ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಪುಲ್ವಾಮ ದಾಳಿಯಂತೆಯೇ ಸಂಚು: ಗುರಿಯಾಗಿತ್ತು 20 ಸಿಆರ್‌ಪಿಎಫ್ ವಾಹನಗಳು

Last Updated 28 ಮೇ 2020, 10:00 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸ್ಫೋಟ ನಡೆಸುವ ಸಂಚನ್ನು ಭಾರತೀಯ ಸೇನೆ, ಪೊಲೀಸರು ಮತ್ತು ಅರೆ ಸೇನಾಪಡೆಗಳು ವಿಫಲಗೊಳಿಸಿವೆ. ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಸುಮಾರು 400 ಮಂದಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯನ್ನು (ಸಿಆರ್‌ಪಿಎಫ್‌) ಗುರಿಯಾಗಿಸಿ ದಾಳಿಯ ಸಂಚು ರೂಪಿಸಿರಬಹುದೆಂದು ಭದ್ರತಾ ಪಡೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಎನ್‌ಐ ವರದಿ ಮಾಡಿದೆ.

ಸಿಆರ್‌ಪಿಎಫ್‌ ಸಿಬ್ಬಂದಿ ಒಳಗೊಂಡ ಸುಮಾರು 20 ವಾಹನಗಳು ಗುರುವಾರ ಬೆಳಿಗ್ಗೆ ಶ್ರೀನಗರದಿಂದ ಹೊರಟು ಜಮ್ಮು ತಲುಪಬೇಕಿತ್ತು. ಸಿಆರ್‌ಪಿಎಫ್‌ ವಾಹನಗಳು ಚಲಿಸುವ ಹಾದಿಯಲ್ಲಿ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಸುಧಾರಿತ ಸ್ಪೋಟಕ (ಐಇಡಿ) ಹೊಂದಿದ್ದ ಕಾರನ್ನು ವಶ ಪಡಿಸಿಕೊಂಡು, ಸುರಕ್ಷಿತ ಸ್ಥಳದಲ್ಲಿ ಕಾರು ಸ್ಫೋಟಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿವೆ.

2019ರಲ್ಲಿ ನಡೆಸಿದ ಪುಲ್ವಾಮಾ ದಾಳಿಯಂಥದ್ದೇ ಸಂಚನ್ನು ಈಗಲೂ ರೂಪಿಸಲಾಗಿತ್ತು. ಅಂದುಸ್ಫೋಟಗಳನ್ನು ತುಂಬಿದ್ದ ಕಾರನ್ನು ಸಿಆರ್‌ಪಿಎಫ್‌ ವಾಹನಗಳಿಗೆ ನುಗ್ಗಿಸುವ ಮೂಲಕ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 40 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾದರು.

ಗುರುವಾರ ಬೆಳಿಗ್ಗೆ 7ಕ್ಕೆ ಬಕ್ಷಿ ಸ್ಟೇಡಿಯಂನ ಕ್ಯಾಂಪ್‌ನಿಂದ ಸಿಆರ್‌ಪಿಎಫ್‌ ವಾಹನಗಳು ಹೊರಟು ಜಮ್ಮು ತಲುಪಬೇಕಿತ್ತು. ಸಿಆರ್‌ಪಿಎಫ್‌ ಸಿಬ್ಬಂದಿ ಹಾಗೂ ಬಹುತೇಕ ಎಲ್ಲ ದರ್ಜೆಯ ಅಧಿಕಾರಿಗಳನ್ನು ಒಳಗೊಂಡ 400 ಜನರ ತಂಡವನ್ನು ಹೊತ್ತ ವಾಹನಗಳು ಸಾಗಬೇಕಿತ್ತು. ಆ ಪಡೆಯನ್ನು ಉಗ್ರರು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದರುಎಂದು ಶಂಕಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್‌, ಸಿಆರ್‌ಪಿಎಫ್‌ ಹಾಗೂ ಭಾರತೀಯ ಸೇನೆ ಸಹಯೋಗದಲ್ಲಿ ಸುಧಾರಿತ ಸ್ಫೋಟಕ ತುಂಬಿದ ಸ್ಯಾಂಟ್ರೊ ಕಾರನ್ನು ವಶಪಡಿಸಿಕೊಂಡು ನಾಶ ಪಡಿಸಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಆರ್‌ಪಿಎಫ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕೆಲವು ದಿನಗಳ ಹಿಂದಷ್ಟೇ ಸಂಭಾವ್ಯ ದಾಳಿಯ ಕುರಿತು ಗುಪ್ತಚರ ಮಾಹಿತಿ ರವಾನೆಯಾಗಿತ್ತು. ಎಲ್ಲ ಭದ್ರತಾ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಗುರುವಾರ ಬೆಳಗಿನ ಜಾವ ಭದ್ರತಾ ಪಡೆಗಳು ಸ್ಫೋಟಕ ತುಂಬಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾದವು.

ಬೆಳಿಗ್ಗೆ 6ರಿಂದ 7:30ರ ನಡುವೆ ವಾಹನ ನಾಶ ಪಡಿಸುವ ಕಾರ್ಯಾಚರಣೆ ನಡೆಸಲಾಗಿದೆ. 20 ಕೆ.ಜಿಯಷ್ಟು ಸುಧಾರಿತ ಸ್ಫೋಟಕ ತುಂಬಿಕೊಂಡು ಹೊರಟಿದ್ದ ಕಾರಿನಿಂದ ಸಂಭವಿಸಬಹುದಾಗಿದ್ದ ಮತ್ತೊಂದು ದೊಡ್ಡ ದಾಳಿ ತಪ್ಪಿದೆ.

ನಕಲಿ ನೋಂದಣಿ ಸಂಖ್ಯೆ ಹೊಂದಿದ್ದ ಕಾರನ್ನು ವಾಹನ ತಪಾಸಣೆ ನಡೆಸುತ್ತಿದ್ದ ಜಾಗದಲ್ಲಿ ತಡೆಯಲಾಯಿತು. ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಚಾಲಕ, ವಾಹನದೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. 'ಭದ್ರತಾ ಪಡೆಗಳು ಗುಂಡು ಹಾರಿಸಿದವು. ಆದರೆ, ಚಾಲಕ ಸ್ಫೋಟಕ ತುಂಬಿದ ಕಾರು ಬಿಟ್ಟು ತಪ್ಪಿಸಿಕೊಂಡ' ಎಂದು ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT