ಸೋಮವಾರ, ಮಾರ್ಚ್ 30, 2020
19 °C

ಸಮುದಾಯಕ್ಕೆ ಸೋಂಕು ಆತಂಕ ಬೇಡ: ಕೇಂದ್ರ ಆರೋಗ್ಯ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾರಕವಾದ ಕೊರೊನಾ ವೈರಾಣು ಸೋಂಕು ಸಮುದಾಯದಲ್ಲಿ ವ್ಯಾಪಕವಾಗಿ ಹರಡಬಹುದು ಎಂಬುದಕ್ಕೆ, ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಕೇಂದ್ರ  ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

ಈ ಮೂಲಕ ಸೋಂಕು ಹರಡುವ ವೇಗ ದೇಶದಲ್ಲಿ ಮೂರನೇ ಹಂತಕ್ಕೆ ಪ್ರವೇಶಿಸಿದೆ ಎಂದು ಹಬ್ಬಿದ್ದ ವದಂತಿಗೆ ತೆರೆ ಎಳೆದಿದ್ದು, ಇಂಥ ವದಂತಿಯಿಂದ ದುಗುಡಕ್ಕೆ ಒಳಗಾಗಿದ್ದ ಜನರಿಗೂ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ನೀಡಿದೆ. ಈ ಮಧ್ಯೆ, ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ನಿರ್ಬಂಧ ಮತ್ತು ಪೊಲೀಸರ ಕಟ್ಟೆಚ್ಚರದ ನಡುವೆಯೂ ಜನರು ಇವುಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಬೆಳವಣಿಗೆಯು ಆತಂಕವನ್ನು ಹೆಚ್ಚಿಸುತ್ತಿದೆ.

ಸೋಂಕು ಏರಿಕೆ ಪ್ರಮಾಣ ಸ್ಥಿರವಾಗಿದೆ.  ಹೀಗಾಗಿ, ಸೋಂಕು ಸಮುದಾಯದಲ್ಲಿ ಸಾಂಕ್ರಾಮಿಕ ಆಗಬಹುದು ಎಂಬುದಕ್ಕೆ ಯಾವುದೇ ನಿದರ್ಶನವಿಲ್ಲ. ಹಾಗೆಂದೂ, ಈಗ ಜಾರಿಯಲ್ಲಿರುವ ನಿರ್ಬಂಧಗಳನ್ನು ಈ  ಹಂತದಲ್ಲಿ ಸಡಿಲಿಸುವ ಸ್ಥಿತಿಯೂ ಇಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.

ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು, `ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಒಟ್ಟಾರೆಯಾಗಿ ಪರಿಸ್ಥಿತಿ ಸ್ಥಿರವಾಗಿದೆ. ಯಾವ ಪ್ರಮಾಣದಲ್ಲಿ ಸೋಂಕು ಏರಿಕೆ ಆಗಬೇಕಿತ್ತೋ ಆ ಪ್ರಮಾಣದಲ್ಲಿ ಏರಿಕೆ ಆಗುತ್ತಿಲ್ಲ. ನಿಯಂತ್ರಣದಲ್ಲಿದೆ’ ಎಂದು ತಿಳಿಸಿದರು.

ಸಾಮಾಜಿಕ ಅಂತರ ನೀತಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನೀತಿ, ಸೋಂಕು ಪ್ರಕರಣಗಳನ್ನು ಪತ್ತೆ ಮಾಡಲು ಕಟ್ಟುನಿಟ್ಟಿನ ಕ್ರಮ, ಎಲ್ಲ ನಿವಾಸಿಗಳು ಮನೆಯಲ್ಲಿಯೇ ಸ್ವಯಂ ನಿರ್ಬಂಧಕ್ಕೆ ಒಳಗಾಗುವ ಕ್ರಮಗಳಿಂದ ಸೋಂಕು ತಡೆಯುವ ವಿಶ್ವಾಸವನ್ನು ಗೃಹ ಸಚಿವಾಲಯ ಹೊಂದಿದೆ.

ಸರ್ಕಾರ ಮತ್ತು ಸಮುದಾಯ ಒಟ್ಟಾಗಿ ಸೋಂಕು ತಡೆಗೆ ಕಾರ್ಯನಿರ್ವಹಿಸದೇ ಇದ್ದಲ್ಲಿ ಸಮುದಾಯಕ್ಕೂ ವ್ಯಾಪಿಸುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲೇ ನಿರ್ಬಂಧದಲ್ಲಿ ಇರುವುದು ಅಗತ್ಯ ಎಂದು ಅಗರವಾಲ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು