ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬೆಳಿಗ್ಗೆ 9ಕ್ಕೆ ದೇಶದ ಜನರಿಗಾಗಿ ಪ್ರಧಾನಿ ಮೋದಿ ವಿಡಿಯೊ ಸಂದೇಶ

Last Updated 3 ಏಪ್ರಿಲ್ 2020, 2:09 IST
ಅಕ್ಷರ ಗಾತ್ರ

ನವದೆಹಲಿ:ದೇಶದ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿವಿಡಿಯೊ ಸಂದೇಶವನ್ನು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ವಿಚಾರವನ್ನು ಟ್ವೀಟ್‌ ಮೂಲಕ ಅವರು ತಿಳಿಸಿದ್ದಾರೆ.

'ನಾಳೆ ಬೆಳಿಗ್ಗೆ 9 ಗಂಟೆಗೆ, ನಾನು ಭಾರತೀಯ ಸಂಗಡಿಗರೊಂದಿಗೆಒಂದು ಸಣ್ಣ ವಿಡಿಯೊ ಸಂದೇಶವನ್ನು ಹಂಚಿಕೊಳ್ಳಲಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಟ್ವೀಟಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯಲು ಮಾರ್ಚ್‌ 25ರಿಂದ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿದೆ. ಈ ಕ್ವಾರಂಟೈನ್‌ ಅವಧಿಯ ಸೂಕ್ತ ಬಳಕೆಗಾಗಿ ಪ್ರಧಾನಿ ಹಲವು ಸಲಹೆಗಳನ್ನೂ ನೀಡಿದ್ದರು. ಯೋಗಾಭ್ಯಾಸ ಹಾಗೂ ಯೋಗ ನಿದ್ರೆಗೆ ಸಂಬಂಧಿಸಿದ ವಿಡಿಯೊಗಳನ್ನು ಹಂಚಿಕೊಂಡು ಫಿಟ್ನೆಸ್‌ ಕಾಳಜಿ ವ್ಯಕ್ತಪಡಿಸಿದ್ದರು.

'ನಾನು ಫಿಟ್ನೆಸ್‌ ಎಕ್ಸ್‌ಪರ್ಟ್‌ ಅಲ್ಲ ಅಥವಾ ವೈದ್ಯಕೀಯ ಪರಿಣತನೂ ಅಲ್ಲ. ಯೋಗಾಭ್ಯಾಸ ಹಲವು ವರ್ಷಗಳಿಂದ ನನ್ನ ಜೀವನದ ಭಾಗವೇ ಆಗಿದೆ ಹಾಗೂ ಅದರಿಂದ ನಾನು ಸಾಕಷ್ಟು ಲಾಭ ಪಡೆದಿದ್ದೇನೆ. ನಿಮ್ಮಲ್ಲಿ ಅನೇಕರು ಫಿಟ್‌ ಆಗಿ ಇರಲು ಹಲವು ಮಾರ್ಗಗಳನ್ನು ಕಂಡುಕೊಂಡಿರುವಿರಿ ಎಂದು ನಂಬಿದ್ದೇನೆ., ಅದನ್ನು ನೀವು ಇತರರೊಂದಿಗೂ ಹಂಚಿಕೊಳ್ಳಿ' ಎಂದು ಟ್ವೀಟಿಸಿದ್ದರು.

'ಕುಟುಂಬದೊಂದಿಗೆ ಕಾಲ ಕಳೆಯುವುದು, ಹೊಸ ಅಡುಗೆಗಳನ್ನು ಕಲಿಯುವುದು, ಹಳೆಯ ಗೆಳೆಯರನ್ನು ಸಂಪರ್ಕಿಸುವುದು, ಪುಸ್ತಕ ಓದುವುದು,...' ಹೀಗೆಜನರು ಹೇಗೆಲ್ಲ ಈ ಸಮಯದ ಸುದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.

ಸಲಹೆ ಕೋರಿದ ಪ್ರಧಾನಿ

ಲಾಕ್‌ಡೌನ್‌ ಹಿಂದಕ್ಕೆ ಪಡೆದ ಬಳಿಕ ಜನರು ಹಂತಹಂತವಾಗಿ ಹೊರಗೆ ಬರುವಂತಾಗಬೇಕು. ಅದಕ್ಕಾಗಿ, ಸಮಾನ ಕಾರ್ಯತಂತ್ರವನ್ನು ಸೂಚಿಸುವಂತೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳನ್ನು ಗುರುವಾರ ಕೋರಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಲಾಕ್‌ಡೌನ್‌ ಅನ್ನು ಎಲ್ಲ ರಾಜ್ಯಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಕರೆ ಕೊಟ್ಟರು.

21 ದಿನಗಳ ದಿಗ್ಬಂಧನದಿಂದ ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ. ಮುಂದಿನ ಕೆಲವು ವಾರಗಳಲ್ಲಿ ಸೋಂಕು ಪರೀಕ್ಷೆ, ಗುರುತಿಸುವಿಕೆ ಮತ್ತು ಪ್ರತ್ಯೇಕವಾಗಿ ಇರಿಸುವಿಕೆಯನ್ನು ಹೆಚ್ಚಿಸುವ ಮೂಲಕ ಸೋಂಕು ಹರಡುವಿಕೆ ತಡೆಯಬೇಕು ಎಂದು ಪ್ರಧಾನಿ ಹೇಳಿದರು.

ಕೆಲವು ದೇಶಗಳಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ಆತಂಕಕಾರಿ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಪಿಡುಗು
ತಡೆಗೆ ಎಲ್ಲ ರಾಜ್ಯಗಳು ಸಮುದಾಯ ಆಧರಿತ ಕಾರ್ಯತಂತ್ರವನ್ನು ಅನುಸರಿಸಬೇಕು ಎಂದು ಸೂಚಿಸಿದರು.

ದೇಶದ ಹಲವು ಭಾಗಗಳಲ್ಲಿ ಕೊಯ್ಲು ಋತು ಆರಂಭವಾಗಿದೆ. ಹಾಗಾಗಿ, ಕೃಷಿ ಚಟುವಟಿಕೆಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಬಹುದು. ಆದರೆ, ಹೊಲದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕೈಬಿಡಬಾರದು ಎಂದು ಪ್ರಧಾನಿ ಹೇಳಿದರು.

ಬಿಕ್ಕಟ್ಟಿನಿಂದ ಪಾರಾಗಲು ಆರ್ಥಿಕ ಮತ್ತು ವೈದ್ಯಕೀಯ ಸಂಪನ್ಮೂಲ ನೆರವು ಬೇಕು ಎಂದು ಕೆಲವು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಕೋರಿದರು.

ಲಾಕ್‌ಡೌನ್‌ ಹೇರಿಕೆಯ ಬಳಿಕ ಮೋದಿ ಅವರು ಮುಖ್ಯಮಂತ್ರಿಗಳ ಜತೆಗೆ ಎರಡನೇ ಬಾರಿ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT