ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲೇ ಎಚ್ಚರಿಕೆ ನೀಡಿದ್ದರು: ಜಾವಡೇಕರ್

Last Updated 12 ಜೂನ್ 2020, 3:18 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ಜನವರಿ 30ರಂದು ಪತ್ತೆಯಾಗಿದ್ದರೂ ಈ ಸೋಂಕು ಗಂಭೀರವಾಗಿದ್ದು ವಿಶ್ವಕ್ಕೆ ಮಾರಕವಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದಕ್ಕೂ ಮೊದಲೇ ತಿಳಿದಿತ್ತು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಗುಜರಾತಿನ ಸೌರಾಷ್ಟ್ರದ ಜನತೆಯನ್ನುದ್ದೇಶಿಸಿ ಜನ ಸಂವಾದ ರ್‍ಯಾಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಗುರುವಾರ ಮಾತನಾಡಿದ್ದಾರೆ.

‘ಕಳೆದ ವರ್ಷದ ಅಂತ್ಯದವರೆಗೂ ಕೊರೊನಾ ವೈರಸ್ ಹೆಸರನ್ನು ಯಾರೊಬ್ಬರೂ ಕೇಳಿರಲಿಲ್ಲ. ಭಾರತದಲ್ಲಿ (ಕೇರಳದಲ್ಲಿ) ಜನವರಿ 30ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಆದಾಗ್ಯೂ, ಈ ಪ್ರಕರಣ ಪತ್ತೆ ಆಗುವುದಕ್ಕೂ ಒಂದು ತಿಂಗಳ ಮೊದಲೇ ಅದರ ಬಗ್ಗೆ ಪ್ರಧಾನಿಯವರು ಎಚ್ಚರಿಕೆ ನೀಡಿದ್ದರು. ಪ್ರತಿ ಬಾರಿಯೂ ಸಚಿವ ಸಂಪುಟ ಸಭೆಗಳಲ್ಲಿ ಮಾತನಾಡುವ ವೇಳೆ, ಕೊರೊನಾ ಗಂಭೀರ ಬೆದರಿಕೆ ಆಗಿದ್ದು ಇಡೀ ವಿಶ್ವವನ್ನೇ ವ್ಯಾಪಿಸುವ ಸಾಧ್ಯತೆಯಿದೆ ಎಂಬುದಾಗಿ ಹೇಳುತ್ತಿದ್ದರು’ ಎಂದು ಜಾವಡೇಕರ್ ಹೇಳಿದ್ದಾರೆ.

‘ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ನಮಗೆ ಪ್ರಧಾನಿಯವರು ಆಗಲೇ ಸೂಚನೆಗಳನ್ನು ನೀಡುತ್ತಿದ್ದರು. ಇದು ತನ್ನ ಜನರನ್ನು ಪ್ರೀತಿಸುವ ನಾಯಕತ್ವದ ಲಕ್ಷಣವಾಗಿದೆ’ ಎಂದು ಜಾವಡೇಕರ್ ಹೇಳಿದ್ದಾರೆ.

‘ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವಿಕೆ ಆರಂಭವಾಗುತ್ತಿದ್ದಂತೆ ಮೋದಿ ಅವರು ₹17 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದರು. ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಯಿತು. 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹500 ಜಮೆ ಮಾಡಲಾಯಿತು. 70 ಲಕ್ಷ ವಲಸೆ ಕಾರ್ಮಿಕರನ್ನು 5,000 ರೈಲುಗಳ ಮೂಲಕ ಅವರ ರಾಜ್ಯಗಳಿಗೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘9 ಕೋಟಿ ರೈತರಿಗೆ ತಲಾ ₹2 ಸಾವಿರ ರೂಪಾಯಿಯಂತೆ ನೀಡಿದ್ದೇವೆ. ನಾವೆಲ್ಲ ಇದನ್ನು ಅರ್ಥೈಸಿಕೊಳ್ಳಬೇಕಿದೆ. ಕಾಂಗ್ರೆಸ್ ಕೇವಲ ಒಂದು ಬಾರಿಯಷ್ಟೇ ರೈತರ ₹57 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ನಾವು ಪ್ರತಿವರ್ಷ ರೈತರಿಗೆ ₹60 ಸಾವಿರ ಕೋಟಿ ನೀಡುತ್ತಿದ್ದೇವೆ ಹಾಗೂ ಇದನ್ನು ಮುಂದಿನ ಹತ್ತು ವರ್ಷಗಳವರೆಗೆ ನೀಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT