ಗುರುವಾರ , ಮಾರ್ಚ್ 4, 2021
18 °C
ಬದಲಾವಣೆ ಸಾಧ್ಯ, ಮಾಡಿ ತೋರಿಸುತ್ತೇವೆ ಎಂದ ಪ್ರಧಾನಿ

ಮೋದಿ ಭಾಷಣ: ಜಮ್ಮು–ಕಾಶ್ಮೀರ ದೇಶದ ಮಕುಟ, ಅದನ್ನು ರಕ್ಷಿಸುತ್ತೇವೆ – ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಪ್ರಧಾನಿ ಭಾಷಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:

08:39 – ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ನಮ್ಮ ಸೋದರ–ಸೋದರಿಯರು ಮುಂದೆ ಬರಬೇಕು. ತಮ್ಮ ಸಾಮರ್ಥ್ಯ ಏನು ಎಂಬುದನ್ನು ಜನಗತ್ತಿನ ಎದುರು ತೆರೆದಿಡಬೇಕು. ಬನ್ನಿ ನಾವೆಲ್ಲರೂ ಸೇರಿ ಹೊಸ ಭಾರತದ ಜೊತೆಗೆ ಹೊಸ ಜಮ್ಮು ಕಾಶ್ಮೀರ ಮತ್ತು ಲಡಾಖ್‌ ರೂಪಿಸೋಣ. ಧನ್ಯವಾದಗಳು

08:38 – ನಮ್ಮ ನಿರ್ಧಾರವು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜೊತೆಗೆ ಭಾರತದ ಸಮಗ್ರ ಪ್ರಗತಿಗೆ ಸಹಕಾರಿಯಾಗಿದೆ. 

08:37 – ಪೂಂಛ್‌, ಲಡಾಖ್, ರಜೌರಿ ಜಿಲ್ಲೆಯ ಹಲವು ಸೈನಿಕರಿಗೆ ಅಶೋಕ ಚಕ್ರ, ಕೀರ್ತಿ ಚಕ್ರ ಸೇರಿದಂತೆ ಹಲವು ಗೌರವಗಳು ಸಂದಿವೆ. ಅಲ್ಲಿನ ಸಾಕಷ್ಟು ಜನರು ದೇಶದ ಸೇನೆಯಲ್ಲಿ ಭರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಗ್ರವಾದದಿಂದ ಅಮಾಯಕ ಜನರು, ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರೆಲ್ಲರ ಆಶಯ ಇಷ್ಟೇ ಇತ್ತು. ಶಾಂತ, ಸುರಕ್ಷಿತ, ಸಮೃದ್ಧ ಜಮ್ಮು ಕಾಶ್ಮೀರ ಅವರ ಕನಸಾಗಿತ್ತು

08:35 – ಭದ್ರತಾ ಸಿಬ್ಬಂದಿ, ಸರ್ಕಾರಿ ನೌಕರರು, ಜಮ್ಮು ಕಾಶ್ಮೀರ ಪೊಲೀಸ್ ಎಲ್ಲರಿಗೂ ನನ್ನ ಪ್ರಶಂಸೆ ಸಲ್ಲುತ್ತದೆ. ನಿಮ್ಮ ಪರಿಶ್ರಮದಿಂದ ನನ್ನ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಬದಲಾವಣೆ ಅಸಾಧ್ಯವಲ್ಲ. ಖಂಡಿತಾ ಸಾಧ್ಯ. ನಾವು ಮಾಡಿ ತೋರಿಸುತ್ತೇವೆ. ಜಮ್ಮು ಕಾಶ್ಮೀರ ನಮ್ಮ ದೇಶದ ಮಕುಟ. ಅದನ್ನು ನಾವು ಕಾಪಾಡಿಕೊಳ್ಳುತ್ತೇವೆ. 

08:34 – ಈದ್ ಮುಬಾರಕ್. ನನ್ನ ಪರವಾಗಿ ನಿಮಗೆಲ್ಲರಿಗೂ ಈದ್ ಮುಬಾರಕ್. ಜಮ್ಮು ಕಾಶ್ಮೀರದ ಜನರಿಗೆ ಈದ್ ಆಚರಣೆಗೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರ ವಹಿಸಿದ್ದೇವೆ. ಹೊರಗಿರುವ ಕಾಶ್ಮೀರದ ಜನರು ಈದ್ ಹಬ್ಬಕ್ಕೆ ಊರಿಗೆ ಹೋಗಲು ಎಲ್ಲ ನೆರವು ಕೊಟ್ಟಿದ್ದೇವೆ

08:33 – ನಾವು ಇದನ್ನು ಮರೆಯಲು ಸಾಧ್ಯವೇ ಇಲ್ಲ. ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಜಮ್ಮು ಕಾಶ್ಮೀರದ ದೇಶಭಕ್ತರು ಗಟ್ಟಿಯಾಗಿ ವಿರೋಧಿಸಿ ಭಾರತದ ಪರ ನಿಂತಿದ್ದಾರೆ. ನಮ್ಮಂತೆ ಅವರಿಗೂ ಸ್ವತಂತ್ರವಾಗಿ ಉತ್ತಮ ಜೀವನ ನಡೆಸಲು ಅಧಿಕಾರವಿದೆ. ಈ ಮೂಲಕ ಜಮ್ಮು ಕಾಶ್ಮೀರದ ಜನರಿಗೆ ನಾನು ಭರವಸೆ ಕೊಡುತ್ತಿದ್ದೇನೆ. ಕಾಲ ಕ್ರಮೇಣ ಎಲ್ಲವೂ ಸರಿಯಾಗುತ್ತೆ

08:32 – ಸಂಸತ್ತಿನಲ್ಲಿ ನೀವು ಹೇಗೆ ಮತ ಚಲಾಯಿಸಿದಿರಿ, ಏನು ಮಾತನಾಡಿದಿರಿ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಅದರಿಂದ ಮುಂದೆ ಬಂದು ಯೋಚಿಸಿ. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜನರ ಅಭಿವೃದ್ಧಿ ನಮ್ಮೆಲ್ಲರ ಆದ್ಯತೆ ಆಗಬೇಕು

08:31 – ಪ್ರಜಾಪ್ರಭುತ್ವದಲ್ಲಿ ಭಿನ್ನದನಿ ಸಹಜ. ನಾನು ಅದನ್ನು ಗೌರವಿಸುತ್ತೇನೆ. ನಮ್ಮ ಹೆಜ್ಜೆಯನ್ನು ಪ್ರಶ್ನಿಸುತ್ತಿರುವವರಿಗೆ ಉತ್ತರ ನೀಡಲು ಯತ್ನಿಸುತ್ತಿದ್ದೇವೆ. ದೇಶದ ಹಿತವನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಿ ಎನ್ನುವುದು ನನ್ನ ವಿನಂತಿ. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಅಭಿವೃದ್ಧಿಗೆ ನೆರವಾಗಿ. ದೇಶದ ಜನರ ಭಾವನೆಗೆ ಬೆಲೆ ಕೊಡಿ ಎಂದು ಎಲ್ಲರನ್ನೂ ನಾನು ವಿನಂತಿಸುತ್ತೇನೆ

08:30 – ಲಡಾಖ್‌ನಲ್ಲಿ ಅಧ್ಯಾತ್ಮ ನಿಸರ್ಗ, ಸಾಹಸ ಪ್ರವಾಸೋದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಅಲ್ಲಿ ಸೋಲಾರ್ ಉದ್ಯಮಗಳಿಗೂ ಅವಕಾಶವಿದೆ. ಲಡಾಖ್‌ನ ಯುವಜನತೆಯ ಆವಿಷ್ಕಾರ ಶಕ್ತಿ ಹೆಚ್ಚಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಅಲ್ಲಿ ಮೂಲ ಸೌಕರ್ಯ ಸುಧಾರಣೆಗೆ ನಾವು ಸಾಕಷ್ಟು ಗಮನ ಕೊಡುತ್ತೇವೆ

08:29 – ದೇಶದ ಉದ್ಯಮಿಗಳಿಗೆ, ಆಹಾರ ಸಂಸ್ಕರಣೆ ಮತ್ತು ರಫ್ತು ಉದ್ಯಮಿಗಳನ್ನು ಆಗ್ರಹಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ಕಳುಹಿಸಲು ಮುಂದೆ ಬನ್ನಿ. ಲಡಾಖ್–ಕಾರ್ಗಿಲ್ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಅಭಿವೃದ್ಧಿಯ ಯೋಜನೆಗಳನ್ನು ಇನ್ನಷ್ಟು ವೇಗವಾಗಿ ಮುನ್ನಡೆಸುತ್ತೇವೆ

08:27 – ಕ್ರೀಡಾ ತರಬೇತಿಗೆ ನಾವು ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ. ಮುಂದೊಂದು ದಿನ ವಿಶ್ವದ ಎಲ್ಲೆಡೆ ಭಾರತದ ಧ್ವಜ ಹಾರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಲಡಾಖ್‌ನ ಸಾವಯವ ಉತ್ಪನ್ನಗಳು, ಔಷಧಿಗಳನ್ನು ವಿಶ್ವದೆಲ್ಲೆಡೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ

08:26 – ಒಂದು ಕಾಲವಿತ್ತು. ಬಾಲಿವುಡ್‌ನ ಎಲ್ಲ ಚಿತ್ರಗಳೂ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಕಾಶ್ಮೀರದಲ್ಲಿ ಶೂಟಿಂಗ್ ನಡೆಯದೆ ಚಿತ್ರೀಕರಣ ಮುಗಿಯುತ್ತಲೇ ಇರುತ್ತಿರಲಿಲ್ಲ. ನಾನು ಇಂದಿಗೂ ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳ ಚಿತ್ರೋದ್ಯಮಿಗಳನ್ನು ವಿನಂತಿಸುತ್ತೇನೆ. ಬನ್ನಿ ಕಾಶ್ಮೀರಕ್ಕೆ. ಚಿತ್ರೀಕರಣ ಮಾಡಿ. ಅಲ್ಲಿನ ಪರಿಸರ ತೋರಿಸಿ. ಖಾಸಗಿ ಉದ್ಯಮಿಗಳು ಕಾಶ್ಮೀರದಲ್ಲಿ ಉದ್ಯಮ ಆರಂಭಿಸಬೇಕು. ಅಲ್ಲಿನ ಯುವಜನತೆ ಇಂಗ್ಲಿಷಿನಲ್ಲಿ ಚುರುಕಾಗಿದ್ದಾರೆ. ಅಲ್ಲಿ ಮಾಹಿತಿ ತಂತ್ರಜ್ಙಾನ ಉದ್ಯಮ ಬೆಳೆಸಬೇಕಿದೆ. ಅಲ್ಲಿನ ಜನರ ಅಗತ್ಯ ಪೂರೈಸಲು ಎಲ್ಲರೂ ಮುಂದೆ ಬನ್ನಿ. ಸರ್ಕಾರ ಇಟ್ಟಿರುವ ಹೆಜ್ಜೆಯನ್ನು ಅಲ್ಲಿನ ಜನರು ಸ್ವಾಗತಿಸುತ್ತಿದ್ದಾರೆ.

08:24 – ನಾನು ಅಲ್ಲಿನ ಯುವಜನರಿಗೆ ಕರೆ ನೀಡುತ್ತೇನೆ. ಇನ್ನು ನೀವು ಮುಂದೆ ಬನ್ನಿ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ. ಜಮ್ಮು ಮತ್ತು ಕಾಶ್ಮೀರವನ್ನು ವಿಶ್ವ ಪ್ರವಾಸೋದ್ಯಮದ ಕೇಂದ್ರ ಬಿಂದು ಮಾಡೋಣ ಬನ್ನಿ. ನನ್ನ ಈ ಪ್ರಯತ್ನಕ್ಕೆ ಭಾರತದ ಎಲ್ಲ ನಾಗರಿಕರ ಸಹಕಾರ ಬೇಕು

08:22 – ಮಹಿಳಾ ಪ್ರತಿನಿಧಿಗಳಂತೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಜನತೆ ಪ್ರತ್ಯೇಕತಾವಾದವನ್ನು ತಿರಸ್ಕರಿಸಿ ಹೊಸ ಕನಸಿನೊಂದಿಗೆ ಮುಂದೆ ಸಾಗುತ್ತಾರೆ. ಜಮ್ಮು ಕಾಶ್ಮೀರದ ಜನರು ಪಾರದರ್ಶಕತೆ ಮತ್ತು ಮುಕ್ತ ವಾತಾವರಣದಲ್ಲಿ ಹೊಸ ಉತ್ಸಾಹದೊಂದಿಗೆ ಮುನ್ನಡೆಯುತ್ತಾರೆ

08:20 – ಇದು ನನ್ನ ವೈಯಕ್ತಿಕ ಅನುಭವ. ನಾಲ್ಕೈದು ವರ್ಷಗಳ ಹಿಂದೆ ಜಮ್ಮು ಕಾಶ್ಮೀರ ಮತ್ತು ಲಡಾಖ್‌ಗಳಲ್ಲಿ ನಡೆದ ಪಂಚಾಯ್ತಿ ಚುನಾವಣೆಗಳಲ್ಲಿ ಆಯ್ಕೆಯಾದವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಕೆಲ ಪ್ರತಿನಿಧಿಗಳು ದೆಹಲಿಗೆ ಬಂದಾಗ ನನ್ನನ್ನು ಭೇಟಿಯಾಗಿದ್ದರು. ಅಲ್ಲಿನ ಸರಪಂಚರು ಮತ್ತು ಪ್ರಧಾನರ ಜೊತೆಗೆ ಮಾತನಾಡಿದೆ. ಅವರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಬಯಲು ಮಲ ವಿಸರ್ಜನೆ ತಡೆಯಲು, ಕುಡಿಯುವ ನೀರು ಮತ್ತು ವಸತಿ ಯೋಜನೆಗಳನ್ನು ಒದಗಿಸಲು ಅವಿರತ ಶ್ರಮಿಸುತ್ತಿದ್ದಾರೆ

08:19 – ಕೇಂದ್ರಾಡಳಿತ ವ್ಯವಸ್ಥೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ಇದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಭರವಸೆ ಕೊಡುತ್ತೇನೆ, ಪೂರ್ಣ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಿಮ್ಮ ಪ್ರತಿನಿಧಿಯನ್ನು ಆರಿಸಿಕೊಳ್ಳಲು ನಿಮಗೆ ಅವಕಾಶ ಸಿಗಲಿದೆ. ಆ ರಾಜ್ಯದ ರಾಜ್ಯಪಾಲರಿಗೆ ನಾನು ಆಗ್ರಹ ಮಾಡುತ್ತೇನೆ. ವಿಭಾಗ ಅಭಿವೃದ್ಧಿ ಮಂಡಳಿಗಳನ್ನೂ ಶೀಘ್ರ ರಚಿಸಬೇಕು

08:18 – ಬನ್ನಿ ನಾವೆಲ್ಲರೂ ಸೇರಿ ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಕೊನೆಗೊಳಿಸೋಣ. ಧರೆಯ ಮೇಲಿನ ಸ್ವರ್ಗವನ್ನು ಇಡೀ ವಿಶ್ವಕ್ಕೆ ಆಕರ್ಷಕಗೊಳಿಸೋಣ ಬನ್ನಿ. ಜನರಿಗೆ ಎಲ್ಲ ರೀತಿಯ ಹಕ್ಕುಗಳು ಸಿಗುವಂತೆ ಮಾಡೋಣ ಬನ್ನಿ. ಸರ್ಕಾರದ ಎಲ್ಲ ವ್ಯವಸ್ಥೆಗಳೂ ಜನಹಿತವನ್ನೇ ಗಮನದಲ್ಲಿರಿಕೊಂಡು ಕೆಲಸ ಮಾಡುತ್ತೇವೆ

08:18 – ಜಮ್ಮು ಕಾಶ್ಮೀರದ ಜನರಿಗೆ ಈ ಮೂಲಕ ನಾನು ಭರವಸೆ ಕೊಡುತ್ತೇನೆ. ಇನ್ನು ಮುಂದೆಯೂ ನೀವು ಅಲ್ಲಿ ಮತ ಚಲಾಯಿಸಬಹುದು. ಈವರೆಗೆ ಇದ್ದಂತೆ ಇನ್ನು ಮುಂದೆಯೂ ನೀವು ಮತ ಚಲಾಯಿಸಬಹುದು, ಅಲ್ಲಿ ಸಂಪುಟ ರಚನೆಯಾಗುತ್ತದೆ, ನಿಮ್ಮ ಜನಪ್ರತಿನಿಧಿಗಳು ನಿಮ್ಮ ಕಾಳಜಿ ವಹಿಸುತ್ತಾರೆ

08:16 – ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಿಂದ ಸಾವಿರಾರು ಮಂದಿಗೆ ಯಾವುದೇ ಚುನಾವಣೆಯಲ್ಲಿ ಮತ ಹಾಕುವ ಅವಕಾಶವೇ ಸಿಕ್ಕಿರಲಿಲ್ಲ. ದೇಶ ವಿಭಜನೆ ವೇಳೆ ಪಾಕಿಸ್ತಾನದಿಂದ ಬಂದ ಲಕ್ಷಾಂತರ ಜನರಿಗೆ ದೇಶದ ಎಲ್ಲೆಡೆ ಸಂವಿಧಾನಾತ್ಮಕ ಹಕ್ಕುಗಳು ಇದ್ದವು. ಆದರೆ ಜಮ್ಮು ಕಾಶ್ಮೀರದಲ್ಲಿ ಇರಲಿಲ್ಲ

08:14 – ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುತ್ತಿದ್ದೇವೆ. ಐಐಟಿ, ಐಐಎಂ, ಏಮ್ಸ್‌ ಸೇರಿದಂತೆ ಪ್ರತಿಷ್ಠಿತ ಕಂಪನಿಗಳನ್ನು ಆರಂಭಿಸುತ್ತೇವೆ. ರೈಲು ಯೋಜನೆ, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು, ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುತ್ತೇವೆ

08:13 – ಕೇಂದ್ರ ಸರ್ಕಾರದ ಪ್ರಮುಖ ಕಂಪನಿಗಳು, ಖಾಸಗಿ ಕಂಪನಿಗಳಲ್ಲಿಯೂ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಯುವಜನರಿಗೆ ಉದ್ಯೋಗ ಸಿಗುವಂತೆ ಮಾಡಲು ವ್ಯವಸ್ಥೆ ಮಾಡುತ್ತೇವೆ. ಉದ್ಯೋಗ ರ್‍ಯಾಲಿಗಳನ್ನು ಆಯೋಜಿಸುತ್ತೇವೆ. ಪ್ರಧಾನ ಮಂತ್ತಿ ವಿದ್ಯಾರ್ಥಿ ವೇತನ ಯೋಜನೆಯನ್ನು ಆದ್ಯತೆಯ ಮೇರೆಗೆ ವಿಸ್ತರಿಸುತ್ತೇವೆ. ಕಂದಾಯ ಸೋರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಅಲ್ಲಿ ಯಾವಾಗಿನಿಂದ ರಾಜ್ಯಪಾಲರ ಆಡಳಿತ ಆರಂಭವಾಗಿದೆಯೋ ಅಂದಿನಿಂದ ಅಲ್ಲಿ ಕೇಂದ್ರ ಸರ್ಕಾರದ ಆಡಳಿತವೇ ನಡೆಯುತ್ತಿದೆ. ಹೀಗಾಗಿ ಕಳೆದ ಕೆಲ ತಿಂಗಳುಗಳಿಂದ ಅಲ್ಲಿ ಉತ್ತಮ ಆಡಳಿತ ಮತ್ತು ಅದರ ಪ್ರಭಾವ ಸಮಾಜದಲ್ಲಿ ಕಾಣಿಸುತ್ತಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಹೊಸ ವೇಗ ಸಿಕ್ಕಿದೆ.

08:11 – ಜಮ್ಮು ಕಾಶ್ಮೀರ ಇನ್ನು ಅಭಿವೃದ್ದಿಯತ್ತ ದಾಪುಗಾಲು ಇಡಲಿದೆ. ನನಗೆ ಆ ವಿಶ್ವಾಸವಿದೆ. ಜಮ್ಮು ಕಾಶ್ಮೀರದ ಪೊಲೀಸರೂ ಸೇರಿದಂತೆ ಎಲ್ಲ ನೌಕರರಿಗೂ ದೇಶದ ಇತರ ರಾಜ್ಯಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳೂ ಸಿಗಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳೂ ಅಲ್ಲಿನ ಪೊಲೀಸರಿಗೆ ಮತ್ತು ಇತರ ಸರ್ಕಾರಿ ನೌಕರರಿಗೆ ಸಿಗುತ್ತೆ. ಈ ಹಿಂದೆ ಆಗುತ್ತಿದ್ದ ಅನ್ಯಾಯ ಇನ್ನು ಮುಂದೆ ಸರಿಯಾಗುತ್ತೆ. ನಾವು ಜಮ್ಮು ಕಾಶ್ಮೀರ ಸರ್ಕಾರಿ ನೌಕರರಿಗೆ ಎಲ್ಲ ಸೌಲಭ್ಯ ಒದಗಿಸಲು ಕಂಕಣಬದ್ಧರಾಗಿದ್ದೇವೆ. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಪ್ತಿಯ ಹುದ್ದೆಗಳನ್ನು ತುಂಬಲು ಕ್ರಮ ತೆಗೆದುಕೊಳ್ಳುತ್ತೇವೆ

08:09 – ದೇಶದ ಇತರ ರಾಜ್ಯಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಹಲವು ಹಕ್ಕುಗಳಿವೆ. ಆದರೆ ಜಮ್ಮು ಕಾಶ್ಮೀರದಲ್ಲಿ ಇಲ್ಲ. ದಲಿತರ ರಕ್ಷಣೆಗೆ ದೇಶದ ಇತರೆಡೆ ಇರುವ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ. ಅಲ್ಪಸಂಖ್ಯಾತರ ಹಿತ ರಕ್ಷಣೆಗಾಗಿ ರೂಪಿಸಿರುವ ಕಾನೂನುಗಳು, ಕನಿಷ್ಠ ವೇತನ ಖಾತರಿ ಕಾನೂನುಗಳು ಜಮ್ಮು ಕಾಶ್ಮೀರದಲ್ಲಿ ಕಾನೂನು ಲಾಗು ಆಗುತ್ತಿರಲಿಲ್ಲ. ದೇಶದ ಇತರ ರಾಜ್ಯಗಳಲ್ಲಿ ಚುನಾವಣೆಗೆ ನಿಲ್ಲಲು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಮೀಸಲಾತಿ ಸೌಲಭ್ಯ ಇರುತ್ತಿತ್ತು. ಆದರೆ ಜಮ್ಮು ಕಾಶ್ಮೀರದಲ್ಲಿ ಅದು ಇರಲಿಲ್ಲ. ಈಗ ಸಂವಿಧಾನದ 370ನೇ ವಿಧಿ ಮತ್ತು 35ಎ ಪರಿಚ್ಛೇದ ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಪೂರಕವಾಗಿದೆ. 

08:09 – ದೇಶದ ಇತರ ರಾಜ್ಯಗಳಲ್ಲಿ ಹೆಣ್ಣು ಮಕ್ಕಳಿಗೆ ಹಲವು ಹಕ್ಕುಗಳು ಸಿಗುತ್ತವೆ. ಆದರೆ ಜಮ್ಮು ಕಾಶ್ಮೀರದಲ್ಲಿ ಅದು ಇಲ್ಲ

08:08 – ಸಂಸತ್ತಿನಲ್ಲಿ ಚರ್ಚೆಗಳು ನಡೆದ ನಂತರ ಕಾನೂನು ರೂಪಿಸಲಾಗುತ್ತದೆ. ಆದರೆ ಯಾರೂ ಊಹಿಸಲೂ ಸಾಧ್ಯವಿಲ್ಲ. ಸಂಸತ್ತು ಇಷ್ಟೊಂದು ಸಂಖ್ಯೆಯಲ್ಲಿ ಕಾನೂನು ಮಾಡಿತ್ತು. ಆ ಕಾನೂನುಗಳು ದೇಶದ ಒಂದು ಭಾಗದಲ್ಲಿ ಜಾರಿಗೆ ಬರುತ್ತಲೇ ಇರಲಿಲ್ಲ. ಸಂಸತ್ತು ಇಡೀ ದೇಶದ ಹಿತಕ್ಕಾಗಿ ಕಾನೂನು ಮಾಡುತ್ತಿತ್ತು. ಅದರಿಂದ ಜಮ್ಮು ಕಾಶ್ಮೀರದ ಜನರು ವಂಚಿತರಾಗುತ್ತಿದ್ದರು

08:07 – ನಮ್ಮ ದೇಶದಲ್ಲಿ ಯಾವುದೇ ಸರ್ಕಾರ ಸಂಸತ್ತಿನಲ್ಲಿ ಕಾನೂನು ಮಾಡುವ ಮೂಲಕ ದೇಶದ ಹಿತ ಕಾಪಾಡುವ ಕೆಲಸ ಮಾಡುತ್ತೆ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ. ದೇಶದ ಹಿತವನ್ನೇ ಗಮನಿಸಿ ಅವು ಕೆಲಸ ಮಾಡುತ್ತವೆ

08:06 – ಸಾವಿರಾರು ಕುಟುಂಬಗಳು ನಿರ್ವಸಿತವಾದವು. ಅಲ್ಲಿನ ಜನರು ತಮ್ಮ ಪ್ರಾಣಗಳನ್ನು ಕೊಡಬೇಕಾಯಿತು. ಸ್ವಂತ ನೆಲದಿಂದ ಅವರು ನಿರಾಶ್ರಿತರಾಗಿ ಹೊರಗೆ ಹೋಗಬೇಕಾಯಿತು

08:05 – 370ನೇ ವಿಧಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರ ಬದುಕಿಗೆ ಏನು ಲಾಭವಾಯಿತು? ಈ ಬಗ್ಗೆ ಎಂದಾದರೂ ಗಂಭೀರ ಚರ್ಚೆಯಾಗಿದ್ದು ಉಂಟೆ?. ಈ ವಿಧಿಯಿಂದ ಕುಟುಂಬವಾದ, ಉಗ್ರವಾದ ಮತ್ತು ವ್ಯವಸ್ಥೆಯಲ್ಲಿ ಭ್ರಷ್ಟಾಚಾರಗಳು ಬೆಳೆದವು. ಅಷ್ಟು ಬಿಟ್ಟರೆ ಬೇರೇನೂ ಆಗಲೇ ಇಲ್ಲ. ಪಾಕಿಸ್ತಾನವು ಈ ವಿಧಿಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿತು.

08:04 – ಈ ದೇಶದಲ್ಲಿ ಯಾವುದೂ ಬದಲಾಗುವುದಿಲ್ಲ ಎನ್ನುವ ಭಾವನೆ ನಮ್ಮಲ್ಲಿ ಕೆಲವೊಮ್ಮೆ ಪ್ರಬಲವಾಗಿಬಿಡುತ್ತೆ. 370ನೇ ವಿಧಿಯ ಬಗ್ಗೆಯೂ ಹೀಗೆಯೇ ಆಗಿತ್ತು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ ಅದರಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ

08:03 – ಕಾಶ್ಮೀರದ ಜನರ ಜೊತೆಗೆ ದೇಶದ ಎಲ್ಲ ನಾಗರಿಕರನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಇದು ನಮ್ಮ ನಾಯಕರಾಗಿದ್ದ ವಾಜಪೇಯಿ ಸೇರಿದಂತೆ ಸಾವಿರಾರು ಜನರ ಕನಸಾಗಿತ್ತು

08:00 – ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೊಸ ಶಕೆ ಆರಂಭವಾಗಿದೆ

ಮೋದಿ ಅವರು ಬುಧವಾರವೇ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನದ ಹಿನ್ನೆಲೆಯಲ್ಲಿ ಭಾಷಣವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು ವಾಡಿಕೆ. ನರೇಂದ್ರ ಮೋದಿ ಅವರು ಆಗಾಗ ಮನ್‌ ಕಿ ಬಾತ್ ಮೂಲಕ ದೇಶದ ಜನರೊಂದಿಗೆ ತಮ್ಮ ಮನದ ಮಾತನ್ನು ಹಂಚಿಕೊಳ್ಳುವುದನ್ನು ಆರಂಭಿಸಿದ್ದಾರೆ.

ಇವೆರೆಡೂ ಹೊರತುಪಡಿಸಿ 2016ರ ನವೆಂಬರ್ 8 ಮತ್ತು ಇದೇ ವರ್ಷ ಮಾರ್ಚ್‌ 27ರಂದು ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 2016ರ ನವೆಂಬರ್ 8ರಂದು ನೋಟು ರದ್ದತಿಯ ವಿಚಾರ ಪ್ರಕಟಿಸಿದ್ದರು. ಇದೇ ವರ್ಷ ಮಾರ್ಚ್ 27ರಂದು ಉಪಗ್ರಹ ನಿಗ್ರಹ ಕ್ಷಿಪಣಿಯ ಯಶಸ್ವಿ ಉಡಾವಣೆಯ ಬಗ್ಗೆ ಮಾಹಿತಿ ನೀಡಿದ್ದರು.

ಈ ಬಾರಿಯೂ ಅಂಥದ್ದೇನಾದರೂ ಘೋಷಣೆ ಹೊರಬೀಳಬಹುದು ಎಂದು ಒಂದು ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ₹2000 ಮುಖಬೆಲೆಯ ನೋಟುಗಳು ರದ್ದಾಗಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜೋಕುಗಳೂ ಹರಿದಾಡುತ್ತಿವೆ.

ನೆನಪು: ₹500, 1000 ನೋಟು ರದ್ದು; ಗುರುವಾರದಿಂದ ₹500, ₹ 2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ (ನವೆಂಬರ್ 9, 2016ರಂದು ಪ್ರಕಟವಾಗಿದ್ದ ಸುದ್ದಿ)

ಉಪಗ್ರಹ ನಾಶದ ‘ಶಕ್ತಿ’ ಕರಗತ (ಮಾರ್ಚ್‌ 28, 2019ರಂದು ಪ್ರಕಟವಾಗಿದ್ದ ಸುದ್ದಿ)

 

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು