ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಧರಿಂದ ದೇಶದೆಲ್ಲೆಡೆ ಬೆಳಕು’

ಭಾರತ–ಚೀನಾ ಗಡಿಯಲ್ಲಿ ದೀಪಾವಳಿ ಆಚರಣೆ ವೇಳೆ ಪ್ರಧಾನಿ ಮೋದಿ ಬಣ್ಣನೆ
Last Updated 7 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಉತ್ತರಕಾಶಿ, ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರು ಸೇನೆ ಹಾಗೂ ಇಂಡೊ–ಟಿಬೆಟಿಯನ್‌ ಗಡಿ ಭದ್ರತಾ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿಯೊಂದಿಗೆ ಭಾರತ–ಚೀನಾ ಗಡಿಯ ಹರ್ಸಿಲ್‌ ಸೇನಾ ಶಿಬಿರದಲ್ಲಿ ದೀಪಾವಳಿ ಆಚರಿಸಿದರು.

‘ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೀವು ತೋರುತ್ತಿರುವ ಕರ್ತವ್ಯ ಬದ್ಧತೆ ರಾಷ್ಟ್ರದ ಶಕ್ತಿಯನ್ನು ಹೆಚ್ಚಿಸಿದೆ. ನೀವು ದೇಶದ 125 ಕೋಟಿ ಜನರನ್ನಷ್ಟೇ ರಕ್ಷಿಸುತ್ತಿಲ್ಲ, ಜೊತೆಗೆ ಅವರ ಕನಸುಗಳನ್ನು ಹಾಗೂ ಅವರ ಭವಿಷ್ಯವನ್ನು ರಕ್ಷಣೆ ಮಾಡುತ್ತಿದ್ದೀರಿ. ನೀವು ಅಭಿನಂದನಾರ್ಹರು. ದೀಪಾವಳಿ ಬೆಳಕಿನ ಹಬ್ಬ. ನೀವು ಕಠಿಣ ಪರಿಶ್ರಮದಿಂದ ಭಯವಿಲ್ಲದ ಬೆಳಕನ್ನು ಎಲ್ಲೆಡೆ ಹರಡುತ್ತಿದ್ದೀರಿ’ ಎಂದು ಯೋಧರ ಸೇವೆಯನ್ನು ಕೊಂಡಾಡಿದರು.

ಸೇನೆಯೊಂದಿಗೆ ತಾವು ಕಳೆದ ಸಮಯವನ್ನು ಮೆಲುಕು ಹಾಕಿದ ಮೋದಿ, ‘ಒಂದು ಶ್ರೇಣಿ, ಒಂದು ಪಿಂಚಣಿ (ಒಆರ್‌ಒಪಿ) ಜಾರಿಗೆ ₹12,000 ಕೋಟಿ ಅನುದಾನ ಅಗತ್ಯವಿತ್ತು. ಈ ಯೋಜನೆ ಜಾರಿಗೆ ತರಲು ನನಗೆ ಸಾಧ್ಯವಾಗಿದೆ. ಒಆರ್‌ಒಪಿ ಅಡಿಯಲ್ಲಿ ₹11,000 ಕೋಟಿ ಈಗಾಗಲೇ ನೀಡಲಾಗಿದೆ’ ಎಂದರು.

‘ರಕ್ಷಣಾ ವಲಯದಲ್ಲಿ ಭಾರತವು ಮಹತ್ತರವಾದ ದಾಪುಗಾಲನ್ನಿಟ್ಟಿದೆ. ಭಾರತೀಯ ಸಶಸ್ತ್ರ ಪಡೆಗಳು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ. ಕೌಶಲ, ಶೌರ್ಯ ಹಾಗೂ ಶಿಸ್ತಿಗೆ ಹೆಸರಾದ ಭಾರತದ ಶಾಂತಿಪಾಲನಾ ಪಡೆ ಬಗ್ಗೆ ಹೆಮ್ಮೆಪಡಬೇಕು’ ಎಂದರು.

ಒಂದು ಗಂಟೆ 15 ನಿಮಿಷಗಳವರೆಗೆ ಹರ್ಷಿಲ್‌ನಲ್ಲಿ ಕಾಲ ಕಳೆದ ಮೋದಿ, ಯೋಧರಿಗೆ ಸಿಹಿ ಹಂಚಿದರು. ಗಡಿಯಲ್ಲಿರುವ ಬಾಗೋರಿಗ್ರಾಮದ ಜನರನ್ನು ಭೇಟಿ ಮಾಡಿದರು. ಭಾಗೀರಥಿ ನದಿ ತಟದಲ್ಲಿ ಪಾರ್ಥನೆ ಸಲ್ಲಿಸಿದರು.

ಕೇದಾರನಾಥಕ್ಕೆ ಪ್ರಧಾನಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಪ್ರಯುಕ್ತ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕೇದಾರಪುರಿ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿದರು.

ಕಾಮಗಾರಿ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸ್ಥಳದಲ್ಲಿದ್ದ ಅನೇಕರೊಂದಿಗೆ ಸಂವಾದ ನಡೆಸಿದರು.

2013ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು ಹಾಗೂ ಇಲ್ಲಿನ ದೇವಾಲಯ, ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರಿ ಹಾನಿಯಾಗಿತ್ತು.ಈ ಪ್ರದೇಶದ ಪುನರ್‌ ನಿರ್ಮಾಣಕ್ಕೆ ಕೇದಾರಪುರಿ ಯೋಜನೆ ಜಾರಿಗೆ ತರಲಾಗಿತ್ತು.
2017ರ ಅಕ್ಟೋಬರ್‌ನಲ್ಲಿ ಪ್ರಧಾನಿ ಇಲ್ಲಿಗೆ ಭೇಟಿ ನೀಡಿದ್ದರು.

ಹಬ್ಬಕ್ಕೆ ಸಚಿವೆ ನಿರ್ಮಲಾ ಸಾಥ್
ಇಟಾನಗರ:
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅರುಣಾಚಲ ಪ್ರದೇಶದ ಭಾರತ– ಚೀನಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.

ನಿರ್ಮಲಾ ಅವರು ಗಡಿಯಲ್ಲಿರುವ ರೊಚ್ಚಾಂಗೆ ತೆರಳಿ ಪರಿಶೀಲನೆ ನಡೆಸಿದ ನಂತರ ಅಂಜವ್‌ ಜಿಲ್ಲೆಯ ಹಯುಲಿಯಾಂಗ್‌ನ ಸೇನಾ ಶಿಬಿರದಲ್ಲಿ ದೀಪಾವಳಿ ಆಚರಿಸಿದರು. ಯೋಧರಿಗೆ ಸಿಹಿ ವಿತರಿಸಿದರು ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ಚಿರಂಜಿತ್‌ ಕೊನ್ವರ್‌ ತಿಳಿಸಿದ್ದಾರೆ.

*
ಸೈನಿಕರ ಜೊತೆಗೆ ಸಮಯ ಕಳೆಯುವ ಅವಕಾಶ ನನಗೆ ಸಿಕ್ಕಿತ್ತು. ಅವರ ಅಗತ್ಯಗಳ ಬಗ್ಗೆ ತಿಳಿದುಕೊಂಡಿದ್ದು, ಅವುಗಳ ಈಡೇರಿಕೆಗೆ ಬದ್ಧ.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT