ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ತಿಳಿಯಾಗದ ಗಾಬರಿ, ಗೊಂದಲ, ಗಡಿಬಿಡಿ

Last Updated 3 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶ್ರೀನಗರ: ಭದ್ರತೆಯ ಕಾರಣ ಅಮರನಾಥ ಯಾತ್ರಿಕರನ್ನು ಹಿಂತಿರುಗುವಂತೆ ಸರ್ಕಾರವು ನಿರ್ದೇಶನ ನೀಡಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಗಾಬರಿ, ಗಡಿಬಿಡಿ, ಗೊಂದಲ ಮತ್ತು ಅನಿಶ್ಚಿತ ಸ್ಥಿತಿ ಮನೆ ಮಾಡಿದೆ. ಪ್ರವಾಸಿಗರು ಕಾಶ್ಮೀರದಿಂದ ಹೊರಹೋಗಲು ಮುಂದಾಗಿದ್ದರೆ, ಕಾಶ್ಮೀರಿ ಜನರು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಶ್ರೀನಗರದಲ್ಲಿನರಾಷ್ಟ್ರೀಯ ತಾಂತ್ರಿಕ ಸಂಸ್ಥೆಯು (ಎನ್‌ಐಟಿ) ತರಗತಿಗಳನ್ನು ರದ್ದುಪಡಿಸಿದೆ. ರಾಜ್ಯದ ಕಿಶ್ತವಾಡ್ ಜಿಲ್ಲೆಯ ‘ಮಾಛಿಲ್ ಮಾತಾ’ ಯಾತ್ರೆಯನ್ನೂ ರದ್ದುಪಡಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 11,000 ಪ್ರವಾಸಿಗರು ಇದ್ದಾರೆ. ಇದರಲ್ಲಿ ಅಮರನಾಥ ಯಾತ್ರಿಕರು, ಮಾಛಿಲ್ ಮಾತಾ ಯಾತ್ರಿಕರು ಮತ್ತು 200 ವಿದೇಶಿ ಪ್ರವಾಸಿಗರೂ ಇದ್ದಾರೆ. ಉಗ್ರರ ದಾಳಿಯ ಸಾಧ್ಯತೆ ಇರುವುದರಿಂದ ಯಾತ್ರಿಕರು ಮತ್ತು ಪ್ರವಾಸಿಗರು ಆದಷ್ಟು ತ್ವರಿತವಾಗಿ ರಾಜ್ಯದಿಂದ ಹೊರನಡೆಯುವಂತೆ ಸರ್ಕಾರವು ನಿರ್ದೇಶನ ನೀಡಿತ್ತು.

ಇದರ ಬೆನ್ನಲ್ಲೇ ಅಷ್ಟೂ ಪ್ರವಾಸಿಗರು ರಾಜ್ಯದಿಂದ ಹೊರಹೋಗಲು ಮುಂದಾಗಿದ್ದಾರೆ. ಬಹುತೇಕ ಪ್ರವಾಸಿಗರು ಪ್ರವಾಸವನ್ನು ಮೊಟಕುಗೊಳಿಸಿ, ತಮ್ಮ ಸ್ಥಳಗಳಿಗೆ ವಾಪಸ್ ಹೊರಡುತ್ತಿರುವುದರಿಂದ ವಿಮಾನಗಳ ಟಿಕೆಟ್‌ ಅನ್ನು ರದ್ದುಪಡಿಸುತ್ತಿದ್ದಾರೆ. ಹಲವರು ಟಿಕೆಟ್‌ಗಳನ್ನು ಬದಲಾವಣೆ ಮಾಡಿಸುತ್ತಿದ್ದಾರೆ. ಸಾಮಾನ್ಯ ಸ್ಥಿತಿಯಲ್ಲಿ ಈ ಪ್ರಕ್ರಿಯೆಗೆ ಎಲ್ಲಾ ವಿಮಾನಯಾನ ಸಂಸ್ಥೆಗಳೂ ಶುಲ್ಕ ವಿಧಿಸುತ್ತವೆ. ಆದರೆ ಈಗ ಏರ್‌ ವಿಸ್ತಾರಾ, ಇಂಡಿಗೊ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಈ ಶುಲ್ಕವನ್ನು ರದ್ದುಪಡಿಸಿವೆ. ಅಗತ್ಯವಾದಲ್ಲಿ ಹೆಚ್ಚುವರಿ ವಿಮಾನ ಸೇವೆ ಒದಗಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಸೂಚನೆ ನೀಡಿದೆ.

ಬಸ್‌ ವ್ಯವಸ್ಥೆ:ತಮ್ಮ ಊರುಗಳಿಗೆ ಹಿಂತಿರುಗುತ್ತಿರುವರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ (ಎನ್‌ಐಟಿ) ವಿದ್ಯಾರ್ಥಿಗಳಿಗೆ ಶ್ರೀನಗರದ ಜಿಲ್ಲಾಡಳಿತವೇ ಬಸ್‌ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

‘ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಹೊರರಾಜ್ಯದವರಾಗಿದ್ದಾರೆ. ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಅವರ ಪೋಷಕರಿಂದ ಮನವಿಗಳು ಬರುತ್ತಿವೆ. ಹೀಗಾಗಿಸಂಸ್ಥೆಯು ಸ್ವಯಂಪ್ರೇರಿತವಾಗಿ ತರಗತಿಗಳನ್ನು ರದ್ದುಪಡಿಸಿದೆ. ಬಸ್‌ ವ್ಯವಸ್ಥೆ ಮಾಡಿಕೊಡುವಂತೆ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಳುಹಿಸಲಾಗುತ್ತಿದೆ’ ಎಂದು ಶ್ರೀನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಆತಂಕ:‘ಕಾಶ್ಮೀರದಲ್ಲಿ ಯಾವ ದುಸ್ಸಾಹಸ ನಡೆಯಲಿದೆ ಎಂಬುದನ್ನು ನಾನು ಊಹಿಸಲಾರೆ. ಆದರೆ ಯಾವುದೋ ದುಸ್ಸಾಹಸಕ್ಕೆ ಸಿದ್ಧತೆ ನಡೆದಿದೆ ಎಂಬುದು ಮಾತ್ರ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅಂತಹ ದುಸ್ಸಾಹಸಕ್ಕೆ ಕೈಹಾಕದಂತೆ ಅವರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಮಾರುಕಟ್ಟೆಗಳಲ್ಲಿ ದಟ್ಟಣೆ
ಶ್ರೀನಗರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ‘ಮತ್ತೇನೋ ಒಂದು ದೊಡ್ಡ ಅನಾಹುತವಾಗಬಹುದು’ ಎಂದು ಬಹುತೇಕ ಜನರು ಕಳವಳದಲ್ಲಿದ್ದಾರೆ. ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಉಂಟಾಗಿದೆ. ದಿನಸಿ, ತರಕಾರಿ, ಒಣಹಣ್ಣುಗಳು, ನಿತ್ಯಬಳಕೆಯ ವಸ್ತುಗಳನ್ನು ಜನರು ಸಂಗ್ರಹಿಸಿಕೊಳ್ಳಲು ಮುಂದಾಗಿದ್ದಾರೆ.

ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಪೆಟ್ರೊಲ್‌ ಬಂಕ್‌ಗಳ ಎದುರು ಸಾಲುಗಟ್ಟಿ ನಿಂತಿದ್ದಾರೆ. ಕೆಲವು ಬಂಕ್‌ಗಳಲ್ಲಿ ಸಂಗ್ರಹ ಮುಗಿದಿರುವ ಕಾರಣ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ನಗರದ ಬಹುತೇಕ ಎಟಿಎಂ ಘಟಕಗಳ ಎದುರು ಸರತಿ–ಸಾಲುಗಳನ್ನು ಕಾಣಬಹುದಾಗಿದೆ. ಜನರು ನಗದು ಸಂಗ್ರಹಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ನಗದು ಕೊರತೆಯೂ ಉಂಟಾಗಿದೆ.

ಈಚಿನ ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಬಂದಿದ್ದು ಇದೇ ಮೊದಲು ಎಂದು ನಗರದ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವದಂತಿಗಳು
*ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ‘35ಎ’ ಮತ್ತು 370ನೇ ವಿಧಿಯನ್ನು ರದ್ದುಪಡಿಸಲಾಗುತ್ತದೆ
*ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಲಾಗುತ್ತದೆ. ಜಮ್ಮುವಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ
*ಕಾಶ್ಮೀರ ಮತ್ತು ಲಡಾಕ್ ಪ್ರಾಂತಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಲಾಗುತ್ತದೆ
*ಆಗಸ್ಟ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀನಗರದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ
*ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಧ್ವಜಾರೋಹಣ ನಡೆಸಲಾಗುತ್ತದೆ
*ಜಮ್ಮು – ಕಾಶ್ಮೀರ ವಿದಾನಸಭೆ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT