ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆಯ ಬೆನ್ನೆಲುಬು ಮುರಿದ ಪ್ರಧಾನಿ ಮೋದಿ: ಯಶವಂತ್ ಸಿನ್ಹಾ ಆರೋಪ

‘ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗೌರ‍್ನಮೆಂಟ್‌ ಬ್ರೋಕ್‌ ದಿ ಎಕಾನಮಿ’ ಪುಸ್ತಕದಲ್ಲಿ ತಪ್ಪು ಆರ್ಥಿಕ ನೀತಿಗಳ ಬಗ್ಗೆ ತರಾಟೆ
Last Updated 22 ಡಿಸೆಂಬರ್ 2018, 18:28 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥ ವವ್ಯಸ್ಥೆಯ ಬೆನ್ನೆಲುಬು ಮುರಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ.

ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗೌರ‍್ನಮೆಂಟ್‌ ಬ್ರೋಕ್‌ ದಿ ಎಕಾನಮಿ’ ಪುಸ್ತಕದಲ್ಲಿ ಮೋದಿ ಅವರ ತಪ್ಪು ಆರ್ಥಿಕ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪ್ರಧಾನಿಯು ದೇಶದ ಆರ್ಥಿಕ ಪರಿಸ್ಥಿತಿ ಮತ್ತು ನಿರ್ವಹಣೆಯ ಬಗ್ಗೆ ಬರೀ ಸುಳ್ಳು ಹೇಳುತ್ತಿದ್ದಾರೆ. ವಾಸ್ತವ ಸ್ಥಿತಿಯನ್ನು ಮರೆಮಾಚಿ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ದೇಶದ ಜನರಿಗೆ ಸತ್ಯವನ್ನು ಹೇಳುವ ಕೆಲಸವನ್ನು ಈ ಪುಸ್ತಕದ ಮೂಲಕ ಮಾಡುತ್ತಿದ್ದೇನೆ’ ಎಂದು ಸಿನ್ಹಾ ಹೇಳಿದ್ದಾರೆ.

‘ಜಿಡಿಪಿ ಅಂಕಿ, ಅಂಶಗಳು ದಾರಿ ತಪ್ಪಿಸುವಂತಿವೆ. ಆರ್‌ಬಿಐ ಸ್ವಾಯತ್ತತೆ ಅಪಾಯದಲ್ಲಿದೆ. ನೋಟು ರದ್ದು ಅತಿ ದೊಡ್ಡ ಬ್ಯಾಂಕಿಂಗ್‌ ಹಗರಣ ಇದರಿಂದ ದೇಶದ ಅರ್ಥ ವ್ಯವಸ್ಥೆ ಅವನತಿಯಾಗಿದೆ. ದೇಶಕ್ಕೆ ಇದರ ಕೊಡುಗೆ ಶೂನ್ಯ’ ಎಂದು ಅವರು ಹೇಳಿದ್ದಾರೆ.

ಮೊದಲಿನಿಂದಲೂ ಮೋದಿ ಅವರ ಕಟು ಟೀಕಾಕಾರರಾಗಿರುವ ಯಶವಂತ್‌ ಸಿನ್ಹಾ ಏಪ್ರಿಲ್‌ನಲ್ಲಿ ಬಿಜೆಪಿ ತೊರೆದಿದ್ದರು.

ದೇಶವನ್ನು ಕಾಡುತ್ತಿರುವ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ‘ಸ್ವಯಂ ಉದ್ಯೋಗ’ ಎಂಬ ಮಂತ್ರ ಜಪಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ ಹಳಿ ತಪ್ಪಿದ್ದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುವರ್ಣ ಅವಕಾಶ ದೊರೆತಿತ್ತು. ಆದರೆ, ಈ ಅವಕಾಶವನ್ನು ತಾವಾಗಿಯೇ ಹಾಳು ಮಾಡಿಕೊಂಡರು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

**

‘ಪ್ರಧಾನಿ ಜತೆ ಹಗೆತನ ಇಲ್ಲ’

‘ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನನಗೆ ಯಾವುದೇ ರೀತಿಯ ವೈಯಕ್ತಿಕ ಹಗೆತನ, ದ್ವೇಷ ಇಲ್ಲ. 2014ರ ಚುನಾವಣೆ ವೇಳೆ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವಂತೆ ಮೊದಲು ಸೂಚಿಸಿದ್ದ ಬಿಜೆಪಿ ಹಿರಿಯ ನಾಯಕರಲ್ಲಿ ನಾನು ಮೊದಲಿಗ’ ಎಂದು ಸಿನ್ಹಾ ನೆನಪಿಸಿಕೊಂಡಿದ್ದಾರೆ.

‘ಸಚಿವ ಸ್ಥಾನ ಅಥವಾ ಎನ್‌ಡಿಎ ಸರ್ಕಾರದಲ್ಲಿ ಇನ್ನಾವುದೇ ಪ್ರಮುಖ ಹುದ್ದೆ ದೊರೆಯಲಿಲ್ಲ ಎಂದು ಮೋದಿ ವಿರುದ್ಧ ಕಿಡಿ ಕಾರುತ್ತಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಅದು ಸುಳ್ಳು’ ಎಂದು ಅವರು ಪುಸ್ತಕದಲ್ಲಿ ಸಮಜಾಯಿಷಿ ನೀಡಿದ್ದಾರೆ. ಯಶವಂತ್‌ ಸಿನ್ಹಾ ಮತ್ತು ಪತ್ರಕರ್ತ ಆದಿತ್ಯ ಸಿನ್ಹಾ ಬರೆದಿರುವ ಪುಸ್ತಕವನ್ನು ಜಗರ್‌ನಾಟ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

**

ಈವೆಂಟ್‌ ಮ್ಯಾನೇಜ್‌ಮೆಂಟ್‌...

*ಮೋದಿ ಸರ್ಕಾರ ಕೇವಲ ‘ಈವೆಂಟ್‌ ಮ್ಯಾನೇಜ್‌ಮೆಂಟ್‌’ ಸಂಸ್ಥೆಯ ರೀತಿ ಕೆಲಸ ಮಾಡುತ್ತಿದೆ. ಮೋದಿ ಕೇವಲ ಭ್ರಮೆಗಳನ್ನು ಹುಟ್ಟು ಹಾಕುತ್ತಿದ್ದಾರೆ.

*‘ಭಾರತದಲ್ಲಿ ತಯಾರಿಸಿ’ ಯೋಜನೆ ಕೂಡ ವಿಫಲ ಹಾಗೂ ಹಳಸಲು ಯೋಜನೆ. ಯುಪಿಎ ಸರ್ಕಾರ 2004ರಲ್ಲಿ ವಿ. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ರಾಷ್ಟ್ರೀಯ ಉತ್ಪಾದನಾ ಸ್ಪರ್ಧಾತ್ಮಕ ಮಂಡಳಿಯ ನಕಲು.

*ಯುಪಿಎ ಸರ್ಕಾರದಲ್ಲಿ ಕೂಡ ದೇಶದ ಅರ್ಥ ವ್ಯವಸ್ಥೆ ದುರ್ಬಲವಾಗಿತ್ತು. ಅದನ್ನು ಸುಧಾರಿಸುವ ಅವಕಾಶವನ್ನು ಮೋದಿ ಕೈಚೆಲ್ಲಿದ್ದಾರೆ.

* ಸಂಕೀರ್ಣ ತೆರಿಗೆ ವ್ಯವಸ್ಥೆ ಕೊನೆಗಾಣಿಸಿ, ದೇಶದಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೊಳಿಸಿರುವುದು ಉತ್ತಮ ಪ್ರಯತ್ನ. ಆದರೆ, ಮೋದಿ–ಹಣಕಾಸು ಸಚಿವ ಅರುಣ್‌ ಜೇಟ್ಲಿ ಜೋಡಿ ಜಿಎಸ್‌ಟಿ ಬಗ್ಗೆ ಗೊಂದಲ ಹುಟ್ಟು ಹಾಕಿದ್ದಾರೆ.

**

ಕೈಗಾರಿಕಾ, ಕೃಷಿ ಪ್ರಗತಿ ಸಾಧಿಸದೆ, ಹೂಡಿಕೆ ಇಲ್ಲದೆ ಪ್ರಧಾನಿ ಮೋದಿ ಅವರ ಜಾದೂವಿನಿಂದಲೇ ಶೇ 7.35 ಆರ್ಥಿಕ ಪ್ರಗತಿ ಸಾಧಿಸಿದ ವಿಶ್ವದ ಏಕೈಕ ರಾಷ್ಟ್ರ ಭಾರತವಿರಬಹುದು.

-ಯಶವಂತ್ ಸಿನ್ಹಾ, ಮಾಜಿ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT