಯ ಮಾಹಿತಿ ಪಡೆದುಕೊಂಡರು.

‘ರಾಜ್ಯದಲ್ಲಿ ಪರಿಸ್ಥಿತಿ ಸಮಾಧಾನಕರವಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಲಭಿಸುತ್ತಿವೆ. ಜನರು ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಲು ಆರಂಭಿಸಿದ್ದಾರೆ. ವಿದ್ಯುತ್‌, ನೀರಿನ ಸರಬರಾಜು ಆಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ರಾಜ್ಯಪಾಲರಿಗೆ ತಿಳಿಸಿದ್ದಾರೆ’ ಎಂದು ರಾಜಭವನದ ವಕ್ತಾರ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು