ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರ ಪಡೆದ ಕನ್ನಡದ ಮಕ್ಕಳು

Last Updated 25 ಜನವರಿ 2020, 10:28 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮೂಲದ ಮೂವರು ಮಕ್ಕಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 49 ಮಕ್ಕಳಿಗೆ 'ಬಾಲ ಶಕ್ತಿ ಪುರಸ್ಕಾರ' 2020 ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಾಲಕಿ ಮೂರ್ಜೆ ಸುನಿತಾ ಪ್ರಭು ಶೈಕ್ಷಣಿಕ, ಬೆಂಗಳೂರಿನ ಪ್ರಗುನ್‌ ಪುದುಕೊಳಿಕಲೆ ಮತ್ತು ಸಂಸ್ಕೃತಿ ಮತ್ತು ಬೆಂಗಳೂರಿನ ಯಶ್ ಆರಾಧ್ಯಾ ಕ್ರೀಡಾ ವಿಭಾಗದಲ್ಲಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ ಪಡೆದ ಮಕ್ಕಳೊಂದಿಗೆ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ ನರೇಂದ್ರ ಮೋದಿ, ಇಂತಹ ಪ್ರತಿಭೆಗಳಿಂದ ನಾನು ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆಯುತ್ತೇನೆ. ಸಮಾಜ ಮತ್ತು ರಾಷ್ಟ್ರದ ಬಗೆಗಿನ ತಮ್ಮ ಕರ್ತವ್ಯದ ಅರಿವನ್ನು ಹೊಂದಿರುವ ಮಕ್ಕಳನ್ನು ನೋಡಿ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು.

'ಸ್ವಲ್ಪ ಸಮಯದ ಹಿಂದೆ ನಾನು ನಿಮಗೆ ಪರಿಚಯವಾದಾಗ, ನನಗೆ ನಿಜಕ್ಕೂ ಆಶ್ಚರ್ಯವಾಯಿತು. ನೀವೆಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲಸ ಅದ್ಭುತವಾಗಿದೆ. ನಿಮ್ಮೆಲ್ಲ ಧೈರ್ಯಶಾಲಿ ಕೆಲಸದ ಬಗ್ಗೆ ಕೇಳಿದಾಗಲೆಲ್ಲಾ, ನಿಮ್ಮೊಂದಿಗೆ ಮಾತನಾಡಿದಾಗೆಲ್ಲ ನನಗೆ ಸ್ಫೂರ್ತಿ ಮತ್ತು ಶಕ್ತಿಯೂ ಸಿಗುತ್ತದೆ' ಎಂದು ಹೇಳಿದರು.

ಪ್ರಧಾನಮಂತ್ರಿ ಬಾಲ ಪುರಸ್ಕಾರ 2020 ಪ್ರಶಸ್ತಿ ಪಡೆದ ಎಲ್ಲ ಯುವ ವಿಜೇತರ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ನಾವೀನ್ಯತೆ, ಸಾಮಾಜಿಕ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಮತ್ತು ಶೌರ್ಯ ಸೇರಿದಂತೆವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಶಸ್ತಿಯು ಪದಕ,‍₹1 ಲಕ್ಷ ನಗದು,ಪ್ರಮಾಣ ಪತ್ರ ಮತ್ತುಬಿನ್ನವತ್ತಳೆಯನ್ನು (ಪ್ರಶಂಸಾ ಪತ್ರ)ಒಳಗೊಂಡಿರುತ್ತದೆ.

ಪ್ರಗುನ್ ಪುದುಕೊಳಿ

ಪ್ರಗುನ್ ಪುದುಕೊಳಿ ಹುಟ್ಟಿದ್ದು 2005ರ ಜುಲೈ 19ರಂದು. ವಿಜ್ಞಾನ ಕ್ಷೇತ್ರದ ಅತ್ಯುತ್ತಮ ಬರಹಗಾರರಾಗಿದ್ದು, 2012 ಮತ್ತು 2019ರ ಅವಧಿಯಲ್ಲಿ ಪ್ರಗುನ್ ಬರೆದ ಸುಮಾರು 40 ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವುಗಳಲ್ಲಿ ಬಹುತೇಕ ಲೇಖನಗಳು ಪರಿಸರಕ್ಕೆ ಸಂಬಂಧಿಸಿವೆ. ನಾಸಾದ ಲಿಟರರಿ ಮೆರಿಟ್ ವಿಭಾಗದಲ್ಲಿ ಅಮೆಸ್ ಸ್ಪೇಸ್ ಸೆಟ್ಲ್‌ಮೆಂಟ್ ಸ್ಪರ್ಧೆ 2017ರಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರ ಕವಿತೆಗಳು ರೋಜರ್ ಸ್ಟೀವನ್ ಅವರ ಪೊಯೆಟ್ರಿ ಜೋನ್‌ ಬುಕ್‌ನಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ಬ್ರೈನ್‌ವೇವ್ ಸೈನ್ಸ್ ಮ್ಯಾಗಜೀನ್‌ನಲ್ಲಿ ಸೆಪ್ಟಂಬರ್ 2015ರಿಂದ ಜನವರಿ 2016ರವರೆಗೆ ವಿದ್ಯಾರ್ಥಿ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದಾರೆ. ಟಿಂಕಲ್ ವಾಚ್ ಟೀಂನ ಗೌರವ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುನೀತಾ ಮುರ್ಜೆ ಪ್ರಭು

ಸುನೀತಾ ಮುರ್ಜೆ ಪ್ರಭು ಅವರು ಸಾಂಕ್ರಾಮಿಕ ರೋಗದ ಕುರಿತು ಮಾಡಿದ ಸಂಶೋಧನೆ ವಿಶೇಷವಾಗಿದ್ದು, 2020ರ ಬಾಲ್‌ ಶಕ್ತಿ ಪುರಸ್ಕಾರವನ್ನು ಪಡೆದುಕೊಂಡಿರುವುದಕ್ಕೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್‌ನಲ್ಲಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಆರೋಗ್ಯಯುತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಿರುವ ಸುನಿತಾ ಪ್ರಭು, ಸೆಪ್ಟೆಂಬರ್ 7, 2003ರಲ್ಲಿ ಜನಿಸಿದರು. ಡೆಂಘೆ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ಸೊಳ್ಳೆ ನಿವಾರಕ ಉಡುಪು ಸಂಶೋಧಿಸಿ ಗಮನಸೆಳೆದಿದ್ದರು. ಸುಮಾರು 36 ಬಾರಿ ಬಟ್ಟೆಯನ್ನು ಒಗೆದ ಬಳಿಕವೂ ಅದು ಸೊಳ್ಳೆ ನಿಯಂತ್ರಕವಾಗಿ ಶೇ 90ರಷ್ಟು ಕೆಲಸ ಮಾಡಿತ್ತು. ಇತರೆ ಪರಿಕರಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದ ಈ ಸಾಧನ ಆರೋಗ್ಯಯುತ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದೆ.

ಯಶ್‌ ಆರಾಧ್ಯ ಎಸ್

ಯಶ್‌ ಆರಾಧ್ಯ ಜನಿಸಿದ್ದು, ಆಗಸ್ಟ್ 17, 2002ರಲ್ಲಿ. ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮೋಟಾರ್‌ ಸ್ಪೋರ್ಟ್ ಪಟು. ಸ್ಪೇನ್‌ನಲ್ಲಿ 7 ರಾಷ್ಟ್ರೀಯ ಚಾಂಪಿಯನ್ಸ್‌ಷಿಪ್ ಟೈಟಲ್ಸ್‌, 6 ಕ್ಲಬ್ ಚಾಂಪಿಯನ್‌ಷಿಪ್ ಟೈಟಲ್ಸ್ ಮತ್ತು 59 ರೇಸ್‌ಗಳಲ್ಲಿ ಜಯ ಸಾಧಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಭಾರತವನ್ನು ಪ್ರತಿನಿಧಿಸಿದ್ದ ಯಶ್, 4ನೇ ಸ್ಥಾನ ಗಳಿಸಿದರು. ಅಲ್ಲದೆ 20015ರಲ್ಲಿ ಸಿಐಕೆ-ಎಪ್‌ಐಎ ಅಕಾಡೆಮಿ ಟ್ರೋಫಿಯಲ್ಲಿ ಭಾರತದ ಪರವಾಗಿ ನಾಮನಿರ್ದೇಶನಗೊಂಡಿದ್ದರು.

ಪ್ರಶಸ್ತಿ ಪಡೆದ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT