ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

38 ಹೊಸ ಮಸೂದೆ ಮಂಡನೆ: ಪ್ರಹ್ಲಾದ ಜೋಶಿ

ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ಸ್ಥಾನಮಾನ ರದ್ದುಪಡಿಸುವ ಮಸೂದೆ ಈ ಅಧಿವೇಶನದಲ್ಲಿ ಮಂಡನೆ ಇಲ್ಲ
Last Updated 8 ಜೂನ್ 2019, 13:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಮ್ಮು– ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ವಿಸ್ತರಣೆ, ತ್ರಿವಳಿ ತಲಾಖ್‌ ನಿಷೇಧ ಸೇರಿದಂತೆ 10 ಸುಗ್ರೀವಾಜ್ಞೆ ಹಾಗೂ 38 ಹೊಸ ಮಸೂದೆಗಳನ್ನು ಇದೇ 17ರಿಂದ ಆರಂಭವಾಗುವ ಸಂಸತ್‌ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಭಾರತ ಸಂವಿಧಾನದ 370ನೇ ಕಲಂ ಅಡಿ ಜಮ್ಮು– ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಪಡಿಸಲು ಎಲ್ಲ ರಾಜಕೀಯ ಪಕ್ಷಗಳ ಸಹಮತ ಬೇಕಾಗಿದೆ. ಹೀಗಾಗಿ ಈ ಅಧಿವೇಶನದಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸುತ್ತಿಲ್ಲ’ ಎಂದರು.

‘ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಆದ್ಯತೆ ನೀಡಲಾಗಿದ್ದು, ಈ ಸಂಬಂಧ ಪ್ರಮುಖ ವಿರೋಧ ಪಕ್ಷಗಳ ಮುಖಂಡರನ್ನು ಈಗಾಗಲೇ ಭೇಟಿ ಮಾಡಿ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

ತನಿಖೆಗೆ ಆಗ್ರಹ:‘ಜಿಂದಾಲ್‌ಗೆ ಕಡಿಮೆ ದರದಲ್ಲಿ ಭೂಮಿ ನೀಡುವುದರ ಬಗ್ಗೆ ಸಮ್ಮಿಶ್ರ ಸರ್ಕಾರದಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್‌ನಲ್ಲೇ ಆಂತರಿಕ ವಿರೋಧ ವ್ಯಕ್ತವಾಗಿದೆ. ಕಡಿಮೆ ದರಕ್ಕೆ ಭೂಮಿ ನೀಡಿರುವುದರ ಹಿಂದೆ ಭ್ರಷ್ಟಾಚಾರದ ಗುಮಾನಿ ಇದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಜೋಶಿ ಆಗ್ರಹಿಸಿದರು.

ಬದಲಾವಣೆ ಇಲ್ಲ:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ಎಸ್‌.ಯಡಿಯೂರಪ್ಪ ಸಮರ್ಥವಾಗಿ ಪಕ್ಷ ಸಂಘಟಿಸುತ್ತಿರುವ ಕಾರಣ ಸದ್ಯಕ್ಕೆ ಅವರ ಬದಲಾವಣೆ ಇಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT