ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಪಾತದಲ್ಲಿ ಸಿಲುಕಿರುವ ಐವರು ಸೈನಿಕರು; ರಕ್ಷಣಾ ಕಾರ್ಯದಲ್ಲಿ 250 ಯೋಧರು

ಇಂಡೊ–ಚೀನಾ ಗಡಿ
Last Updated 21 ಫೆಬ್ರುವರಿ 2019, 4:37 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮಪಾತದಲ್ಲಿ ಸಿಲುಕಿರುವ ಐವರು ಯೋಧರನ್ನು ರಕ್ಷಿಸಲು ಸೇನೆ ಮತ್ತು ಅರೆಸೇನಾ ಪಡೆಯ 250ಕ್ಕೂ ಹೆಚ್ಚು ಯೋಧರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬುಧವಾರ ಹಿಮಪಾತದಲ್ಲಿ ಸಿಲುಕಿ ಯೋಧರೊಬ್ಬರು ಮೃತಪಟ್ಟಿದ್ದಾರೆ.

ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಕಿನ್ನೌರ್‌ನ ನಮಜ್ಯಾ ಪ್ರದೇಶದಲ್ಲಿ ಹಿಮ ಕುಸಿತ ಉಂಟಾಗಿದ್ದು, ಗಸ್ತು ತಿರುಗುತ್ತಿದ್ದ ಯೋಧರು ಸಿಲುಕಿದರು. ಈಗಾಗಲೇ ಹಲವು ಯೋಧರನ್ನು ರಕ್ಷಿಸಲಾಗಿದ್ದು, ಐವರು ಯೋಧರಿಗಾಗಿ ಹುಡುಕಾಟ ಮುಂದುವರಿದಿದೆ. ರಕ್ಷಿಸಿ ಆಸ್ಪತ್ರೆಗೆ ಸಾಗುತ್ತಿದ್ದ ಯೋಧರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ.

ಇಂಡೊ–ಚೀನಾ ಗಡಿಭಾಗದ ಶಿಪ್ಕಿ ಲಾ ವಲಯದಲ್ಲಿ ಸೇನಾ ಯೋಧರನ್ನು ಗಸ್ತು ತಿರುಗಲು ನಿಯೋಜಿಸಲಾಗಿತ್ತು. ಒಟ್ಟು ಹದಿನಾರು ಯೋಧರು ಎರಡು ತಂಡಗಳಲ್ಲಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು.

ಯೋಧರ ರಕ್ಷಣಾ ಕಾರ್ಯಾಚರಣೆಯಲ್ಲಿ 250ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದಾರೆ. ಉಷ್ಣಾಂಶ –15 ಡಿಗ್ರಿ ತಲುಪಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಮತ್ತೆ ನಾಲ್ಕು ಇಂಚಿನಷ್ಟು ಹಿಮದ ಹೊದೆಕೆ ಸೃಷ್ಟಿಯಾಗಿದಿರುವುದಾಗಿ ರಕ್ಷಣಾ ಕಾರ್ಯದಲ್ಲಿರುವ ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ) ಪಡೆ ತಿಳಿಸಿದೆ.

ಗಡಿ ಭಾಗದ ರಸ್ತೆಗಳ ನಿರ್ವಹಣೆ ಮಾಡುವ ತಂಡ(ಬಿಆರ್‌ಒ) ಯಂತ್ರಗಳ ಸಹಾಯದಿಂದ ಹಿಮದಲ್ಲಿ ಸಿಲುಕಿರುವ ಯೋಧರನ್ನು‍ ಪತ್ತೆ ಮಾಡುವ ಪ್ರಯತ್ನ ನಡೆಸಿದೆ. ಸಿಲುಕಿರುವ ಎಲ್ಲ ಯೋಧರು ಪತ್ತೆಯಾಗುವವರೆಗೂ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT