ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಣತಿಯಂತೆ ಸಹಿ ಮಾಡುವ ವ್ಯಕ್ತಿ ನಾನಲ್ಲ: ಪಿಣರಾಯಿ ವಿಜಯನ್

Last Updated 4 ಡಿಸೆಂಬರ್ 2018, 3:00 IST
ಅಕ್ಷರ ಗಾತ್ರ

ತಿರುವನಂತಪುರಂ: ಗುಜರಾತ್ ಹತ್ಯಾಕಾಂಡ, ಇಶ್ರತ್ ಜಹಾನ್ ಸುಳ್ಳು ಎನ್‍ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ರಕ್ಷಿಸಲು ಲೋಕನಾಥ ಬೆಹರಾ ನೀಡಿದ ಕಡತವನ್ನು ತಾನು ಗೃಹ ವ್ಯವಹಾರ ಖಾತೆ ರಾಜ್ಯ ಸಚಿವರಾಗಿದ್ದಾಗ ನೋಡಿದ್ದೆ ಎಂದು ಹೇಳಿದ ಕಾಂಗ್ರೆಸ್ ಮುಖ್ಯಸ್ಥಮುಲ್ಲಪ್ಪಳ್ಳಿ ರಾಮಚಂದ್ರನ್ ಅವರ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ.

ಅಂಥದೊಂದು ಕಡತ ನೋಡಿದ್ದರೆ ಅದರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ? ಈ ವಿಷಯವನ್ನು ಇಲ್ಲಿಯವರೆಗೆ ಮುಚ್ಚಿಟ್ಟಿದ್ದು ಯಾಕೆ ಎಂದು ಪಿಣರಾಯಿ ಪ್ರಶ್ನಿಸಿದ್ದಾರೆ.

ಎನ್ಐಎ ಅಧಿಕಾರಿಯಾಗಿದ್ದಾಗ ಮೋದಿ ಮತ್ತು ಅಮಿತ್ ಶಾ ಅವರನ್ನು ರಕ್ಷಿಸಿದ್ದ ಋಣಕ್ಕಾಗಿ ಪ್ರಧಾನಿಯವರ ಅಣತಿಯಂತೆಪಿಣರಾಯಿ ಅವರು ಬೆಹರಾ ಅವರನ್ನು ಕೇರಳದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಾಡಿದ್ದಾರೆ ಎಂದು ಮುಲ್ಲಪ್ಪಳ್ಳಿ ಆರೋಪಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪಿಣರಾಯಿ, ಮೋದಿ ಹೇಳಿದ್ದಕ್ಕೆಲ್ಲಾ ಸಹಿ ಮಾಡುವ ವ್ಯಕ್ತಿ ಪಿಣರಾಯಿ ವಿಜಯನ್ ಅಲ್ಲ ಎಂಬುದು ಜನರಿಗೆ ಗೊತ್ತಿದೆ ಎಂದಿದ್ದಾರೆ.

ಈಗಿರುವ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಡಿಜಿಪಿ ಸ್ಥಾನ ವಹಿಸುವ ಯೋಗ್ಯತೆ ಇರುವ ವ್ಯಕ್ತಿಯಾಗಿದ್ದಾರೆ ಬೆಹರಾ. ಅವರ ಬಗ್ಗೆ ಯಾವುದೇ ಆರೋಪಗಳು ಕೇಳಿಬಂದಿಲ್ಲ. ಬೆಹರಾ ಅವರನ್ನು ಡಿಜಿಪಿ ಮಾಡಿದಾಗ ಮುಲ್ಲಪ್ಪಳ್ಳಿ ಯಾಕೆ ಏನೂ ಮಾತನಾಡಿಲ್ಲ?
ಮುಲ್ಲಪ್ಪಳ್ಳಿ ಅವರು ಮಾಡಿರುವ ಆರೋಪದ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸಬೇಕು. ಈ ಬಗ್ಗೆ ಪಿ.ಚಿದಂಬರಂ ಅವರು ಪ್ರತಿಕ್ರಿಯಿಸಬೇಕು. 10 ವರ್ಷಗಳ ಕಾಲ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಹೀಗಿದ್ದರೂ ಮೋದಿ ಮತ್ತು ಅಮಿತ್ ಶಾ ವಿರುದ್ಧ ಕ್ರಮ ತೆಗೆದುಕೊಳ್ಳದೆ ಈಗ ಆರೋಪ ಮಾಡಿ ಏನು ಪ್ರಯೋಜನ? ಸಚಿವ ಸ್ಥಾನದಲ್ಲಿದ್ದಾಗ ಕಡತದಲ್ಲಿರುವ ರಹಸ್ಯಗಳನ್ನು ಬಹಿರಂಗಪಡಿಸುವುದಲ್ಲ.ಅದಕ್ಕೆ ತಕ್ಕ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.ಈ ವಿಷಯದಲ್ಲಿ ಮುಲ್ಲಪ್ಪಳ್ಳಿ ಅವರ ಮಾತುಗಳನ್ನು ನಂಬಲು ಸಾಧ್ಯವಿಲ್ಲ.

ಮುಲ್ಲಪ್ಪಳ್ಳಿ ಕೇಂದ್ರ ಸಚಿವರಾಗಿದ್ದಾಗ ವಾರದಲ್ಲಿ ಏಳು ದಿನವಿದ್ದರೂ, ಎಂಟು ದಿನ ಅವರು ವಡಕರ, ಕೋಯಿಕ್ಕೋಡ್ ನಲ್ಲಿರುತ್ತಿದ್ದರು ಎಂದು ಪಿಣರಾಯಿ ಲೇವಡಿ ಮಾಡಿದ್ದಾರೆ.ಕೇಂದ್ರ ಸಚಿವರಿಗೆ ಕೆಲಸವೇನೂ ಇಲ್ಲವೇ? ಎಂದು ಜನರು ಯೋಚಿಸುತ್ತಿದ್ದರು.ಆ ಸ್ಥಾನವನ್ನು ಬಳಸಿ ಕೆಲವು ಸಂಘಟನೆಗಳನ್ನು, ಕೆಲವು ವ್ಯಕ್ತಿಗಳನ್ನು ಇಲ್ಲದಂತೆ ಮಾಡಲು ಮುಲ್ಲಪ್ಪಳ್ಳಿ ಯತ್ನಿಸಿದ್ದರು.ಅಂದು ಕೇಂದ್ರ ಸಚಿವರಾಗಿದ್ದ ಪಿ.ಚಿದಂಬರಂ ಅವರ ಕೈಯಿಂದ ಎಷ್ಟು ದಾಖಲೆಗಳನ್ನು ಇವರು ನೋಡಿದ್ದಾರೆ ಎಂಬುದು ಊರಿನ ಜನರಿಗೆಲ್ಲಾ ಗೊತ್ತು ಎಂದು ಪಿಣರಾಯಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT